ಮುಂದಿನ 25 ವರ್ಷಗಳಲ್ಲಿ ಮಹಾನ್ ಕರ್ನಾಟಕ ನಿರ್ಮಿಸಿ: ರಾಜ್ಯಪಾಲ ಗೆಹ್ಲೋಟ್

By Kannadaprabha News  |  First Published Dec 13, 2023, 7:23 AM IST

ಮುಂಬರುವ 25 ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸ್ಪಷ್ಟ ದಿಕ್ಸೂಚಿಯನ್ನು ರಾಜ್ಯ ಹಾಕಿಕೊಂಡು ಮಹಾನ್ ಕರ್ನಾಟಕ, ಮಹಾನ್ ಭಾರತ ನಿರ್ಮಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದರು.


ಬೆಳಗಾವಿ (ಡಿ.13): ಕಳೆದ ಐವತ್ತು ವರ್ಷಗಳ ಅವಧಿಯಲ್ಲಿ ರಾಜ್ಯವು ಪ್ರತಿ ಕ್ಷೇತ್ರದಲ್ಲಿ ಅಭಿವೃದ್ಧಿಯ ದಾಪುಗಾಲು ಹಾಕುತ್ತಿದೆ. ದೇಶದಲ್ಲಿ ಅತಿಹೆಚ್ಚು ತೆರಿಗೆ ಪಾವತಿಸುವ 2ನೇ ರಾಜ್ಯ ಕರ್ನಾಟಕ. ಮುಂಬರುವ 25 ವರ್ಷಗಳ ಅವಧಿಯಲ್ಲಿ ರಾಜ್ಯದ ಸರ್ವಾಂಗೀಣ ಪ್ರಗತಿಗೆ ಸ್ಪಷ್ಟ ದಿಕ್ಸೂಚಿಯನ್ನು ರಾಜ್ಯ ಹಾಕಿಕೊಂಡು ಮಹಾನ್ ಕರ್ನಾಟಕ, ಮಹಾನ್ ಭಾರತ ನಿರ್ಮಿಸಬೇಕು ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಸಲಹೆ ನೀಡಿದರು.

ಸುವರ್ಣಸೌಧದ ಮುಂಭಾಗದಲ್ಲಿ ಕರ್ನಾಟಕ ವಿಧಾನ ಮಂಡಲವು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷಗಳಾದ ಸಂದರ್ಭದಲ್ಲಿ ಆಯೋಜಿಸಿದ್ದ ಸುವರ್ಣ ಸಂಭ್ರಮಾಚರಣೆ ಹಾಗೂ ಕರ್ನಾಟಕ ವಿಧಾನ ಮಂಡಲದ ಮಾಜಿ ಸಭಾಪತಿ ಹಾಗೂ ಸಭಾಧ್ಯಕ್ಷರ ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಪ್ರಾಚೀನ ಹಾಗೂ ಮಧ್ಯಕಾಲೀನ‌ ಇತಿಹಾಸದ ಪುಟಗಳನ್ನು ತಿರುವಿದಾಗ ಈ ನಾಡು ಭವ್ಯ ಪರಂಪರೆ, ಭೌಗೋಳಿಕ ವ್ಯಾಪ್ತಿ ಹೊಂದಿತ್ತು ಎಂದು ತಿಳಿಯುತ್ತದೆ. ಸಂಗೀತ, ಕಲೆ, ಸಾಂಸ್ಕೃತಿಕ ಕ್ಷೇತ್ರಕ್ಕೆ ನಾಡಿನ ಕೊಡುಗೆ ದೊಡ್ಡದು. ಶಿಕ್ಷಣ, ಔದ್ಯೋಗೀಕರಣದಲ್ಲಿಯೂ ರಾಜ್ಯ ಪ್ರಗತಿ ಸಾಧಿಸಿದೆ. ಕನ್ನಡ ಎಂಟು ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಶ್ಲಾಘಿಸಿದರು.

Latest Videos

undefined

‘ಬಿಡಿಎ, ಬಿಬಿಎಂಪಿ ಜಾಗ ಒತ್ತುವರಿ ತೆರವು ಖಚಿತ’: ಡಿ.ಕೆ.ಶಿವಕುಮಾರ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಅನೇಕ ಮಹನೀಯರ ತ್ಯಾಗ, ಬಲಿದಾನಗಳಿಂದ ಅಖಂಡ ಕರ್ನಾಟಕ ನಿರ್ಮಾಣ ಸಾಧ್ಯವಾಯಿತು. ಆ ಹೋರಾಟಗಾರರನ್ನೆಲ್ಲ ಸ್ಮರಿಸಬೇಕು. 1956ರಲ್ಲಿ ಒಂದುಗೂಡಿದರೂ ರಾಜ್ಯಕ್ಕೆ ಮೈಸೂರು ರಾಜ್ಯ ಎಂದೇ ಕರೆಯಲಾಗುತ್ತಿತ್ತು. 1973ರಲ್ಲಿ ಡಿ.ದೇವರಾಜ ಅರಸು ಅವರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ್ದು ಐತಿಹಾಸಿಕ ಕಾರ್ಯವಾಗಿದೆ. ಭಾಷೆಯ ಅಭಿಮಾನ ಇರಬೇಕು, ದುರಭಿಮಾನಿಗಳಾಗಬಾರದು. ಯಾವುದೇ ಭಾಷೆ ಕಲಿಯಬಹುದು, ನಮ್ಮ ಮಾತೃ ಭಾಷೆ ಮರೆಯಬಾರದು. ಸುವರ್ಣ ಸಂಭ್ರಮಾಚರಣೆ ಈ ಸಂದರ್ಭದಲ್ಲಿ ನಾವು ಕನ್ನಡಿಗರ ಜೊತೆ ಕನ್ನಡದಲ್ಲಿಯೇ ಮಾತನಾಡುವ ನಿರ್ಣಯ ಪಾಲಿಸಬೇಕು ಎಂದು ಹೇಳಿದರು.

ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿ, ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣಗೊಂಡ ನಂತರ ಆಗಿರುವ ಸರ್ವಾಂಗೀಣ ವಿಕಾಸಕ್ಕೆ ಕೊಡುಗೆ ನೀಡಿರುವ ಹಿರಿಯರನ್ನು ಸ್ಮರಿಸುವುದು ನಮ್ಮೆಲ್ಲರ ಜವಾಬ್ದಾರಿ ಮತ್ತು ಕರ್ತವ್ಯ. ಮುಂದಿನ ಪೀಳಿಗೆಗೆ ಒಂದು ಮಾದರಿ ರಾಜ್ಯ ಮತ್ತು ಪರಂಪರೆ ನೀಡುವ ಕೆಲಸ ಕಾರ್ಯಗಳನ್ನು ನಾವು ಮಾಡಬೇಕು. ಪ್ರೀತಿ ಪೂರ್ವಕ ದ್ವೇಷರಹಿತ ರಾಜ್ಯ ನಮ್ಮದು. ಆ ಹಿರಿಮೆ ಗರಿಮೆ ಎತ್ತಿ ಹಿಡಿಯಬೇಕು ಎಂದರು. ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಹಿಂದಿನ ಹಿರಿಯರು ಸವೆಸಿದ ಹಾದಿ ಹಾಗೂ ಮಾರ್ಗದರ್ಶನ ಸದಾ ಕಾಲ ನಮಗೆ ಬೇಕು. ಸರ್ಕಾರ ಹಾಗೂ ವಿಧಾನಮಂಡಲದ ಸಮನ್ವಯ, ಸಹಕಾರದಿಂದ ಈ ಅರ್ಥಪೂರ್ಣ ಕಾರ್ಯಕ್ರಮ ಸಾಧ್ಯವಾಗಿದೆ ಎಂದರು.

ಸಚಿವ ಎಚ್.ಕೆ.ಪಾಟೀಲ ಮಾತನಾಡಿ, 1973ರ ನ.1 ರಂದು ರಾಜ್ಯಕ್ಕೆ ಕರ್ನಾಟಕವೆಂದು ನಾಮಕರಣವಾಯಿತು. ಕಳೆದ 50 ವರ್ಷಗಳ ಅವಧಿಯಲ್ಲಿ ನಾಡಿನಲ್ಲಿ ಮಹತ್ವದ ಬದಲಾವಣೆಗಳು, ಅಭಿವೃದ್ಧಿಯಾಗಿವೆ. ಗಂಡು ಮೆಟ್ಟಿನ ನಾಡು ಬೆಳಗಾವಿಯ ಸುವರ್ಣ ಸೌಧದ ಎದುರಿನಲ್ಲಿ ಈ ಮಹತ್ವದ ಕಾರ್ಯಕ್ರಮ ನಡೆಯುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದರು. ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್‌. ಅಶೋಕ ಮಾತನಾಡಿ, ರಾಜ್ಯವನ್ನು ಸಮಗ್ರವಾಗಿ ಗುರುತಿಸಬೇಕು, ಪ್ರಾದೇಶಿಕ ಭೇದ ಭಾವಗಳಿಗೆ ಅವಕಾಶ ಉಂಟು ಮಾಡಬಾರದು. ರಾಜ್ಯದ ಅಖಂಡತೆ, ಏಕತೆ ನಾವು ಉಳಿಸಬೇಕು ಎಂದರು.

ಇದೇ ಕಾರಣಕ್ಕೆ ಬೆಂಗಳೂರಿನಲ್ಲಿ ಏಕಾಏಕಿ ಡೆಂಘೀ ಕೇಸ್‌ ಹೆಚ್ಚಳ!

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಾತನಾಡಿದರು. ವಿಧಾನಸಭೆ ಉಪಸಭಾಧ್ಯಕ್ಷ ರುದ್ರಪ್ಪ ಲಮಾಣಿ, ವಿಧಾನ ಪರಿಷತ್ ಉಪಸಭಾಪತಿ ಎಂ.ಕೆ‌.ಪ್ರಾಣೇಶ, ಸರ್ಕಾರದ ಮುಖ್ಯ ಸಚೇತಕ ಅಶೋಕ ಪಟ್ಟಣ, ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ಡಾ.ಜಿ.ಪರಮೇಶ್ವರ, ಕೆ.ಎಚ್.ಮುನಿಯಪ್ಪ, ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಕೆ ಪಾಟೀಲ ಮತ್ತಿತರ ಇದ್ದರು. ಮೂಡಬಿದಿರೆಯ ಆಳ್ವ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

click me!