ಬೆಂಗಳೂರಿನಲ್ಲಿ 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ!

By Suvarna NewsFirst Published Sep 22, 2021, 8:40 AM IST
Highlights

* ತರಬೇತಿಗಾಗಿ ಬಂದಿದ್ದ ಮೇಘಾಲಯದ ಯೋಧರು

* 34 ಬಿಎಸ್‌ಎಫ್‌ ಯೋಧರಿಗೆ ಕೊರೋನಾ ಸೋಂಕು ದೃಢ

ಬೆಂಗಳೂರು(ಸೆ.22): ಯಲಹಂಕದ ಬಿಎಸ್‌ಎಫ್‌ ಕ್ಯಾಂಪ್‌ಗೆ ತರಬೇತಿಗಾಗಿ ಬಂದಿದ್ದ ಮೇಘಾಲಯದ ಶಿಲ್ಲಾಂಗ್‌ನ 150 ಮಂದಿ ಬಿಎಸ್‌ಎಫ್‌ ಯೋಧರ ಪೈಕಿ 34 ಮಂದಿಗೆ ಕೊರೋನಾ ಸೋಂಕು ದೃಢಪಟ್ಟಿದೆ.

ಈ ಯೋಧರ ತಂಡ ಸೆ.15ರಂದು ಯಲಹಂಕದ ಬಿಎಸ್‌ಎಫ್‌ ಕ್ಯಾಂಪ್‌ಗೆ ಬಂದಿತ್ತು. ಮೂರು ದಿನದ ಬಳಿಕ ಕೆಲವರಲ್ಲಿ ಶೀತ, ಕೆಮ್ಮು, ಜ್ವರ ಸೇರಿದಂತೆ ಕೋವಿಡ್‌ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ಸೆ.19ರಂದು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿತ್ತು. ಬಳಿಕ ಚಿಕ್ಕಜಾಲದ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕ್ಯಾಂಪ್‌ಗೆ ತೆರಳಿ 150 ಮಂದಿ ಯೋಧರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಿದ್ದು ಅವರಲ್ಲಿ 34 ಯೋಧಕರಲ್ಲಿ ಸೋಂಕು ದೃಢಪಟ್ಟಿದೆ.

ಈ ಪೈಕಿ ಸೋಂಕಿತ 20 ಯೋಧರನ್ನು ದೇವನಹಳ್ಳಿಯ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಉಳಿದಂತೆ ಯಾವುದೇ ಸೋಂಕಿತ ಲಕ್ಷಣಗಳು ಇಲ್ಲದ 14 ಮಂದಿ ಯೋಧರನ್ನು ಯಲಹಂಕದ ಕೋವಿಡ್‌ ಆರೈಕೆ ಕೇಂದ್ರಕ್ಕೆ ದಾಖಲು ಮಾಡಲಾಗಿದೆ ಎಂದು ಯಲಹಂಕ ವಲಯದ ಆರೋಗ್ಯಾಧಿಕಾರಿ ಭಾಗ್ಯಲಕ್ಷ್ಮಿ ಅವರು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.

ದೇಶದ ವಿವಿಧ ರಾಜ್ಯಗಳಿಂದ ಯಲಹಂಕ ಬಿಎಸ್‌ಎಫ್‌ ಕ್ಯಾಂಪ್‌ಗೆ ತರಬೇತಿಗೆಂದು ಒಂದು ಸಾವಿರಕ್ಕೂ ಹೆಚ್ಚು ಯೋಧರು ಆಗಮಿಸಿದ್ದಾರೆ. ಪ್ರಸ್ತುತ 34 ಮಂದಿ ಯೋಧರಲ್ಲಿ ಕೊರೋನಾ ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ತರಬೇತಿಯನ್ನು ಸ್ಥಗಿತಗೊಳಿಸಲಾಗಿದೆ. ಸೆ.22ರಂದು ಎಲ್ಲ ಯೋಧರನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ನಿರ್ಧರಿಸಲಾಗಿದೆ. ಸೋಂಕಿತರು ವಾಸವಿದ್ದ ಕೊಠಡಿ ಸೇರಿದಂತೆ ಸುತ್ತಮುತ್ತಲ ಪ್ರದೇಶವನ್ನು ಸೋಂಕು ನಿವಾರಕ ದ್ರಾವಣದಿಂದ ಸ್ವಚ್ಛಗೊಳಿಸಲಾಗಿದೆ ಎಂದು ಬಿಎಸ್‌ಎಫ್‌ ಅಧಿಕಾರಿಗಳು ಮಾಹಿತಿ ನೀಡಿದ್ದಾರೆಂದು ಭಾಗ್ಯಲಕ್ಷ್ಮೇ ತಿಳಿಸಿದರು.

click me!