ಪರ್ಮಿಟ್‌ ಇಲ್ಲದೆ ಖಾಸಗಿ ಬಸ್‌ ಓಡಿಸಲು ಅನುಮತಿ!

By Kannadaprabha NewsFirst Published Apr 8, 2021, 7:21 AM IST
Highlights

ಪರ್ಮಿಟ್‌ ಇಲ್ಲದೆ ಖಾಸಗಿ ಬಸ್‌ ಓಡಿಸಲು ಅನುಮತಿ| ಮುಷ್ಕರನಿರತ ನೌಕರರಿಗೆ ರಾಜ್ಯ ಸರ್ಕಾರ ಸಡ್ಡು

 ಬೆಂಗಳೂರು(ಏ.08): ಬೇಡಿಕೆ ಈಡೇರಿಕೆಗೆ ಬಿಗಿಪಟ್ಟು ಹಿಡಿದಿರುವ ಮುಷ್ಕರ ನಿರತ ಸಾರಿಗೆ ನೌಕರರಿಗೆ ಸಡ್ಡು ಹೊಡೆದಿರುವ ರಾಜ್ಯ ಸರ್ಕಾರ, ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಖಾಸಗಿ ವಾಹನಗಳಿಗೆ ರಹದಾರಿ ವಿನಾಯಿತಿ ನೀಡಿ ಬುಧವಾರ ಆದೇಶಿಸಿದೆ.

ಈ ಮೂಲಕ ಖಾಸಗಿ ವಾಹನಗಳು ರಾಜ್ಯದ ಯಾವ ಮಾರ್ಗದಲ್ಲಾದರೂ ಪ್ರಯಾಣಿಕರಿಗೆ ಸೇವೆ ನೀಡಲು ಅವಕಾಶ ಕಲ್ಪಿಸಿದೆ. ಹೀಗಾಗಿ ಪರ್ಮಿಟ್‌ ಪಡೆದ ಮಾರ್ಗ ಮಾತ್ರವಲ್ಲ, ಖಾಸಗಿ ಬಸ್ಸುಗಳು ಎಲ್ಲಿ ಬೇಕಾದಲ್ಲಿ ಸಂಚರಿಸಬಹುದಾಗಿದೆ.

ಸಾರಿಗೆ ಮುಷ್ಕರದಿಂದ ಸಾರ್ವಜನಿಕರು, ವಿದ್ಯಾರ್ಥಿಗಳು ಹಾಗೂ ನಿತ್ಯ ಪ್ರಯಾಣಿಸುವ ಪ್ರಯಾಣಿಕರಿಗೆ ತೊಂದರೆಯಾಗುತ್ತಿದೆ. ಇದನ್ನು ತಪ್ಪಿಸುವ ನಿಟ್ಟಿನಲ್ಲಿ ಖಾಸಗಿ ವಾಹನಗಳನ್ನು ಬಳಸಿಕೊಂಡು ಪರ್ಯಾಯ ಸಾರಿಗೆ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಮೋಟಾರು ವಾಹನ ಕಾಯ್ದೆ 1988 ಸೆಕ್ಷನ್‌ 66(3)(ಎಫ್‌)ರ ಅಡಿಯಲ್ಲಿ ವಿಶೇಷ ಪ್ರಕರಣವೆಂದು ಪರಿಗಣಿಸಿ, ಮುಷ್ಕರದ ಅವಧಿಯಲ್ಲಿ ಸಾರ್ವಜನಿಕರಿಗೆ ಸಾರಿಗೆ ಸೌಲಭ್ಯ ಒದಗಿಸುವ ಖಾಸಗಿ ವಾಹನಗಳಿಗೆ ಅಗತ್ಯವಿರುವ ರಹದಾರಿಯಿಂದ ವಿನಾಯಿತಿ ನೀಡಲಾಗಿದೆ.

ಮಂಗಳವಾರವಷ್ಟೇ ಅನುಪಯುಕ್ತ ನೊಂದಾಯಿತ ಪ್ರಯಾಣಿಕ ವರ್ಗದ ಖಾಸಗಿ ವಾಹನಗಳಿಗೆ ಏಪ್ರಿಲ್‌ಗೆ ಅನ್ವಯವಾಗುವಂತೆ ಮೋಟಾರು ವಾಹನ ತೆರಿಗೆ ಪಾವತಿ ವಿನಾಯಿತಿ ನೀಡಿ ಆದೇಶಿಸಿತ್ತು. ಇದರ ಬೆನ್ನಲ್ಲೇ ಖಾಸಗಿ ವಾಹನಗಳಿಗೆ ರಹದಾರಿ ವಿನಾಯಿತಿ ನೀಡಿದೆ.

ಎಸ್ಮಾ ಜಾರಿ ಚಿಂತನೆ

ಪರಿಸ್ಥಿತಿ ನೋಡಿ ಸಾರಿಗೆ ಮುಷ್ಕರದ ವಿರುದ್ಧ ಎಸ್ಮಾ ಜಾರಿ ಮಾಡುತ್ತೇವೆ. ನೌಕರರು ಹಟ ಬಿಟ್ಟು ಸೇವೆಗೆ ಮರಳಬೇಕು. ಖಾಸಗಿ ವಾಹನ ಮಾಲಿಕರು ಪ್ರಯಾಣಿಕರನ್ನು ಸುಲಿಗೆ ಮಾಡಿದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ.

- ಬಿ.ಎಸ್‌.ಯಡಿಯೂರಪ್ಪ, ಮುಖ್ಯಮಂತ್ರಿ

ಗೈರಾದದವರ ಸಂಬಳ ಕಟ್‌

ಕೆಲಸಕ್ಕೆ ಗೈರಾಗುವ ಸಾರಿಗೆ ನೌಕರರ ವೇತನ ಕಡಿತ ಮಾಡಲಾಗುತ್ತದೆ. ಮುಷ್ಕರದ ಹಿಂದೆ ಯಾರಿದ್ದಾರೆಂದು ಶೀಘ್ರ ಬಯಲಾಗಲಿದೆ. ಇನ್ನೆರಡು ದಿನದಲ್ಲಿ ಖಾಸಗಿ ಬಸ್‌ಗಳ ಸಂಖ್ಯೆಯನ್ನು 4 ಸಾವಿರಕ್ಕೆ ಏರಿಸುತ್ತೇವೆ.

- ಲಕ್ಷ್ಮಣ ಸವದಿ, ಸಾರಿಗೆ ಸಚಿವ

click me!