ಲಂಚ ಪಡೆದ ಪ್ರಕರಣ ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ, ಬಿ ರಿಪೋರ್ಟ್ ತಿರಸ್ಕರಿಸಿ ತನಿಖೆಗೆ ಆದೇಶಿಸಿದ ವಿಶೇಷ ನ್ಯಾಯಾಲಯ!

By Kannadaprabha News  |  First Published Feb 24, 2024, 12:48 PM IST

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವಿವೇಕ್‌ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್‌ ವಿವೇಕಾನಂದ ಅಲಿಯಾಸ್‌ ಕಿಂಗ್ಸ್‌ ಕೋರ್ಟ್‌ ವಿವೇಕ್‌ ಅವರನ್ನು ಕೋಟ್ಯಂತರ ರೂಪಾಯಿ ಲಂಚ ಪಡೆದು ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ನ (ಬಿಟಿಸಿಎಲ್‌) ಸ್ಟ್ಯುವರ್ಡ್‌ ಆಗಿ ನಾಮನಿರ್ದೇಶನ ಮಾಡಿದ್ದಾರೆ ಎಂದು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿರಿಪೋರ್ಟ್'ನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.


ಬೆಂಗಳೂರು (ಫೆ.24): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರಿನ ವಿವೇಕ್‌ ಹೋಟೆಲ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಎಲ್‌ ವಿವೇಕಾನಂದ ಅಲಿಯಾಸ್‌ ಕಿಂಗ್ಸ್‌ ಕೋರ್ಟ್‌ ವಿವೇಕ್‌ ಅವರನ್ನು ಕೋಟ್ಯಂತರ ರೂಪಾಯಿ ಲಂಚ ಪಡೆದು ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ನ (ಬಿಟಿಸಿಎಲ್‌) ಸ್ಟ್ಯುವರ್ಡ್‌ ಆಗಿ ನಾಮನಿರ್ದೇಶನ ಮಾಡಿದ್ದಾರೆ ಎಂದು ಆರೋಪಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿರಿಪೋರ್ಟ್'ನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಬುಧವಾರ ತಿರಸ್ಕರಿಸಿದೆ.

ಲೋಕಾಯುಕ್ತ ಪೊಲೀಸರ ಅಂತಿಮ ವರದಿಗೆ ಆಕ್ಷೇಪಿಸಿ, ದೂರುದಾರ ಬೆಂಗಳೂರಿನ ಬಿಜೆಪಿ ಮುಖಂಡ ಎನ್‌ ಆರ್‌ ರಮೇಶ್‌ ಅವರು ಸಲ್ಲಿಸಿದ್ದ ಪ್ರತಿಭಟನಾ ಅರ್ಜಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್‌ ಗಜಾನನ ಭಟ್‌ ಅವರು ಪುರಸ್ಕರಿಸಿದ್ದಾರೆ.

Tap to resize

Latest Videos

ಜನರ ಮೇಲೆ ಸಾಲ ಹೊರಿಸಿ ಬಜೆಟ್‌ ಮಂಡಿಸುವ ಅಗತ್ಯ ಏನಿತ್ತು: ಎನ್‌ಆರ್‌ ರಮೇಶ್ ಕಿಡಿ

“ತನಿಖಾಧಿಕಾರಿ ಸಲ್ಲಿಸಿರುವ ಮುಕ್ತಾಯ ವರದಿ ತಿರಸ್ಕರಿಸಲಾಗಿದೆ. ಕಾನೂನಿನ ಅನ್ವಯ ತನಿಖಾಧಿಕಾರಿಯು ಹೆಚ್ಚಿನ ತನಿಖೆ ನಡೆಸಿ ಹೊಸದಾಗಿ ಆರು ತಿಂಗಳ ಒಳಗಾಗಿ ತನಿಖೆ ನಡೆಸಿ, ಅಂತಿಮ ವರದಿ ಸಲ್ಲಿಸಬೇಕು” ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ ಮನೆ ನಿರ್ಮಿಸಲು ನಿವೇಶನ ಖರೀದಿಸಲು 1,30,00,000 ರೂಪಾಯಿ ಪಡೆದ ಬಳಿಕ ವಿವೇಕಾನಂದ ಅವರನ್ನು ಬಿಟಿಸಿಎಲ್ ಸ್ಟ್ಯುವರ್ಡ್‌ ಆಗಿ ನಾಮನಿರ್ದೇಶನ ಮಾಡಲಾಗಿದೆ. ಇಲ್ಲಿ ಭ್ರಷ್ಟಾಚಾರ ನಡೆದಿದೆಯೇ ಎಂಬುದನ್ನು ಪರಿಶೀಲಿಸದೇ ತನಿಖಾ ಸಂಸ್ಥೆ ಅಂತಿಮ ವರದಿ ಸಲ್ಲಿಸಿದೆ. ಇದು ಕಾನೂನಿನ ದೃಷ್ಟಿಯಲ್ಲಿ ಸರಿಯಲ್ಲ. ಪ್ರಾಥಮಿಕ ತನಿಖೆ ಆಧರಿಸಿ ಮುಕ್ತಾಯ ವರದಿಯನ್ನು ತನಿಖಾಧಿಕಾರಿ ಸಲ್ಲಿಸಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

“ಪ್ರಕರಣದಲ್ಲಿ ವಿಸ್ತೃತ ವಿಚಾರ ಪರಿಗಣಿಸಿದೇ ಮುಕ್ತಾಯ ವರದಿ ಸಲ್ಲಿಸಿರುವುದು ಹಾಗೂ ಸಾಲದ ಮೂಲಕ ಹಣ ಪಡೆದಿರುವುದು ಭ್ರಷ್ಟಾಚಾರ ನಿಷೇಧ ಕಾಯಿದೆಯ ಅಡಿ ಅಕ್ರಮ ನಡೆಯಾಗದು ಎಂಬುದನ್ನು ತನಿಖಾ ಸಂಸ್ಥೆ ಪರಿಗಣಿಸಿಲ್ಲ. ಎಲ್ಲಾ ಕೋನಗಳಿಂದ ತನಿಖೆ ನಡೆಸಬೇಕು. ಅಕ್ರಮವಾಗಿ ಹಣ ಸ್ವೀಕರಿಸಲಾಗಿದೆ. ಪ್ರತಿಫಲಾಪೇಕ್ಷೆ ಆರೋಪ ಮಾಡಿರುವಾಗ ದುರುದ್ದೇಶ ಇದೆಯೇ, ಜನಪ್ರತಿನಿಧಿಗಳಿಗೆ ಇರುವ ನೀತಿ ಸಂಹಿತೆ ಉಲ್ಲಂಘಿಸಲಾಗಿದೆಯೇ ಎಂಬುದನ್ನು ತನಿಖಾ ಸಂಸ್ಥೆ ಪರಿಶೀಲಿಸಬೇಕು. ಇದನ್ನು ಪರಿಗಣಿಸದೇ ಸಲ್ಲಿಸುವ ವರದಿಯನ್ನು ಪೂರ್ಣ ವರದಿ ಎನ್ನಲಾಗದು. ನ್ಯಾಯಾಲಯವು ಪ್ರಕರಣದ ಅರ್ಹತೆ ಬಗ್ಗೆ ಯಾವುದೇ ಅಭಿಪ್ರಾಯ ವ್ಯಕ್ತಪಡಿಸುವುದಿಲ್ಲ. ಆದರೆ, ಮುಕ್ತಾಯ ವರದಿಯನ್ನು ಆತುರದಲ್ಲಿ ಸಲ್ಲಿಸಿರುವುದರ ಬಗ್ಗೆ ನ್ಯಾಯಾಲಯ ಕಳಕಳಿ ಹೊಂದಿದೆ” ಎಂದು ಆದೇಶದಲ್ಲಿ ಹೇಳಲಾಗಿದೆ.

“ನ್ಯಾಯದಾನ ಮಾಡಿದರಷ್ಟೇ ಸಾಲದು, ಅದು ಮಾಡಿರುವುದು ಕಾಣುವಂತಿರಬೇಕು ಎಂದು ಹಲವು ಆದೇಶಗಳಲ್ಲಿ ಹೇಳಲಾಗಿದೆ. ಅಂತೆಯೇ, ತನಿಖೆಯು ನ್ಯಾಯಯುತವಾಗಿ ಮಾತ್ರವಲ್ಲ, ಅದನ್ನು ನ್ಯಾಯಯುತ ವಿಧಾನದ ಮೂಲಕ ನಡೆಸಬೇಕು. ತನಿಖಾ ಸಂಸ್ಥೆಯು ದೂರುದಾರರಿಗೆ ಅಗತ್ಯ ಅವಕಾಶ ನೀಡುವ ಮೂಲಕ ನ್ಯಾಯಯುತವಾಗಿ ತನಿಖೆ ನಡೆಸಿ ಮುಕ್ತಾಯ ವರದಿ ಸಲ್ಲಿಸಿಲ್ಲ ಎಂಬುದು ಸುಸ್ಪಷ್ಟವಾಗಿದೆ. ಹೀಗಾಗಿ, ಅಂತಿಮ ವರದಿಯನ್ನು ತಿರಸ್ಕರಿಸಲಾಗುತ್ತಿದೆ” ಎಂದು ನ್ಯಾಯಾಲಯ ಹೇಳಿದೆ.

2014ರ ಜುಲೈ 28ರಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಂದ 1,30,00,000 ರೂಪಾಯಿಗಳನ್ನು ಚೆಕ್‌ ಮೂಲಕ ಸ್ವೀಕರಿಸಿರುವುದು ಅವರೇ ಲೋಕಾಯುಕ್ತಕ್ಕೆ ಸಲ್ಲಿಸಿರುವ ಫಾರ್ಮ್‌ 4ರಲ್ಲಿ ಸ್ಪಷ್ಟವಾಗಿದೆ. ಇದಕ್ಕೆ ಪ್ರತಿಯಾಗಿ ವಿವೇಕಾನಂದ ಅವರನ್ನು ಬೆಂಗಳೂರು ಟರ್ಫ್‌ ಕ್ಲಬ್‌ ಲಿಮಿಟೆಡ್‌ನ (ಬಿಟಿಸಿಎಲ್‌) ಸ್ಟ್ಯುವರ್ಡ್‌ ಆಗಿ ನಾಮನಿರ್ದೇಶನ ಮಾಡಲಾಗಿತ್ತು ಎಂದು ಆರೋಪಿಸಲಾಗಿದೆ.

ಹಣ ಪಡೆದು ವಿವೇಕಾನಂದ ಅವರನ್ನು ಬಿಟಿಸಿಎಲ್‌ನ ಸ್ಟ್ಯುವರ್ಡ್‌ ಮತ್ತು ನಿರ್ವಹಣಾ ಸಂಸ್ಥೆಯ ಸದಸ್ಯರನ್ನಾಗಿ ಸಿದ್ದರಾಮಯ್ಯ ಅವರ ಆಶೀರ್ವಾದದಿಂದ ನೇಮಕ ಮಾಡಲಾಗಿದೆ. ಹಣಕಾಸಿನ ಲಾಭ ಮಾಡಿಕೊಂಡು ಸಿದ್ದರಾಮಯ್ಯ ಅವರು ವಿವೇಕಾನಂದ ಅವರಿಗೆ ಲಾಭದಾಯಕ ಹುದ್ದೆ ಕಲ್ಪಿಸಿದ್ದಾರೆ. ಇದಕ್ಕೆ ನಿರ್ಬಂಧವಿದ್ದು, ಸಿದ್ದರಾಮಯ್ಯ ಅವರ ವಿರುದ್ಧ ಭ್ರಷ್ಟಾಚಾರ ನಿಷೇಧ ಕಾಯಿದೆ ಸೆಕ್ಷನ್‌ಗಳಾದ 7, 8, 13(1)(ಡಿ) ಮತ್ತು 13(2) ಮತ್ತು ಅಕ್ರಮ ಹಣ ವರ್ಗಾವಣೆ ಕಾಯಿದೆ ಸೆಕ್ಷನ್‌ 3 ಮತ್ತು 4ರ ಅಡಿ ಸಂಜ್ಞೇ ಪರಿಗಣಿಸುವಂತೆ ಕೋರಿ ರಮೇಶ್‌ ಅವರು ಖಾಸಗಿ ದೂರು ದಾಖಲಿಸಿದ್ದರು.

ಬಿಬಿಎಂಪಿ ಪಾಲಿಗೆ ಬಿಳಿ ಆನೆಯಂತಾಗಿರುವ ಮಾರ್ಷಲ್ಸ್; ಅನವಶ್ಯಕ ಹುದ್ದೆ ಸ್ಥಗಿತಕ್ಕೆ ಎನ್ಆರ್ ರಮೇಶ್ ದೂರು

ದೂರುದಾರರು ಲೋಕಾಯುಕ್ತಕ್ಕೆ ದೂರು ನೀಡಿದ್ದು, ಲೋಕಾಯುಕ್ತ ತನಿಖೆ ನಡೆಸುತ್ತಿದೆ. ಈ ನಡುವೆ ವಿಶೇಷ ನ್ಯಾಯಾಲಯವು ಖಾಸಗಿ ಪ್ರಕರಣ ದಾಖಲಿಸಲು ಕಚೇರಿಗೆ ನಿರ್ದೇಶಿಸಿ, ಸ್ಥಿತಿಗತಿ ವರದಿ ಸಲ್ಲಿಸುವಂತೆ ತನಿಖಾ ಸಂಸ್ಥೆಗೆ ಆದೇಶಿಸಿತ್ತು. 2023ರ ಜೂನ್‌ 7ರಂದು ಲೋಕಾಯುಕ್ತದ ಉಪ ಪೊಲೀಸ್‌ ವರಿಷ್ಠಾಧಿಕಾರಿಯು ಪ್ರಾಥಮಿಕ ತನಿಖಾ ಹಂತದಲ್ಲಿ ಸಂಗ್ರಹಿಸಿರುವ ದಾಖಲೆ ಆಧರಿಸಿ ಮುಕ್ತಾಯ ವರದಿ ಸಲ್ಲಿಸಿದ್ದರು. ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಪ್ರತಿಫಲಾಪೇಕ್ಷ ಪಡೆದಿರುವ ಆರೋಪ ಮಾಡಲಾಗಿಲ್ಲ. 2023ರ ಜೂನ್‌ 4ರ ಒಳಗೆ ಅಗತ್ಯ ದಾಖಲೆ ಒದಗಿಸುವಂತೆ ದೂರುದಾರರಿಗೆ ತನಿಖಾ ಸಂಸ್ಥೆಯು ನೋಟಿಸ್‌ ಜಾರಿ ಮಾಡಿತ್ತು. ಅದಾಗ್ಯೂ, ದೂರುದಾರರು ತನಿಖಾ ಸಂಸ್ಥೆ ಮುಂದೆ ಹಾಜರಾಗಿಲ್ಲ. ಈ ಆಧಾರದಲ್ಲಿ ದೂರುದಾರರ ಬಳಿ ಆರೋಪ ರುಜುವಾತುಪಡಿಸುವ ದಾಖಲೆಗಳು ಇಲ್ಲ ಎಂದು ಮುಕ್ತಾಯ ವರದಿ ಸಲ್ಲಿಸಲಾಗಿದೆ. ಎಂದು ಹೇಳಲಾಗಿತ್ತು. ಇದಕ್ಕೆ ಆಕ್ಷೇಪಿಸಿ ದೂರುದಾರರು ಪ್ರತಿಭಟನಾ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಪರವಾಗಿ ವಕೀಲ ಮೋಹನ್‌ ಎಸ್.‌ ರೆಡ್ಡಿ ವಾದಿಸಿದ್ದರು.

click me!