
ಬಸವಕಲ್ಯಾಣ : ‘ಹಿಂದೂ, ಧರ್ಮವೇ ಅಲ್ಲ. ಅದೊಂದು ಬೈಗುಳ ಶಬ್ದ. ಬ್ರಾಹ್ಮಣರು ತಮ್ಮ ಬುದ್ಧಿಯನ್ನು ಬಳಸಿ, ನಮ್ಮಲ್ಲಿ (ಬ್ರಾಹ್ಮಣೇತರರಲ್ಲಿ) ಒಳಜಗಳ ಹುಟ್ಟಿಸಲು, ನಮ್ಮನ್ನು ಗುಲಾಮರನ್ನಾಗಿಸಲು ಹಿಂದು ಧರ್ಮ ಹುಟ್ಟು ಹಾಕಿದರು’ ಎಂದು ಮುಂಬೈ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬಿ.ಜಿ ಕೋಳ್ಸೆ ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಭಾನುವಾರ ರಾತ್ರಿ ಬೀದರ್ ಜಿಲ್ಲೆ ಬಸವಕಲ್ಯಾಣದಲ್ಲಿ ನಡೆದ ಸೂಫಿ-ಸಂತರ ಸಮಾವೇಶದಲ್ಲಿ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿ, ಹಿಂದು ಧರ್ಮದ ಪರಿಕಲ್ಪನೆ ಕುರಿತು ಪ್ರಸ್ತಾಪಿಸಿದರು.
‘ಹಿಂದು ಎನ್ನುವುದು ಧರ್ಮವೇ ಇಲ್ಲ. ಪರ್ಷಿಯನ್ ಭಾಷೆಯಲ್ಲಿ ಹಿಂದು ಎಂಬುದರ ಅರ್ಥ ಬೈಗುಳ ಎಂದಿದೆ. ಪರಕೀಯರು ಬೈಗುಳದ ಮೂಲಕ ನೀಡಿದ ಹೆಸರಿದು. ಆದರೆ, ಬ್ರಾಹ್ಮಣರು ತಮ್ಮ ಬುದ್ಧಿ ಬಳಸಿ, ನಮ್ಮಲ್ಲಿ (ಬ್ರಾಹ್ಮಣೇತರರಲ್ಲಿ) ಒಳಜಗಳ ಹುಟ್ಟಿಸಲು ಹಾಗೂ ನಮ್ಮನ್ನು ಗುಲಾಮರನ್ನಾಗಿಸಲು ಹಿಂದು ಪದವನ್ನು ಒಂದು ಧರ್ಮ ಎಂದು ಸಾರಿ ಸಮಾಜವನ್ನು ತಪ್ಪುದಾರಿಗೆಳೆದರು’ ಎಂದು ಆರೋಪಿಸಿದರು.
‘ಹಿಂದೆ ಹಿಂದು ಎಂಬುದು ಧರ್ಮವೇ ಆಗಿರಲಿಲ್ಲ, ಕೇವಲ ಬ್ರಾಹ್ಮಣ ಧರ್ಮ ಮಾತ್ರ ಇತ್ತು. ಅದನ್ನೇ ಬ್ರಾಹ್ಮಣರು ಧರ್ಮವನ್ನಾಗಿಸಿದರು. ಅವರ ಸಂಖ್ಯೆ ದೇಶದಲ್ಲಿ ಶೇ.1ಕ್ಕಿಂತ ಹೆಚ್ಚಿಲ್ಲ. ಬ್ರಾಹ್ಮಣರು ಹೆದರುಪುಕ್ಕರು. ಎಲ್ಲಿಯವರೆಗೆ ನಾವು ಹೆದರುತ್ತೇವೆಯೋ ಅಲ್ಲಿಯವರೆಗೆ ಅವರು ನಮ್ಮನ್ನು ಹೆದರಿಸುತ್ತಾರೆ’ ಎಂದು ಟೀಕಿಸಿದರು.
ಮಂದಿರದಲ್ಲಿ ದೇವರಿಲ್ಲ, ಅಲ್ಲಿ ಕೇವಲ ಪೂಜಾರಿಯ ಹೊಟ್ಟೆಯಿದೆ ಎಂದು ಗೌತಮ ಬುದ್ಧ, ಮಹಾವೀರ, ಸಂತ ಕಬೀರ್, ಸಂತ ಜ್ಞಾನೇಶ್ವರ, ಸಂತ ತುಕಾರಾಮ, ಸಂತ ಗಾಡಗೇಬಾಬಾ ಅವರುಗಳೆಲ್ಲ ಹೇಳುತ್ತಿದ್ದರು. ಆದರೆ, ಅವರ ಹೇಳಿಕೆಗಳ ಪ್ರಚಾರ ಆಗಲಿಲ್ಲ. ಇಂದು ಸಮಾಜದಲ್ಲಿನ ದಲಿತರು, ಆದಿವಾಸಿಗರು, ಸಿಖ್ಖರು, ಇಸಾಯಿಗಳು ಒಂದಾಗಬೇಕು ಎಂದು ಅವರು ಕರೆ ನೀಡಿದರು.
ಇದೇ ವೇಳೆ, ಆರ್‌ಎಸ್‌ಎಸ್ ವಿರುದ್ಧವೂ ಹರಿಹಾಯ್ದ ಕೋಳ್ಸೆ, ಈ ಹಿಂದೆ ಭಾರತಕ್ಕೆ ಸ್ವಾತಂತ್ರ್ಯ ಘೋಷಿಸಲು ಮುಂದಾಗಿದ್ದ ಬ್ರಿಟೀಷರಿಗೆ ಭಾರತವನ್ನು ನೇಪಾಳ ರಾಜನ ಸುಪರ್ದಿಗೆ ಒಪ್ಪಿಸುವಂತೆ ಸಾವರ್ಕರ್ ಮನವಿ ಸಲ್ಲಿಸಿದ್ದರು. ಕಾಂಗ್ರೆಸ್ ಮುಖಂಡರಾಗಿದ್ದ ಹೆಡಗೆವಾರ್, ಮಹಾತ್ಮಾಗಾಂಧಿಯವರು ಬಹುಜನರ ಪರವಾಗಿದ್ದಾರೆ ಎಂಬುದಕ್ಕಾಗಿ ಕಾಂಗ್ರೆಸ್ ತೊರೆದು ಆರ್‌ಎಸ್‌ಎಸ್ ಸ್ಥಾಪಿಸಿದರು. ಈ ಹಿಂದೆ ನಡೆದ ಸಿಖ್ಖರ ದಂಧೆಗೂ ಆರ್‌ಎಸ್‌ಎಸ್‌ನವರೇ ಕಾರಣ. ಆದರೆ, ಕಾಂಗ್ರೆಸ್ ಮೇಲೆ ಆರೋಪ ಬಂತು. ಈ ಇತಿಹಾಸವನ್ನು ಸಂತರು, ಮೌಲ್ವಿಗಳು ಜನರಿಗೆ ತಿಳಿಸುವ ಕೆಲಸ ಮಾಡಬೇಕು ಎಂದು ಕರೆ ನೀಡಿದರು.
ಶಿವಾಜಿ ಮಹಾರಾಜರ ಆಡಳಿತದಲ್ಲಿ ಪ್ರಮುಖ ಹುದ್ದೆಗಳಲ್ಲಿ ಮುಸ್ಲಿಮರೇ ಹೆಚ್ಚಿದ್ದರು. ಆದರೆ, ಔರಂಗಜೇಬ್ ಸೈನ್ಯದಲ್ಲಿದ್ದ ರಜಪೂತರ ಜಯಕ್ಕಾಗಿ ಮಹಾರಾಷ್ಟ್ರದಲ್ಲಿ ಆರ್‌ಎಸ್‌ಎಸ್ ಮೂಲದವರಾದ ಬ್ರಾಹ್ಮಣರು ಶಿವಾಜಿ ಮಹಾರಾಜರ ಸೋಲಿಗಾಗಿ ಯಜ್ಞ ಮಾಡಿದ್ದರು ಎಂದು ಆರೋಪಿಸಿದರು.
ಹಿಂದೂಗಳು ನಮ್ಮ ವಿರೋಧಿಗಳಲ್ಲ, ಆರ್‌ಎಸ್‌ಎಸ್‌ನ ವಿಷಕಾರಿ, ವಿಚಾರವಾದಿ ಬ್ರಾಹ್ಮಣರೇ ನಮ್ಮ ಶತ್ರುಗಳಾಗಿದ್ದಾರೆ. ಹೀಗಾಗಿ, ಸಣ್ಣಪುಟ್ಟ ಹಿಂದೂಗಳನ್ನೂ ನಮ್ಮ ಜೊತೆ ಸೇರಿಸಿಕೊಂಡು ಹೋರಾಟಕ್ಕೆ ಇಳಿಯೋಣ. ನನ್ನ ಗುರಿ ಹಿಂದೂಗಳ ವಿರುದ್ಧ ಹೋರಾಡುವುದಲ್ಲ. ಮುಸ್ಲಿಮರ ಪಕ್ಕ ನಿಂತು ಹೋರಾಡುವುದೂ ಅಲ್ಲ. ನನ್ನದು ಮಾನವತೆಗಾಗಿ ಮಾಡುವ ಹೋರಾಟ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ