* ಮತಾಂತರ ನಿಷೇಧ ಕಾಯ್ದೆ ಮಂಡಿಸಲು ಸರ್ಕಾರ ಸಜ್ಜು
* ಮತಾಂತರ ನಿಷೇಧ ಕಾಯ್ದೆ ಬೆನ್ನಲ್ಲೇ ಲವ್ ಜಿಹಾದ್‌ಗೂ ಕಡಿವಾಣ ಬೀಳುತ್ತಾ?
* ಮಹತ್ವದ ಹೇಳಿಕೆ ಕೊಟ್ಟ ಸಚಿವ ಸುನೀಲ್ ಕುಮಾರ್
ಬೆಳಗಾವಿ, (ಡಿ.13): ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ (Winter Session) ಮತಾಂತರ ನಿಷೇಧ ಕಾಯ್ದೆ (Anti Conversion Bill) ಮಂಡಿಸಲು ಸರ್ಕಾರ ಸಜ್ಜಾಗಿದ್ದು, ಇದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಇದರ ಮಧ್ಯೆ 'ಲವ್ ಜಿಹಾದ್' (Love Jihad)ನಿಷೇಧಿಸುವ ಕಾನೂನನ್ನು ಕೂಡ ಬಿಜೆಪಿ ಸರ್ಕಾರ ಶೀಘ್ರದಲ್ಲೇ ಪರಿಚಯಿಸಲಿದೆ ಎಂದು ಇಂಧನ ಸಚಿವ ವಿ ಸುನೀಲ್ ಕುಮಾರ್ (Sunil Kumar) ಹೇಳುವ ಮೂಲಕ ಹೊಸ ಸಂಚನ ಮೂಡಿಸಿದ್ದಾರೆ.
Anti Conversion Act: 'ಇದೇ ಅಧಿವೇಶನದಲ್ಲಿ ಮತಾಂತರ ನಿಷೇಧ ಕಾಯ್ದೆ ಪಾಸ್ ಆಗುತ್ತೆ'
ಇಂದು(ಸೋಮವಾರ) ಬೆಳಗಾವಿಯ(Belagavi) ಸುವರ್ಣ ಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುನೀಲ್ ಕುಮಾರ್, ಬಿಜೆಪಿ ಗೋಹತ್ಯೆ ವಿರೋಧಿ ಕಾನೂನು ಜಾರಿಗೆ ತರುವುದಾಗಿ ಘೋಷಿಸಿತ್ತು, ಅದನ್ನು ಮಾಡಿದೆ. ಪ್ರಸಕ್ತ ಅಧಿವೇಶನದಲ್ಲಿ ನಾವು ಮತಾಂತರ ವಿರೋಧಿ ಮಸೂದೆಯನ್ನು ಪರಿಚಯಿಸುತ್ತಿದ್ದೇವೆ. ಮುಂದಿನ ದಿನಗಳಲ್ಲಿ 'ಲವ್ ಜಿಹಾದ್' ಅನ್ನು ಸಹ ನಿಷೇಧಿಸುವ ಮಸೂದೆಯನ್ನು ನಮ್ಮ ಸರ್ಕಾರ ಜಾರಿಗೆ ತರಲಿದೆ ಎಂದು ಸ್ಪಷ್ಟಪಡಿಸಿದರು.
ಕಳೆದ ವರ್ಷ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಅಲಹಾಬಾದ್ ಹೈಕೋರ್ಟ್ ಆದೇಶದ ಆಧಾರದ ಮೇಲೆ ವಿವಾಹದ ಸಲುವಾಗಿ ಧಾರ್ಮಿಕ ಮತಾಂತರದ ವಿರುದ್ಧ ಕಾನೂನು ರೂಪಿಸುವ ಯೋಜನೆಯನ್ನು ಕರ್ನಾಟಕ ಘೋಷಿಸಿತ್ತು. ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶಗಳು ‘ಲವ್ ಜಿಹಾದ್’ಗೂ ಕಡಿವಾಣ ಹಾಕಲು ಕಾನೂನು ರೂಪಿಸಿವೆ ಎಂದು ತಿಳಿಸಿದರು.
Anti-Conversion: ಮತಾಂತರ ನಿಷೇಧಕ್ಕೆ ಖಾಸಗಿ ಮಸೂದೆ ಮಂಡನೆಗೆ ತುಳಸಿ ಮುನಿರಾಜು ಗೌಡ ಸಜ್ಜು
ಮತಾಂತರ ನಿಷೇಧ ಮಸೂದೆಯನ್ನು ಕಾಂಗ್ರೆಸ್ ಏಕೆ ವಿರೋಧಿಸುತ್ತಿದೆ ಎಂಬುದನ್ನು ವಿವರಿಸಬೇಕು. ಮತಾಂತರಕ್ಕೆ ಕಾರಣಗಳು ಮತ್ತು ಅದರ ದುಷ್ಪರಿಣಾಮಗಳು ನಮಗೆ ತಿಳಿದಿದೆ. ನಾವು ಯಾವುದೇ ಸಮುದಾಯವನ್ನು ಗುರಿಯಾಗಿಸಲು ಕಾನೂನನ್ನು ಪರಿಚಯಿಸುತ್ತಿಲ್ಲ. ಈ ವಿಷಯದ ಬಗ್ಗೆ ಬಿಜೆಪಿ ಚರ್ಚೆಗೆ ಸಿದ್ಧವಾಗಿದೆ ಎಂದರು.
ಸುನೀಲ್ ಕುಮಾರ್ ಅವರ ಹೇಳಿಕೆ ಕುರಿತು ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಕ್ರಿಯಿಸಿ, ಅಂಥ ಪ್ರಸ್ತಾಪದ ಬಗ್ಗೆ ನನಗೆ ತಿಳಿದಿಲ್ಲ. ಆದರೆ ಸಚಿವ ಸುನೀಲ್ ಕುಮಾರ್ ಯಾವ ಅರ್ಥದಲ್ಲಿ ಆ ಹೇಳಿಕೆಯನ್ನು ನೀಡಿದ್ದಾರೆ ಎಂದು ನನಗೆ ಗೊತ್ತಾಗುತ್ತಿಲ್ಲ ಎಂದು ಹೇಳಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಕೂಡ ಮತಾಂತರ ನಿಷೇಧ ಕಾಯ್ದೆ ಕುರಿತು ಪ್ರತಿಕ್ರಿಯಿಸಿ, ಪ್ರಸ್ತಾವಿತ ಮತಾಂತರ ವಿರೋಧಿ ಮಸೂದೆ ರಾಜಕೀಯ ಪ್ರೇರಿತ. ಸಂವಿಧಾನವೇ ಬಲವಂತದ ಮತಾಂತರವನ್ನು ನಿಷೇಧಿಸಿದೆ. ಈಗ ಪ್ರತ್ಯೇಕ ಮಸೂದೆ ಮಂಡಿಸುವ ಅಗತ್ಯವೇನು? ಎಂದು ಪ್ರಶ್ನಿಸಿದ್ದಾರೆ.
ನಮ್ಮ ನಿಲುವು ಸ್ಪಷ್ಟವಾಗಿದೆ ಎಂದ ಬಿಎಸ್‌ವೈ
ಬಿಜೆಪಿಯ ಎಲ್ಲ ನಾಯಕರು ಮತಾಂತರ ನಿಷೇಧ ಕಾಯ್ದೆ ಜಾರಿ ಮಾಡಬೇಕು ಎನ್ನುತ್ತಿದ್ದಾರೆ. ಮತಾಂತರ ನಿಷೇಧ ಕಾಯ್ದೆ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ. ವಿಪಕ್ಷ ನಾಯಕರು ಏನಾದರೂ ಹೇಳಲಿ. ನಾವು ಪ್ರತಿಕ್ರಿಯಿಸುವುದಿಲ್ಲ ಎಂದು ಟಿವಿ9ಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ.
ಮತಾಂತರ ನಿಷೇಧ ಕಾಯ್ದೆಗೆ ವಿರೋಧ
ಉಡುಪಿ: ಕರ್ನಾಟಕ ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿ ವಿಚಾರವಾಗಿ ವಿವಿಧ ಅಭಿಪ್ರಾಯಗಳು ಕೇಳಿಬರುತ್ತಿವೆ. ಒಂದೆಡೆ ಆಡಳಿತ ಪಕ್ಷದ ನಾಯಕರು ಹಾಗೂ ಹಿಂದೂ ಮುಖಂಡರು ಮತಾಂತರ ನಿಷೇಧ ಕಾಯ್ದೆ ಜಾರಿಗೊಳಿಸಲು ವಿವಿಧ ರೀತಿಯಿಂದ ಒತ್ತಡ ಹೇರುತ್ತಿದ್ದಾರೆ. ಮತ್ತೊಂದೆಡೆ ಕ್ರೈಸ್ತ ಹಾಗೂ ಮುಸ್ಲಿಂ ಸಮುದಾಯಕ್ಕೆ ಸೇರಿದ ಮತ್ತು ವಿರೋಧ ಪಕ್ಷಗಳ ನಾಯಕರು ಮತಾಂತರ ನಿಷೇಧ ಕಾಯ್ದೆ ಜಾರಿ ಬಗ್ಗೆ ವಿರೋಧ ಅಭಿಪ್ರಾಯ ಹೊಂದಿದ್ದಾರೆ. ಅಂತೆ ಈಗ, ಕಾಯ್ದೆ ಜಾರಿಗೆ ಭಾರತೀಯ ಕ್ರೈಸ್ತ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ. ಬೆಳಗಾವಿಯಲ್ಲಿ ಕ್ರೈಸ್ತ ಒಕ್ಕೂಟದಿಂದ ಉಪವಾಸ ಸತ್ಯಾಗ್ರಹ ಕೈಗೊಳ್ಳಲಾಗಿದೆ.
ಕರ್ನಾಟಕ ರಾಜ್ಯದಲ್ಲಿ ಬಲವಂತದ ಮತಾಂತರಕ್ಕೆ ಯಾವುದೇ ಸಾಕ್ಷಿಯಿಲ್ಲ. ಕ್ರೈಸ್ತ ಧರ್ಮ ದಮನಿಸಲು ಕಾಯ್ದೆ ಜಾರಿಗೆ ಯತ್ನಿಸಲಾಗುತ್ತಿದೆ. ರಾಜ್ಯ ಸರ್ಕಾರ ಹಿಂದೂ ಸಂಘಟನೆಗಳ ಒತ್ತಡಕ್ಕೆ ಮಣಿದಿದೆ. ಬಲವಂತದ ಮತಾಂತರ ನಡೆದರೆ ನಾವೇ ಕೇಸ್ ಹಾಕುತ್ತೇವೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟದ ಅಧ್ಯಕ್ಷ ಪ್ರಶಾಂತ್ ಜತ್ತನ್ನ ಉಡುಪಿಯಲ್ಲಿ ಹೇಳಿಕೆ ನೀಡಿದ್ದಾರೆ.