ರಾಸುಗಳ ರೇಸ್‌ನಲ್ಲಿ ಹೋರಿಗಳ ಭೀಕರ ಡಿಕ್ಕಿ! ನರಳಿ ಪ್ರಾಣಬಿಟ್ಟ ಹೋರಿ

By Web DeskFirst Published Jan 24, 2019, 9:28 AM IST
Highlights

ಹೋರಿಗಳ ಓಟದ ಸ್ಪರ್ಧೆಯಲ್ಲಿ ಹೋರಿಗಳೆರಡು ಮುಖಾಮುಖಿ ಡಿಕ್ಕಿಯಾದ ಸಂದರ್ಭ ಒಂದು ಸ್ಥಳದಲ್ಲೇ ಒದ್ದಾಡಿ ಮೃತಪಟ್ಟಿರುವ ದಾರುಣ ಘಟನೆ ಕೋಲಾರದ ಬಳಿ ನಡೆದಿದೆ. 

ಕೋಲಾರ :  ಸಂಕ್ರಾಂತಿ ಹಬ್ಬದ ಪ್ರಯುಕ್ತ ನಡೆಯುವ ಹೋರಿಗಳ ಓಟದ ಸ್ಪರ್ಧೆಯಲ್ಲಿ ಹೋರಿಗಳೆರಡು ಮುಖಾಮುಖಿ ಡಿಕ್ಕಿಯಾದ ಸಂದರ್ಭ ಒಂದು ಸ್ಥಳದಲ್ಲೇ ಒದ್ದಾಡಿ ಮೃತಪಟ್ಟಿರುವ ದಾರುಣ ಘಟನೆ ಕೋಲಾರಕ್ಕೆ ತಾಗಿಕೊಂಡಿರುವ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಗಡಿಗ್ರಾಮ ರಂಗನ್‌ಪೇಟೆಯಲ್ಲಿ ನಡೆದಿದೆ. ಘಟನೆಯಲ್ಲಿ ಮತ್ತೊಂದು ಹೋರಿ ತೀವ್ರವಾಗಿ ಗಾಯಗೊಂಡಿದೆ. ಮಂಗಳವಾರ ನಡೆದ ಈ ಘಟನೆಯ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ವೈರಲ್‌ ಆಗಿದ್ದು ಸರ್ಕಾರದ ನಿಷೇಧದ ಹೊರತಾಗಿಯೂ ನಡೆಯುತ್ತಿರುವ ಇಂತಹ ಸ್ಪರ್ಧೆಯ ಅಗತ್ಯತೆಯ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

ಸಂಕ್ರಾಂತಿ ಹಬ್ಬದ ಹಿನ್ನೆಲೆಯಲ್ಲಿ ರಂಗನ್‌ಪೇಟೆ ಗ್ರಾಮದಲ್ಲಿ ರಾಸುಗಳ ಓಟವನ್ನು ಪ್ರತಿವರ್ಷದಂತೆ ಏರ್ಪಡಿಸಲಾಗಿತ್ತು. ಅದರಂತೆ ಹೋರಿಗಳನ್ನು ಕಣದಲ್ಲಿ ಓಟಕ್ಕೆ ಬಿಡಲಾಗಿತ್ತು. ಒಂದು ಹೋರಿ ಬಹಳ ಮುಂದೆ ಹೋಗಿ ಓಟದ ಕೊನೇ ಹಂತದಲ್ಲಿ ಏಕಾಏಕಿ ಓಟ ನಿಲ್ಲಿಸಿ ತಿರುಗಿ ನಿಂತು ಹಿಂದಿನಿಂದ ಬರುತ್ತಿದ್ದ ಎತ್ತಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಕ್ಷಣಾರ್ಧದಲ್ಲಿಯೇ ಧರೆಗುರುಳಿದ ಹೋರಿ ಕುತ್ತಿಗೆ ಉಳುಕಿ, ಗಾಯಗೊಂಡು ನರಳಾಡತೊಡಗಿತು. ಹೋರಿ ಧರೆಗುರುಳಿದೊಡನೆ ಸುತ್ತ ಜಮಾಯಿಸಿದರಾದರೂ ಆ ಹೋರಿಯನ್ನು ಬದುಕಿಸಲು ಸಾಧ್ಯವಾಗಲೇ ಇಲ್ಲ. ಅದು ಅಲ್ಲೇ ನರಳಾಡಿ ಅಂತಿಮವಾಗಿ ಪ್ರಾಣತ್ಯಾಗ ಮಾಡಿತು. ಈ ಘಟನೆ ಮಂಗಳವಾರವೇ ನಡೆದಿದ್ದರೂ ಮಾಧ್ಯಮಗಳಲ್ಲಿ ವರದಿಯಾಗಿರಲಿಲ್ಲ. ಮೊಬೈಲ್‌ನಲ್ಲಿ ಚಿತ್ರೀಕರಿಸಲ್ಪಟ್ಟಈ ಹೋರಿಗಳ ಓಟದ ವೀಡಿಯೋ ಕ್ಲಿಪ್ಪಿಂಗ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದರಿಂದ ದುರ್ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ನಿಷೇಧವಿದ್ದರೂ ನಡೆಯುವ ಸ್ಪರ್ಧೆ: ಕರ್ನಾಟಕ ರಾಜ್ಯದ ಕೋಲಾರ ಜಿಲ್ಲೆಯೂ ಸೇರಿದಂತೆ ನೆರೆರಾಜ್ಯಗಳ ಆಂಧ್ರಪ್ರದೇಶ, ತಮಿಳುನಾಡುಗಳ ಗಡಿಜಿಲ್ಲೆಗಳಲ್ಲಿ ಸಂಕ್ರಾಂತಿಗೆ ರಾಸುಗಳ ಓಟ, ಜಲ್ಲಿಕಟ್ಟು ಆಚರಣೆಗಳು ನಡೆಯುವುದು ಸಾಮಾನ್ಯ. ಈ ರಾಸುಗಳ ಓಟಕ್ಕೆ ಅಧಿಕೃತ ಮಾನ್ಯತೆ, ಅನುಮತಿ ಇಲ್ಲದಿದ್ದರೂ ಜನ ತಮ್ಮ ಪಾಡಿಗೆ ಇದನ್ನು ನಡೆಸುತ್ತಾರೆ. ಹಿಂದೆ ಮಾಲೂರು ತಾಲೂಕಿನಲ್ಲಿ ನಡೆದ ಜಲ್ಲಿ ಕಟ್ಟು ಸ್ಪರ್ಧೆಯಲ್ಲಿ ಹೋರಿಗಳನ್ನು ತಡೆಯಲು ಹೋದವರನ್ನು ಕೊಂಬಿನಿಂದ ತಿವಿದ ಸಾಯಿಸಿದ ಪ್ರಕರಣವನ್ನು ಜನತೆ ಇನ್ನೂ ಮರೆತಿಲ್ಲ. ಅದೇರೀತಿಯಲ್ಲಿ ಭಾನುವಾರಷ್ಟೇ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ನಡೆದ ಕೊಬ್ಬರಿ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ 16 ವರ್ಷದ ಬಾಲಕನೊಬ್ಬ ಮೃತಪಟ್ಟಿದ್ದಾನೆ. ಇಷ್ಟಾದರೂ ಪ್ರಾಣಕ್ಕೆ ಅಪಾಯಕಾರಿಯಾದ ಇಂತಹ ಸ್ಪರ್ಧೆ, ಆಚರಣೆಗಳನ್ನು ನಿಲ್ಲಿಸಲು ಸಾಧ್ಯವಾಗಿಲ್ಲ.

ಈ ಹಿಂದೆ ಪ್ರಾಣಿಹಿಂಸೆಯಾಗುತ್ತದೆ ಎಂಬ ಇದೇ ಮಾದರಿಯ ತಮಿಳುನಾಡಿನ ಜನಪದ ಆಚರಣೆಯಾದ ಜಲ್ಲಿಕಟ್ಟು ಹಾಗೂ ಕರ್ನಾಟಕದ ಕಂಬಳವನ್ನು ಸುಪ್ರೀಂ ಕೋರ್ಟ್‌ ನಿಷೇಧಿಸಿತ್ತು. ಆದರೆ ತಮಿಳುನಾಡಿನಲ್ಲಿ ಜನರ ತೀವ್ರ ವಿರೋಧ ವ್ಯಕ್ತವಾದ ಬಳಿಕ ಸರ್ಕಾರ ಜಲ್ಲಿಕಟ್ಟನ್ನು ಸುಗ್ರೀವಾಜ್ಞೆ ಹೊರಡಿಸುವ ಮೂಲಕ ನಿಷೇಧ ತೆರವುಗೊಳಿಸಿತ್ತು. ಇದೇವೇಳೆ ಕಂಬಳದ ವಿಚಾರ ಇನ್ನೂ ಸುಪ್ರೀಂ ಕೋರ್ಟ್‌ ಅಂಗಳದಲ್ಲೇ ಇದೆ.

click me!