ಕಿತ್ತೂರು, ಕಲ್ಯಾಣ ಕರ್ನಾಟಕದ 13 ಜಲಯೋಜನೆಗಳಿಗೆ ಅಸ್ತು: ಸಚಿವ ಸಂಪುಟ ಒಪ್ಪಿಗೆ

By Govindaraj S  |  First Published Dec 23, 2022, 6:44 AM IST

ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಐದು ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತದ 13 ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಸರ್ಕಾರ ಬಂಪರ್‌ ಕೊಡುಗೆ ನೀಡಿದೆ.


ಸುವರ್ಣಸೌಧ (ಡಿ.23): ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ ಐದು ಸಾವಿರ ಕೋಟಿ ರು.ಗಳಿಗೂ ಅಧಿಕ ಮೊತ್ತದ 13 ನೀರಾವರಿ ಯೋಜನೆಗಳಿಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡುವ ಮೂಲಕ ಉತ್ತರ ಕರ್ನಾಟಕಕ್ಕೆ ಸರ್ಕಾರ ಬಂಪರ್‌ ಕೊಡುಗೆ ನೀಡಿದೆ. ಗುರುವಾರ ಸುವರ್ಣಸೌಧದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಕಿತ್ತೂರು ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಭಾಗಕ್ಕೆ 5701.38 ಕೋಟಿ ರು. ವೆಚ್ಚದಲ್ಲಿ ಒಟ್ಟು 13 ಅತ್ಯಂತ ಪ್ರಮುಖ ನೀರಾವರಿ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ.

ಬಾಗಲಕೋಟೆ ಜಿಲ್ಲೆಯ ಮುಧೋಳ ಮತ್ತು ಬೀಳಗಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಗಲಗಲಿ ಗ್ರಾಮದ ಹತ್ತಿರ ಕೃಷ್ಣಾ ನದಿಯಿಂದ ನೀರನ್ನು 3,535 ಹೆಕ್ಟೇರ್‌ ಭೂಮಿಗೆ ಹರಿಸಲು ಹಾಗೂ ಐದು ಕೆರೆಗಳನ್ನು ತುಂಬಿಸುವ ಮೆಳ್ಳಿಗೇರಿ-ಹಲಗಲಿ ಏತ ನೀರಾವರಿ ಯೋಜನೆಯನ್ನು 197 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ನೀರಾವರಿ ವಂಚಿತ 9950 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮತ್ತು 17 ಕೆರೆಗಳನ್ನು ತುಂಬಿಸುವ ಅಮ್ಮಾಜೇಶ್ವರಿ (ಕೊಟ್ಟಲಗಿ) ಏತ ನೀರಾವರಿ ಯೋಜನೆಯನ್ನು 1486.41 ಕೋಟಿ ರು ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. 

Tap to resize

Latest Videos

ಕೃಷಿ ಜಮೀನಲ್ಲಿ ಮನೆ ಕಟ್ಟಲು ಏಳೇ ದಿನಗಳಲ್ಲಿ ಅನುಮತಿ: ಭೂಕಂದಾಯ ತಿದ್ದುಪಡಿ ಮಸೂದೆ ಪಾಸ್‌

ಅರಭಾವಿ ಕ್ಷೇತ್ರದ ವ್ಯಾಪ್ತಿಯಲ್ಲಿ 20 ಕೆರೆಗಳಿಗೆ ಘಟಪ್ರಭಾ ನದಿಯಿಂದ ನೀರು ತುಂಬಿಸುವ ಯೋಜನೆಯನ್ನು 323.87 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕಲ್ಲೋಳ ಗ್ರಾಮದ ಬಳಿ ಹಾಲಿಯಿರುವ ಕಲ್ಲೋಳ-ಯಡೂರ್‌ ಬ್ಯಾರೇಜಿನ ಮೇಲ್ಭಾಗದಲ್ಲಿ ದೂಧಗಂಗಾ ನದಿಯಿಂದ ನೀರನ್ನೆತ್ತಿ ಸುಮಾರು 6400 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಮಹಾಲಕ್ಷಿ ್ಮೕ ಏತ ನೀರಾವರಿ ಯೋಜನೆಯನ್ನು 382.30 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಿದೆ. 

ಬೈಲಹೊಂಗಲ ಮತ್ತು ಸವದತ್ತಿ ತಾಲೂಕಿನ 31 ಗ್ರಾಮಗಳ ಸುಮಾರು 11,600 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಶ್ರೀಚನ್ನವೃಷಭೇಂದ್ರ ಏತ ನೀರಾವರಿ ಯೋಜನೆಯನ್ನು 520 ಕೋಟಿ ರು. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ. ಸವದತ್ತಿ ತಾಲೂಕಿನ 6,678 ಹೆಕ್ಟೇರ್‌ ಪ್ರದೇಶಕ್ಕೆ ಘಟಪ್ರಭಾ ನದಿ ಪಾತ್ರದಿಂದ 0.98 ಟಿಎಂಸಿ ನೀರನ್ನು ಎತ್ತಿ ನೀರಾವರಿ ಸೌಲಭ್ಯಕ್ಕೊಳಪಡಿಸುವ ಶ್ರೀಸತ್ತಿಗೇರಿ ಏತ ನೀರಾವರಿ ಯೋಜನೆಯನ್ನು 546 ಕೋಟಿ ರು. ಅಂದಾಜು ಮೊತ್ತದ ವಿವರವಾದ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ.

ಬೀದರ್‌ ಜಿಲ್ಲೆಯ ಔರಾದ ತಾಲೂಕಿನ ಬಳತ(ಬಿ) ಹತ್ತಿರ ಹಾಲಹಳ್ಳಿ ಬ್ಯಾರೇಜ್‌ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿಎಂಸಿ ನೀರನ್ನೆತ್ತಿ ಒಟ್ಟು 36 ಕೆರೆಗಳನ್ನು ತುಂಬಿಸುವ 560 ಕೋಟಿ ರು. ಮೊತ್ತದ ವಿವರವಾದ ಯೋಜನಾ ವರದಿಗೆ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಭಾಲ್ಕಿ ತಾಲೂಕಿನ ಜೀರಗ್ಯಾಳ ಬ್ಯಾರೇಜ್‌ ಮೇಲ್ಭಾಗದಲ್ಲಿ ಮಾಂಜ್ರಾ ನದಿಯಿಂದ 0.95 ಟಿಎಂಸಿ ನೀರನ್ನು 12 ಗ್ರಾಮಗಳ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಕಲ್ಪಿಸುವ 762 ಕೋಟಿ ರು. ಮೊತ್ತದ ಮೆಹಕರ್‌ ಏತ ನೀರಾವರಿ ಯೋಜನೆ ಜಾರಿಗೆ ತೀರ್ಮಾನಿಸಲಾಗಿದೆ.

ಕಲಬುರಗಿ ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ಭೀಮಾ ಮತ್ತು ಕಾಗಿಣಾ ನದಿಗಳ ಸಂಗಮದ ಬಳಿ ಹುನಗುಂಟಾ ಗ್ರಾಮದ ಹತ್ತಿರ ಕಾಗಿಣಾ ನದಿಯ ಬಲದಂಡೆಯಲ್ಲಿ ಪಂಪ್‌ಹೌಸ್‌ ನಿರ್ಮಿಸಿ, 1.624 ಟಿಎಂಸಿ ನೀರನ್ನೆತ್ತಿ ಬೆಣ್ಣೆತೋರಾ ಜಲಾಶಯಕ್ಕೆ ತುಂಬಿಸುವ 365 ಕೋಟಿ ರು. ಮೊತ್ತದ ವಿವರವಾದ ಯೋಜನಾ ವರದಿಗೆ ಒಪ್ಪಿಗೆ ನೀಡಲಾಗಿದೆ. ಧಾರವಾಡದ ಅಣ್ಣಿಗೇರಿ, ನವಲಗುಂದ, ಕುಂದಗೋಳ, ಹುಬ್ಬಳ್ಳಿ, ಧಾರವಾಡ, ಅಳ್ನಾವರ ಮತ್ತು ಕಲಘಟಗಿ ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಬರುವ ಕೆರೆಗಳ ಪುನರುಜ್ಜೀವನ ಮತ್ತು ಸಮಗ್ರ ಅಭಿವೃದ್ಧಿಗೊಳಿಸುವ ಅಮೃತ ಸರೋವರ ನಿರ್ಮಾಣ ಯೋಜನೆಯ 30 ಕೋಟಿ ರು. ಮೊತ್ತದ ವಿವರವಾದ ಯೋಜನಾ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ.

ವರಿಷ್ಠರು ಒಪ್ಪಿದರೆ ಜಾರಕಿಹೊಳಿ, ಈಶ್ವರಪ್ಪಗೆ ಶೀಘ್ರ ಸಚಿವ ಸ್ಥಾನ: ಸಿಎಂ ಬೊಮ್ಮಾಯಿ

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಕಿರವತ್ತಿ ಮತ್ತು ಮದನೂರು ಗ್ರಾಮ ಪಂಚಾಯಿತಿ ಹಾಗೂ ಮುಂಡಗೋಡ ತಾಲೂಕಿನ ಗುಂಜಾವತಿ ಮತ್ತು ಮೈನಳ್ಳಿ ಪಂಚಾಯಿತಿ ವ್ಯಾಪ್ತಿಯ ಬೇಡ್ತಿ ನದಿ ಪಾತ್ರದಿಂದ ನೀರನ್ನು ಲಿಫ್ಟ್‌ ಮಾಡಿ ಒಟ್ಟು 100 ಕೆರೆಗಳನ್ನು ತುಂಬಿಸುವ 274.50 ಕೋಟಿ ರು. ಮೊತ್ತದ ವಿವರವಾದ ಯೋಜನಾ ವರದಿಗೆ ಒಪ್ಪಿಗೆ ನೀಡಲಾಗಿದೆ. ಭೋರಿ ನದಿಯಿಂದ ಆಳಂದ ತಾಲೂಕಿನ 8 ಕೆರೆಗಳಿಗೆ ಪೈಪ್‌ಲೈನ್‌ ಮೂಲಕ ನೀರು ತುಂಬಿಸುವ 49.50 ಕೋಟಿ ರು. ಮೊತ್ತದ ವಿವರವಾದ ಯೋಜನಾ ವರದಿಗೆ ಅನುಮೋದನೆ ನೀಡಲಾಗಿದೆ. ಕಲಬುರಗಿ ಜಿಲ್ಲೆ, ಚಿಂಚೋಳಿ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಐನಾಪುರ ಮತ್ತು ಇತರೆ 17 ಗ್ರಾಮಗಳ ಸುಮಾರು 3,710 ಹೆಕ್ಟೇರ್‌ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸುವ ಐನಾಪುರ ಏತ ನೀರಾವರಿ ಯೋಜನೆಯ 204.10 ಕೋಟಿ ರು. ಮೊತ್ತದ ವಿವರವಾದ ಯೋಜನಾ ವರದಿಗೆ ಒಪ್ಪಿಗೆ ಸೂಚಿಸಲಾಗಿದೆ.

click me!