
ವಿಧಾನಸೌಧ (ಫೆ.5): ಅಬಕಾರಿ ಇಲಾಖೆ ಭ್ರಷ್ಟಾಚಾರ ತನಿಖೆ ವಹಿಸುವುದು ಮತ್ತು ಅಬಕಾರಿ ಸಚಿವ ರಾಜೀನಾಮೆಗೆ ಅಗ್ರಹಿಸಿ ರಾಜ್ಯಾದ್ಯಂತ ಬಿಜೆಪಿ-ಜೆಡಿಎಸ್ ಜಂಟಿಯಾಗಿ ಹೋರಾಟ ಮುಂದುವರೆಸಲಿದ್ದೇವೆ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮತ್ತು ಜೆಡಿಎಸ್ ಒಟ್ಟಾಗಿ ಅಧಿವೇಶದನ ಆರಂಭದಿಂದಲೂ ಈ ರಾಜ್ಯ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದ್ದೇವೆ. ಈ ವಿಚಾರದಲ್ಲಿ ವಿರೋಧ ಪಕ್ಷಗಳು ಮೇಲುಗೈ ಸಾಧಿಸಿವೆ. ಆರು ಸಾವಿರ ಕೋಟಿ ರು. ಲೂಟಿಯ ಅಬಕಾರಿ ಹಗರಣ ಬಯಲಿಗೆ ತಂದಿದ್ದೇವೆ. ತನಿಖೆ ಹಾಗೂ ಅಬಕಾರಿ ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದೇವೆ. ಅಹೋರಾತ್ರಿ ಧರಣಿ ಸಹ ಮಾಡಿದ್ದೇವೆ. ಈ ಹೋರಾಟವನ್ನು ಇಲ್ಲಿಗೆ ಬಿಡುವುದಿಲ್ಲ. ರಾಜ್ಯಾದ್ಯಂತ ಈ ಲೂಟಿ ಸರ್ಕಾರದ ವಿರುದ್ಧ ಹೋರಾಟ ಮಾಡಲಿದ್ದೇವೆ. ಈ ಕಳ್ಳ ಕಾಂಗ್ರೆಸ್ ಸರ್ಕಾರವನ್ನು ಮನೆಗೆ ಕಳುಹಿಸುವವರೆಗೂ ಹೋರಾಟ ಮುಂದುವರೆಸಲಿದ್ದೇವೆ ಎಂದು ತಿಳಿಸಿದರು.
ವಿಬಿಜಿ ರಾಮ್ ಜಿ ಕಾಯ್ದೆ ವಿರುದ್ಧ ರಾಜ್ಯ ಸರ್ಕಾರ ತಂದಿರುವ ನಿರ್ಣಯವೇ ಅಕ್ರಮ. ಸದನದ ನಿಯಮದ ಪ್ರಕಾರ 5 ತಾಸಿಗಿಂತ ಹೆಚ್ಚು ಚರ್ಚೆಗೆ ಅವಕಾಶವಿಲ್ಲ. ಆರೇಳು ಗಂಟೆ ಮೀರಿ ಚರ್ಚೆಗೆ ಅವಕಾಶ ನೀಡಲಾಗಿದೆ. ಈ ನಿರ್ಣಯ ಮಂಡನೆ ಮುನ್ನ ಸರ್ಕಾರ ಏಳು ದಿನ ಮುಂಚಿತವಾಗಿ ನೋಟಿಸ್ ಕೊಡಬೇಕಿತ್ತು. ಎಲ್ಲ ನಿಯಮ ಉಲ್ಲಂಘಿಸಿ ನಿರ್ಣಯ ತಂದಿದೆ. ಹೀಗಾಗಿ ನಿರ್ಣಯಕ್ಕೆ ನಯಾ ಪೈಸೆ ಬೆಲೆಯಿಲ್ಲ. ಇದು ಕಸದ ಬುಟ್ಟಿಗೆ ಸೇರುವ ನಿರ್ಣಯ ಎಂದರು.
ಈ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮರ್ಯಾದೆ ಇಲ್ಲ. ಆರು ಸಾವಿರ ಕೋಟಿ ರು. ಲೂಟಿ ಮಾಡಿ ಪಂಚ ರಾಜ್ಯಗಳ ಚುನಾವಣೆಗೆ ಕಳುಹಿಸುತ್ತಿದ್ದಾರೆ. ಇದರಲ್ಲಿ ಮುಖ್ಯಮಂತ್ರಿಗಳ ನೇರ ಪಾತ್ರವಿದೆ. ಈ ಕಾರಣಕ್ಕೆ ಅವರು ಅಬಕಾರಿ ಸಚಿವರ ರಾಜೀನಾಮೆ ಪಡೆಯುತ್ತಿಲ್ಲ ಎಂದು ಆರ್.ಅಶೋಕ್ ಕಿಡಿಕಾರಿದರು.
ಇದನ್ನು ವಿರೋಧಿಸಿ ನಾವು ಸಭಾತ್ಯಾಗ ಮಾಡಿದ್ದೇವೆ. ಜನಪರ, ಪಾರಾದರ್ಶಕ ವಿಬಿ ಜಿ ರಾಮ್ ಜಿ ಕಾಯ್ದೆಯನ್ನು ನಾವು ಸ್ವಾಗತಿಸುವುದಾಗಿ ಹೇಳಿದರು.
ವಿಧಾನಸಭೆ ಸ್ಪೀಕರ್ ಅವರ ನಡೆ ಸರಿ ಇರಲಿಲ್ಲ. ಆಡಳಿತ ಪಕ್ಷದ ಶಾಸಕ ಶಿವಲಿಂಗೇಗೌಡ ಕೆಟ್ಟ ಪದ ಬಳಕೆ ಮಾಡಿದರೂ ಸ್ಪೀಕರ್ ನಗುತ್ತಾ ಕುಳಿತಿದ್ದರು. ಇದು ಸರಿನಾ? ಪ್ರಜಾಪ್ರಭುತ್ವಕ್ಕೆ ಮಾರಕ. ಇಲ್ಲಿ ವ್ಯಕ್ತಿ ಮುಖ್ಯವಲ್ಲ. ಪೀಠ ಮುಖ್ಯ. ಸ್ಪೀಕರ್ ಅವರು ಆ ಪೀಠದ ಘಟನೆ ಹಾಳು ಮಾಡಿದ್ದಾರೆ. ವಿರೋಧ ಪಕ್ಷಗಳನ್ನು ದಮನ ಮಾಡಲು ಸ್ಪೀಕರ್ ಆಡಳಿತ ಪಕ್ಷದ ಪರ ವಾಲಿದ್ದು ನೋವಿನ ಸಂಗತಿ. ಇದನ್ನು ಸಹಿಸುವುದಿಲ್ಲ ಎಂದು ಸ್ಪೀಕರ್‌ಗೂ ಹೇಳಿದ್ದೇವೆ ಎಂದರು.
ಸದನ ಆರಂಭದಿಂದಲೇ ಈ ಸರ್ಕಾರ ಎಡವಿದೆ. ರಾಜ್ಯಪಾಲರ ಬಗ್ಗೆ ಅವಹೇಳನ ಮಾಡಿ, ನಿಂದಿಸಿದೆ. ಸದನದ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ಸಭಾಧ್ಯಕ್ಷರ ಪೀಠ ದುರ್ಬಳಕೆಯಾಗಿದೆ. ಅಬಕಾರಿ ಇಲಾಖೆ ಭ್ರಷ್ಟಾಚಾರದ ಬಗ್ಗೆ ಪುರಾವೆ ಕೊಟ್ಟರೂ ಲಘುವಾಗಿ ತೆಗೆದುಕೊಂಡಿದೆ. ಇದನ್ನು ಇಲ್ಲಿಗೆ ಬಿಡುವುದಿಲ್ಲ. ಜೆಡಿಎಸ್-ಬಿಜೆಪಿ ವರಿಷ್ಠರೊಂದಿಗೆ ಚರ್ಚಿಸಿ ರಾಜ್ಯಾದ್ಯಂತ ಹೋರಾಟ ಮುಂದುವರೆಸುತ್ತೇವೆ.
-ಸಿ.ಬಿ.ಸುರೇಶ್ ಬಾಬು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ