
ಬೆಂಗಳೂರು (ಫೆ.19): ಮದುವೆಗೆಂದು ಕಲ್ಯಾಣ ಮಂಟಪ ಬಾಡಿಗೆಗೆ ನೀಡುವ ಸಂದರ್ಭದಲ್ಲಿ ಮಂಟಪದ ಮಾಲೀಕರು ವಧು-ವರರ ವಯಸ್ಸು ಕುರಿತ ದಾಖಲೆ ಪರಿಶೀಲಿಸಬೇಕೆಂಬ ಕಠಿಣ ನಿಯಮಗಳಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ಗರ್ಭೀಣಿಯಾದ ಅಪ್ರಾಪ್ತೆಯ ಮದುವೆ ಸಮಾರಂಭ ನಡೆಸಲು ಕಲ್ಯಾಣ ಮಂಟಪವನ್ನು ಬಾಡಿಗೆಗೆ ನೀಡಿದ್ದ ಆರೋಪ ಮೇಲೆ ಅದರ ಮಾಲೀಕನ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದೆ.
ಈ ಕುರಿತು ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಹುಸೈನ್ ಪ್ಯಾಲೇಸ್‌ನ ಮಾಲೀಕ ಅಬ್ದುಲ್ ಅಮೀದ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ರಾಜೇಶ್ ರೈ ಅವರ ಪೀಠ ಈ ಆದೇಶ ನೀಡಿದೆ.
ಧಾರವಾಡ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 17 ವರ್ಷ 8 ತಿಂಗಳ ವಯಸ್ಸಿನ ಅಪ್ರಾಪ್ತೆಯೊಬ್ಬರು 2024ರ ಮೇ 27ರಂದು ಮಗುವಿಗೆ ಜನ್ಮ ನೀಡಿದ್ದರು. ಇದರಿಂದ ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು, ಗೋಲಗುಂಬಜ್ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣದಲ್ಲಿ ಬಾಲ್ಯ ವಿವಾಹ ನೆರವೇರಿಸಿದ ತಪ್ಪಿತಸ್ಥರ ವಿರುದ್ಧ ಬಾಲ್ಯ ವಿವಾಹ ನಿಷೇಧ ಕಾಯ್ದೆಯಡಿ ಕ್ರಮ ಕೈಗೊಳ್ಳುವಂತೆ ಕೋರಿದ್ದರು.
ತನಿಖೆ ನಡೆಸಿದ್ದ ಪೊಲೀಸರು ಅಪ್ರಾಪ್ತೆಯ ಮದುವೆ ಸಮಾರಂಭಕ್ಕೆ ಸಭಾಂಗಣವನ್ನು ಬಾಡಿಗೆಗೆ ನೀಡಿದ್ದ ಅರ್ಜಿದಾರರನ್ನು ಆರನೇ ಆರೋಪಿಯನ್ನಾಗಿಸಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
===ಪ್ರಕರಣವನ್ನು ಸ್ಥಳೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ವಿಚಾರಣೆ ನಡೆಸುತ್ತಿತ್ತು. ಇದರಿಂದ ತನ್ನ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ಮೊರೆ ಹೋಗಿದ್ದ ಅರ್ಜಿದಾರರು, ತಾವು ಸಂಭಾಗಣದ ಮಾಲೀಕರು ಮಾತ್ರ. ಆದ್ದರಿಂದ ತಮ್ಮನ್ನು ಪ್ರಕರಣದಲ್ಲಿ ಆರೋಪಿಯನ್ನಾಗಿಸಿ ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದು ಆಕ್ಷೇಪಿಸಿದ್ದರು.
ಈ ವಾದ ಪುರಸ್ಕರಿಸಿರುವ ಹೈಕೋರ್ಟ್, ಅರ್ಜಿದಾರರು ಕಲ್ಯಾಣ ಮಂಟಪದ ಮಾಲೀಕರಾಗಿದ್ದಾರೆ. ಮಂಟಪದಲ್ಲಿ ಮದುವೆ ಆಗುವವರ ಕುರಿತ ವಯಸ್ಸು ತಿಳಿದುಕೊಳ್ಳಬೇಕೆಂಬ ಯಾವುದೇ ಕಠಿಣ ನಿಯಮಗಳಿಲ್ಲ. ಇನ್ನು ಪ್ರಕರಣದ ಇತರೆ ಆರೋಪಿಗಳೊಂದಿಗೆ ಅರ್ಜಿದಾರರು ಸೇರಿ ಬಾಲ್ಯ ವಿವಾಹ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಹೇಳಲು ಯಾವುದೇ ಪುರಾವೆಗಳಿಲ್ಲ. ಹಾಗಾಗಿ ಅವರ ವಿರುದ್ಧ ಪ್ರಕರಣದ ವಿಚಾರಣೆ ಮುಂದುವರಿಸುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದೆ. ಇಂಥ ಆರೋಪಹೊತ್ತ ವ್ಯಕ್ತಿಯ ಪ್ರತಿಷ್ಠೆ ಹಾಳಾಗುತ್ತದೆ ಎಂದು ತಿಳಿಸಿ ಅರ್ಜಿದಾರರ ವಿರುದ್ಧದ ಪ್ರಕರಣ ರದ್ದುಪಡಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ