ಆಪ್ತನ ಮೇಲೆ ಐಟಿ ದಾಳಿ : ಬಿಎಸ್‌ವೈ ಪ್ರತಿಕ್ರಿಯೆ

By Kannadaprabha NewsFirst Published Oct 8, 2021, 7:20 AM IST
Highlights
  •  ತಮ್ಮ ಆಪ್ತನ ಮೇಲೆ ನಡೆದ ಐಟಿ ದಾಳಿ ಖಂಡಿತವಾಗಿಯೂ ರಾಜಕೀಯ ಪ್ರೇರಿತ ದಾಳಿಯಲ್ಲ
  •  ಐಟಿ ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ

 ಶಿವಮೊಗ್ಗ (ಅ.08):  ತಮ್ಮ ಆಪ್ತನ ಮೇಲೆ ನಡೆದ ಐಟಿ ದಾಳಿ ಖಂಡಿತವಾಗಿಯೂ ರಾಜಕೀಯ ಪ್ರೇರಿತ ದಾಳಿಯಲ್ಲ. ಬದಲಾಗಿ ಐಟಿ (IT) ಅಧಿಕಾರಿಗಳು ತಮ್ಮ ಕರ್ತವ್ಯ ನಿರ್ವಹಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಪ್ರತಿಕ್ರಿಯಿಸಿದ್ದಾರೆ.

ಶಿಕಾರಿಪುರದಲ್ಲಿ (Shikaripura) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಮೇಶ್‌ ನನ್ನ ಜೊತೆಯೂ ಕೆಲಸ ಮಾಡಿದ್ದ. ಸಿಎಂ ಬಸವರಾಜ್‌ ಬೊಮ್ಮಾಯಿ ಜೊತೆಗೂ ಕೆಲಸ ಮಾಡುತ್ತಿದ್ದ. ದಾಳಿಯ ಕುರಿತು ಈತ ಮಾಹಿತಿ ನೀಡಬಹುದು. ಐಟಿ ದಾಳಿ ಕುರಿತು ಅಧಿಕಾರಿಗಳು ನಾಳೆ ಮಾಹಿತಿ ನೀಡಲಿದ್ದಾರೆ. ಆ ಬಳಿಕ ಪ್ರತಿಕ್ರಿಯೆ ನೀಡುತ್ತೇನೆ. ಈ ದಾಳಿಯಲ್ಲಿ ವಿಶೇಷವೇನೂ ಇಲ್ಲ. ಐಟಿ ದಾಳಿಗಳು ನಡೆಯುತ್ತಲೇ ಇರುತ್ತವೆ ಎಂದರು.

ಕಂಡಕ್ಟರ್‌ To ಪವರ್‌ ಬ್ರೋಕರ್: ಉಮೇಶ ನೂರಾರು ಕೋಟಿಯ ಒಡೆಯನಾದ ರೋಚಕ ಕಥೆ!

ಐಟಿ ಅಧಿಕಾರಿಗಳು ಯಾರೇ ತಪ್ಪು ಮಾಡಿದರೂ ಬಿಡುವುದಿಲ್ಲ. ಕಾನೂನು ಕ್ರಮ ಕೈಗೊಳ್ಳುತ್ತಾರೆ. ಈ ದಾಳಿಯಿಂದ ಉಪ ಚುನಾವಣೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಹಾನಗಲ್‌ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳೇ ಜಯ ಗಳಿಸಲಿದ್ದಾರೆ. ಇದು ಶತಃಸಿದ್ಧ. ವಿರೋಧ ಪಕ್ಷಗಳಿಗೆ ಸೋಲುಣಿಸುವ ಮೂಲಕ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬಿಎಸ್‌ವೈ ಆಪ್ತನ ಮೇಲೆ ದಾಳಿ

 

ತೆರಿಗೆ ವಂಚನೆ ಆರೋಪದ ಮೇರೆಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರ ಆಪ್ತ ಸಹಾಯಕ ಸೇರಿದಂತೆ ಪ್ರತಿಷ್ಠಿತ ಗುತ್ತಿಗೆದಾರರು ಹಾಗೂ ಲೆಕ್ಕ ಪರಿಶೋಧಕರ ನಿವಾಸ, ಕಚೇರಿಗಳ ಮೇಲೆ ಗುರುವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೊಡ್ಡ ಮಟ್ಟದ ದಾಳಿ ನಡೆಸಿದ್ದಾರೆ. ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳ 50ಕ್ಕೂ ಅಧಿಕ ಕಡೆ ದಾಳಿ ನಡೆದಿದ್ದು, ನಗದು ಹಣ, ಚಿನ್ನಾಭರಣ, ಆಸ್ತಿಪಾಸ್ತಿ ಹಾಗೂ ಅಪಾರ ಪ್ರಮಾಣದ ದಾಖಲೆಗಳನ್ನು ಜಪ್ತಿ ಮಾಡಲಾಗಿದೆ.

ಇದು ರಾಜ್ಯದ ‘ನೀರಾವರಿ ಸಂಪತ್ತಿನ’ ಕೋಟೆ ಮೇಲೆ ಐಟಿ ಅಧಿಕಾರಿಗಳು ನಡೆಸಿದ ಬೃಹತ್‌ ಕಾರ್ಯಾಚರಣೆ ಎಂದೇ ಹೇಳಲಾಗುತ್ತಿದೆ. ರಾಜ್ಯ ಜಲಸಂಪನ್ಮೂಲ ಇಲಾಖೆ ಕೈಗೊಂಡಿರುವ ಕೋಟ್ಯಂತರ ರು. ಮೊತ್ತದ ಕಾಮಗಾರಿ ಗುತ್ತಿಗೆ ಹಂಚಿಕೆಯಲ್ಲಿ ನಡೆದಿರುವ ಅಕ್ರಮವೇ ಈ ದಾಳಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.

ಯಡಿಯೂರಪ್ಪ ಅವರ ಆಪ್ತ ಸಹಾಯಕ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಆಯನೂರಿನ ಎಂ.ಆರ್‌.ಉಮೇಶ್‌ (MR Umesh), ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ (BY Vijayendra) ಅವರ ಆಪ್ತ ಸಹಾಯಕ ಅರವಿಂದ್‌, ಬಾಗಲಕೋಟೆಯ ಗುತ್ತಿಗೆದಾರ ಡಿ.ವೈ.ಉಪ್ಪಾರ್‌, ಕೊಪ್ಪಳದ ಶ್ರೀನಿವಾಸ್‌ ಮತ್ತು ಈ ಗುತ್ತಿಗೆದಾರರ ಲೆಕ್ಕಪರಿಶೋಧಕರು ಎನ್ನಲಾದ ಅಮಲಾ, ಲಕ್ಷ್ಮೇಕಾಂತ್‌ ಸೇರಿದಂತೆ ಇತರರ ಮೇಲೆ ಕಾರ್ಯಾಚರಣೆ ನಡೆದಿದೆ. ಬೆಂಗಳೂರು, ಬಾಗಲಕೋಟೆ ಹಾಗೂ ಕೊಪ್ಪಳ ಜಿಲ್ಲೆಗಳಲ್ಲಿ ಪ್ರತ್ಯೇಕವಾಗಿ ಸುಮಾರು 200ಕ್ಕೂ ಅಧಿಕ ಐಟಿ ಅಧಿಕಾರಿಗಳ ತಂಡವು ಏಕ ಕಾಲಕ್ಕೆ ದಾಳಿ ಮಾಡಿದೆ.

click me!