ಕೊರೋನಾ ಎಫೆಕ್ಟ್: ಮೆಟ್ರೋ ನಿಗಮಕ್ಕೆ 110 ಕೋಟಿ ನಷ್ಟ..!

By Kannadaprabha NewsFirst Published Jul 3, 2020, 7:58 AM IST
Highlights

ಮಾ.22ರಿಂದ ಸಂಚರಿಸದ ರೈಲು| 445 ಕೋಟಿ ಆದಾಯ ಗುರಿ ಹೊಂದಿದ್ದ ನಿಗಮ| ಕೇಂದ್ರ ಸರ್ಕಾರದ ಸೂಚನೆ ಸಿಗುವವರೆಗೂ ಮೆಟ್ರೋ ರೈಲು ಸಂಚಾರ ಇರುವುದಿಲ್ಲ: ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿ ಯಶವಂತ ಚೌವ್ಹಾಣ್‌|

ಬೆಂಗಳೂರು(ಜು.03): 2020-21ನೇ ಸಾಲಿನಲ್ಲಿ ಸುಮಾರು 445 ಕೋಟಿ ಆದಾಯ ಗುರಿ ಹೊಂದಿದ್ದ ನಮ್ಮ ಮೆಟ್ರೋ ನಿಗಮ ಕೊರೋನಾ ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.22ರಿಂದ ಮೆಟ್ರೋ ರೈಲು ಸಂಚಾರ ರದ್ದುಪಡಿಸಿದ್ದರಿಂದ ಅಂದಾಜು 110 ಕೋಟಿಗಿಂತ ಅಧಿಕ ನಷ್ಟಕ್ಕೊಳಗಾಗಿದೆ.

ಕಳೆದ ಆರ್ಥಿಕ ವರ್ಷದಲ್ಲಿ ಬಿಎಂಆರ್‌ಸಿಎಲ್‌ 430 ಕೋಟಿ ಆದಾಯ ಗಳಿಸಿತ್ತು. ಇದರಿಂದ ಸಹಜವಾಗಿಯೇ 2020-21ನೇ ಸಾಲಿನಲ್ಲಿ ಮೆಟ್ರೋ ನಿಗಮ ಸುಮಾರು 445 ಕೋಟಿ ಆದಾಯದ ಗುರಿಯನ್ನು ಹೊಂದಲಾಗಿತ್ತು.ಯಲಚೇನಹಳ್ಳಿ- ನಾಗಸಂದ್ರ(ಹಸಿರು ಮಾರ್ಗ) ಮತ್ತು ಬೈಯ್ಯಪ್ಪನಹಳ್ಳಿ- ಮೈಸೂರು ರಸ್ತೆ (ನೇರಳೆ ಮಾರ್ಗ) ಮೆಟ್ರೋ ನಿಲ್ದಾಣಗಳ ನಡುವೆ ದಿನಕ್ಕೆ 4ರಿಂದ 4.30 ಲಕ್ಷ ಮಂದಿ ಪ್ರಯಾಣಿಕರು ಪ್ರತಿನಿತ್ಯ ಸಂಚರಿಸುತ್ತಿದ್ದರು. ಇದರಿಂದಾಗಿ ತಿಂಗಳಿಗೆ ಅಂದಾಜು 33ರಿಂದ 35 ಕೋಟಿ ರು. ಆದಾಯ ಬರುತ್ತಿತ್ತು. ಆದರೆ ಕೊರೋನಾ ಸೋಂಕು ಶುರುವಾಗುತ್ತಿದ್ದಂತೆ 15ರ ನಂತರ ಪ್ರಯಾಣಿಕರ ಸಂಖ್ಯೆ ಏಕಾಏಕಿ 1ರಿಂದ 1.50 ಲಕ್ಷಕ್ಕೆ ಕುಸಿದಿತ್ತು. ಮಾ.22ರಿಂದಲೇ ಲಾಕ್‌ಡೌನ್‌ ಘೋಷಿಸಿದ ಕಾರಣ ಮೆಟ್ರೋ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ. ಹೀಗಾಗಿ ಕಳೆದ ಮೂರು ತಿಂಗಳ ಅವಧಿಯಲ್ಲಿ ಒಟ್ಟಾರೆ 110 ಕೋಟಿಗಿಂತ ಅಧಿಕ ನಷ್ಟವಾಗಿದೆ ಎಂದು ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿಗಳು ಕನ್ನಡಪ್ರಭಕ್ಕೆ ಮಾಹಿತಿ ನೀಡಿದ್ದಾರೆ.

ಮೆಟ್ರೋ ಸಂಚಾರ ಆರಂಭವಾಗೋದು ಡೌಟ್‌!

ಕಾಮಗಾರಿ ವಿಳಂಬ:

ಲಾಕ್‌ಡೌನ್‌ನಿಂದಾಗಿ ಕಳೆದ ಮೂರು ತಿಂಗಳಿನಿಂದ ನಮ್ಮ ಮೆಟ್ರೋ ರೈಲು ಸಂಚಾರವಿಲ್ಲ. ಹೊರ ರಾಜ್ಯಗಳ ಕಾರ್ಮಿಕರು ತಮ್ಮ ತವರು ರಾಜ್ಯಕ್ಕೆ ವಾಪಸ್‌ ಆಗಿರುವುದರಿಂದ ನಮ್ಮ ಮೆಟ್ರೋ 2ನೇ ಹಂತದ ಯೋಜನೆಯ ಕಾಮಗಾರಿ ಆರು ತಿಂಗಳಿನಿಂದ ಒಂದು ವರ್ಷ ವಿಳಂಬವಾಗಲಿದೆ. ನಮ್ಮ ಮೆಟ್ರೋಗೆ ಸರ್ಕಾರದಿಂದ ಬಿಡುಗಡೆ ಆಗಬೇಕಿರುವ ಅನುದಾನ ತಡವಾಗಲಿದೆ. ಇದರಿಂದ ಬಿಎಂಆರ್‌ಸಿಎಲ್‌ 500 ಕೋಟಿಗೂ ಅಧಿಕ ಸಾಲವನ್ನು ನೀಡುವಂತೆ ಕೆಲವು ಬ್ಯಾಂಕುಗಳಿಗೆ ಮನವಿ ಮಾಡಿದೆ ಎಂದು ಬಿಎಂಆರ್‌ಸಿಎಲ್‌ ಮೂಲಗಳು ತಿಳಿಸಿವೆ.

ಈ ಬಗ್ಗೆ ಮಾತನಾಡಿದ ಬಿಎಂಆರ್‌ಸಿಎಲ್‌ ಹಿರಿಯ ಅಧಿಕಾರಿ ಯಶವಂತ ಚೌವ್ಹಾಣ್‌ ಅವರು, ಕೊರೋನಾ ಹಿನ್ನೆಲೆಯಲ್ಲಿ ಮೆಟ್ರೋ ನಿಗಮ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರ್ಕಾರದ ಸೂಚನೆ ಸಿಗುವವರೆಗೂ ಮೆಟ್ರೋ ರೈಲು ಸಂಚಾರ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

click me!