ರಾಜ್ಯದಲ್ಲಿ ಸ್ವಾತಂತ್ಪ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವಿನ ತಿಕ್ಕಾಟ ತೀವ್ರವಾಗಿರುವ ಹೊತ್ತಲ್ಲೇ ಮೈಸೂರಿನಲ್ಲಿ ವೀರ ಸಾರರ್ಕರ್ ರಥಯಾತ್ರೆ ದಿಢೀರ್ ಆಗಿ ಪ್ರಾರಂಭಗೊಂಡಿದೆ.
ಮೈಸೂರು (ಆ.24): ರಾಜ್ಯದಲ್ಲಿ ಸ್ವಾತಂತ್ಪ್ಯ ಹೋರಾಟಗಾರ ವಿನಾಯಕ ದಾಮೋದರ ಸಾವರ್ಕರ್ ವಿಚಾರವಾಗಿ ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ನಡುವಿನ ತಿಕ್ಕಾಟ ತೀವ್ರವಾಗಿರುವ ಹೊತ್ತಲ್ಲೇ ಮೈಸೂರಿನಲ್ಲಿ ವೀರ ಸಾರರ್ಕರ್ ರಥಯಾತ್ರೆ ದಿಢೀರ್ ಆಗಿ ಪ್ರಾರಂಭಗೊಂಡಿದೆ. ಸಾವರ್ಕರ್ ಅವರ ಬಗ್ಗೆ ಜನಜಾಗೃತಿ ಮೂಡಿಸುವ ಸಲುವಾಗಿ ಸಾವರ್ಕರ್ ಪ್ರತಿಷ್ಠಾನವು 3 ಜಿಲ್ಲೆಗಳಲ್ಲಿ ಹಮ್ಮಿಕೊಂಡಿರುವ ಈ ರಥಯಾತ್ರೆಗೆ ಮಂಗಳವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು.
ಮೈಸೂರಿನ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಸಿ. ನಾರಾಯಣಗೌಡ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಸಿ.ಎಸ್.ನಿರಂಜನಕುಮಾರ್ ಇದ್ದರು. ಮೊದಲ ದಿನ ಸಾವರ್ಕರ್ ರಥಯಾತ್ರೆಯು ನಗರದ ಸಿದ್ದಾರ್ಥನಗರ, ಯರಗನಹಳ್ಳಿ, ಡಾ.ರಾಜ್‌ಕುಮಾರ್ ರಸ್ತೆ, ರಾಘವೇಂದ್ರನಗರ, ಜ್ಯೋತಿನಗರ, ಗಾಯತ್ರಿಪುರಂ, ಕ್ಯಾತಮಾರನಹಳ್ಳಿ, ಬಂಬೂ ಬಜಾರ್ ಸೇರಿದಂತೆ ಪ್ರಮುಖ ಬಡಾವಣೆಗಳಲ್ಲಿ ಸಂಚರಿಸಿತು.
undefined
ಸಿದ್ದರಾಮೋತ್ಸವದಿಂದ ಯಡಿಯೂರಪ್ಪಗೆ ಬೋನಸ್: ಜಾರಕಿಹೊಳಿ
ಈ ರಥಯಾತ್ರೆಯು ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ 8 ದಿನಗಳ ಕಾಲ ಸಂಚರಿಸಲಿದೆ. ಆ.30 ರಂದು ಮೈಸೂರಿನಲ್ಲಿ ರಥಯಾತ್ರೆಯು ಸಮಾರೋಪಗೊಳ್ಳಲಿದೆ. ಎಲ್‌ಇಡಿ ಪರದೆಯಲ್ಲಿ ಸಾವರ್ಕರ್ ಚಿತ್ರ ಪ್ರದರ್ಶಿಸಲಾಗುತ್ತಿದೆ. ಯಾತ್ರೆ ವೇಳೆ ಸಾವರ್ಕರ್ ಸಂಕ್ಷಿಪ್ತವಾಗಿ ಪರಿಚಯಿಸುವ ಭಿತ್ತಿಪತ್ರವನ್ನು ಸಾರ್ವಜನಿಕರಿಗೆ ವಿತರಿಸಲಾಗುತ್ತಿದೆ.
ಸಾವರ್ಕರ್ ವಿರುದ್ಧ ಅಪಪ್ರಚಾರ ಅಕ್ಷಮ್ಯ: ಸ್ವಾತಂತ್ರ್ಯ ಹೋರಾಟಗಾರ ವೀರ ಸಾರ್ವಕರ್ ವಿರುದ್ಧದ ಅಪಪ್ರಚಾರ ಮತ್ತು ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವುದು ಅಕ್ಷಮ್ಯ. ಚಿಲ್ಲರೆ ರಾಜಕಾರಣಕ್ಕಾಗಿ ಸಾವರ್ಕರ್ ಹೆಸರಿಗೆ ಮಸಿ ಬಳಿಯುತ್ತಿರುವುದನ್ನು ನಿಲ್ಲಿಸಲಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಆಗ್ರಹಿಸಿದ್ದಾರೆ. ಸಾವರ್ಕರ್ ಪ್ರತಿಷ್ಠಾನ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಸಾವರ್ಕರ್ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಬ್ರಿಟಿಷರಿಗೆ ಆಘಾತ ನೀಡಿದವರು ಸಾವರ್ಕರ್. ಸ್ವಾತಂತ್ರ್ಯ ಹೋರಾಟದ ಜತೆಗೆ ಹಿಂದೂಧರ್ಮದ ಸುಧಾರಣೆ, ರಕ್ಷಣೆಯಲ್ಲಿ ತೊಡಗಿಕೊಂಡಿದ್ದವರು.
ಅವರು ಸಾಗಿದ ದಾರಿಯಲ್ಲಿ ನಾವೆಲ್ಲರೂ ಸಾಗಬೇಕು. ವಿಶ್ವದ ಹೋರಾಟಗಳಲ್ಲಿ ಅವರಂತಹ ಹೋರಾಟಗಾರ ಮತ್ತೊಬ್ಬ ಸಿಗುವುದಿಲ್ಲ. ಇಂದಿರಾ ಗಾಂಧಿ, ರಾಧಾಕೃಷ್ಞನ್ ಸೇರಿದಂತೆ ಹಲವು ಮಹಾನ್ ನಾಯಕರು ಸಾವರ್ಕರ್ ಅವರನ್ನು ಹೊಗಳಿದ್ದಾರೆ ಎಂದರು. ಸಾವರ್ಕರ್ ಅವರ ದೇಶಭಕ್ತಿಯನ್ನು ಜನರಿಗೆ ಸಾರುವ ಸಲುವಾಗಿ ರಥಯಾತ್ರೆ ನಡೆಸುತ್ತಿದ್ದೇವೆ. ಹೆಚ್ಚಿನ ಜನರನ್ನು ಸೇರಿಸದೇ ಸಾವರ್ಕರ್ ರಥಯಾತ್ರೆ ನಡೆಸುತ್ತೇವೆ. ಶಾಂತಿಯುತವಾಗಿ ರಥಯಾತ್ರೆ ನಡೆಸುತ್ತೇವೆ. ಎಂಟು ದಿನಗಳ ಕಾಲ ಸಾಗಲಿರುವ ಯಾತ್ರೆಯು ಅಷ್ಟದಿಕ್ಕುಗಳಲ್ಲೂ ಸಾವರ್ಕರ್ ಅವರ ಸಂದೇಶ, ಜೀವನ ಮೌಲ್ಯ, ದೇಶ ಪ್ರೇಮದ ಸಂದೇಶ ಸಾರಲಿದೆ ಎದು ತಿಳಿಸಿದರು.
ಯುವಶಕ್ತಿ, ರಾಷ್ಟ್ರಪ್ರೇಮಿಗಳನ್ನು ಪ್ರೇರೇಪಿಸಿ, ದೇಶದ ವಿದ್ರೋಹಿಗಳಿಗೆ ಎಚ್ಚರಿಕೆ ನೀಡುವ ಕೆಲಸವನ್ನು ರಥಯಾತ್ರೆ ಮಾಡಲಿದೆ ಎಂದು ಅವರು ಹೇಳಿದರು. ಸಾವರ್ಕರ್ ಪ್ರತಿಷ್ಠಾನದ ಅಧ್ಯಕ್ಷೆ ಯಶಸ್ವಿನಿ, ಸಂಚಾಲಕ ರಜತ್, ಸಚಿವರಾದ ಎಸ್.ಟಿ.ಸೋಮಶೇಖರ್, ಕೆ.ಸಿ.ನಾರಾಯಣಗೌಡ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಎಸ್.ಎ.ರಾಮದಾಸ್, ಎಲ್.ನಾಗೇಂದ್ರ, ಬಿ.ಹರ್ಷವರ್ಧನ್, ಸಿ.ಎಸ್.ನಿರಂಜನಕುಮಾರ್ ಇದ್ದರು.
ದಕ್ಷಿಣ ಭಾರತದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುವೆ: ಬಿಎಸ್‌ವೈ
ಸಾವರ್ಕರ್ ಅವರ ಮಾತು, ಮಾರ್ಗದರ್ಶನ ನಮ್ಮೆಲ್ಲರಿಗೂ ದಾರಿದೀಪ. ಅವರ ಚಿಂತನೆಗಳನ್ನು ಜನರಿಗೆ ತಿಳಿಸಲು ಕಟಿಬದ್ಧವಾಗಿ ಹೋರಾಡಬೇಕು. ಯುವಕರಿಗೆ ಇದರ ಅರಿವಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ, ಅವರ ಚಿಂತನೆಗಳನ್ನು ಎಲ್ಲರಿಗೂ ತಿಳಿಸುವ ಕೆಲಸ ಆಗಬೇಕು.
-ಬಿ.ಎಸ್. ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ