Karnataka Monsoon Session 2022: ಕಾಂಗ್ರೆಸ್‌ ವಿರುದ್ಧ ಸಿದ್ದು ಕಾಲದ ಶಿಕ್ಷಕ ನೇಮಕ ಹಗರಣಾಸ್ತ್ರ

By Kannadaprabha NewsFirst Published Sep 13, 2022, 6:36 AM IST
Highlights

ಅರ್ಜಿಯೇ ಹಾಕದೆ ನೌಕರಿ ಗಿಟ್ಟಿಸಿದ್ದ 14 ಜನ, ಅಧಿವೇಶನದಲ್ಲಿ ಮುಗಿಬೀಳಲು ಬಿಜೆಪಿ ಸನ್ನದ್ಧ

ಬೆಂಗಳೂರು(ಸೆ.13):  ವಿವಿಧ ನೇಮಕಗಳಲ್ಲಿ ಆಗಿರುವ ಅಕ್ರಮವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿರುವ ಪ್ರತಿಪಕ್ಷ ಕಾಂಗ್ರೆಸ್ಸಿಗೆ ತಿರುಗೇಟು ನೀಡಲು ಆಡಳಿತಾರೂಢ ಬಿಜೆಪಿ ಸರ್ಕಾರ ಸಜ್ಜಾಗಿದೆ. ಹಿಂದಿನ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಕೈಗೊಂಡಿದೆ ಇದರಿಂದಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಈಗ ತಮ್ಮದೇ ಅವಧಿಯಲ್ಲಿ ನಡೆದಿರುವ ಅಕ್ರಮ ನೇಮಕಾತಿ ಬಗ್ಗೆ ರಾಜ್ಯದ ಜನತೆಗೆ ಉತ್ತರ ನೀಡಬೇಕಾದ ಅನಿವಾರ್ಯತೆ ಎದುರಾಗಿದೆ. 2014-15ನೇ ಸಾಲಿನಲ್ಲಿ 14 ಮಂದಿ ಅಕ್ರಮವಾಗಿ ನೇಮಕವಾಗಿರುವ ಕುರಿತು ಇಲಾಖಾ ತನಿಖೆಯಲ್ಲಿ ಸ್ಪಷ್ಟವಾಗಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ಸಿಐಡಿಗೆ ನೀಡಲಾಗಿದ್ದು, ಒಟ್ಟು ಪ್ರಕರಣದ ಆಳ-ಅಗಲ ಎಷ್ಟುಎನ್ನುವುದು ತನಿಖೆಯ ಬಳಿಕ ಬಹಿರಂಗಗೊಳ್ಳಲಿದೆ.

ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ ಅಕ್ರಮ ನೇಮಕಾತಿ ಆರೋಪವನ್ನು ಬಿಜೆಪಿ ಸರ್ಕಾರದ ಮೇಲೆ ಹೊರಿಸಿ ಟೀಕಾಸ್ತ್ರ ಮಾಡಲು ಸಜ್ಜಾಗಿದ್ದ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್‌ ನಾಯಕರಿಗೇ ಹಗರಣ ಸುತ್ತಿಕೊಳ್ಳುವ ಸಾಧ್ಯತೆ ಇದೆ. ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಸಹ ಶಿಕ್ಷಕರು ಗ್ರೇಡ್‌ 2 ಮತ್ತು ದೈಹಿಕ ಶಿಕ್ಷಕರು ಗ್ರೇಡ್‌ 1 ನೇಮಕಾತಿಯಲ್ಲಿ ಅಕ್ರಮ ನಡೆದಿರುವುದು ದೃಢಪಟ್ಟಿದೆ. 2014-15ನೇ ಸಾಲಿನಲ್ಲಿ ಈ ಅಕ್ರಮಗಳು ನಡೆದಿದ್ದರೂ ಇದೀಗ ಸರ್ಕಾರವು ಅಕ್ರಮಗಳ ಕುರಿತು ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದ ನಂತರ ಅಕ್ರಮ ಬೆಳಕಿಗೆ ಬಂದಿರುವುದು ಗಮನಾರ್ಹ. ಅಕ್ರಮಕ್ಕೆ ಸಹಕರಿಸಿದ ಒಬ್ಬರು ಶಿಕ್ಷಣ ಇಲಾಖೆಯ ಅಧಿಕಾರಿ ಸೇರಿದಂತೆ 13 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೇ, ಸೋಮವಾರ ಇನ್ನೂ ಮೂವರು ಶಿಕ್ಷಕರ ನೇಮಕಾತಿ ಸಹ ಅಕ್ರಮವಾಗಿ ನಡೆದಿದೆ ಎನ್ನುವುದು ಸರ್ಕಾರದ ಗಮನಕ್ಕೆ ಬಂದ ಬಳಿಕ ಅದನ್ನು ಸಹ ಸಿಐಡಿ ತನಿಖೆಗೆ ವಹಿಸಲಾಗಿದೆ.

ಸಂಸತ್‌ ಅಧಿವೇಶನ ಹಠಾತ್‌ ಅಂತ್ಯ, 16 ದಿನದಲ್ಲಿ 28 ಗಂಟೆ ಕಲಾಪ!

ಅಕ್ರಮ ನಡೆದಿದ್ದು ಹೇಗೆ?:

2014-15ನೇ ಸಾಲಿನಲ್ಲಿ ಬೆಂಗಳೂರು ವಿಭಾಗದ ಸರ್ಕಾರಿ ಪ್ರೌಢಶಾಲೆಗಳ ಸಹ ಶಿಕ್ಷಕರು ಗ್ರೇಡ್‌ 2 ಮತ್ತು ದೈಹಿಕ ಶಿಕ್ಷಕರು ಗ್ರೇಡ್‌ 1 ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗುತ್ತದೆ. 2012-13ನೇ ಸಾಲಿನಲ್ಲಿ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಂಡು ಶಿಕ್ಷಕರಿಗೆ ನೇಮಕಾತಿ ಪತ್ರವನ್ನೂ ನೀಡಲಾಗಿತ್ತು. 2014-15ನೇ ಸಾಲಿನಲ್ಲಿ ಎರಡು ಬಾರಿ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಯಿತು. 2017-18 ಮತ್ತು 2018-19ನೇ ಸಾಲಿನಲ್ಲಿ ಈ ನೇಮಕಾತಿ ಆದೇಶ ನೀಡಿದ ಸಂದರ್ಭದಲ್ಲಿ ಮುಖ್ಯ ಆಯ್ಕೆ ಪಟ್ಟಿಯಲ್ಲಿದ್ದು, ಕರ್ತವ್ಯಕ್ಕೆ ಹಾಜರಾಗದ ಅಭ್ಯರ್ಥಿಗಳ ಬದಲಿಗೆ ಅರ್ಹರಲ್ಲದವರನ್ನು ನೇಮಿಸಲಾಯಿತು. ಇವರಾರ‍ಯರು ಹೆಚ್ಚುವರಿ ಆಯ್ಕೆಪಟ್ಟಿಯಲ್ಲಿಯೂ ಇರಲಿಲ್ಲ ಎನ್ನುವುದು ಅಕ್ರಮದ ಪ್ರಮುಖ ಅಂಶವಾಗಿದೆ.

ಅಲ್ಲದೆ, ನೇಮಕಗೊಂಡಿದ್ದವರು ನೇಮಕಾತಿಗೆ ಅಗತ್ಯ ಇರುವ ಕನಿಷ್ಠ ಅರ್ಹತೆಯನ್ನೂ ಹೊಂದಿಲ್ಲ ಎನ್ನುವುದು ನಿರ್ದೇಶಕರ ತನಿಖೆಯಿಂದ ಬಯಲಾಗಿದೆ. ಕೆಲವು ಪ್ರಕರಣದಲ್ಲಿ ಅಭ್ಯರ್ಥಿಗಳು ಕೇವಲ ಅರ್ಜಿ ಸಲ್ಲಿಸಿದ್ದು, ಪರೀಕ್ಷೆಗೆ ಹಾಜರಾಗದಿದ್ದರೂ ನೇಮಕಾತಿ ಅದೃಷ್ಟಒಲಿದಿದೆ. ಅರ್ಜಿ ಸಲ್ಲಿಸಿದ ಅಭ್ಯರ್ಥಿಯ ನೋಂದಣಿ ಸಂಖ್ಯೆಯನ್ನು ಬಳಸಿ ಅದೇ ಹೆಸರು ಹೋಲುವಂತಹ, ಪರೀಕ್ಷೆಯೇ ಬರೆಯದ ಅಭ್ಯರ್ಥಿಗೆ ನೇಮಕಾತಿ ಭಾಗ್ಯ ಕರುಣಿಸಲಾಗಿದೆ. ಇಲಾಖಾ ತನಿಖೆ ನಡೆದ ವೇಳೆ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿನ ಅಭ್ಯರ್ಥಿಗಳ ದಾಖಲೆಗೂ ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿನ ದಾಖಲೆಗಳಿಗೂ ವ್ಯತ್ಯಾಸವಿರುವುದೂ ಪತ್ತೆಯಾಗಿದೆ. ಪರೀಕ್ಷಾ ಮಂಡಳಿ ನಿರ್ದೇಶಕರು ತಮ್ಮ ಪರಿಶೀಲನೆಯ ಭಾಗವಾಗಿ ಕೇಂದ್ರೀಕೃತ ದಾಖಲಾತಿ ಘಟಕದಲ್ಲಿರುವ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಆದರೆ, ಇದೇ ದಾಖಲಾತಿಗಳ ಬದಲಿಗೆ ಜಿಲ್ಲಾವಾರು ಉಪನಿರ್ದೇಶಕರ ಕಚೇರಿಯಲ್ಲಿ ಬೇರೆ ದಾಖಲೆಗಳಿರುವುದು ಗಮನಕ್ಕೆ ಬಂದಿದೆ. ನಿರ್ದಿಷ್ಟ ಅಭ್ಯರ್ಥಿಗಳು ಪಡೆದಿರುವ ಅಂಕಗಳೂ ಸಹ ಜಿಲ್ಲಾ ದಾಖಲೆಗಳೊಂದಿಗೆ ಹೊಂದಾಣಿಕೆಯಾಗದಿರುವುದು ಸಹ ಬೆಳಕಿಗೆ ಬಂದಿದೆ.

4ನೇ ದಿನವೂ ಸಂಸತ್‌ ಕಲಾಪಕ್ಕೆ ವಿಪಕ್ಷಗಳ ಅಡ್ಡಿ: ಬೆಲೆ ಏರಿಕೆ, ಜಿಎಸ್‌ಟಿ ಕುರಿತು ಪ್ರತಿಭಟನೆ

ತುಮಕೂರು ಜಿಲ್ಲಾ ಉಪನಿರ್ದೇಶಕರ ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದಾಗ ಆಯಾ ವರ್ಗಕ್ಕೆ ನಿಗದಿಯಾದ ಮೆರಿಟ್‌ ಕಟ್‌ ಆಫ್‌ಗಿಂತಲೂ ಕಡಿಮೆ ಮೆರಿಟ್‌ ಇರುವವರಿಗೂ ನೇಮಕಾತಿ ಆದೇಶ ನೀಡಿರುವುದು ಪತ್ತೆಯಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಶಿಕ್ಷಕರ ನೇಮಕಾತಿಯಲ್ಲಿ ನಡೆದಿರುವ ಅಕ್ರಮಗಳನ್ನು ಬೆಳಕಿಗೆ ತಂದು ಭ್ರಷ್ಟಾಚಾರದ ವಿರುದ್ಧ ತಮ್ಮ ಬದ್ಧತೆಯನ್ನು ಪ್ರದರ್ಶಿಸಿದೆ. ಅಕ್ರಮದಲ್ಲಿ ತೊಡಗಿರುವವರಿಗೆ ಮತ್ತು ಅದಕ್ಕೆ ಸಹಕಾರ ನೀಡಿದ ಅಧಿಕಾರಿಗಳ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವ ಬದ್ಧತೆಯನ್ನು ತೋರಿಸಿದೆ. ಸಿಐಡಿ ತನಿಖೆ ಪೂರ್ಣಗೊಂಡ ನಂತರ ತಪ್ಪಿತಸ್ಥರು ಯಾರೇ ಆಗಿದ್ದರೂ ಕಠಿಣ ಕ್ರಮ ನಿಶ್ಚಿತ ಎನ್ನುವ ಸಂದೇಶವನ್ನು ಮುಖ್ಯಮಂತ್ರಿಗಳು ರಾಜ್ಯದ ಜನತೆಗೆ ನೀಡಿದ್ದಾರೆ.

ಕಾಂಗ್ರೆಸ್‌ಗೆ ಇಕ್ಕಟ್ಟು

- ಬಿಜೆಪಿ ಸರ್ಕಾರದ ನೇಮಕಾತಿ ಅಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಿದ್ದ ಕಾಂಗ್ರೆಸ್‌
- ಈಗ ಸಿದ್ದು ಕಾಲದ ಶಿಕ್ಷಕ ನೇಮಕಾತಿ ಹಗರಣದ ಬಗ್ಗೆ ಉತ್ತರಿಸುವ ಸಂದಿಗ್ಧ
- ಈಗಾಗಲೇ ಸಿಐಡಿ ತನಿಖೆ ಆರಂಭ, 13 ಆರೋಪಿಗಳ ಬಂಧನ, ವಿಚಾರಣೆ
- 2014-15ನೇ ಸಾಲಿನಲ್ಲಿ ಅಕ್ರಮ ನಡೆದಿದ್ದು ಇಲಾಖಾ ತನಿಖೆಯಲ್ಲಿ ಸಾಬೀತು
- ಸಹ ಶಿಕ್ಷಕರು ಗ್ರೇಡ್‌-2, ದೈಹಿಕ ಶಿಕ್ಷಕರು ಗ್ರೇಡ್‌-1 ನೇಮಕದಲ್ಲಿ ಅಕ್ರಮ
 

click me!