ಪೋಕ್ಸೋ ಕೇಸ್‌, ಕೋರ್ಟ್‌ಗೆ ಹಾಜರಾಗುವಂತೆ ಮಾಜಿ ಸಿಎಂ ಬಿಎಸ್‌ವೈಗೆ ಸಮನ್ಸ್‌ ಜಾರಿ

Published : Nov 18, 2025, 05:43 PM IST
BS Yediyurappa POCSO case

ಸಾರಾಂಶ

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ, ವಿಚಾರಣಾ ನ್ಯಾಯಾಲಯವು ಅವರಿಗೆ ಸಮನ್ಸ್ ಜಾರಿ ಮಾಡಿದೆ. ಡಿಸೆಂಬರ್ 2 ರಂದು ಕೋರ್ಟ್‌ಗೆ ಹಾಜರಾಗುವಂತೆ ಸೂಚಿಸಲಾಗಿದೆ.

ಬೆಂಗಳೂರು (ನ.18): ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ದಾಖಲಾಗಿರುವ ಪೋಕ್ಸೋ ಕೇಸ್‌ನಲ್ಲಿ ಮಹತ್ವದ ಬೆಳವಣಿಗೆಯಾಗಿದೆ. ಪೋಕ್ಸೋ ಕೇಸ್‌ನ ವಿಚಾರಣೆ ಆರಂಭ ಮಾಡಿರುವ ಟ್ರಯಲ್‌ ಕೋರ್ಟ್‌ ಮಾಜಿ ಸಿಎಂಗೆ ಕೋರ್ಟ್‌ಗೆ ಹಾಜರಾಗುವಂತೆ ಸಮನ್ಸ್‌ ಜಾರಿ ಮಾಡಿದೆ. ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಕೇಸ್ ವಿಚಾರಣೆ ಮಾಡುತ್ತಿರುವ ಫಾಸ್ಟ್‌ ಟ್ರ್ಯಾಕ್‌ ಕೋರ್ಟ್‌ ಅವರಿಗೆ ಸಮನ್ಸ್‌ ಜಾರಿ ಮಾಡಿದೆ. ಯಡಿಯೂರಪ್ಪ ಮಾತ್ರವಲ್ಲದೆ, ಅರುಣ, ಮರಿಸ್ವಾಮಿ ಹಾಗೂ ರುದ್ರೇಶ್‌ಗೂ ಸಮನ್ಸ್‌ ಜಾರಿ ಮಾಡಲಾಗಿದ್ದು, ಡಿಸೆಂಬರ್‌ 2 ರಂದು ಕೋರ್ಟ್‌ಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಟ್ರಯಲ್ ಆರಂಭ ಹಿನ್ನಲೆ ಆರೋಪಿಗಳು ಕೋರ್ಟ್ ಗೆ ಹಾಜರಾಗಬೇಕು ಎಂದು ತಿಳಿಸಲಾಗಿದೆ. ಪ್ರಕರಣದ ಆರೋಪಿಗಳಿಗೆ ಸಮನ್ಸ್ ಜಾರಿಗೆ ಎಸ್‌ಪಿಪಿ ಅಶೋಕ್‌ ನಾಯ್ಕ್‌ ಮನವಿ ಮಾಡಿದ್ದರು.

ಪೋಕ್ಸೋ (POCSO) ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರ್ನಾಟಕ ಹೈಕೋರ್ಟ್ ಕಳೆದ ಗುರುವಾರ ಹಿನ್ನಡೆ ನೀಡಿತ್ತು. ವಿಚಾರಣಾಧೀನ ನ್ಯಾಯಾಲಯವು ಪ್ರಕರಣದ 'ಸಂಜ್ಞೆ' (Cognisance) ಪರಿಗಣಿಸಿ, ಸಮನ್ಸ್ ಜಾರಿಗೊಳಿಸಿರುವುದನ್ನು ನ್ಯಾಯಮೂರ್ತಿ ಎಂ.ಐ. ಅರುಣ್ ಅವರ ಏಕಸದಸ್ಯ ಪೀಠ ಎತ್ತಿಹಿಡಿದಿದೆ. ಇದರ ಪರಿಣಾಮವಾಗಿ, ಯಡಿಯೂರಪ್ಪ ಅವರು ಸಿಐಡಿ (CID) ವಿಚಾರಣೆಯನ್ನು ಎದುರಿಸುವುದು ಅನಿವಾರ್ಯವಾಗಿದೆ.

ಇದರಿಂದಾಗಿಯಡಿಯೂರಪ್ಪ ಮತ್ತು ಇತರರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಸಿಐಡಿ ತನಿಖೆ ಮುಂದುವರೆಯಲಿದೆ. ಆದರೆ, ವಿಚಾರಣಾ ನ್ಯಾಯಾಲಯದ ಮುಂದೆ ಯಡಿಯೂರಪ್ಪ ಅವರ ಹಾಜರಾತಿ ಅಗತ್ಯವಿಲ್ಲದಿದ್ದರೆ, ಅವರ ಪರ ವಕೀಲರು ಸಲ್ಲಿಸುವ ವಿನಾಯಿತಿ ಮನವಿಯನ್ನು ನ್ಯಾಯಾಲಯವು ಪುರಸ್ಕರಿಸಬೇಕು ಎಂದು ಹೈಕೋರ್ಟ್ ನಿರ್ದೇಶಿಸಿದೆ.

ಯಡಿಯೂರಪ್ಪ ಪರ ವಾದ ಮಂಡಿಸಿದ್ದ ಹಿರಿಯ ವಕೀಲ ಸಿವಿ ನಾಗೇಶ್‌, ' ಸಂತ್ರಸ್ತೆಯ ಹೇಳಿಕೆ ಹೊರತುಪಡಿಸಿ, ಘಟನೆ ನಡೆದಾಗ ಮನೆಯಲ್ಲಿದ್ದ ಸಾಕ್ಷಿಗಳ ಹೇಳಿಕೆ ಹಾಗೂ ಆಡಿಯೋ ರೆಕಾರ್ಡಿಂಗ್‌ಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ. ಕೋರ್ಟ್‌ ಹೊಸದಾಗಿ ಕಾಗ್ನಿಜೆನ್ಸ್‌ ಪಡೆದಿರುವ ಆದೇಶ ಸರಿಯಿಲ್ಲ, ಅದನ್ನು ರದ್ದುಗೊಳಿಸಬೇಕು ಎಂದು ಮನವಿ ಮಾಡಿದ್ದರು.

ಪ್ರಕರಣದ ಹಿನ್ನಲೆ

ದೂರು: 17 ವರ್ಷದ ಬಾಲಕಿಯ ಮೇಲೆ ಅತ್ಯಾಚಾರವಾದರೂ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ, ಆಕೆಯ ತಾಯಿ ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದ್ದರು.

ಆರೋಪ: ಈ ಸಂದರ್ಭದಲ್ಲಿ ಯಡಿಯೂರಪ್ಪ ಅವರು ಬಾಲಕಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಮಹಿಳೆ ಆರೋಪಿಸಿ, 2024ರ ಮಾರ್ಚ್‌ನಲ್ಲಿ ಬೆಂಗಳೂರಿನ ಸದಾಶಿವ ನಗರ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಿಸಿದ್ದರು.

ತನಿಖೆ: ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಯಿತು ಮತ್ತು ಸಿಐಡಿ ಪೊಲೀಸರು ಯಡಿಯೂರಪ್ಪ ವಿರುದ್ಧ ಆರೋಪಪಟ್ಟಿ ಸಲ್ಲಿಸಿದ್ದರು.

ನ್ಯಾಯಾಲಯದ ಕ್ರಮ: ಕೇಸ್‌ ರದ್ದು ಮತ್ತು ನಿರೀಕ್ಷಣಾ ಜಾಮೀನು ಕೋರಿ ಯಡಿಯೂರಪ್ಪ ಹೈಕೋರ್ಟ್‌ಗೆ ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಿದ್ದರು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌