
ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ನಾಳೆ (ಮಾರ್ಚ್ 3, ಮಂಗಳವಾರ) ಪಾಲ್ಗುಣ ಶುಕ್ಲ ಹುಣ್ಣಿಮೆ ದಿನ ನಡೆಯಲಿರುವ ರಕ್ತಚಂದ್ರ (ಕೇತುಗ್ರಸ್ತ) ಚಂದ್ರಗ್ರಹಣ ಹಿನ್ನೆಲೆಯಲ್ಲಿ ದೇವಾಲಯಗಳಲ್ಲಿ ವಿಶೇಷ ಪೂಜೆ–ವಿಧಿವಿಧಾನಗಳು ಹಾಗೂ ದರ್ಶನ ಸಮಯದಲ್ಲಿ ಬದಲಾವಣೆಗಳನ್ನು ಘೋಷಿಸಲಾಗಿದೆ. ಗ್ರಹಣದ ಜೊತೆಗೆ ಇದೇ ದಿನ ಹೋಳಿ ಹಬ್ಬವೂ ಇರುವುದರಿಂದ, ಧಾರ್ಮಿಕ ಆಚರಣೆಗಳಿಗೆ ಯಾವುದೇ ಅಡಚಣೆ ಇರುವುದಿಲ್ಲ ಎಂದು ಧಾರ್ಮಿಕ ಮುಖಂಡರು ಸ್ಪಷ್ಟಪಡಿಸಿದ್ದಾರೆ.
ಬೆಂಗಳೂರಿನ ಕಾಡು ಮಲ್ಲಿಕಾರ್ಜುನ ದೇವಾಲಯದಲ್ಲಿ ಚಂದ್ರಗ್ರಹಣ ಹಿನ್ನೆಲೆಯಲ್ಲಿ ವಿಶೇಷ ಪೂಜಾ ಕ್ರಮಗಳನ್ನು ರೂಪಿಸಲಾಗಿದೆ. ಮಧ್ಯಾಹ್ನ 12 ಗಂಟೆವರೆಗೆ ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಬಳಿಕ ಗ್ರಹಣ ಆರಂಭಕ್ಕೂ ಮುನ್ನ ಗರ್ಭಗುಡಿ ದರ್ಶನ ಬಂದ್ ಮಾಡಲಾಗುತ್ತದೆ. ಸಂಜೆ 7 ಗಂಟೆಗೆ ದೇವಾಲಯದ ಬಾಗಿಲು ಪುನಃ ತೆರೆಯಲಾಗಿದ್ದು, ತೀರ್ಥ–ಪುಣ್ಯಃ ಮತ್ತು ಶುದ್ಧೀಕರಣ ಕಾರ್ಯಗಳ ನಂತರ ಚಂದ್ರನಿಗೆ ಹಾಗೂ ಕಾಡುಮಲ್ಲೇಶ್ವರನಿಗೆ ಕ್ಷೀರಾಭಿಷೇಕ, ಪಂಚಾಮೃತ ನೈವೇದ್ಯ ಅರ್ಪಿಸಲಾಗುತ್ತದೆ. ರಾತ್ರಿ 9.30ರವರೆಗೆ ಭಕ್ತಾಧಿಗಳಿಗೆ ದರ್ಶನ ನೀಡಲಾಗುತ್ತದೆ. ಮರುದಿನ ನವಗ್ರಹ ಶಾಂತಿ ಹೋಮ ನೆರವೇರಲಿದೆ. ಗ್ರಹಣದ ನಂತರ ಸ್ನಾನ ಮಾಡಿ ಪೂಜೆ ಸಲ್ಲಿಸಬೇಕು ಎಂದು ಪಂಚಾಂಗ ಸೂಚಿಸುತ್ತದೆ. ಕೆಲ ರಾಶಿಯವರಿಗೆ ದೋಷ ಇರುವುದರಿಂದ ದಾನ–ಪೂಜೆ ಮಾಡುವುದು ಶ್ರೇಯಸ್ಕರ ಎಂದು ದೇವಾಲಯದ ಅರ್ಚಕ ಶರತ್ ತಿಳಿಸಿದ್ದಾರೆ.
ವಿಜಯನಗರ ಜಿಲ್ಲೆಯಲ್ಲಿ ಗ್ರಹಣ ಸಮಯ ಗ್ರಹಣ ಸ್ಪರ್ಶ: ಮಧ್ಯಾಹ್ನ 3.20, ಮಧ್ಯಕಾಲ: ಸಂಜೆ 5.04, ಮೋಕ್ಷ ಕಾಲ: ಸಂಜೆ 6.47 ಈ ಅವಧಿಯಲ್ಲಿ ಹಂಪಿ ವಿರೂಪಾಕ್ಷೇಶ್ವರ ದೇಗುಲ ಸೇರಿದಂತೆ ಬಹುತೇಕ ದೇವಾಲಯಗಳ ಗರ್ಭಗುಡಿಗಳನ್ನು ಬಂದ್ ಮಾಡಲಾಗುತ್ತದೆ. ರಾಶಿಗೆ ಅನುಗುಣವಾಗಿ ಪೂಜೆ, ದಾನ–ಧರ್ಮ ಕೈಗೊಳ್ಳುವಂತೆ ಅರ್ಚಕರು ಸಲಹೆ ನೀಡಿದ್ದಾರೆ.
ಉಡುಪಿಯ ಶ್ರೀ ಕೃಷ್ಣಮಠದಲ್ಲಿ ಗ್ರಹಣ ಆಚರಣೆ ಕುರಿತಂತೆ ದಿವಾಣರಾದ ಡಾ. ಉದಯ ಸರಳತ್ತಾಯ ಮಾಹಿತಿ ನೀಡಿದ್ದಾರೆ. ಮಾರ್ಚ್ 3ರಂದು ಗ್ರಸ್ತೋದಯ ಚಂದ್ರಗ್ರಹಣ ನಡೆಯಲಿದ್ದು, ನಮ್ಮ ಭಾಗದಲ್ಲಿ ಸೂರ್ಯಾಸ್ತ ಸಮಯ ಸಂಜೆ 6.19ರಿಂದ 6.47ರವರೆಗೆ ಮಾತ್ರ ಗ್ರಹಣ ಗೋಚರವಾಗಲಿದೆ. ಕೇವಲ ಎಂಟು ನಿಮಿಷಗಳ ಕಾಲ ಗ್ರಹಣ ಕಾಣಿಸಿಕೊಳ್ಳುತ್ತದೆ. ಏಕಾದಶಿಯಂತೆ ಕೃಷ್ಣಮಠದಲ್ಲಿ ಆ ದಿನ ಆಹಾರ ಸ್ವೀಕಾರ ಇರದು. ಮಧ್ಯಾಹ್ನ ಹಾಗೂ ರಾತ್ರಿ ಊಟ ಇರುವುದಿಲ್ಲ. ಸಂಜೆ 7 ಗಂಟೆಗೆ ಸ್ನಾನ ಪೂರ್ಣಗೊಳಿಸಿ ರಾತ್ರಿ ಪೂಜೆ ನಡೆಯಲಿದೆ. ಗ್ರಹಣ ಕಾಲದಲ್ಲೂ ಮಠ ತೆರೆದಿರುತ್ತದೆ. ಹೋಳಿ ಹುಣ್ಣಿಮೆ ಪ್ರಯುಕ್ತ ಸಂಜೆ ಮೆರವಣಿಗೆ ನಡೆಯಲಿದ್ದು, ಕಡಿಯಾಳಿ ದೇವಸ್ಥಾನಕ್ಕೆ ಮೆರವಣಿಗೆಯಲ್ಲಿ ತೆರಳಲಾಗುತ್ತದೆ. ಮರುದಿನ ಎಂದಿನಂತೆ ಮಧ್ಯಾಹ್ನ ಮಹಾಪೂಜೆ ಮತ್ತು ಅನ್ನಧಾನ ನಡೆಯಲಿದೆ. ಗ್ರಹಣ ಕಾಲದಲ್ಲಿ ಮಧ್ವ ಸರೋವರದಲ್ಲಿ ಅನುಷ್ಟಾನ ಜರುಗುತ್ತದೆ.
ಹಾಸನ ಜಿಲ್ಲೆಯ ಬೇಲೂರು ಪಟ್ಟಣದ ಐತಿಹಾಸಿಕ ಶ್ರೀ ಚನ್ನಕೇಶವಸ್ವಾಮಿ ದೇವಾಲಯದಲ್ಲಿ ಮಾರ್ಚ್ 3ರಂದು ಬೆಳಿಗ್ಗೆ 9 ಗಂಟೆಯೊಳಗೆ ಪೂಜೆ ಸಲ್ಲಿಸಿ, ನಂತರ ಗರ್ಭಗುಡಿ ಬಂದ್ ಮಾಡಲಾಗುತ್ತದೆ. ಗ್ರಹಣ ಮುಗಿದ ಬಳಿಕ ರಾತ್ರಿ 7 ಗಂಟೆಯ ನಂತರ ತೀರ್ಥ–ಪುಣ್ಯಃ, ಆಲಯ ಅರ್ಚನೆ, ಅಭಿಷೇಕ ಹಾಗೂ ಸಂಪ್ರೋಕ್ಷಣೆಯೊಂದಿಗೆ ಮಹಾನೈವೇದ್ಯ ನೆರವೇರಲಿದೆ. ಆ ದಿನ ಗರ್ಭಗುಡಿ ಮಾತ್ರ ಬಂದ್ ಆಗಲಿದ್ದು, ಪ್ರವಾಸಿಗರು ದೇವಾಲಯ ವೀಕ್ಷಿಸಬಹುದು. ಮರುದಿನ ಮಾರ್ಚ್ 4ರಂದು ಭಕ್ತರಿಗೆ ದರ್ಶನಕ್ಕೆ ಅವಕಾಶ ಇರುತ್ತದೆ. ಗ್ರಹಣ ಪೂಜೆ ಸಲ್ಲಿಸುವವರು ಹುರುಳಿ ಮತ್ತು ಅಕ್ಕಿ ದಾನ ಮಾಡಿದರೆ ನಿಮಿತ್ತ ಶಾಂತಿ ದೊರೆಯುತ್ತದೆ ಎಂದು ಪ್ರಧಾನ ಅರ್ಚಕ ಶ್ರೀನಿವಾಸ್ ಭಟ್ ಮನವಿ ಮಾಡಿದ್ದಾರೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟದಲ್ಲಿ ಗ್ರಹಣ ವೇಳೆಯಲ್ಲಿಯೂ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ಮಹದೇಶ್ವರರಿಗೆ ಗ್ರಹಣದ ಯಾವುದೇ ಪರಿಣಾಮ ಇಲ್ಲ ಎಂದು ತಿಳಿಸಲಾಗಿದ್ದು, ಭಕ್ತರು ನಿರ್ಬಂಧವಿಲ್ಲದೆ ದರ್ಶನ ಪಡೆಯಬಹುದು. ಗ್ರಹಣದ ಬಳಿಕ ಧಾರ್ಮಿಕ ವಿಧಿ–ವಿಧಾನಗಳಂತೆ ಶುದ್ಧೀಕರಣ ನಡೆಸಿ ಪುನಃ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ ಎಂದು ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ರಘು ತಿಳಿಸಿದ್ದಾರೆ.
ಮೈಸೂರು ಚಾಮುಂಡೇಶ್ವರಿ ದೇವಾಲಯ ದಲ್ಲಿ ಚಂದ್ರಗ್ರಹಣ ಹಿನ್ನೆಲೆ ಮಧ್ಯಾಹ್ನ 2 ಗಂಟೆಗೆ ದೇವಾಲಯ ಬಂದ್ ಮಾಡಲಾಗುತ್ತದೆ. ರಾತ್ರಿ 8.30ರವರೆಗೆ ಬಾಗಿಲು ಮುಚ್ಚಿರುತ್ತದೆ. ಗ್ರಹಣ ಸ್ಪರ್ಶ, ಮಧ್ಯಕಾಲ ಮತ್ತು ಮೋಕ್ಷ ಕಾಲದಲ್ಲಿ ವಿಶೇಷ ಪೂಜೆ ನಡೆಯಲಿದ್ದು, ಈ ಸಮಯದಲ್ಲಿ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ. ಮಾರ್ಚ್ 4ರಂದು ಬೆಳಿಗ್ಗೆ 7.30ರಿಂದ ಎಂದಿನಂತೆ ದರ್ಶನ ಆರಂಭವಾಗಲಿದೆ.
ಒಟ್ಟಾರೆ, ನಾಳೆಯ ರಕ್ತಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ರಾಜ್ಯದ ದೇವಾಲಯಗಳಲ್ಲಿ ಪರಂಪರಾಗತ ಆಚರಣೆಗಳಿಗೆ ಒತ್ತು ನೀಡಲಾಗಿದ್ದು, ಭಕ್ತರು ದರ್ಶನ ಸಮಯದ ಬದಲಾವಣೆಗಳನ್ನು ಗಮನಿಸಿ ಸಹಕರಿಸುವಂತೆ ದೇವಸ್ಥಾನ ಆಡಳಿತಗಳು ಮನವಿ ಮಾಡಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ