ಬೆಂಗಳೂರು: ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಹೆಚ್ಚಳ

By Kannadaprabha NewsFirst Published Sep 12, 2020, 8:06 AM IST
Highlights

ಕಟ್ಟಡ ನಕ್ಷೆ ಮಂಜೂರಾತಿ ಶುಲ್ಕ ಪರಿಷ್ಕೃರಿಸಿ ಆದೇಶ|2020ರ ಫೆ.25ರಿಂದ ಪರಿಷ್ಕೃತ ದರ ಅನ್ವಯ: ಪಾಲಿಕೆ| ಮಾರ್ಗಸೂಚಿ ಮೌಲ್ಯದ ಆಧಾರದಲ್ಲಿ ಶುಲ್ಕ|

ಬೆಂಗಳೂರು(ಸೆ.12): ಕೊರೋನಾ ಹಿನ್ನೆಲೆಯಲ್ಲಿ ಕಡಿಮೆಯಾಗಿರುವ ಆದಾಯ ಹೆಚ್ಚಿಸಿಕೊಳ್ಳಲು ಬಿಬಿಎಂಪಿ ನಗರದಲ್ಲಿ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ ದರ ಹೆಚ್ಚಿಸುವ ಜೊತೆಗೆ ಶೇ.0.8ರಷ್ಟು ಅಭಿವೃದ್ಧಿ ಶುಲ್ಕ ನಿಗದಿ ಮಾಡಿದ್ದು, ಪರಿಷ್ಕೃತ ದರ 2020 ಫೆ.25ರಿಂದ ಪೂರ್ವಾನ್ವಯವಾಗುವಂತೆ ಜಾರಿಗೆ ಬರಲಿದೆ.

ಕರ್ನಾಟಕ ಯೋಜನಾ ಪ್ರಾಧಿಕಾರದ ಆದೇಶದಂತೆ ದರ ಪರಿಷ್ಕರಿಸಿ ಪಾಲಿಕೆಯ ಆಯುಕ್ತರು ಆದೇಶಿಸಿದ್ದು, ನಗರದಲ್ಲಿನ ಮೂಲ ನಿವೇಶನ (ಒಂದು ಅಂತಸ್ತು), ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿ, ಬಹು ಅಂತಸ್ತುಗಳ ಕಟ್ಟಡ ನಿರ್ಮಾಣ ನಕ್ಷೆ ಮಂಜೂರಾತಿಗೆ ನಿಗದಿ ಮಾಡಲಾಗಿದ್ದ ಶುಲ್ಕ ಏರಿಕೆ ಮಾಡಲಾಗಿದೆ.

ಎಲ್ಲ ಮಹಾನಗರ ಪಾಲಿಕೆಗಳು ನೂತನ ಶುಲ್ಕ ಮೊತ್ತವನ್ನು ನಕ್ಷೆ ಮಂಜೂರಾತಿಗೆ ನಿಗದಿ ಮಾಡಿ ಶುಲ್ಕ ವಿಧಿಸುವಂತೆ ಪ್ರಾಧಿಕಾರ ನಿರ್ದೇಶನ ನೀಡಿದೆ. ಕರ್ನಾಟಕ ಯೋಜನಾ ಪ್ರಾಧಿಕಾರ ಯೋಜನಾ ಕಾಯ್ದೆ 1961ರ ಪರಿಚ್ಛೇಧ 37-ಎ ಗೆ ತಿದ್ದುಪಡಿ ತರಲಾಗಿದ್ದು, ಇದರನ್ವಯ ಕೃಷಿಯೇತರ ನಿವೇಶನಗಳಿಗೆ ಪರಿಷ್ಕೃತ ದರ ಅನ್ವಯವಾಗಲಿದೆ.

ಬಿಬಿಎಂಪಿಯ ಆದಾಯ ಮೂಲ ಹೆಚ್ಚಳಕ್ಕೆ ಆದ್ಯತೆ: ಗೌರವ್‌ ಗುಪ್ತಾ

ನಕ್ಷೆ ಮಂಜೂರಾತಿಗೆ (ಒಂದು ಅಂತಸ್ತು) ಪ್ರತಿ ಚದರ ಮೀಟರ್‌ಗೆ ವಸತಿ ಕಟ್ಟಡ ಹಾಗೂ ಇತರೆ ಕಟ್ಟಡಗಳಿಗೆ ಶೇ.0.5, ವಾಣಿಜ್ಯ ಕಟ್ಟಡಕ್ಕೆ ಶೇ.1.5 ಹಾಗೂ ಕೈಗಾರಿಕೆ ಕಟ್ಟಡಗಳಿಗೆ ಶೇ.1ರಷ್ಟುಏರಿಕೆ ಮಾಡಲಾಗಿದೆ. ಇನ್ನು ಬಹುಮಹಡಿ ಕಟ್ಟಡ ನಕ್ಷೆ ಮಂಜೂರಾತಿಗೆ ವಸತಿ ಕಟ್ಟಡ ಮತ್ತು ಇತರೆ ಕಟ್ಟಡಗಳಿಗೆ ಪ್ರತಿ ಚದರ ಮೀಟರ್‌ಗೆ 20, ಕೈಗಾರಿಕೆ ಕಟ್ಟಡಗಳಿಗೆ 40, ವಾಣಿಜ್ಯ ಕಟ್ಟಡಗಳಿಗೆ .100 ದರ ವಿಧಿಸಲಾಗಿದೆ.

ಮಾರ್ಗಸೂಚಿ ಮೌಲ್ಯದ ಆಧಾರದಲ್ಲಿ ಶುಲ್ಕ:

ನಕ್ಷೆ ಮಂಜೂರಾತಿಗೆ ಪರಿಷ್ಕೃತ ದರ ಹಾಗೂ ಅಭಿವೃದ್ಧಿ ಶುಲ್ಕವನ್ನು ಮಾರ್ಗಸೂಚಿ ಮೌಲ್ಯದ ಆಧಾರದ ಮೇಲೆ ವಿಧಿಸಲು ಸಹ ನಿರ್ದೇಶನ ನೀಡಲಾಗಿದೆ. ಇದರಿಂದ ಮುಂದುವರಿದ, ಮುಂದುವರಿಯುತ್ತಿರುವ ಹಾಗೂ ಹಿಂದುಳಿದ ಪ್ರದೇಶಗಳು ಎಂಬ ಮೂರು ವಿಂಗಡಣೆಯಾಗಿ, ಹೊಸ ಶುಲ್ಕ ವಿಧಿಸಲಾಗುತ್ತದೆ. ಹೀಗಾಗಿ, ಅಭಿವೃದ್ಧಿಯಾಗದ ಪ್ರದೇಶಗಳಲ್ಲಿ ನಕ್ಷೆ ಮಂಜೂರಾತಿ ಶುಲ್ಕ ಕಡಿಮೆ ಆಗಲಿದೆ.

ಕರ್ನಾಟಕ ಯೋಜನಾ ಪ್ರಾಧಿಕಾರ ರಾಜ್ಯದ ಎಲ್ಲ ಪಾಲಿಕೆಗಳಿಗೆ ಕಟ್ಟಡಗಳ ನಿವೇಶನ ನಕ್ಷೆ ಮಂಜೂರಾತಿ ಸಂಬಂಧ ದರ ನಿಗದಿ ಮಾಡಿದ್ದು, ಸರ್ಕಾರದ ನಿರ್ದೇಶನದಂತೆ ನಗರದಲ್ಲೂ ಪರಿಷ್ಕೃತ ದರವನ್ನು ನಿಗದಿ ಮಾಡಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ಅವರು ತಿಳಿಸಿದ್ದಾರೆ.

ನಕ್ಷೆ ಮಂಜೂರಾತಿ ಪರಿಷ್ಕೃತ ದರ

ವಿಭಾಗ (ಮೊದಲ ಅಂತಸ್ತು) ಏರಿಕೆ (ಶೇ) .

ವಸತಿ 0.5 25
ಕೈಗಾರಿಕೆ 1 37.5
ವಾಣಿಜ್ಯ 1.5 62.5
ಇತರೆ 0.5 25

ನಕ್ಷೆ ಮಂಜೂರಾತಿ ಪರಿಷ್ಕೃತ ದರ

ವಿಭಾಗ (ಬಹುಮಹಡಿ) ರುಪಾಯಿ (ಚ.ಮೀ)

ವಸತಿ 20
ಕೈಗಾರಿಕೆ 40
ವಾಣಿಜ್ಯ 100
ಇತರೆ 20
 

click me!