ಬಿಎಸ್‌ವೈ ಕಣ್ಣೀರಿಗೆ ಬಂಡಾಯವೇ ಖತಂ!

By Kannadaprabha News  |  First Published Jun 5, 2020, 6:13 PM IST

'ರಾಜಾಹುಲಿ' ಎಂದೇ ಕರೆಸಿಕೊಂಡಿರುವ ಸಿಎಂ ಯಡಿಯೂರಪ್ಪ ರಾಜಕೀಯದಲ್ಲಿ ನಿಪುಣರು. ಎದುರಾಳಿಗಳನ್ನು ಕಟ್ಟಿ ಹಾಕುವ ಹಾಗೆ ದಾಳಗಳನ್ನು ಉರುಳಿಸುವುದರಲ್ಲಿ ನಿಸ್ಸೀಮರು. ಇವರ ರಾಜಕೀಯ ನಡೆಗಳು ಕೂಡಾ ಇಂಟರೆಸ್ಟಿಂಗ್. 


ಬೆಂಗಳೂರು (ಜೂ. 05): ಅವತ್ತು ಬೆಳಿಗ್ಗೆ 6 ಗಂಟೆಯಿಂದಲೇ ದಿಲ್ಲಿಯ ನೆಹರು ಪಾರ್ಕ್ನಲ್ಲಿ ನಾನು ಮತ್ತು ಸುವರ್ಣ ನ್ಯೂಸ್‌ನ ಸಹೋದ್ಯೋಗಿ ಜಯಪ್ರಕಾಶ್‌ ಶೆಟ್ಟಿ, ಕರ್ನಾಟಕ ಭವನದಲ್ಲಿ ಯಡಿಯೂರಪ್ಪ ಬೈಟ್‌ಗಾಗಿ ಕಾದು ಕುಳಿತಿದ್ದೆವು. ಹಿಂದಿನ ರಾತ್ರಿಯಷ್ಟೇ ದಿಲ್ಲಿ ನಾಯಕರು ಶೋಭಾ ಕರಂದ್ಲಾಜೆ ರಾಜೀನಾಮೆ ಪಡೆದಿದ್ದರು. ಬಳ್ಳಾರಿ ರೆಡ್ಡಿಗಳು ಹೇಳಿದ ಹಾಗೇ ಎಂದು ತೀರ್ಮಾನ ಆಗಿತ್ತು.

ಸಹಜವಾಗಿ ಯಡಿಯೂರಪ್ಪ ದುಃಖದಲ್ಲಿದ್ದರು. ಸರಿಯಾಗಿ 6:30ಕ್ಕೆ ಶೆಟ್ಟರ ಕೈಗೆ ಸಿಕ್ಕ ಯಡಿಯೂರಪ್ಪ ಕ್ಯಾಮೆರಾ ಎದುರು ಗಳಗಳನೆ ಅತ್ತರು. ಅರ್ಧ ಗಂಟೆಯಲ್ಲಿ ದೇಶದ ಎಲ್ಲ ಚಾನೆಲ್‌ಗಳಲ್ಲಿ ಯಡಿಯೂರಪ್ಪ ಅತ್ತ ‘ಸುವರ್ಣ ನ್ಯೂಸ್‌’ನ ದೃಶ್ಯಗಳು ಪ್ರಸಾರವಾಗಿದ್ದವು. ಯಡಿಯೂರಪ್ಪ ಬಗ್ಗೆ ಕರ್ನಾಟಕದಲ್ಲಿ ಸಹಾನುಭೂತಿಯ ಅಲೆ ಎದ್ದಿತು. ಅರ್ಧ ಗಂಟೆಯಲ್ಲಿ ಹೈಕಮಾಂಡ್‌ ಬಂಡಾಯ ನಿಲ್ಲಿಸುವಂತೆ ಸೂಚನೆ ನೀಡಿತ್ತು, ರೆಡ್ಡಿ ತಣ್ಣಗಾದರು.

Tap to resize

Latest Videos

ಯಡಿಯೂರಪ್ಪನವರಿಗೆ ಪರ್ಯಾಯ ಎಲ್ಲಿದೆ?

ಆ ಘಟನೆ ನಂತರ ಫೋನ್‌ ಮಾಡಿದ ಒಬ್ಬ ದಿಲ್ಲಿ ಬಿಜೆಪಿ ವರಿಷ್ಠ ನಾಯಕರು, ‘ಯಡಿಯೂರಪ್ಪ ಖುದ್‌ ರೋಯೇ ಯಾ, ರೂಲಾ ಯಾ ಗಯಾ’ (ಸಹಜವಾಗಿ ಅತ್ತರೋ ಅಥವಾ ಬೇಕೆಂತಲೇ ಅಳಿಸಲಾಯಿತೋ) ಎಂದು ಕೇಳಿದರು. ಆದರೆ ಒಂದು ಅಳು ದೊಡ್ಡ ಬಂಡಾಯದ ಆಟವನ್ನು ಮುಗಿಸಿ ಹಾಕಿತ್ತು ನೋಡಿ!

ಒಂದು ರಾಜ್ಯಕ್ಕೆ, ಒಂದು ದಿಲ್ಲಿಗೆ

ರಾಜ್ಯಸಭಾ ಚುನಾವಣೆಗೋಸ್ಕರ ಜೂನ್‌ 9 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ ಇದ್ದು, ದಿಲ್ಲಿ ಮೂಲಗಳು ಹೇಳುತ್ತಿರುವ ಪ್ರಕಾರ, ಒಂದು ಹೆಸರು ಸ್ಥಳೀಯವಾಗಿ ನಿರ್ಣಯ ಗೊಂಡರೆ, ಇನ್ನೊಂದು ಹೆಸರು ದಿಲ್ಲಿಯವರೇ ನಿರ್ಧರಿಸಲಿದ್ದಾರೆ. ಪ್ರಭಾರಿ ಆಗಿರುವ ಮುರಳೀಧರ ರಾವ್‌ಗೆ ಕರ್ನಾಟಕದಿಂದಲೇ ಟಿಕೆಟ್‌ ಕೊಡುವ ಸಾಧ್ಯತೆಗಳು ಕಡಿಮೆ ಎಂದು ಹೇಳಲಾಗುತ್ತಿದೆ.

ಹಿಂದೆ ಒಮ್ಮೆ ಬಿಹಾರದಿಂದಲೇ ಅಲ್ಲಿನ ಪ್ರಭಾರಿ ಧರ್ಮೇಂದ್ರ ಪ್ರಧಾನ್‌ ಅವರಿಗೆ ಟಿಕೆಟ್‌ ನೀಡಿದ್ದು ಬಿಟ್ಟರೆ ಅಂಥ ಉದಾಹರಣೆಗಳು ಇಲ್ಲ. ಮೊದಲನೇ ಸ್ಥಾನಕ್ಕೆ ಪ್ರಭಾಕರ ಕೋರೆ ಹೆಸರು ಮುಂದೆ ಇದೆಯಾದರೂ ಕೊನೆಯ ಗಳಿಗೆಯಲ್ಲಿ ಕಪ್ಪು ಕುದುರೆಯೊಂದು ಮುಂದೆ ಬಂದರೂ ಆಶ್ಚರ್ಯವಿಲ್ಲ. ಮೋದಿ ಕಾಲದಲ್ಲಿ ನಿರ್ದಿಷ್ಟ ಹೀಗೆಯೇ ಆಗುತ್ತದೆ ಎಂದು ಹೇಳುವುದು ಕಷ್ಟಕಷ್ಟ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ 

 

click me!