
ಬೆಂಗಳೂರು(ಸೆ.02): ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆಯಲ್ಲಿ( ಐಐಎಚ್‌ಆರ್) ಸಂಶೋಧಿಸಲ್ಪಡುವ ವಿವಿಧ ಹಣ್ಣು ಮತ್ತು ತರಕಾರಿಗಳ ಬಿತ್ತನೆ ಬೀಜಗಳನ್ನು ದೇಶದ ಎಲ್ಲ ಭಾಗಗಳಿಗೆ ತಲುಪಿಸಲು ಭಾರತೀಯ ಸ್ಟೇಟ್ ಬ್ಯಾಂಕ್ ಕೈಜೋಡಿಸಿದ್ದು, ಬ್ಯಾಂಕ್‌ನ ಹಣಕಾಸು ವ್ಯವಹಾರಗಳಿಗೆ ಬಳಸುತ್ತಿರುವ ‘ಯೆನೋ’ ಮೊಬೈಲ್ ಆ್ಯಪ್ ಜೊತೆ ಒಡಂಬಡಿಕೆ ಮಾಡಿಕೊಂಡಿದೆ.
ಬ್ಯಾಂಕಿಂಗ್ ವ್ಯವಹಾರಗಳಿಗಾಗಿ ಈಗಾಗಲೇ ಸುಮಾರು ಎರಡು ಕೋಟಿ ಗ್ರಾಹಕರು ‘ಯೆನೋ’ ಮೊಬೈಲ್ ಆ್ಯಪ್‌ನ್ನು ಬಳಸುತ್ತಿದ್ದಾರೆ. ಐಐಎಚ್‌ಆರ್ ಮತ್ತು ಎಸ್‌ಬಿಐನ ಒಡಂಬಡಿಕೆಯಿಂದ ರೈತರ ಮನೆ ಬಾಗಿಲಿಗೆ ಬಿತ್ತನೆ ಬೀಜಗಳು ತಲುಪಲಿದೆ.
'ರೈತರೇ ಚೀನಾದ ಬೀಜದ ಪೊಟ್ಟಣ ಬಂದರೆ ದೂರು ಕೊಡಿ'
ಬಿತ್ತನೆ ಬೀಜಗಳನ್ನು ಗ್ರಾಹಕರಿಗೆ ತಲುಪಿಸುವುದಕ್ಕಾಗಿ ಪ್ರಸ್ತುತ ‘ಸೀಡ್ ಪೋರ್ಟಲ್’ ಎಂಬ ವೆಬ್‌ಸೈಟ್ ಕಾರ್ಯನಿರ್ವಹಿಸುತ್ತಿದೆ. ಈ ಪೋರ್ಟಲ್ ಅನ್ನು ಸುಮಾರು ನಾಲ್ಕು ಸಾವಿರ ರೈತರು ಬಳಕೆ ಮಾಡುತ್ತಿದ್ದು, ಕಳೆದ ಮೂರು ತಿಂಗಳಿನಿಂದ ಸುಮಾರು 40 ಲಕ್ಷ ರು. ಮೌಲ್ಯದ ಬಿತ್ತನೆ ಬೀಜಗಳನ್ನು ಖರೀದಿ ಮಾಡಿದ್ದಾರೆ. ಇದೀಗ ‘ಯೆನೋ’ ಆ್ಯಪ್‌ನೊಂದಿಗೆ ಒಡಂಬಡಿಕೆಯಿಂದ ಮತ್ತಷ್ಟುಗ್ರಾಹಕರು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಐಐಎಚ್‌ಆರ್ ನಿರ್ದೇಶಕ ಡಾ.ಎಂ.ಆರ್.ದಿನೇಶ್ ‘ಕನ್ನಡ ಪ್ರಭ’ಕ್ಕೆ ಮಾಹಿತಿ ನೀಡಿದರು.
ಐಐಎಚ್‌ಆರ್‌ನಲ್ಲಿ ಸಂಶೋಧನೆಯಾಗುತ್ತಿರುವ ಎಲ್ಲ ತರಕಾರಿ ಮತ್ತು ಹಣ್ಣುಗಳ ಬಿತ್ತನೆ ಬೀಜಗಳನ್ನು ಈ ಆ್ಯಪ್‌ನಲ್ಲಿ ಪರಿಶೀಲನೆ, ಬೆಲೆ ಸೇರಿದಂತೆ ಅವುಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮೊಬೈಲ್‌ನಲ್ಲಿ ಬುಕ್ ಮಾಡಿ ಹಣ ಸಂದಾಯ ಮಾಡಿದಲ್ಲಿ ರೈತನ ಮನೆ ಬಾಗಿಲಿಗೆ ಬಿತ್ತನೆ ಬೀಜ ತಲುಪಲಿದೆ ಎಂದು ತಿಳಿಸಿದ್ದಾರೆ.
ರೈತನ ಬಳಿ ಮೊಬೈಲ್ ಇರಲೇ ಬೇಕೆಂದಿಲ್ಲ:
ಎಸ್‌ಬಿಐನೊಂದಿಗೆ ಒಡಂಬಡಿಕೆ ಮಾಡಿಕೊಂಡಿರುವುದರಿಂದ ಬಿತ್ತನೆ ಬೀಜ ಖರೀದಿಸಲು ರೈತರ ಬಳಿ ಸ್ಮಾರ್ಟ್ ಫೋನ್ ಇರಬೇಕೆಂದೇನಿಲ್ಲ. ದೇಶದ ಯಾವುದೇ ಭಾಗದ ಎಸ್‌ಬಿಐ ಶಾಖೆಗೆ ಭೇಟಿ ನೀಡಿದಲ್ಲಿ ಅಲ್ಲಿಯ ಅಧಿಕಾರಿಗಳು ಬಿತ್ತನೆ ಬೀಜ ಖರೀದಿಗೆ ವ್ಯವಸ್ಥೆ ಮಾಡಿಕೊಡಲಿದ್ದಾರೆ. ರೈತ ಹಣ ಸಂದಾಯ ಮಾಡಿ ವಿಳಾಸ ನೀಡಿದಲ್ಲಿ ಆತನ ಮನೆಗೆ ಬಿತ್ತನೆ ಬೀಜ ತಲುಪಲಿದೆ ಎಂದು ಐಐಎಚ್‌ಆರ್‌ನ ವಿಸ್ತರಣಾ ವಿಭಾಗದ ಪ್ರಧಾನ ವಿಜ್ಞಾನಿ ಡಾ.ಬಿ.ನಾರಾಯಣಸ್ವಾಮಿ ವಿವರಿಸಿದ್ದಾರೆ.
ದೇಶದ ರೈತರಿಗೆ ಉತ್ತಮ ಗುಣ ಮಟ್ಟದ ಬಿತ್ತನೆ ಬೀಜ ತಲುಪಿಸಲು ಐಐಎಚ್‌ಆರ್ ಎಸ್‌ಬಿಐನೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಇದರಿಂದ ದೇಶದ ಯಾವುದೇ ಮೂಲೆಯಲ್ಲಿರುವ ರೈತರಿಗೆ ಉತ್ತಮ ಗುಣಮಟ್ಟದ ಹಣ್ಣು ಮತ್ತು ತರಕಾರಿಗಳ ಬಿತ್ತನೆ ಬೀಜ ತಲುಪಿಸಬಹುದಾಗಿದೆ ಎಂದು ಐಐಎಚ್‌ಆರ್ ನಿರ್ದೇಶಕ ಡಾ. ಎಂ.ಆರ್.ದಿನೇಶ್ ಅವರು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ