ರಾಜ್ಯದ ಜನರನ್ನು ಲೂಟಿ ಮಾಡಿದ ಸರ್ಕಾರ, ಈಗ ಕಸಕ್ಕೂ ತೆರಿಗೆ ಹಾಕುತ್ತಿದೆ; ಆರ್. ಅಶೋಕ

Published : May 26, 2025, 09:36 PM ISTUpdated : May 26, 2025, 10:02 PM IST
R Ashoka

ಸಾರಾಂಶ

ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಜನರ ಮೇಲೆ ಶೇ.3000 ರಷ್ಟು ತೆರಿಗೆ ಹೆಚ್ಚಿಸಿದೆ ಎಂದು ಆರ್. ಅಶೋಕ್ ಆರೋಪಿಸಿದ್ದಾರೆ. ಕಸದ ಸೆಸ್ ಹೆಸರಿನಲ್ಲಿ ಬಿಬಿಎಂಪಿ ಮೂಲಕ ಜನರನ್ನು ಲೂಟಿ ಮಾಡಲಾಗುತ್ತಿದೆ, ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಹಣ ನೀಡುತ್ತಿಲ್ಲ ಎಂದು ದೂರಿದ್ದಾರೆ.

ಬೆಂಗಳೂರು (ಮೇ 26): ಕಳೆದ ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಜನರ ಮೇಲೆ ಶೇ.3000 ಪರ್ಸೆಂಟ್ ತೆರಿಗೆಗಳನ್ನು ಹೆಚ್ಚಳ ಮಾಡಿದೆ. ಬೆಂಗಳೂರಿನಲ್ಲಿ ಕಸದ ಸೆಸ್‌ ಹೆಸರಿನಲ್ಲಿ ಕಾಂಗ್ರೆಸ್‌ ಸರ್ಕಾರ ಜನರನ್ನು ಲೂಟಿ ಮಾಡುತ್ತಿದೆ. ಇಡೀ ಬೆಂಗಳೂರನ್ನು ಸರ್ಕಾರ ದುಬಾರಿ ಮಾಡಿರುವ ಸರ್ಕಾರ ಜನತೆಯ ಮೇಲೆ ಯವ್ಯಾವ ತೆರಿಗೆ ವಿಧಿಸಿ ಲೂಟಿ ಮಾಡುತ್ತಿದೆ ಎಂಬುದನ್ನು ಪ್ರತಿಪಕ್ಷ ನಾಯಕ ಆರ್‌.ಅಶೋಕ ಇಂಚಿಂಚು ಮಾಹಿತಿ ಬಿಚ್ಚಿಟ್ಟಿದ್ದಾರೆ.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್. ಅಶೋಕ್ ಅವರು, ರಾಜ್ಯ ಸರ್ಕಾರದಲ್ಲಿ ಹಣ ಉಳಿದಿಲ್ಲ. ಹಿಂದೆ ಇದ್ದ ತುಘಲಕ್‌ ಕೂಡ ಹಾಕದಷ್ಟು ತೆರಿಗೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಜನರ ಮೇಲೆ ಹಾಕಿದ್ದಾರೆ. ಕಸ ವಿಲೇವಾರಿ ಮಾಡಲು ಕೂಡ ತೆರಿಗೆ ಹಾಕಲಾಗಿದೆ. 30*40 ಅಡಿ ವಿಸ್ತೀರ್ಣದ ಮನೆಗೆ 120 ರೂ. ಇದ್ದ ಕಸದ ತೆರಿಗೆಯನ್ನು 720 ರೂ. ಮಾಡಿದ್ದಾರೆ. ಅಂದರೆ 500% ರಷ್ಟು ಹೆಚ್ಚಾಗಿದೆ. ಅಪಾರ್ಟ್‌ಮೆಂಟ್‌ ನಿವಾಸಿಗಳು ಕಸವನ್ನು ಅವರೇ ವಿಲೇವಾರಿ ಮಾಡಿಕೊಳ್ಳುತ್ತಿದ್ದು, ಅವರಿಗೆ ಕಸದ ಸೆಸ್‌ 1,800 ರೂ. ನಿಂದ 18,000 ರೂ. ಗೆ ಹೆಚ್ಚಿಸಲಾಗಿದೆ ಎಂದು ದೂರಿದರು.

ಮಾಲ್‌ಗಳಲ್ಲಿ 3,600 ರೂ. ಇದ್ದ ಕಸದ ಸೆಸ್‌ 52,500 ರೂ. ಆಗಿದ್ದು, 14,483% ಹೆಚ್ಚಿದೆ. ಆಸ್ಪತ್ರೆಗಳಲ್ಲಿ ಕಸದ ಸೆಸ್‌ 9,600 ರೂ. ನಿಂದ 2,75,000 ರೂ. ಆಗಿದೆ. 50*80 ವಿಸ್ತೀರ್ಣದ ಖಾಲಿ ನಿವೇಶನಗಳಿಗೆ 600 ರೂ. ನಿಂದ 5,400 ರೂ. ಆಗಿದೆ. ಕಸವೇ ಉತ್ಪತ್ತಿ ಆಗದ ಜಾಗದಲ್ಲಿ ಬಿಬಿಎಂಪಿಯಿಂದ ದುಡ್ಡು ಉತ್ಪತ್ತಿ ಮಾಡಲಾಗುತ್ತಿದೆ ಎಂದರು.

ಜಮೀನುಗಳಿಗೆ ಬಳಕೆದಾರರ ಶುಲ್ಕ 3,600 ರೂ. ನಿಂದ 67,000 ರೂ. ಆಗಿ 1,761% ಹೆಚ್ಚಾಗಿದೆ. 110 ಹಳ್ಳಿಗಳಲ್ಲಿ ಲಕ್ಷಾಂತರ ಜಮೀನುಗಳಿವೆ. ಅವುಗಳ ಮಾಲೀಕರು ಲಕ್ಷಾಂತರ ರೂಪಾಯಿ ಕಸದ ಸೆಸ್‌ ಪಾವತಿಸಬೇಕಿದೆ. ಬಳಕೆದಾರರ ಶುಲ್ಕವನ್ನು ನಾವು ಪಾವತಿಸುವುದಿಲ್ಲ ಎಂದು ಬೆಂಗಳೂರಿನ 2,800 ಜನರು ಆನ್‌ಲೈನ್‌ ಆಂದೋಲನ ಆರಂಭಿಸಿದ್ದಾರೆ. ಕಾಂಗ್ರೆಸ್‌ ಸರ್ಕಾರ ಬಿಬಿಎಂಪಿಯ ಮೂಲಕ ಜನರನ್ನು ಲೂಟಿ ಮಾಡುತ್ತಿದೆ . ಬೆಂಗಳೂರಿನಲ್ಲಿ ಕಳೆದೆರಡು ವರ್ಷಗಳಲ್ಲಿ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಜನರು ಅತಿ ಹೆಚ್ಚು ತೆರಿಗೆ ಪಾವತಿಸುತ್ತಿದ್ದರೂ, ಅಭಿವೃದ್ಧಿಗೆ ಹಣ ನೀಡದೆ ತೆರಿಗೆ ವಸೂಲಿ ಮಾಡಲಾಗುತ್ತಿದೆ ಎಂದರು.

ಸಿಎಂಗೆ ಊರು ಸುತ್ತಾಡಿ ಸಮೋಸ ತಿನ್ನೋಕೆ ಟೈಮಿರುತ್ತೆ, ನೀತಿ ಆಯೋಗದ ಸಭೆಗೆ ಹೋಗಲು ಟೈಮಿಲ್ಲ:

ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಆರೋಪ ಮಾಡುವ ಸಿಎಂ ಸಿದ್ದರಾಮಯ್ಯನವರು ನೀತಿ ಆಯೋಗದ ಸಭೆಗೆ ಹೋಗಿಲ್ಲ. ರಾಜಸ್ತಾನದ ಕಾಂಗ್ರೆಸ್‌ ಸಭೆಗೆ, ರಾಹುಲ್‌ ಗಾಂಧಿಯ ಭೇಟಿಗೆ ಅವರಿಗೆ ಸಮಯ ಇದೆ. ಆದರೆ ನೀತಿ ಆಯೋಗದ ಸಭೆಗೆ ಹೋಗಲು ಇವರಿಗೆ ಸಮಯವಿಲ್ಲ. ಅಲ್ಲಿ ಹೋಗಿ ಅನುದಾನ ಕೇಳದೆ, ಹಾದಿಬೀದಿಯಲ್ಲಿ ಆರೋಪ ಮಾಡುತ್ತಿದ್ದಾರೆ. ಕ್ರಿಕೆಟ್‌ ಸ್ಟೇಡಿಯಂಗೆ ಹೋಗಿ ಸಮೋಸ, ಕಡ್ಳೆಪುರಿ ತಿನ್ನಲು ಸಮಯ ಇರುವ ಇವರಿಗೆ, ಕೇಂದ್ರ ಸರ್ಕಾರದ ಬಳಿ ಹೋಗಲು ಸಮಯ ಇಲ್ಲ. ಪ್ರತಿ ಮುಖ್ಯಮಂತ್ರಿಗೆ ಹದಿನೈದಿಪ್ಪತ್ತು ನಿಮಿಷ ಸಮಯ ನೀಡಲಾಗುತ್ತದೆ. ಇದನ್ನು ಬಳಸಿಕೊಂಡು ರಾಜ್ಯದ ಜನರ ಪರವಾಗಿ ಮಾತಾಡಬಹುದಿತ್ತು. ಇನ್ನು ಮುಂದೆ ಅನುದಾನ ನೀಡಿಲ್ಲ ಎಂದು ದೂರಿದರೆ ಇವರನ್ನು ನಂಬಲೇಬಾರದು. ಇವರಿಗೆ ರಾಜ್ಯದ ಜನರ ಬಗ್ಗೆ ಕಾಳಜಿ ಇಲ್ಲ ಎಂದರು.

ರಾಜ್ಯದ ವಿವಿಧೆಡೆ ಮಳೆ ಹಾನಿಯಾಗಿದ್ದು, ಒಬ್ಬ ಸಚಿವರೂ ಸಂತ್ರಸ್ತರನ್ನು ಭೇಟಿ ಮಾಡಿಲ್ಲ. ಯಾವುದೇ ಜಿಲ್ಲಾ ಉಸ್ತುವಾರಿ ಸಚಿವರು ಮಳೆ ಹಾನಿ ಪ್ರದೇಶಕ್ಕೆ ಹೋಗಿಲ್ಲ. ಬೆಂಗಳೂರಿನಲ್ಲಿ ಸರ್ಕಾರದಿಂದ ಪರಿಶೀಲನೆ ನಡೆಸಿದ ನಂತರ ಒಂದು ರೂಪಾಯಿ ಪರಿಹಾರ ಬಿಡುಗಡೆ ಮಾಡಿಲ್ಲ. ಸಿಲ್ಕ್‌ ಬೋರ್ಡ್‌ ವೃತ್ತದ ಅಭಿವೃದ್ಧಿಗೂ ಅನುದಾನ ನೀಡಿಲ್ಲ. ಬೆಳೆ ಹಾನಿಯಾದ ರೈತರಿಗೆ ಸಾಂತ್ವನ ಹೇಳಲು ಸಚಿವರು ಮುಂದಾಗಿಲ್ಲ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದರೆ ಕೂಡಲೇ ಸಚಿವರು ಭೇಟಿ ನೀಡಬೇಕು. ಸಿಎಂ ಸಿದ್ದರಾಮಯ್ಯ ಎಲ್ಲ ಜಿಲ್ಲಾಧಿಕಾರಿಗಳ ಸಭೆ ಕರೆದು ಪರಿಹಾರ ಕಾರ್ಯಾಚರಣೆ ನಡೆಸಬೇಕು. ಸರ್ಕಾರ ವಿರೋಧ ಪಕ್ಷವನ್ನು ಬೆದರಿಸುವ ಕೆಲಸ ಮಾಡುತ್ತಿದೆ. ಸರ್ಕಾರದ ಗೊಡ್ಡು ಬೆದರಿಕೆಗೆ ನಾವು ಹೆದರಲ್ಲ. ಸರ್ಕಾರ ಅಕ್ರಮಗಳನ್ನು ಇನ್ನಷ್ಟು ಬಯಲಿಗೆ ಎಳೆಯುತ್ತೇವೆ. ನಾವು ಬಿಡುಗಡೆ ಮಾಡಿದ ಚಾರ್ಜ್‌ಶೀಟ್‌ ಪುಸ್ತಕದಿಂದಾಗಿ ಸರ್ಕಾರ ಭಯ ಬಿದ್ದಿದೆ ಎಂದರು.

ಕೋವಿಡ್‌ ನಿಯಂತ್ರಣಕ್ಕೆ ಕ್ರಮ ವಹಿಸಿ

ರಾಜ್ಯದಲ್ಲಿ ಕೋವಿಡ್‌ ಮತ್ತೆ ಹರಡುತ್ತಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳನ್ನು ಅಲೆಸುತ್ತಾರೆ. ಆದ್ದರಿಂದ ಎಲ್ಲ ಆಸ್ಪತ್ರೆಗಳಲ್ಲಿ ಕೋವಿಡ್‌ ವಾರ್ಡ್‌ ಆರಂಭಿಸಿ, ಔಷಧಿ ಪೂರೈಸಬೇಕು. ಯಾವುದೇ ಖರ್ಚನ್ನು ರೋಗಿಗಳಿಂದ ಭರಿಸಬಾರದು. ಸರ್ಕಾರವೇ ಪೂರ್ತಿ ವೆಚ್ಚ ಭರಿಸಬೇಕು ಎಂದು ಆರ್.ಅಶೋಕ ಒತ್ತಾಯಿಸಿದರು.

ಮಂಡ್ಯದಲ್ಲಿ ಸಾರಿಗೆ ಇಲಾಖೆಯ ಪೊಲೀಸರ ನಿರ್ಲಕ್ಷ್ಯದಿಂದಾಗಿ ಮಗು ಮೃತಪಟ್ಟಿದೆ. ಇದು ಪೊಲೀಸ್‌ ಇಲಾಖೆಯಲ್ಲಿ ಶಿಸ್ತಿಲ್ಲ ಎಂಬುದಕ್ಕೆ ಸಾಕ್ಷಿ. ಪೊಲೀಸರ ಬಳಿ ವಾಕಿಟಾಕಿ ಇದೆ. ಆದರೂ ಏಕಾಏಕಿ ಹೋಗಿ ರಸ್ತೆಯಲ್ಲಿ ಸವಾರರನ್ನು ಅಡ್ಡ ಹಾಕುತ್ತಾರೆ. ಸಾರಿಗೆ ಇಲಾಖೆಯ ಪೊಲೀಸರು ಜನರನ್ನು ಹೊಡೆಯಲು ಅವಕಾಶವಿಲ್ಲ. ಮಗು ಪೊಲೀಸರಿಂದಲೇ ಸತ್ತಿರುವುದರಿಂದ ಆ ಕುಟುಂಬಕ್ಕೆ ಸರ್ಕಾರ 25 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿಎಂ ಕುರ್ಚಿ ಪೈಪೋಟಿಯಲ್ಲಿ ರೈತ ಸಮಸ್ಯೆ ಗೌಣ: ಬಿ.ವೈ.ವಿಜಯೇಂದ್ರ ಟೀಕೆ
ಕರ್ನಾಟಕದಲ್ಲಿ ಶೇ.63 ಭ್ರಷ್ಟಾಚಾರ: ಸಿಬಿಐ ತನಿಖೆಗೆ ಒತ್ತಾಯಿಸಿದ ಆರ್‌.ಅಶೋಕ್‌