ಯಶಸ್ವಿನಿ ಯೋಜನೆ ಮತ್ತೆ ಜಾರಿ ಚಿಂತನೆ: ಬೊಮ್ಮಾಯಿ

By Kannadaprabha News  |  First Published Oct 8, 2021, 7:10 AM IST

ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ, ಎಸ್‌.ಎಂ.ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಾರಿ ಮಾಡಿದ್ದ ‘ಯಶಸ್ವಿನಿ’ ಯೋಜನೆ

ಯೋಜನೆಯ ಮರು ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ


 ಮೈಸೂರು (ಅ.08):  ಒಂದು ಕಾಲದಲ್ಲಿ ಜನಪ್ರಿಯವಾಗಿದ್ದ, ಎಸ್‌.ಎಂ.ಕೃಷ್ಣ (SM Krishna) ಅವರು ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಜಾರಿ ಮಾಡಿದ್ದ ‘ಯಶಸ್ವಿನಿ’ ಯೋಜನೆಯ ಮರು ಜಾರಿಗೆ ರಾಜ್ಯ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹೇಳಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಗುರುವಾರ ಮೈಸೂರು ದಸರಾ ಮಹೋತ್ಸವ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿ, ರೈತರಿಗೆ ಆರೋಗ್ಯ ಸಮಸ್ಯೆ ಉಂಟಾದರೆ ಸುಲಭವಾಗಿ, ಉಚಿತವಾಗಿ ಚಿಕಿತ್ಸಾ ಸೌಲಭ್ಯಗಳು ಸಿಗಲಿ ಎಂಬ ಉದ್ದೇಶದಿಂದ ಯಶಸ್ವಿನಿ ಯೋಜನೆಯನ್ನು (yashashwini Yojana) ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಜಾರಿಗೆ ತರಲಾಗಿತ್ತು. ಇದು ಅತ್ಯಂತ ಯಶಸ್ವಿ ಆರೋಗ್ಯ ಸೇವೆ ಎಂದು ಬೊಮ್ಮಾಯಿ ಮೆಚ್ಚುಗೆ ವ್ಯಕ್ತಪಡಿಸಿದರು.

Tap to resize

Latest Videos

ಸಚಿವ ಎಸ್‌ಟಿಎಸ್‌ ಜತೆ ಚರ್ಚೆ:

ಈ ಯೋಜನೆ ಇದ್ದಾಗ ತುಂಬಾ ಅನುಕೂಲವಾಗುತ್ತಿತ್ತು ಎಂದು ರಾಜ್ಯದಲ್ಲಿ ಹೋದೆಡೆಯೆಲ್ಲ ರೈತರು ಹೇಳುತ್ತಿದ್ದಾರೆ. ಹೀಗಾಗಿ ಈ ಯೋಜನೆ ಅಥವಾ ಈ ಮಾದರಿಯ ಯೋಜನೆ ಜಾರಿ ಬಗ್ಗೆ ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್‌ ಜೊತೆ ಎರಡ್ಮೂರು ಬಾರಿ ಚರ್ಚೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಆರ್ಥಿಕ ಪರಿಸ್ಥಿತಿ ನೋಡಿಕೊಂಡು ಈ ವಿಚಾರಕ್ಕೆ ಸಂಬಂಧಿಸಿ ಗಮನಹರಿಸುತ್ತೇನೆ ಎಂದು ಭರವಸೆ ನೀಡಿದರು.

ನನಗೆ ಐಟಿ ದಾಳಿ ಬಗ್ಗೆ ಮಾಹಿತಿಯೇ ಇಲ್ಲ: ಸಿಎಂ ಬೊಮ್ಮಾಯಿ

ಬಿಸಿಯೂಟಕ್ಕೆ ಭಾರಿ ಮೆಚ್ಚುಗೆ:

ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಿಸಲು ಹಾಗೂ ಶಾಲೆಯಲ್ಲಿ ಮಕ್ಕಳ ಹಾಜರಾತಿ ಹೆಚ್ಚಿಸಲು ಎಸ್‌.ಎಂ.ಕೃಷ್ಣ ಅವಧಿಯಲ್ಲಿ ಜಾರಿಗೆ ತಂದ ಮಧ್ಯಾಹ್ನದ ಬಿಸಿಯೂಟ ಯೋಜನೆ ಕುರಿತೂ ಮುಖ್ಯಮಂತ್ರಿ ಮೆಚ್ಚುಗೆ ವ್ಯಕ್ತಪಡಿಸಿದರು. ಈ ಯೋಜನೆ ಇಂದಿಗೂ ಜಾರಿಯಲ್ಲಿದೆ. ಬೇರೆ ರಾಜ್ಯಗಳು ಕೂಡ ಮಧ್ಯಾಹ್ನದ ಬಿಸಿಯೂಟ ಯೋಜನೆ ಅಳವಡಿಸಿಕೊಂಡಿವೆ. ಇಂಥ ಅನೇಕ ಕಾರ್ಯಕ್ರಮಗಳನ್ನು ನೀಡಿದ ರಾಜಕೀಯ ಮುತ್ಸದ್ದಿ ಎಸ್‌.ಎಂ.ಕೃಷ್ಣ ಅವರನ್ನು ಎಲ್ಲರೂ ಒಪ್ಪುತ್ತಾರೆ. ಅವರು ದಸರಾ ಉದ್ಘಾಟನೆಗೆ ಸರ್ಕಾರದ ಆಹ್ವಾನವನ್ನು ಒಪ್ಪಿ ಬಂದಿರುವುದು ತುಂಬಾ ಸಂತಸ ತಂದಿದೆ ಎಂದರು.

ಏನಿದು ಯಶಸ್ವಿನಿ?

ಗ್ರಾಮೀಣ ಸಹಕಾರಿಗಳ ಆರೋಗ್ಯ ಸುರಕ್ಷತಾ ಯೋಜನೆ. ಯಾವುದೇ ಸಹಕಾರ ಸಂಘದ ಸದಸ್ಯರು ಕನಿಷ್ಠ ಮೊತ್ತದ ಪ್ರೀಮಿಯಂ ಪಾವತಿಸಿ ತಮ್ಮ ಕುಟುಂಬದವರ ಹೆಸರು ನೋಂದಣಿ ಮಾಡಿಕೊಳ್ಳಬೇಕು. ಆಗ ಹಲವು ವಿಧದ ಶಸ್ತ್ರಚಿಕಿತ್ಸೆಗಳನ್ನು ಉಚಿತವಾಗಿ ಮಾಡಿಸಿಕೊಳ್ಳಬಹುದು.

click me!