ವಕ್ಫ್‌ ಮಂಡಳಿ ರದ್ದಾಗಬೇಕು, ಪಹಣಿಯಲ್ಲಿ ಹೆಸರು ತೆಗೆಸಿಹಾಕಬೇಕು: ವಿಪಕ್ಷ ನಾಯಕ ಆರ್. ಅಶೋಕ್ ಆಗ್ರಹ

By Sathish Kumar KH  |  First Published Nov 22, 2024, 4:58 PM IST

ರಾಜ್ಯದಲ್ಲಿ ವಕ್ಫ್ ಮಂಡಳಿಯಿಂದ ರೈತರು ಮತ್ತು ಹಿಂದೂ ಧಾರ್ಮಿಕ ಸ್ಥಳಗಳ ಭೂಮಿಯನ್ನು ವಕ್ಫ್ ಆಸ್ತಿ ಎಂದು ದಾಖಲಿಸಿರುವುದನ್ನು ವಿರೋಧಿಸಿ ಬಿಜೆಪಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಿದೆ. ವಕ್ಫ್ ಮಂಡಳಿಯನ್ನು ರದ್ದುಗೊಳಿಸುವಂತೆ ಮತ್ತು ರೈತರ ಪಹಣಿಯಲ್ಲಿರುವ ವಕ್ಫ್ ನಮೂದುಗಳನ್ನು ತೆಗೆದುಹಾಕುವಂತೆ ಆಗ್ರಹಿಸಿದೆ.


ಬೆಂಗಳೂರು (ನ.22): ರಾಜ್ಯದಲ್ಲಿ ವಕ್ಫ್ ಮಂಡಳಿಯಿಂದ ರೈತರು, ಹಿಂದೂ ಮಠ-ಮಂದಿರ ಭೂಮಿಯನ್ನು ವಕ್ಫ್ ಮಂಡಳಿಗೆ ಸೇರಿದ್ದು ಎಂದು ಆಸ್ತಿ ದಾಖಲೆಯಲ್ಲಿ ಹೆಸರು ಸೇರಿದ್ದನ್ನು ಗಂಭೀರವಾಗಿ ಪರಿಗಣಿಸಿ ಬಿಜೆಪಿಯಿಂದ ರಾಜ್ಯಾದ್ಯಂತ ತೀವ್ರ ಪ್ರತಿಭಟನೆ ನಡೆಸಲಾಯಿತು. ಬೆಂಗಳೂರಿನಲ್ಲಿ ನಡೆದ ಬಿಜೆಪಿ ನಾಯಕರ ಪ್ರತಿಭಟನೆಯಲ್ಲಿ ವಕ್ಫ್ ಮಂಡಳಿಯನ್ನು ರದ್ದುಗೊಳಿಸಬೇಕು. ಜೊತೆಗೆ, ಈಗ ರೈತರ ಪಹಣಿಯಲ್ಲಿ ಸೇರ್ಪಡೆ ಮಾಡಲಾಗಿರುವ ವಕ್ಫ್ ಹೆಸರನ್ನು ತೆಗೆದು ಹಾಕಬೇಕು ಎಂದು ಪಟ್ಟು ಆಗ್ರಹಿಸಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದಲ್ಲಿ ಶುಕ್ರವಾರ ಬಿಜೆಪಿ ನಾಯಕರಿಂದ ನಡೆಸಲಾದ ಪ್ರತಿಭಟನೆಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್ ಅಶೋಕ್ ಅವರು, ವಿಶ್ವವಿಖ್ಯಾತ ಎಂಜಿನಿಯರ್‌ ಸರ್‌ ಎಂ.ವಿಶ್ವೇಶ್ವರಯ್ಯನವರು ಓದಿದ ಶಾಲೆಯ ಆವರಣವನ್ನು ವಕ್ಫ್‌ ಮಂಡಳಿ ಕಬಳಿಸಿದೆ. ಕೇಂದ್ರದಲ್ಲಿದ್ದ ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ ವಕ್ಫ್‌ ಮಂಡಳಿಗೆ ನ್ಯಾಯಾಂಗದ ಅಧಿಕಾರ ನೀಡಿದೆ. ಇದನ್ನು ಬಳಸಿಕೊಂಡು ವಕ್ಫ್‌ ಮಂಡಳಿ ರೈತರ ಜಮೀನು ನುಂಗುತ್ತಿದೆ. ಕಾಂಗ್ರೆಸ್‌ ಅಧಿಕಾರ ಪಡೆಯುವ ರಾಜ್ಯಗಳಲ್ಲಿ ಮಿನಿ ಪಾಕಿಸ್ತಾನ ನಿರ್ಮಿಸುತ್ತಿದೆ. ವಿಧಾನಸೌಧ, ಲಾಲ್‌ಬಾಗ್‌ ಕೂಡ ನಮ್ಮದು ಎಂದು ಇವರು ಹೇಳುತ್ತಾರೆ. ಹೀಗಾಗಿ, ರಾಜ್ಯದಲ್ಲಿ ವಕ್ಫ್‌ ಮಂಡಳಿ ರದ್ದಾಗಬೇಕು, ರೈತರ ಜಮೀನಿನ ಪಹಣಿಯಲ್ಲಿ ಬರೆದ ವಕ್ಫ್‌ ಹೆಸರು ತೆಗೆಸಿಹಾಕಬೇಕು ಎಂದು ಆಗ್ರಹಿಸಿದರು.

Tap to resize

Latest Videos

undefined

ಬೆಂಗಳೂರಿನಲ್ಲಿ ಬೌರಿಂಗ್‌ ಆಸ್ಪತ್ರೆ ಭೂಮಿ 2 ಎಕರೆ ಇದ್ದು, ಅದನ್ನು ಕೂಡ ವಕ್ಫ್‌ ಮಂಡಳಿ ಕಬಳಿಕೆ ಮಾಡಿತ್ತು. ನಾನು ಸಚಿವನಾಗಿದ್ದಾಗ ಅದರ ದಾಖಲೆಗಳನ್ನು ತರಿಸಿ ನೋಡಿದರೆ ಯಾವುದೋ ಹಳೆ ದಾಖಲೆಗಳನ್ನು ತಂದರು. ಬಳಿಕ ಹೋರಾಟ ಮಾಡಿ ಆಸ್ತಿ ಉಳಿಸಿದೆ. ವಕ್ಫ್‌ ಮಂಡಳಿ ತಿಮಿಂಗಿಲದಂತೆ ಬಡವರ ಜಮೀನು ನುಂಗುತ್ತಿದೆ. ರೈತರು ಕಂಗಾಲಾಗಿ ತಮ್ಮ ಆಸ್ತಿಗಳ ದಾಖಲೆ ಪರಿಶೀಲನೆ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಮುಖ್ಯಮಂತ್ರಿಯಾದ ಬಳಿಕ ಮುಸ್ಲಿಮರಿಗೆ ಎರಡು ಕೊಂಬು ಬಂದಿದೆ. ಸಿದ್ದರಾಮಯ್ಯ ಎಂದರೆ ಅಹಿಂದ ನಾಯಕ ಅಲ್ಲ. ಅವರೀಗ ಮುಸ್ಲಿಮರ ಚಾಂಪಿಯನ್‌ ಆಗಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು.

ಇದನ್ನೂ ಓದಿ: ಅದಾನಿ ಸರ್ಕಾರದ ಆಸ್ತಿ ಪಡೆದು, ಅವುಗಳನ್ನೇ ಅಡವಿಟ್ಟು ಬ್ಯಾಂಕ್ ಸಾಲ ಪಡೆಯುತ್ತಾರೆ; ಮಲ್ಲಿಕಾರ್ಜುನ ಖರ್ಗೆ

ರಾಜ್ಯದಲ್ಲಿ ಹಂತ ಹಂತವಾಗಿ ಲವ್‌ ಜಿಹಾದ್‌, ಲ್ಯಾಂಡ್‌ ಜಿಹಾದ್‌ ಬಳಿಕ ರೇಷನ್‌ ಕಾರ್ಡ್‌ ಜಿಹಾದ್‌ ಆರಂಭಿಸಿದ್ದಾರೆ. 45 ವರ್ಷದಿಂದ ರೇಷನ್‌ ಕಾರ್ಡ್‌ ಹೊಂದಿದ್ದ ವೃದ್ಧೆಯೊಬ್ಬರು ಈಗ ಕಾರ್ಡ್‌ ಕಳೆದುಕೊಂಡಿದ್ದಾರೆ. ಆದರೆ ಸರ್ಕಾರ ಮರಳಿ ಅರ್ಜಿ ಹಾಕಿ ಎನ್ನುತ್ತಿದೆ. ಸರ್ಕಾರ ತಪ್ಪು ಮಾಡಿದರೆ, ಜನರು ಲಂಚ ಕೊಟ್ಟು ರೇಷನ್‌ ಕಾರ್ಡ್‌ ಮಾಡಿಸಿಕೊಳ್ಳಬೇಕಿದೆ. ಜಯನಗರ ಸರ್ಕಾರಿ ಆಸ್ಪತ್ರೆಯಲ್ಲಿ ಔಷಧಿ ಇಲ್ಲ. ಅದಕ್ಕಾಗಿ ಪ್ರತಿಯೊಂದಕ್ಕೂ ಶುಲ್ಕ ಏರಿಕೆ ಮಾಡಲಾಗಿದೆ. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಸಿಎಂ ಸಿದ್ದರಾಮಯ್ಯ ತೆರಿಗೆ ವಿಧಿಸದ ವಸ್ತುಗಳೇ ಇಲ್ಲ. ಹರಿಯುವ ನದಿಗೂ ತೆರಿಗೆ ವಿಧಿಸಿದ್ದಾರೆ. ಇನ್ನು ಗಾಳಿಗೂ ತೆರಿಗೆ ವಿಧಿಸಬಹುದು. ಸರ್ಕಾರ ಪಾಪರ್‌ ಆಗಿದೆ ಎಂಬುದಕ್ಕೆ ಇದಕ್ಕಿಂತ ದೊಡ್ಡ ಸಾಕ್ಷಿ ಬೇಡ. ಇನ್ನು ಸಿಎಂ ಸಿದ್ದರಾಮಯ್ಯ ಬಡವರ ಪರ ಎಂದು ಹೇಳಿಕೊಳ್ಳುತ್ತಾರೆ. ಹಾಲು ಹಾಗೂ ಆಲ್ಕೋಹಾಲ್‌ ದರ ಏರಿಕೆ, ಮುದ್ರಾಂಕ ಶುಲ್ಕ ಏರಿಕೆ, ಅನ್ನ ಪಡೆಯುವವರಿಗೆ ಕನ್ನ, ಔಷಧಿಗೆ ಕನ್ನ ಮೊದಲಾದ ಕ್ರಮಗಳ ಮೂಲಕ ಸಿಎಂ ಸಿದ್ದರಾಮಯ್ಯನವರು ಕನ್ನರಾಮಯ್ಯ ಎಂದು ಹೆಸರಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಲೇವಡಿ ಮಾಡಿದರು.

ಇದನ್ನೂ ಓದಿ: 'ಮಕ್ಕಳ ಕತ್ತು ಹಿಸುಕುವಾಗಲೂ ಮನಸ್ಸು ಕರಗಲಿಲ್ಲವಾ..' ಗಂಡನ ಮೇಲಿನ ಅನುಮಾನಕ್ಕೆ ಮಕ್ಕಳನ್ನು ಕೊಂದ ಪಾಪಿ ತಾಯಿ!

ತಿದ್ದುಪಡಿ ಮಸೂದೆ ಬರಲಿದೆ: ಮಂತ್ರಾಲಯ, ವಿಧಾನಸೌಧ, ವಿಶ್ವೇಶ್ವರಯ್ಯನವರ ಶಾಲೆ, ಬಡವರ ಭೂಮಿ ಉಳಿಯಲು ಸೂಪರ್‌ಮ್ಯಾನ್‌ ಆಗಿ ಪ್ರಧಾನಿ ನರೇಂದ್ರ ಮೋದಿ ಬರಲಿದ್ದಾರೆ. ಅವರು ತರಲಿರುವ ತಿದ್ದುಪಡಿ ಮಸೂದೆಯಿಂದ ಎಲ್ಲವೂ ನಿಯಂತ್ರಣಕ್ಕೆ ಬರಲಿದೆ. ಅಲ್ಲಿಯವರೆಗೆ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿ ಇರುತ್ತಾರೋ ಇಲ್ಲವೋ ಗೊತ್ತಿಲ್ಲ ಎಂದು ಹೇಳಿದರು.

click me!