BMW ಕಾರಿದ್ದವರಲ್ಲೂ ಬಿಪಿಎಲ್‌ ಕಾರ್ಡ್‌: ಬಡವರ ಊಟದ ಮೇಲೂ ಶ್ರೀಮಂತರ ಕೆಂಗಣ್ಣು..!

By Kannadaprabha NewsFirst Published Aug 19, 2022, 6:58 AM IST
Highlights

ಫಾರ್ಚೂನರ್‌ನಂತಹ ಐಷಾರಾಮಿ ಕಾರಿದ್ದರೂ ಬಿಪಿಎಲ್‌ ರೇಷನ್‌ ಪಡೆಯುತ್ತಿದ್ದವರ ಪತ್ತೆ, 12584 ಕಾರು ಮಾಲೀಕರ ಪಡಿತರ ಚೀಟಿ ರದ್ದು

ಸಂಪತ್‌ ತರೀಕೆರೆ

ಬೆಂಗಳೂರು(ಆ.19):  ಬಿಎಂಡಬ್ಲ್ಯು, ಟೊಯೋಟಾ ಫಾರ್ಚೂನರ್‌, ಫೋರ್ಡ್‌, ವೋಕ್ಸ್‌ವ್ಯಾಗನ್‌ ಸೇರಿದಂತೆ ಐಷಾರಾಮಿ ಕಾರುಗಳನ್ನು ಹೊಂದಿರುವ ಕುಟುಂಬಗಳ ಬಳಿಯೂ ಅಂತ್ಯೋದಯ, ಬಿಪಿಎಲ್‌ ರೇಷನ್‌ ಕಾರ್ಡ್‌ ಇವೆ! ಲಕ್ಷಾಂತರ ರು. ಮೌಲ್ಯದ ಕಾರುಗಳನ್ನು ಹೊಂದಿರುವ ಈ ಕುಟುಂಬಗಳು ಹಲವು ವರ್ಷಗಳಿಂದ ಪ್ರತಿ ತಿಂಗಳು ಬಡವರ ಪಾಲಿನ ಉಚಿತ ಅಕ್ಕಿ, ರಾಗಿ, ಜೋಳವನ್ನು ಪಡೆಯುತ್ತಿರುವುದು ಬೆಳಕಿಗೆ ಬಂದಿದ್ದು, ಸುಳ್ಳು ಮಾಹಿತಿ ನೀಡಿ ಅನ್ನಭಾಗ್ಯದ ಪಡಿತರ ಚೀಟಿಗಳನ್ನು (ಬಿಪಿಎಲ್‌, ಅಂತ್ಯೋದಯ) ಪಡೆದಿದ್ದ ಇಂತಹ (ಐಷಾರಾಮಿ ಕಾರು ಹೊಂದಿದ್ದವರು) 12 ಸಾವಿರ ಕುಟುಂಬಗಳು ಸೇರಿದಂತೆ 3.22 ಲಕ್ಷ ಕುಟುಂಬಗಳ ಕಾರ್ಡುಗಳನ್ನು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ರದ್ದುಪಡಿಸಿದೆ.

ರಾಜ್ಯದಲ್ಲಿ ಪಡಿತರ ಚೀಟಿ ಹೊಂದಿರುವ ಸಾವಿರಾರು ಕುಟುಂಬಗಳು ವೈಟ್‌ ಬೋರ್ಡ್‌ ಕಾರು ಹೊಂದಿರುವ ಬಗ್ಗೆ ಆಹಾರ ಇಲಾಖೆ ಅನುಮಾನಗೊಂಡಿತ್ತು. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆ ಮೊರೆ ಹೋಗಿದ್ದ ಇಲಾಖೆ, ಪಡಿತರ ಚೀಟಿ ಹೊಂದಿರುವ ಕುಟುಂಬಗಳ ಸದಸ್ಯರು ಕಾರು ಖರೀದಿಸಿ ನೋಂದಣಿ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡುವಂತೆ ಕೇಳಿತ್ತು.

ಬಿಪಿಎಲ್‌ ಕಾರ್ಡ್‌ ಬಳಕೆದಾರರ ಗಮನಕ್ಕೆ: ಅನ​ಧಿ​ಕೃತ ಪಡಿತರ ಚೀಟಿ ರದ್ದು..!

ಸಾರಿಗೆ ಇಲಾಖೆ ನೀಡಿರುವ ಮಾಹಿತಿಯನ್ನು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್‌ಗೆ ತಾಳೆ ಮಾಡಿರುವ ಆಹಾರ ಇಲಾಖೆ, 12,584 ಕುಟುಂಬಗಳು ಕಾರು ಹೊಂದಿದ್ದರೂ ಬಿಪಿಎಲ… ಮತ್ತು ಅಂತ್ಯೋದಯ ಕಾರ್ಡ್‌ಗಳನ್ನು ಪಡೆದಿರುವುದನ್ನು ಪತ್ತೆ ಮಾಡಿದೆ. ಅದರಲ್ಲಿ ಕಲಬುರಗಿಯಲ್ಲಿ ಓರ್ವ ಬಿಎಂಡಬ್ಲ್ಯು, ಬೆಂ.ಗ್ರಾಮಾಂತರ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಮತ್ತು ಕಲಬುರಗಿಯಲ್ಲಿ ಟೊಯೋಟಾ ಫಾರ್ಚೂನರ್‌, ಚಾಮರಾಜನಗರದಲ್ಲಿ ಫೋರ್ಡ್‌, ಮಂಡ್ಯದಲ್ಲಿ ಎಂಜಿ ಮೋಟಾರ್‌, ಹಾಸನದಲ್ಲಿ ವೋಕ್ಸ್‌ವ್ಯಾಗನ್‌ ಹಾಗೂ ಚಿಕ್ಕಮಗಳೂರಿನಲ್ಲಿ ಮಹೇಂದ್ರ ಜೀಪ್‌ ಹೊಂದಿರುವವರು ಸಿಕ್ಕಿ ಬಿದ್ದಿದ್ದಾರೆ. ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತಿದೆ ಎಂದು ಇಲಾಖೆ ಮೂಲಗಳು ತಿಳಿಸಿವೆ.

ಯಾವ ಜಿಲ್ಲೆಯಲ್ಲಿ ಎಷ್ಟು?:

ಕಾರುಗಳನ್ನು ಹೊಂದಿದ್ದರೂ ಬಿಪಿಎಲ್‌ ಮತ್ತು ಅಂತ್ಯೋದಯ ಪಡಿತರ ಚೀಟಿಗಳನ್ನು ಪಡೆದುಕೊಂಡಿದ್ದವರ ಜಿಲ್ಲಾವಾರು ಮಾಹಿತಿ ಇಂತಿದೆ. ಕಲಬುರಗಿ 2114, ಚಿಕ್ಕಮಗಳೂರು 1912, ಬೆಂಗಳೂರು 1312, ರಾಮನಗರ 922, ಉತ್ತರ ಕನ್ನಡ 553, ಯಾದಗಿರಿ 517, ಶಿವಮೊಗ್ಗ 522, ಬೀದರ್‌ 554, ಬೆಂಗಳೂರು ಗ್ರಾಮಾಂತರ 547, ಬೆಂಗಳೂರು ಪಶ್ಚಿಮ 485, ತುಮಕೂರು 307, ಚಿಕ್ಕಬಳ್ಳಾಪುರ 296, ಹಾವೇರಿ 220, ಬಾಗಲಕೋಟೆ 216, ವಿಜಯಪುರ 214, ಬೆಂಗಳೂರು ಉತ್ತರ 201, ಮಂಡ್ಯ 137, ದಕ್ಷಿಣ ಕನ್ನಡ 130, ಬಳ್ಳಾರಿ 67, ಬೆಂಗಳೂರು ಪೂರ್ವ 53, ಬೆಂಗಳೂರು ದಕ್ಷಿಣ 91, ಚಾಮರಾಜನಗರ 89, ಚಿತ್ರದುರ್ಗ 43, ದಾವಣಗೆರೆ 62, ಧಾರವಾಡ 15, ಗದಗ 15, ಹಾಸನ 86, ಕೊಡಗು 21, ಕೋಲಾರ 65, ಕೊಪ್ಪಳ 29, ಮೈಸೂರು 123, ರಾಯಚೂರು 39, ಉಡುಪಿ 42, ಕಾರ್ಡುಗಳನ್ನು ರದ್ದು ಮಾಡಲಾಗಿದೆ.

22 ಸಾವಿರ ಸರ್ಕಾರಿ ನೌಕರರು!:

ಸರ್ಕಾರಿ ಮತ್ತು ಅರೆ ಸರ್ಕಾರಿ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಂದಾಜು 22 ಸಾವಿರ ನೌಕರರು ಪಡಿತರ ಚೀಟಿ ಪಡೆದಿರುವುದನ್ನು ಇಲಾಖೆ ಪತ್ತೆ ಹಚ್ಚಿದೆ. ಮಾನವ ಸಂಪನ್ಮೂಲ ನಿರ್ವಹಣಾ ವ್ಯವಸ್ಥೆಯಡಿ (ಎಚ್‌ಆರ್‌ಎಂಎಸ್‌) ಆಯಾ ಇಲಾಖೆಯಿಂದ ಪ್ರತಿ ಸರ್ಕಾರಿ ನೌಕರರು, ವಿವಿಧ ನಿಗಮ-ಮಂಡಳಿ ಮತ್ತು ಖಾಸಗಿ ಸಂಸ್ಥೆಗಳ ನೌಕರರ ಮಾಹಿತಿ ಪಡೆದು ಅವರ ಆಧಾರ್‌ ಸಂಖ್ಯೆಯನ್ನು ಪಡಿತರ ಚೀಟಿಗೆ ಜೋಡಣೆಯಾಗಿರುವ ಆಧಾರ್‌ಗೆ ತಾಳೆ ಮಾಡಲಾಗಿದೆ. ಈ ಸಂದರ್ಭದಲ್ಲಿ 22 ಸಾವಿರ ನೌಕರರು ಸಿಕ್ಕಿಬಿದ್ದಿದ್ದಾರೆ. ಇವರಿಗೆಲ್ಲಾ ನೋಟಿಸ್‌ ಜಾರಿ ಮಾಡಿದ್ದು ದಂಡ ಕಟ್ಟುವಂತೆ ಇಲಾಖೆ ಸೂಚಿಸಿದೆ. ಅದರಂತೆ, ನೋಟಿಸ್‌ ನೀಡಿದ ಏಳು ದಿನದೊಳಗೆ ನೌಕರರು ಲಿಖಿತ ಉತ್ತರ ನೀಡಿ ಸಾವಿರಾರು ರು.ಗಳ ದಂಡ ಕಟ್ಟುತ್ತಿದ್ದಾರೆ. ಈವರೆಗೆ 17,338 ನೌಕರರ ಕಾರ್ಡ್‌ಗಳನ್ನು ರದ್ದು ಮಾಡಲಾಗಿದೆ. ಉಳಿದವರ ಕಾರ್ಡ್‌ಗಳ ರದ್ದು ಪ್ರಕ್ರಿಯೆ ಮುಂದುವರಿದಿದೆ.

ಬಿಪಿಎಲ್‌ ಪಡಿತರ ಕಾರ್ಡ್‌ದಾರರಿಗೆ 5 ಲಕ್ಷವರೆಗೆ ಉಚಿತ ಚಿಕಿತ್ಸೆ

3.30 ಲಕ್ಷ ಕಾರ್ಡ್‌ ರದ್ದು:

ನಿಗದಿತ ಮಾನದಂಡ ಉಲ್ಲಂಘಿಸಿ ರಾಜ್ಯಾದ್ಯಂತ ಆರ್ಥಿಕ ಸಬಲರು ಪಡೆದಿದ್ದ 3,30,024 ಪಡಿತರ ಕಾರ್ಡ್‌ ರದ್ದಾಗಿವೆ. ಇದರಲ್ಲಿ 21,679 ಅಂತ್ಯೋದಯ ಮತ್ತು 3,08,345 ಬಿಪಿಎಲ್‌ ಚೀಟಿಗಳಿವೆ. ಕೆಲ ಕಾರ್ಡ್‌ಗಳನ್ನು ಎಪಿಎಲ್‌ಗೂ ಪರಿವರ್ತಿಸಲಾಗಿದೆ. ಅತಿ ಹೆಚ್ಚು ಪಡಿತರ ಕಾರ್ಡುಗಳು ರದ್ದಾಗಿರುವ ಜಿಲ್ಲಾವಾರು ಮಾಹಿತಿಯಂತೆ ಬೆಂಗಳೂರು 34,705, ವಿಜಯಪುರ 28,735, ಕಲಬುರಗಿ 16,945, ಬೆಳಗಾವಿ 16,765, ರಾಯಚೂರು 16,693 ಹಾಗೂ ಚಿತ್ರದುರ್ಗ 16,537 ಚೀಟಿಗಳನ್ನು ರದ್ದು ಮಾಡಲಾಗಿದೆ ಎಂದು ಆಹಾರ ಇಲಾಖೆ ಮಾಹಿತಿ ನೀಡಿದೆ.

ದಂಡ ವಸೂಲಿ ಜತೆಗೆ ಕೇಸ್‌

ಪಡಿತರ ಚೀಟಿ ಪಡೆಯಲು ಅನರ್ಹರಿದ್ದರೂ ಇಲಾಖೆಗೆ ತಪ್ಪು ಮಾಹಿತಿ ನೀಡಿ ಕಾರ್ಡ್‌ ಪಡೆದು ಉಚಿತವಾಗಿ ಅಕ್ಕಿ, ಗೋಧಿ, ರಾಗಿ, ಸಕ್ಕರೆ ಮತ್ತು ತಾಳೆ ಎಣ್ಣೆ ಸೇರಿ ಇತರೆ ಪದಾರ್ಥ ದುರುಪಯೋಗ ಮಾಡಿಕೊಂಡಿದ್ದಾರೆ. ಅಂತವರಿಗೆ ಸ್ವಯಂಪ್ರೇರಿತವಾಗಿ ಕಾರ್ಡ್‌ಗಳನ್ನು ವಾಪಸ್‌ ಕೊಡುವಂತೆ 2 ವರ್ಷದ ಹಿಂದೆ ಇಲಾಖೆ ಆದೇಶಿಸಿತ್ತು. ಒಂದು ವೇಳೆ ಕಾರ್ಡ್‌ ವಾಪಸ್‌ ನೀಡದಿದ್ದಲ್ಲಿ ಸರ್ಕಾರವೇ ಪತ್ತೆ ಹಚ್ಚಿ ಪಡಿತರ ಪಡೆದುಕೊಳ್ಳುತ್ತಿದ್ದ ದಿನದಿಂದ ಈವರೆಗೆ ಎಷ್ಟುಆಹಾರ ಪದಾರ್ಥಗಳನ್ನು ಪಡೆದಿದ್ದಾರೆ ಎಂಬುದನ್ನು ಲೆಕ್ಕ ಮಾಡಿ ಕೆಜಿಗೆ 35 ರು.ನಂತೆ ದಂಡ ವಸೂಲಿ ಜತೆಗೆ ಕ್ರಿಮಿನಲ್‌ ಕೇಸ್‌ ದಾಖಲಿಸುವುದಾಗಿ ಇಲಾಖೆ ಕರ್ನಾಟಕ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ (ನಿಯಂತ್ರಣ)ಆದೇಶದಲ್ಲಿ ಉಲ್ಲೇಖಿಸಲಾಗಿದೆ.
 

click me!