ಬೆಂಗ್ಳೂರಲ್ಲಿ ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಸೇರಿ 43 ಕಡೆ ಎನ್‌ಐಎ ದಾಳಿ!

By Kannadaprabha NewsFirst Published Nov 19, 2020, 7:31 AM IST
Highlights

ಬೆಂಗ್ಳೂರಲ್ಲಿ ಎಸ್‌ಡಿಪಿಐ, ಪಿಎಫ್‌ಐ ಕಚೇರಿ ಸೇರಿ 43 ಕಡೆ ಎನ್‌ಐಎ ದಾಳಿ| ಕತ್ತಿ, ಚಾಕು, ಕಬ್ಬಿಣದ ರಾಡ್‌ ಸೇರಿದಂತೆ ಮಾರಕಾಸ್ತ್ರಗಳ ಜಪ್ತಿ| ಬೆಂಗಳೂರಿನ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಗಲಭೆ ಸಂಬಂಧ ದಾಳಿ

ಬೆಂಗಳೂರು(ನ.19): ನಗರದ ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಬುಧವಾರ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳ ನಾಲ್ಕು ಕಚೇರಿಯೂ ಸೇರಿದಂತೆ 43 ಕಡೆ ದಾಳಿ ನಡೆಸಿ ಮಾರಕಾಸ್ತ್ರಗಳು ಹಾಗೂ ಹಲವು ವಸ್ತುಗಳನ್ನು ಜಪ್ತಿ ಮಾಡಿದೆ.

ಪ್ರಕರಣದ ತನಿಖೆ ಆರಂಭಿಸಿದ ಬಳಿಕ ಇದೀಗ ಎನ್‌ಐಎ ಎರಡನೇ ಬಾರಿಗೆ ಬೃಹತ್‌ ಕಾರ್ಯಾಚರಣೆ ನಡೆಸಿದ್ದು, ಸೆ.24ರಂದು 30 ಸ್ಥಳಗಳಲ್ಲಿ ಶೋಧ ನಡೆಸಿತ್ತು.

ಫ್ರಾನ್ಸ್ ಆಯ್ತು ಕಾಬೂಲ್ ವಿವಿ ಮೇಲೆ ಉಗ್ರ ದಾಳಿ, 19 ಮಂದಿ ಹತ್ಯೆ

ಗಲಭೆ ಸಂಬಂಧ ಡಿ.ಜೆ.ಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 124 ಮತ್ತು ಕೆ.ಜಿ.ಹಳ್ಳಿ ಠಾಣೆಯಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ 169 ಆರೋಪಿಗಳನ್ನು ಬಂಧಿಸಲಾಗಿದೆ. ಇದರಲ್ಲಿ ಎಸ್‌ಡಿಪಿಐ ಮತ್ತು ಪಿಎಫ್‌ಐನ ಮುಖಂಡರು ಹಾಗೂ ಕಾರ್ಯಕರ್ತರೂ ಸೇರಿದ್ದಾರೆ. ತಲೆಮರೆಸಿಕೊಂಡಿರುವ ಕೆಲವು ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಬುಧವಾರ ಸೋಶಿಯಲ್‌ ಡೆಮಾಕ್ರಟಿಕ್‌ ಪಾರ್ಟಿ (ಎಸ್‌ಡಿಪಿಐ) ಮತ್ತು ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ)ಗೆ ಸೇರಿದ 4 ಕಚೇರಿಗಳು ಸೇರಿದಂತೆ ನಗರದ 43 ಕಡೆಗಳಲ್ಲಿ ದಾಳಿ ನಡೆಸಿ ಶೋಧ ನಡೆಸಲಾಯಿತು. ಈ ವೇಳೆ ಕತ್ತಿ, ಚಾಕು ಹಾಗೂ ಕಬ್ಬಿಣದ ರಾಡ್‌ ಸೇರಿದಂತೆ ಹಲವು ಮಾರಕಾಸ್ತ್ರಗಳು ಪತ್ತೆಯಾಗಿವೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಅಲ್‌-ಖೈದಾ ಜತೆ ಸೇರಿ ವಿಧ್ವಂಸಕ ಕೃತ್ಯಕ್ಕೆ ಹೊಂಚುಹಾಕಿದ್ದ ಮದರಸಾ ಶಿಕ್ಷಕ ಅರೆಸ್ಟ್!

ಆ.11ರಂದು ರಾತ್ರಿ ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮ ಗುರು ಮಹಮ್ಮದ್‌ ಪೈಗಂಬರ್‌ ಕುರಿತು ಪುಲಿಕೇಶಿ ನಗರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸಹೋದರ ಸಂಬಂಧಿ ನವೀನ್‌ ಎಂಬಾತ ಹಾಕಿದ್ದ ವಿವಾದಾತ್ಮಕ ಪೋಸ್ಟ್‌ಗೆ ಸಂಬಂಧಿಸಿದಂತೆ ಕಿಡಿಗೇಡಿಗಳು ಗಲಭೆ ನಡೆಸಿದ್ದರು. ಮಾರಕಾಸ್ತ್ರ ಮತ್ತು ಶಸ್ತ್ರಸಜ್ಜಿತವಾಗಿ ಪೊಲೀಸರ ಮೇಲೆ ದಾಳಿ ನಡೆಸಿ ಡಿ.ಜೆ.ಹಳ್ಳಿ ಮತ್ತು ಕೆ.ಜಿ. ಹಳ್ಳಿ ಠಾಣೆಗಳಿಗೆ ಬೆಂಕಿ ಹಚ್ಚಿದ್ದರು. ಜನರ ಮತ್ತು ಖಾಸಗಿ ವಾಹನಗಳಿಗೆ ಹಾನಿ ಮಾಡಿದ್ದರು. ಸರ್ಕಾರಿ ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟಉಂಟು ಮಾಡಿದ್ದರು.

click me!