ವಿದ್ಯುತ್‌ ಖರೀದಿಸದಂತೆ ಕರ್ನಾಟಕಕ್ಕೆ ಕೇಂದ್ರ ನಿಷೇಧ: ರಾಜ್ಯಕ್ಕೆ ವಿದ್ಯುತ್‌ ಕ್ಷಾಮ?

By Kannadaprabha NewsFirst Published Aug 19, 2022, 6:29 AM IST
Highlights

ವಿವಿಧ ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಗೆ 5000 ಕೋಟಿ ರು.ಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡ ಕರ್ನಾಟಕ ಸೇರಿದಂತೆ 13 ರಾಜ್ಯಗಳು

ನವದೆಹಲಿ(ಆ.19):  ಸುದೀರ್ಘ ಅವಧಿಯಿಂದ ಹಣ ಬಾಕಿ ಉಳಿಸಿಕೊಂಡಿರುವ ಹಿನ್ನೆಲೆಯಲ್ಲಿ ಕರ್ನಾಟಕ ಸೇರಿದಂತೆ 13 ರಾಜ್ಯಗಳ 27 ವಿದ್ಯುತ್‌ ವಿತರಣಾ ಕಂಪನಿಗಳಿಗೆ ಪವರ್‌ ಎಕ್ಸ್‌ಚೇಂಜ್‌ಗಳಿಂದ ವಿದ್ಯುತ್‌ ಖರೀದಿ ಮಾಡದಂತೆ ಕೇಂದ್ರ ಸರ್ಕಾರ ನಿಷೇಧಿಸಿದೆ. ಹೀಗಾಗಿ ಈ ರಾಜ್ಯಗಳಲ್ಲಿ ವಿದ್ಯುತ್‌ ಕ್ಷಾಮ ಎದುರಾಗುವ ಭೀತಿ ಎದುರಾಗಿದೆ. ಕರ್ನಾಟಕದಲ್ಲಿ ಬೆಸ್ಕಾಂ, ಜೆಸ್ಕಾಂ, ಹೆಸ್ಕಾಂ, ಚೆಸ್ಕಾಂಗಳು ವಿದ್ಯುತ್‌ ಖರೀದಿ ಬಿಲ್‌ ಬಾಕಿ ಉಳಿಸಿಕೊಂಡಿವೆ.

ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡಿದ ವಿದ್ಯುತ್‌ಗೆ ಹಣ ಪಾವತಿ ಮಾಡಲು 7 ತಿಂಗಳ ಅವಕಾಶ ನೀಡಲಾಗಿರುತ್ತದೆ. ಆ ಅವಧಿಯಲ್ಲೂ ಹಣ ಪಾವತಿ ಮಾಡದೇ ಇದ್ದರೆ ವಿದ್ಯುತ್‌ ವಿತರಣಾ ಕಂಪನಿಗಳಿಗೆ ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಂದ ಅಗತ್ಯ ಪ್ರಮಾಣದ ವಿದ್ಯುತ್‌ ಖರೀದಿಗೆ ನಿಷೇಧ ಹೇರಲಾಗುತ್ತದೆ.

ಗ್ರಾಹಕನಿಗೆ ಕೇಂದ್ರದ ಶಾಕ್‌, ಪೆಟ್ರೋಲ್‌-ಡೀಸೆಲ್‌ ರೀತಿ ಇನ್ಮುಂದೆ ಚೇಂಜ್‌ ಆಗ್ತಾನೆ ಇರುತ್ತೆ ಕರೆಂಟ್‌ ರೇಟ್‌!

ಇದೀಗ ಕರ್ನಾಟಕ ಸೇರಿದಂತೆ 13 ರಾಜ್ಯಗಳು ವಿವಿಧ ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಗೆ 5000 ಕೋಟಿ ರು.ಗೂ ಹೆಚ್ಚಿನ ಹಣ ಬಾಕಿ ಉಳಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಆ.19ರಿಂದಲೇ ಜಾರಿಗೆ ಬರುವಂತೆ ಮುಂದಿನ ಆದೇಶದವರೆಗೂ 13 ರಾಜ್ಯಗಳಿಗೆ ವಿದ್ಯುತ್‌ ಖರೀದಿಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರದ ಅಧೀನದ ‘ಪವರ್‌ ಸಿಸ್ಟಮ್‌ ಆಪರೇಷನ್‌ ಕಾರ್ಪೊರೇಷನ್‌ ಲಿ.’ 3 ವಿದ್ಯುತ್‌ ಎಕ್ಸ್‌ಚೇಂಜ್‌ಗಳಿಗೆ ಸೂಚಿಸಿದೆ.

ಸಾಮಾನ್ಯವಾಗಿ ವಿದ್ಯುತ್‌ ಬೇಡಿಕೆ ಕಡಿಮೆ ಇದ್ದಾಗ, ರಾಜ್ಯಗಳು ಅದನ್ನು ವಿದ್ಯುತ್‌ ಎಕ್ಸ್‌ಚೇಂಜ್‌ ಮೂಲಕ ಬೇರೆ ರಾಜ್ಯಗಳಿಗೆ ಮಾರಾಟ ಮಾಡುತ್ತವೆ. ಬೇಡಿಕೆ ಹೆಚ್ಚಾಗಿ, ಉತ್ಪಾದನೆ ಕಡಿಮೆ ಇದ್ದಾಗ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡುತ್ತವೆ. ಇದೀಗ ನಿಷೇಧ ಜಾರಿಯಾಗಿರುವ ಹಿನ್ನೆಲೆಯಲ್ಲಿ ಪೀಕ್‌ ಅವರ್‌ಗಳಲ್ಲಿ ಅಗತ್ಯ ಪ್ರಮಾಣದ ವಿದ್ಯುತ್‌ ಸ್ಥಳೀಯವಾಗಿ ಲಭ್ಯವಾಗದೇ ಹೋದಲ್ಲಿ ಪವರ್‌ ಎಕ್ಸ್‌ಚೇಂಜ್‌ಗಳಿಂದ ಖರೀದಿ ಮಾಡುವುದು ಸಾಧ್ಯವಾಗುವುದಿಲ್ಲ. ಆಗ ಪವರ್‌ ಕಟ್‌ ಅನಿವಾರ್ಯವಾಗುತ್ತದೆ.
 

click me!