
ಬೆಂಗಳೂರು : ಮೈಕ್ರೋ ಫೈನಾನ್ಸ್ ಸಂಸ್ಥೆಗಳ ಕಿರುಕುಳದಿಂದ ಆತ್ಮ8ತ್ಯೆ ಮಾಡಿಕೊಂಡ ವ್ಯಕ್ತಿಗಳ ಅವಲಂಬಿತರಿಗೆ ಪರಿಹಾರ ನೀಡುವ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸುವ ಸಾಧ್ಯತೆಯಿದೆ.
2023ರಲ್ಲಿ 8 ಮಂದಿ, 2024ರಲ್ಲಿ 6 ಮಂದಿ, 2025ರಲ್ಲಿ 24 ಮಂದಿ ಸಾವಿಗೀಡಾಗಿದ್ದರು. ಈ ರೀತಿಯ ಕಿರುಕುಳ ತಪ್ಪಿಸಲು ಕರ್ನಾಟಕ ಕಿರುಸಾಲ ಬಲವಂತದ ಕ್ರಮಗಳ ಪ್ರತಿಬಂಧಕ ಕಾಯ್ದೆ -2025 ಜಾರಿಗೆ ತರಲಾಗಿದೆ. ಆದರೂ ಮೈಕ್ರೋ ಫೈನಾನ್ಸ್‌ಗಳ ಕಿರುಕುಳದಿಂದ ಯಾರಾದರೂ ಸಾವಿಗೀಡಾದರೆ ಅವರ ಅವಲಂಬಿತರಿಗೆ 5 ಲಕ್ಷ ರು. ಪರಿಹಾರ ನೀಡಲು ನಿರ್ಧರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಲ್ಲಿ 2013-14ರಿಂದ 2018-19ನೇ ಸಾಲಿನವರೆಗೆ ವಿವಿಧ ಯೋಜನೆಯಡಿ ನೀಡಲಾಗಿರುವ ಸಾಲವನ್ನು ಒಟಿಎಸ್ ಯೋಜನೆ ಮೂಲಕ ವಸೂಲಾತಿಗೆ ತೀರ್ಮಾನಿಸಲಿದ್ದು, ಬಡ್ಡಿ ರಿಯಾಯಿತಿ ನೀಡಿ ಸಾಲ ವಸೂಲಿ ಮಾಡುವ ಸಾಧ್ಯತೆಯಿದೆ.
ಭೂ ವರಾಹ ಯೋಜನೆಯಡಿ 328 ದೇವಾಲಯಗಳ ಆಸ್ತಿಗಳ ಒತ್ತುವರಿ ತೆರವುಗೊಳಿಸಿ ಸಂರಕ್ಷಿಸಿ ಸ್ಥಿರಾಸ್ತಿಗಳನ್ನು ದಾಖಲೀಕರಣಗೊಳಿಸಲು ಅಂಗೀಕಾರ ನೀಡಲಾಗುತ್ತದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳಲ್ಲಿ ಸಾರಥಿ ಯೋಜನೆಯಡಿ ಆಟೋ ರಿಕ್ಷಾ, ಕಾರು ಖರೀದಿಗೆ 19.18 ಕೋಟಿ ರು. ನೀಡಲು ಆಡಳಿತಾತ್ಮಕ ಅನುಮೋದನೆ, ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್‌ರಾಜ್ ತಿದ್ದುಪಡಿ ವಿಧೇಯಕ-2026 ಹಾಗೂ ಕರ್ನಾಟಕ ಪೊಲೀಸ್ ತಿದ್ದುಪಡಿ ವಿಧೇಯಕ-2026 ಬಗ್ಗೆ ಚರ್ಚಿಸಿ ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.
ಚುನಾವಣಾ ಆಯೋಗ ನಡೆಸಲುದ್ದೇಶಿಸಿರುವ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ಮಾಹಿತಿ ಆಯೋಗ ಗುರುವಾರ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಕ್ಕೆ ಸಮಗ್ರ ಮಾಹಿತಿ ಸಲ್ಲಿಸಲಿದೆ. ಈ ವೇಳೆ ಯಾವ ರೀತಿಯ ಚರ್ಚೆ ನಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.
ಈ ಎಸ್‌ಐಆರ್ ಪರಿಷ್ಕರಣೆ ಮುಂದಿನ ಎಲ್ಲಾ ಚುನಾವಣೆಗಳಿಗೂ ಅನ್ವಯವಾಗುತ್ತದೆ. ಹೀಗಾಗಿ ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಹೇಗಿರಲಿದೆ? ಅದರ ಪರಿಣಾಮಗಳೇನು ಎಂಬುದು ತೀವ್ರ ಕುತೂಹಲ ಕೆರಳಿಸಿವೆ.
ಮೂಲಗಳ ಪ್ರಕಾರ ಸಚಿವ ಸಂಪುಟ ಸಭೆಯಲ್ಲಿ ಚುನಾವಣಾ ಆಯೋಗವು ಮಾಹಿತಿ ಮಾತ್ರ ಸಲ್ಲಿಸಲಿದೆ. ಉಳಿದಂತೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ರಾಜ್ಯ ಸರ್ಕಾರಕ್ಕೆ ಅಧಿಕಾರ ಇರುವುದಿಲ್ಲ ಎಂದು ತಿಳಿದುಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ