ಲಾಕ್‌ಡೌನ್‌ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ ಎಂದು ತಜ್ಞರು ತಿಳಿಸಿದ್ದಾರೆ.
ಬೆಂಗಳೂರು(ಜು.03): ಲಾಕ್‌ಡೌನ್‌ನಿಂದ ಕೊರೋನಾ ಸೋಂಕು ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದೇ ಹೊರತು ಈ ಪಿಡುಗನ್ನು ನಿವಾರಿಸಲು ಸಾಧ್ಯವಿಲ್ಲ.
ಇದು ನಾಡಿನ ಬಹುತೇಕ ವಿಷಯ ತಜ್ಞರ ಅಭಿಪ್ರಾಯ. ಕೊರೋನಾ ಕಬಂಧ ಬಾಹು ವ್ಯಾಪಕವಾಗಿ ವಿಸ್ತರಿಸುತ್ತಿರುವ ಈ ಹಂತದಲ್ಲಿ ಲಾಕ್‌ಡೌನ್ ಮತ್ತೆ ಚರ್ಚೆಗೆ ಬಂದಿದೆ. ಲಾಕ್‌ಡೌನ್ ಜಾರಿಯಾಗಬೇಕು ಎಂಬ ಒತ್ತಡ ಕೂಡ ನಿರ್ಮಾಣವಾಗತೊಡಗಿದೆ.
ಆಗಸ್ಟ್ ಬಳಿಕ ಶಾಲೆ, ಕಾಲೇಜು ಆರಂಭಕ್ಕೆ ಚಿಂತನೆ
ಆದರೆ, ಲಾಕ್‌ಡೌನ್‌ನಿಂದ ಈ ಮಾರಕ ರೋಗದ ನಿಯಂತ್ರಣ ಸಾಧ್ಯವಿಲ್ಲ. ಅದರಿಂದ ಈ ರೋಗ ತನ್ನ ಗರಿಷ್ಠ ಮಿತಿ ಮುಟ್ಟುವುದನ್ನು ಮುಂದೂಡಬಹುದು. ಇದೇ ಪರಿಸ್ಥಿತಿ ಮುಂದುವರೆದರೆ ಕೊರೋನಾ ರಾಜ್ಯದಲ್ಲಿ ಸೆಪ್ಟೆಂಬರ್ ಅಥವಾ ಅಕ್ಟೋಬರ್‌ಗೆ ತನ್ನ ಗರಿಷ್ಠ ಮಿತಿಯನ್ನು ಮುಟ್ಟಿಅನಂತರ ಕ್ರಮೇಣ ನಿಯಂತ್ರಣಕ್ಕೆ ಬರಬಹುದು. ಆದರೆ, ಲಾಕ್‌ಡೌನ್ ಮಾಡಿದರೆ ಈ ಅವಧಿ ಜನವರಿ ಅಥವಾ ಫೆಬ್ರವರಿಗೆ ಮುಂದುವರೆಯಬಹುದಷ್ಟೆಎಂಬುದು ಬಹುತೇಕ ತಜ್ಞರ ಅಭಿಪ್ರಾಯ.
ಸರ್ಕಾರದ ಕೋವಿಡ್ ಕ್ಲಿನಿಕಲ್ ಎಕ್ಸ್‌ಪರ್ಟ್ ಕಮಿಟಿ ಅಧ್ಯಕ್ಷರೂ ಆದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ಎಸ್.ಸಚ್ಚಿದಾನಂದ, ಕೊರೋನಾ ದೇಶಕ್ಕೆ ಕಾಲಿಟ್ಟಾಗ ಅದರ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಲಾಕ್‌ಡೌನ್ ಅಗತ್ಯವಿತ್ತು. ಇದರಿಂದ ಸಾಕಷ್ಟುಜನರಲ್ಲಿ ಜಾಗೃತಿಯಾಗಿದೆ. ಇನ್ನೇನಿದ್ದರೂ ಜನರಿಗೆ ಕೋವಿಡ್ ನಡುವೆಯೇ ಇದ್ದುಕೊಂಡು ಅದನ್ನು ನಿಯಂತ್ರಿಸುವ ಬಗ್ಗೆ ಹೆಚ್ಚಿನ ತಿಳುವಳಿಕೆ ನೀಡಬೇಕಾಗಿದೆ.
ಆರಂಭವಾಯ್ತು ರೈಲು ಖಾಸಗೀಕರಣ,ಭುಗಿಲೆದ್ದ ವಿಶ್ವಕಪ್ ಫಿಕ್ಸಿಂಗ್ ಪ್ರಕರಣ; ಜು.2ರ ಟಾಪ್ 10 ಸುದ್ದಿ!
ಜೊತೆಗೆ ಕೋವಿಡ್‌ಗೆ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವ ವೃದ್ಧರು, ಈಗಾಗಲೇ ಬೇರೆ ಬೇರೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಅನುಭವಿಸುತ್ತಿರುವವರ ಬಗ್ಗೆ ಹೆಚ್ಚಿನ ಕಾಳಜಿ ವಹಿಸುವುದು, ಕಂಟೈನ್ಮೆಂಟ್ ವಲಯದಲ್ಲಿ ಕೋವಿಡ್ ನಿಯಂತ್ರಣ ಕ್ರಮಗಳನ್ನು ಮತ್ತಷ್ಟುಬಿಗಿಗೊಳಿಸುವಂತಹ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಈಗಾಗಲೇ ಮಾಡಲಾಗಿದ್ದ ಲಾಕ್‌ಡೌನ್‌ನಿಂದ ಕೊರೋನಾ ನಿಯಂತ್ರಣಕ್ಕೆ ಬರುವ ಸಮಯವನ್ನು ಕೆಲ ತಿಂಗಳು ಮುಂದೂಡಿದಂತಾಗಿದೆ. ಮತ್ತೆ ಲಾಕ್‌ಡೌನ್ ಮಾಡಿದರೆ ಕೆಲ ತಿಂಗಳಲ್ಲಿ ತಾನಾಗೇ ನಿಯಂತ್ರಣಕ್ಕೆ ಬರಬಹುದಾದ ಸಮಸ್ಯೆಯನ್ನು ಇನ್ನೂ ಒಂದಷ್ಟುತಿಂಗಳು ಮುಂದೂಡಿಕೆ ಮಾಡಿದಂತಾಗುತ್ತದೆ ಅಷ್ಟೆಎಂದು ಅಭಿಪ್ರಾಯಪಟ್ಟಿದ್ದಾರೆ.
ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷ ಡಾ ರವೀಂದ್ರ, ಕೊರೋನಾ ಸೋಂಕು ನಿಯಂತ್ರಣಕ್ಕೆ ಔಷಧ ಲಭ್ಯವಿಲ್ಲದ ಕಾರಣ ಸೋಂಕು ನಿಯಂತ್ರಣಕ್ಕೆ ಬರಲು ಮನುಷ್ಯನ ದೇಹದಲ್ಲೇ ಅದರ ವಿರುದ್ಧ ಹೋರಾಡುವ ಶಕ್ತಿಗಳು ಪ್ರಕೃತಿ ಸಹಜವಾಗಿ ವೃದ್ಧಿಯಾಗಬೇಕು. ಇದು ಆಗಬೇಕಾದರೆ ಸಮುದಾಯಕ್ಕೆ ಸೋಂಕು ಹಬ್ಬಲೇಬೇಕಾಗುತ್ತದೆ. ಇದಕ್ಕೆ ಕೆಲವು ತಿಂಗಳ ಕಾಲಾವಕಾಶ ಬೇಕಾಗುತ್ತದೆ. ಇದರ ನಡುವೆ ಲಾಕ್‌ಡೌನ್ ಮಾಡಿ ಕೊರೋನಾ ನಿಯಂತ್ರಿಸುವ ಪ್ರಯತ್ನ ಮಾಡಿದರೆ ಅದು ಆ ಕ್ಷಣಕ್ಕೆ ಕಡಿಮೆಯಾಗಬಹುದಷ್ಟೆ. ಲಾಕ್‌ಡೌನ್ ಇರುವವರೆಗೆ ಸೋಂಕು ಹಬ್ಬುವುದು ಕಡಿಮೆಯಾಗಬಹುದು ಅಷ್ಟೆಎಂದು ಹೇಳುತ್ತಾರೆ.
ಚೀನಾ ಮೇಲೆ ಭಾರತದ ರಾಜತಾಂತ್ರಿಕ ‘ದಾಳಿ’
ಆದರೆ, ಇದನ್ನು ವಿರೋಧಿಸುವವರೂ ಇದ್ದಾರೆ. ಕೊರೋನಾ ವಿಪರೀತವಾಗಿ ಹಬ್ಬುತ್ತಿರುವುದರಿಂದ ರೋಗಿಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯ ನಮ್ಮ ವೈದ್ಯಕೀಯ ವ್ಯವಸ್ಥೆಗೆ ಇಲ್ಲ. ಅದನ್ನು ರೂಪಿಸಿಕೊಳ್ಳಲು ಹಾಗೂ ಸೋಂಕಿತರಿಗೆ ಚಿಕಿತ್ಸೆ ನೀಡಲು ಆಗಾಗ ಇಂತಹ ಬಿಡುವು ನೀಡಬೇಕಾಗುತ್ತದೆ. ಇದರಿಂದ ಕೊರೋನಾದ ಮಾರಕ ಹೊಡೆತದಿಂದ ಜನರನ್ನು ರಕ್ಷಿಸುತ್ತಲೇ ಕ್ರಮೇಣ ನಿಯಂತ್ರಣ ಸಾಧಿಸಬಹುದು ಹಾಗೂ ಸಾಧಿಸಬೇಕು. ಕೊರೋನಾ ತಾನಾಗೇ ನಿಯಂತ್ರಣಕ್ಕೆ ಬರಲಿ ಎಂದು ಪ್ರಕೃತಿಯ ಮೇಲೆ ಬಿಡುವುದರಿಂದ ಅತಿ ಹೆಚ್ಚು ಪ್ರಾಣ ಹಾನಿ ಉಂಟಾಗುವ ಅಪಾಯವಿದೆ ಎಂದು ಅವರು ಎಚ್ಚರಿಸುತ್ತಾರೆ.
ಒಂದೇ ದಿನ 1502 ಕೇಸ್!
ರಾಜ್ಯದಲ್ಲಿ ಕೊರೋನಾ ಸೋಂಕು ದಿನೇ ದಿನೇ ಉಲ್ಬಣಿಸುತ್ತಿದ್ದು, ಗುರುವಾರ ಒಂದೇ ದಿನ 1502 ಹೊಸ ಪ್ರಕರಣಗಳು ಪತ್ತೆಯಾಗಿವೆ. ಇದೇ ವೇಳೆ, ಒಂದೇ ದಿನ 19 ಮಂದಿ ಸಾವಿಗೀಡಾಗಿದ್ದಾರೆ.