State Executive Meeting: ಮಂಗಳವಾರದಿಂದ ಹುಬ್ಬಳ್ಳಿಯಲ್ಲಿ ಎರಡು ದಿನ ಕಾಲ ಬಿಜೆಪಿ ಕಾರ್ಯಕಾರಿಣಿ!

By Suvarna News  |  First Published Dec 28, 2021, 8:23 PM IST

*11 ವರ್ಷದ ಬಳಿಕ ಹುಬ್ಬಳ್ಳೀಲಿ ಸಭೆ
*ಅರುಣ್‌ಸಿಂಗ್‌, ಸಿಎಂ, ಕಟೀಲ್‌ ಭಾಗಿ
*ಚುನಾವಣೆ, ಪಕ್ಷ ಸಂಘಟನೆ ಬಗ್ಗೆ ಚರ್ಚೆ


ಹುಬ್ಬಳ್ಳಿ (ಡಿ. 28): ಉತ್ತರ ಕರ್ನಾಟಕದ ಬಿಜೆಪಿ ಶಕ್ತಿಕೇಂದ್ರ ಎನಿಸಿರುವ ವಾಣಿಜ್ಯನಗರಿ ಹುಬ್ಬಳ್ಳಿ (Hubballi) ಬರೊಬ್ಬರಿ 11 ವರ್ಷದ ಬಳಿಕ ಪಕ್ಷದ ರಾಜ್ಯ ಕಾರ್ಯಕಾರಿಣಿಗೆ (State Executive Meeting) ಸಜ್ಜಾಗಿ ನಿಂತಿದೆ. ಮಂಗಳವಾರದಿಂದ ಎರಡು ದಿನ ಕಾಲ ನಡೆಯಲಿರುವ ಈ ಕಾರ್ಯಕಾರಿಣಿಗೆ ಹುಬ್ಬಳ್ಳಿ ರಸ್ತೆಗಳು ನವವಧುವಿನಂತೆ ಸಿಂಗಾರಗೊಂಡಿದೆ. ಇಡೀ ಹುಬ್ಬಳ್ಳಿ ನಗರಲ್ಲಿ ಕೇಸರಿ ರಾರಾಜಿಸುತ್ತಿದೆ.ಮುಂದಿನ ವಿಧಾನಸಭೆ ಚುನಾವಣೆಗೆ (Assembly Elections) ಪಕ್ಷವನ್ನು ಸಜ್ಜುಗೊಳಿಸುವುದು, ನಾಯಕತ್ವ ಬದಲಾವಣೆ, ಸಚಿವ ಸಂಪುಟ ಪುನಾರಚನೆ ಅಥವಾ ವಿಸ್ತರಣೆ ಕುರಿತು ಎದ್ದಿರುವ ವದಂತಿಗಳಿಗೆಲ್ಲ ಸ್ಪಷ್ಟಸಂದೇಶ ಈ ಕಾರ್ಯಕಾರಿಣಿ ಮೂಲಕ ಹೊರಬೀಳುವ ನಿರೀಕ್ಷೆ ಇದೆ. ಜತೆಗೆ ಎರಡು ಪ್ರಮುಖ ವಿಚಾರಗಳನ್ನು ಮುಂದಿಟ್ಟುಕೊಂಡು ನಿರ್ಣಯ ಕೈಗೊಳ್ಳುವ ಸಾಧ್ಯತೆ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಮಧ್ಯಾಹ್ನ 12ಗಂಟೆಗೆ ಕಾರ್ಯಕಾರಿಣಿ ಉದ್ಘಾಟನೆ!

Tap to resize

Latest Videos

ಇಲ್ಲಿನ ಗೋಕುಲ ರಸ್ತೆಯಲ್ಲಿರುವ ಡೆನಿಸನ್ಸ್‌ ಹೋಟೆಲ್‌ನಲ್ಲಿ ನಡೆಯಲಿರುವ ಸಭೆಗಾಗಿ ಈಗಾಗಲೇ ಸಕಲ ಸಿದ್ಧತೆಗಳನ್ನು ಪಕ್ಷ ಮಾಡಿಕೊಂಡಿದೆ. ಮಧ್ಯಾಹ್ನ 12ಗಂಟೆಗೆ ಕಾರ್ಯಕಾರಿಣಿ ಉದ್ಘಾಟನೆಗೊಳ್ಳಲಿದೆ. ಬಳಿಕ ಸಂಜೆವರೆಗೂ ವಿವಿಧ ಹಂತಗಳಲ್ಲಿ ಸಭೆಗಳು ನಡೆಯಲಿವೆ. ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ಸಿಂಗ್‌, ಸಹ ಪ್ರಭಾರಿ ಡಿ.ಅರುಣಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೇರಿ ಎಲ್ಲ ಮಂತ್ರಿಗಳು, ಶಾಸಕರು, ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು ಭಾಗವಹಿಸಲಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಗೈರು

ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಪಾಲ್ಗೊಳ್ಳುವ ನಿರೀಕ್ಷೆ ಇತ್ತಾದರೂ ಕೋವಿಡ್‌ ನಿಯಮಾವಳಿಗಳ ಕಾರಣದಿಂದಾಗಿ ಕೊನೇ ಕ್ಷಣದಲ್ಲಿ ಅವರ ಪ್ರವಾಸ ರದ್ದಾಗಿದೆ. ನಡ್ಡಾ ಸ್ವಾಗತಕ್ಕೆ ಬಿಜೆಪಿ ಸ್ಥಳೀಯ ಘಟಕ ಭಾರೀ ತಯಾರಿ ಕೂಡ ನಡೆಸಿತ್ತು. ಬೃಹತ್‌ ಮೆರವಣಿಗೆ ಮೂಲಕ ಸ್ವಾಗತಿಸಲು ಉದ್ದೇಶಿಸಲಾಗಿತ್ತು. ಆದರೆ ಕೋವಿಡ್‌ ನಿಯಮಾವಳಿ ಹಿನ್ನೆಲೆಯಲ್ಲಿ ನಡ್ಡಾ ಭಾಗವಹಿಸುವಿಕೆ ರದ್ದಾಗಿದೆ. ಮುಂದೆ ಅವರಿಗಾಗಿ ಪ್ರತ್ಯೇಕ ಕಾರ್ಯಕ್ರಮ ಆಯೋಜಿಸಲಾಗುವುದು ಎಂದು ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಕೋವಿಡ್‌ ನಿಯಮ ಪಾಲನೆ

ಈ ಮೊದಲು 600ಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವವರಿದ್ದರು. ಆದರೆ ಸರ್ಕಾರದ ಹೊಸ ಕೋವಿಡ್‌ ಹೊಸ ನಿಯಮದಂತೆ ಆಹ್ವಾನಿತರ ಸಂಖ್ಯೆಯನ್ನು 300ಕ್ಕೆ ಇಳಿಸಲಾಗಿದೆ. ಕಾರ್ಯಕಾರಿಣಿಯಲ್ಲಿ ಕೋವಿಡ್‌ ನಿಯಮ ಪಾಲಿಸಲಾಗುತ್ತಿದೆ ಎಂದು ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ತಿಳಿಸಿದ್ದಾರೆ. ಕಾರ್ಯಕಾರಿಣಿ ಹಿನ್ನೆಲೆಯಲ್ಲಿ ನಗರದಲ್ಲಿ ಪ್ರಮುಖ ಬೀದಿಗಳಲ್ಲಿ ಮುಖಂಡರ ಕಟೌಟ್‌, ಬ್ಯಾನರ್‌, ಬಾವುಟಗಳು ರಾರಾಜಿಸುತ್ತಿವೆ.

ಏನೇನು ಚರ್ಚೆ?:

ಕಾರ್ಯಕಾರಿಣಿಯಲ್ಲಿ ಪಕ್ಷದ ಸಂಘಟನೆ, ಹಾನಗಲ್‌ ಮತ್ತು ಬೆಳಗಾವಿ ಸೋಲು, ಗೋಹತ್ಯೆ ನಿಷೇಧ ಮತ್ತು ಮತಾಂತರ ನಿಷೇಧ ಕಾಯ್ದೆಗಳ ಪರಿಣಾಮ, ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆಯ ಲಾಭ ಪಡೆಯುವ ಕುರಿತು ಚರ್ಚೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ಜತೆಗೆ, ರಾಜ್ಯದಲ್ಲಿ ಸದ್ದು ಮಾಡುತ್ತಿರುವ ಮುಖ್ಯಮಂತ್ರಿ, ಪಕ್ಷದ ರಾಜ್ಯಾಧ್ಯಕ್ಷರ ಬದಲಾವಣೆ, ಸಚಿವ ಸಂಪುಟ ವಿಸ್ತರಣೆ, ಪುನಾರಚನೆ ಸೇರಿ ವಿವಿಧ ವಿಚಾರಗಳೂ ಚರ್ಚೆಗೆ ಬರಲಿವೆ ಎಂದು ಹೇಳಲಾಗಿದೆ. ಇದೇ ವೇಳೆ ಮಾಧ್ಯಮಗಳ ಮುಂದೆ ವಿನಾಕಾರಣ ಹೇಳಿಕೆ ನೀಡದಂತೆ ಶಾಸಕರಿಗೆ, ಸಚಿವರಿಗೆ ಖಡಕ್‌ ಎಚ್ಚರಿಕೆ ಕೊಡುವ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ.

ಬಿಜೆಪಿ ಶಿಸ್ತಿನ ಪಕ್ಷ!

ರಾಜ್ಯದಲ್ಲಿ ಎರಡು ದಿನದ ಹಿಂದೆಯಷ್ಟೇ ಕೋವಿಡ್‌ ಹೊಸ ನಿಯಮ ಜಾರಿಯಾಗಿವೆ. ಯಾವುದೇ ಕಾರ್ಯಕ್ರಮಕ್ಕಾದರೂ 300 ಮಂದಿಗೆ ಮಾತ್ರ ಭಾಗವಹಿಸಲು ಅವಕಾಶವಿದೆ. ಬಿಜೆಪಿ ಶಿಸ್ತಿನ ಪಕ್ಷ. ಹೀಗಾಗಿ ಹೊಸ ನಿಯಮಾವಳಿಯಂತೆ ಕಾರ್ಯಕ್ರಮದಲ್ಲಿ ಕೊಂಚ ಬದಲಾವಣೆ ಮಾಡಿಕೊಂಡಿದ್ದೇವೆ. ಈವರೆಗೆ ಪಕ್ಷ ನಡೆದು ಬಂದ ದಾರಿ ಮತ್ತು ಮುಂದೆ ನಡೆಯಬೇಕಿರುವ ದಾರಿ ಬಗ್ಗೆ ಚರ್ಚೆ, ಪಕ್ಷದ ಬಲವರ್ಧನೆಗೆ ನಿರ್ಣಯ ಕೈಗೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದ್ದಾರೆ

ಇದನ್ನೂ ಓದಿ:

1) Karnataka BJP Politics: ಸಿಎಂ ಬೊಮ್ಮಾಯಿ ಬದಲಾವಣೆ: ರಾಜ್ಯ ಬಿಜೆಪಿಗರ ಪ್ರತಿಕ್ರಿಯೆ

2) ರಾಜಕೀಯ ನಷ್ಟವಾದರೂ ಚಿಂತೆಯಿಲ್ಲ, ನಮ್ಮಿಂದ ಜನೋಪಯೋಗಿ ನಿರ್ಧಾರ: ಶಾ

3) Karnataka BJP: ಇದೀಗ ಬಂದ ಸುದ್ದಿ, ಬೊಮ್ಮಾಯಿ ನಾಯಕತ್ವ ಬದಲಾವಣೆ ಬಗ್ಗೆ ಉಸ್ತುವಾರಿ ಸ್ಪಷ್ಟನೆ

click me!