
ಬೆಂಗಳೂರು (ಡಿ.15): ‘ಆಹಾರ ಪದಾರ್ಥಕ್ಕೆ ಹಲಾಲ್ ಪ್ರಮಾಣ ಪತ್ರಗಳನ್ನು ನೀಡುವ ಸಂಸ್ಥೆಗಳು ‘ಧಾರ್ಮಿಕ ಸಂಸ್ಥೆಗಳು’ ಎಂದು ನೋಂದಣಿಯಾಗಿದ್ದು, ಧಾರ್ಮಿಕ ಸಂಸ್ಥೆಗಳಿಗೆ ಯಾವುದೇ ರೀತಿಯ ಪ್ರಮಾಣ ಪತ್ರಗಳನ್ನು ನೀಡುವ ಅಧಿಕಾರ ಇರುವುದಿಲ್ಲ. ಈ ವಿಚಾರವಾಗಿ ಖಾಸಗಿ ವಿಧೇಯಕ ಮಂಡಿಸಲು ಸಭಾಪತಿಗಳಿಗೆ ಪತ್ರ ಬರೆದಿದ್ದು, ಅವಕಾಶ ನೀಡಿದರೆ ವಿಧೇಯಕ ಮಂಡಿಸಲಾಗುವುದು’ ಎಂದು ಬಿಜೆಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿಯೂ ಆಗಿರುವ ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಧಾರ್ಮಿಕ ಸಂಸ್ಥೆಗಳು ಪ್ರಮಾಣ ಪತ್ರ ನೀಡುವ ಕುರಿತು ಸರ್ಕಾರದಿಂದ ಯಾವುದೇ ರೀತಿಯ ಅನುಮತಿ ಪಡೆದಿರುವುದಿಲ್ಲ. ಸರ್ಕಾರ ಯಾವುದೇ ಖಾಸಗಿ, ಧಾರ್ಮಿಕ ಅಥವಾ ಯಾವುದೇ ವ್ಯಕ್ತಿಗಳಿಗೆ ಪ್ರಮಾಣ ಪತ್ರ ನೀಡುವ ಅಧಿಕಾರವನ್ನು ನೀಡಿರುವುದಿಲ್ಲ. ವಸ್ತುಗಳಿಗೆ ಎಫ್‌ಎಸ್‌ಎಸ್‌ಎಐ ಹೊರತುಪಡಿಸಿ ಬೇರೆ ಯಾರು ಪ್ರಮಾಣ ಪತ್ರವನ್ನು ನೀಡುವಂತಿಲ್ಲ. ಒಂದು ವೇಳೆ ನೀಡಿದರೆ ಅಥವಾ ಪಡೆದರೆ ಅದು ಅಪರಾಧವಾಗಲಿದೆ.
ಸಿದ್ದರಾಮಯ್ಯ ಪದತ್ಯಾಗಕ್ಕೆ ಹೋರಾಟ: ವಿಧಾನಪರಿಷತ್ ಸದಸ್ಯ ರವಿಕುಮಾರ್
ಹಲಾಲ್ ಮುದ್ರೆ ಹಾಕುವ ಪದ್ಧತಿ ಕೇವಲ ಮಾಂಸಾಹಾರಕ್ಕೆ ಮಾತ್ರ ಸೀಮಿತವಾಗಿಲ್ಲ. ಆಸ್ಪತ್ರೆ, ಅನೇಕ ಖಾದ್ಯ, ಬೇರೆ ಬೇರೆ ಕಡೆಗಳಲ್ಲಿಯೂ ಹಲಾಲ್ ಮುದ್ರೆ ಇದೆ’ ಎಂದು ತಿಳಿಸಿದರು. ‘ದೃಢೀಕರಣ ಮಾಡುವುದಕ್ಕೆ ಧಾರ್ಮಿಕ ಸಂಸ್ಥೆಯವರು ಯಾರು? ಇವರು ಸರ್ಟಿಫಿಕೇಟ್ ನೀಡಿದರೆ ಆಹಾರ ಇಲಾಖೆಯ ಕೆಲಸ ಏನು? ಆಹಾರ ಪ್ರಮಾಣಪತ್ರ ನೀಡುವುದು ಆಹಾರ ಇಲಾಖೆ. ಆದರೆ, ಹಲಾಲ್ ಪ್ರಮಾಣ ಪತ್ರ ಬೇರೆ ಸಂಸ್ಥೆಗಳು ನೀಡಿದರೆ ಆಹಾರ ಇಲಾಖೆ ಕೆಲಸ ಏನು? ಹಲಾಲ್ ಸಂಸ್ಥೆಯ ವ್ಯಾಪ್ತಿ ಎಷ್ಟು? ಎಂದು ಕಿಡಿಕಾರಿರುವ ಅವರು, ಕಿರಾಣಿ ಅಂಗಡಿ ಮೇಲೆ ಹಲಾಲ್ ಪ್ರಮಾಣ ಪತ್ರ ನೀಡುತ್ತಾರೆ.
ಆಸ್ಪತ್ರೆಗೂ ಹಲಾಲ್ ಪ್ರಮಾಣ ಪತ್ರ ನೀಡಲಾಗುತ್ತದೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಸರಿಸುಮಾರು 5 ಸಾವಿರ ಕೋಟಿ ರು. ನಷ್ಟವಾಗುತ್ತಿದೆ. ತೆರಿಗೆ ಮೂಲಕ ಬರಬೇಕಾದ ಹಣ ತಪ್ಪಿ ಹೋಗುತ್ತಿದೆ. ಇದಕ್ಕೆ ಕಡಿವಾಣ ಹಾಕುವುದು ಯಾರು? ಈ ಹಿನ್ನೆಲೆಯಲ್ಲಿ ಖಾಸಗಿ ವಿಧೇಯಕ ಮಂಡಿಸುತ್ತೇನೆ’ ಎಂದರು. ‘ನಾನು ಹಲವು ಕಾನೂನು ತಜ್ಞರು, ಶಾಸಕರ ಜತೆ ಚರ್ಚೆ ನಡೆಸಿದ್ದೇನೆ. ಹಲಾಲ್ ಪ್ರಮಾಣ ಪತ್ರ ನೀಡುವ ಸಂಸ್ಥೆ ಕಾನೂನು ವಿರೋಧಿ. ಸಂಸದರ ಗಮನಕ್ಕೂ ತರುತ್ತೇನೆ’ ಎಂದು ಹೇಳಿದರು.
ಚಿಲುಮೆಗೆ ಕೆಲಸ ನೀಡಿದ್ದು ಎಚ್‌ಡಿಕೆ ಸರ್ಕಾರ: ವಿಧಾನಪರಿಷತ್ ಸದಸ್ಯ ರವಿಕುಮಾರ್
ಏನಿದು ವಿವಾದ?
- ‘ಇಸ್ಲಾಮಿಕ್ ಸಂಪ್ರದಾಯಕ್ಕೆ ಬದ್ಧವಾಗಿ ತಯಾರಿಸಲಾಗಿದೆ’ ಎಂಬುದರ ಸೂಚಕ ಹಲಾಲ್ ಪ್ರಮಾಣಪತ್ರ
- ಉತ್ಪನ್ನಗಳಿಗೆ ಹಲಾಲ್ ಪ್ರಮಾಣಪತ್ರ ನೀಡುವುದು ಖಾಸಗಿ ಸಂಸ್ಥೆಗಳು
- ಎಲ್ಲರ ಮೇಲೆ ಈ ಪದ್ಧತಿ ಹೇರುವುದಕ್ಕೆ ಬಲಪಂಥೀಯರ ವಿರೋಧ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ