
18 ವರ್ಷಗಳ ನಂತರ ಗೆದ್ದ ಸಂಭ್ರಮ 18 ಗಂಟೆಯೂ ಉಳಿಯಲಿಲ್ಲ. 11 ಜೀವಗಳ ಬಲಿಗೆ ಯಾರು ಹೊಣೆ ಅಂತ ಎಲ್ಲರೂ ಕೇಳುತ್ತಿದ್ದಾರೆ. ಸರ್ಕಾರವಲ್ಲದೇ ಮತ್ತಿನ್ಯಾರು..? ದಿಡೀರ್ ಸಂಭ್ರಮಾಚರಣೆಗೆ ಸರ್ಕಾರ ಅನುಮತಿ ಕೊಟ್ಟಿದ್ಯಾಕೆ..? ಒಂದು ದಿನ ತಡವಾಗಿ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಮಾಡಿದ್ದರೆ ಪೊಲೀಸರ ಸಿದ್ಧತೆಗೂ ಸಮಯ ಸಿಕ್ಕುತ್ತಿತ್ತು. ಇಷ್ಟು ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಿದ್ದೇಕೆ..?
ಪ್ರಚಾರದ ಗೀಳಳಿಗೆ ಬಿದ್ದು ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಆಯೋಜಿಸಬೇಕಿತ್ತಾ..? ಅದೂ ಯಾವುದೇ ಪೂರ್ವ ಸಿದ್ಧತೆಗಳಿಲ್ಲದೇ. ಸಿದ್ದರಾಮಯ್ಯ ಮೊಮ್ಮಗನಿಗಾಗಿ, ಜಮೀರ್ ಖಾನ್ ಮಗನಿಗಾಗಿ, ಮಂತ್ರಿಗಳ ಮಕ್ಕಳ ಶೋಕಿಗಾಗಿ ಸರ್ಕಾರದ ಹೆಸರಲ್ಲಿ ಕಾರ್ಯಕ್ರಮ ಮಾಡುವ ದರ್ದು ಯಾಕೆ ಬೇಕಿತ್ತು..? ಮೆರವಣಿಗೆ ಇದೆ.. ಇಲ್ಲವಂತೆ.. ಸರ್ಕಾರದಿಂದ ಕಾರ್ಯಕ್ರಮವಂತೆ.. ಎಷ್ಟೆಲ್ಲ ಗೊಂದಲ..?
ಅಭಿಮಾನಿಗಳು ಎಷ್ಟು ಸಂಖ್ಯೆಯಲ್ಲಿ ಸೇರಬಹುದು ಅನ್ನೋ ಅಂದಾಜು ಮಾಡಲೂ ಆಗದಂತಾ ದರಿದ್ರ ಸ್ಥಿತಿಗೆ ಬಂದುಬಿಟ್ಟಿದೆಯಾ ಪೊಲೀಸ್ ಇಲಾಖೆ..? ಒಂದು ರೂಟ್ ಮ್ಯಾಪ್ ಇಲ್ಲ, ಎಂಟ್ರಿ-ಎಕ್ಸಿಟ್ ಸ್ಪಷ್ಟತೆಯಿಲ್ಲ, ತುರ್ತು ಸ್ಥಿತಿ ಎದುರಿಸಲು ಆ್ಯಂಬ್ಯುಲೆನ್ಸ್ ವ್ಯವಸ್ಥೆಯಿಲ್ಲ. ವರ್ಲ್ಡ್ ಕಪ್ ಗೆದ್ದ ತಂಡ ಮುಂಬೈಗೆ ಬಂದಾಗ ಇದಕ್ಕಿಂತಲೂ ಹೆಚ್ಚು ಜನ ಸೇರಿದ್ರು, ಕಿಲೋ ಮೀಟರ್ ಗಟ್ಟಲೆ ಮೆರವಣಿಗೆಗೆ ಅವಕಾಶ ನೀಡಲಾಗಿತ್ತು. ಅಚ್ಚು ಕಟ್ಟಾಗಿ ಕಾರ್ಯಕ್ರಮ ನಡೆದು ಎಲ್ಲರೂ ಸಂಭ್ರಮದಿಂದ ಮನೆಗೆ ಹೋಗಿದ್ದರು.. ಆದ್ರೆ ಇವತ್ತು, 11 ಜನರ ಸಾವು ಆರ್ ಸಿಬಿ ಗೆದ್ದ ಸಂಭ್ರಮವನ್ನೇ ಅಳಿಸಿ ಹಾಕಿತು.
ರಾಜ್ ಕುಮಾರ್ ಇನ್ನಿಲ್ಲವಾದ ನಂತರ ದೇಶಾದ್ಯಂತ ಸೆಲೆಬ್ರಿಟಿಗಳ ಸಾವು, ದೊಡ್ಡ ಕಾರ್ಯಕ್ರಮಗಳ ನಿರ್ವಹಣೆಗೆ ಒಂದು ಸ್ಪಷ್ಟ ರೂಪುರೇಷೆ ಮಾಡಲಾಗಿತ್ತು. ಆದ್ರೆ ಅದ್ಯಾವುದೂ ಪಾಲನೆಯಾಗಲೇ ಇಲ್ಲ. ಸರ್ಕಾರ ಆರ್ ಸಿಬಿ ಅಭಿಮಾನಿಗಳಿಗಿಂತಲೂ ಹುಚ್ಚು ಹುಚ್ಚಾಗಿ ಆಡಬಾರದಿತ್ತು. ಪಹಲ್ಗಾಮ್ ದಾಳಿ ಭದ್ರತಾ ವೈಫಲ್ಯ ಅಂತ ಹೋದಲ್ಲಿ ಬಂದಲ್ಲಿ ಬೀದಿ ನಾಟಕವಾಡಿದ ಯಾವನೇ ಒಬ್ಬ ಸಚಿವನಿಗೂ ಇಂಥದ್ದೊಂದು ಕಾರ್ಯಕ್ರಮ ಆಯೋಜನೆಗೆ ಸರ್ಕಾರ ಏನು ಮಾಡಬೇಕಿತ್ತು ಅನ್ನೋ ಕಲ್ಪನೆಯೂ ಇಲ್ಲ... ನಾಚಿಗೆಗೇಡು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ