ಬಿಜೆಪಿ ಶಾಸಕರಿಂದಲೇ ವಿರೋಧ| ಸಂಪುಟ ನಿರ್ಧಾರಕ್ಕೆ ವಿಷಾದ| ಮರುಪರಿಶೀಲನೆಗೆ ಮನವಿಯಡಿಯೂರಪ್ಪಗೆ ಪತ್ರ ಬರೆದ ಬೆಲ್ಲದ್, ಯತ್ನಾಳ್, ಪೂರ್ಣಿಮಾ| ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್, ಅರವಿಂದ್ ಬೆಲ್ಲದ್ ಸೇರಿ 11 ಮಂದಿ ಶಾಸಕರು ಸಹಿ| ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಹೈಕಮಾಂಡ್|
ಬೆಂಗಳೂರು(ಮೇ.08): ಬಳ್ಳಾರಿಯ ಜಿಂದಾಲ್ ಉಕ್ಕು ಕಂಪನಿಗೆ ಸಮಾರು 3,667 ಎಕರೆ ಸರ್ಕಾರಿ ಜಮೀನು ಹಸ್ತಾಂತರಿಸಲು ಕೈಗೊಂಡಿರುವ ಸಂಪುಟದ ನಿರ್ಧಾರಕ್ಕೆ ವಿಷಾದ ವ್ಯಕ್ತಪಡಿಸಿರುವ ಆಡಳಿತಾರೂಢ ಬಿಜೆಪಿಯ ಕೆಲವು ಶಾಸಕರು, ಈ ನಿರ್ಧಾರವನ್ನು ಮರು ಪರಿಶೀಲಿಸುವಂತೆ ಕೋರಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಶಾಸಕರಾದ ಅರವಿಂದ್ ಬೆಲ್ಲದ್, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪೂರ್ಣಿಮಾ ಅವರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ.
undefined
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಇದೇ ಜಮೀನನ್ನು ಜಿಂದಾಲ್‌ಗೆ ಹಸ್ತಾಂತರಿಸಲು ಮುಂದಾಗಿತ್ತು. ಆಗ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ನೀವು(ಯಡಿಯೂರಪ್ಪ) ಸೇರಿ ಎಲ್ಲ ಶಾಸಕರು ಪ್ರಕರಣದ ಹಿಂದೆ ದೊಡ್ಡ ಕಿಕ್‌ಬ್ಯಾಕ್ ವ್ಯವಹಾರ ನಡೆದಿದೆ ಎಂದು ವಿರೋಧಿಸಿದ್ದೆವು. ಜೊತೆಗೆ, ಅಂದಿನ ಸರ್ಕಾರದ ನಿರ್ಧಾರವನ್ನು ಸದನದ ಒಳಗೂ ಮತ್ತು ಹೊರಗೂ ವಿರೋಧಿಸಲು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಅಲ್ಲದೆ, ಸದನದಲ್ಲಿ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ನಮ್ಮ ಹೋರಾಟಕ್ಕೆ ಮಣಿದಿದ್ದ ಅಂದಿನ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಜಮೀನು ಹಸ್ತಾಂತರಿಸುವ ನಿರ್ಧಾರವನ್ನು ತಾತ್ಕಾಲಿಕವಾಗಿ ಪಕ್ಕಕ್ಕಿಟ್ಟು ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿದ್ದರು.
ಆದರೆ, ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ 2021ರ ಏಪ್ರಿಲ್‌ನಲ್ಲಿ ನಡೆದ ಸಂಪುಟ ಸಭೆಯಲ್ಲಿ ಜಿಂದಾಲ್ ಕಂಪನಿಗೆ 3,677 ಎಕರೆ ಭೂಮಿಯನ್ನು ಹಸ್ತಾಂತರಿಸಿರುವುದು ನಮಗೆಲ್ಲರಿಗೂ ಆಘಾತ ನೀಡಿದಂತಾಗಿದೆ. ಕಿಕ್‌ಬ್ಯಾಕ್ ಎಂದು ಆರೋಪಿಸಿದ್ದ ಬಿಜೆಪಿ ಪಕ್ಷದ ಶಾಸಕರ ಸಭೆ ನಡೆಸದೆ ಜಮೀನು ಹಸ್ತಾಂತರ ಮಾಡಿರುವುದು ನಮ್ಮ ಹೋರಾಟವನ್ನು ಅಣಕಿಸುವಂತಿದ್ದು, ಸಾರ್ವಜನಿಕ ವಲಯದಲ್ಲಿ ಟೀಕೆಗಳು ವ್ಯಕ್ತವಾಗುತ್ತಿವೆ ಎಂದು ಹೇಳಿದ್ದಾರೆ.
ಹೀಗಾಗಿ ಸರ್ಕಾರ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರದ ಪುನರ್ ಪರಿಶೀಲನೆ ನಡೆಸುವುದು ಅತ್ಯಂತ ಸೂಕ್ತ ಹಾಗೂ ಅನಿವಾರ್ಯವಾಗಿದೆ. ಅಲ್ಲದೆ, ಹಿಂದೆ ತೆಗೆದುಕೊಂಡ ನಿರ್ಧಾರಕ್ಕೆ ಘಟನೋತ್ತರ ಅನುಮೋದನೆ ನೀಡದೆ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಪುನರ್ ಪರಿಶೀಲಿಸಿ ಕೈ ಬಿಡುವುದು ಸೂಕ್ತ ಎಂದು ಶಾಸಕರು ಒತ್ತಾಯಿಸಿದ್ದಾರೆ.
ಜಿಂದಾಲ್‌ಗೆ ಭೂಮಿ ನೀಡಿದ್ದನ್ನು ಸಂಪುಟ ಸಭೆಯಲ್ಲೇ ವಿರೋಧಿಸುವೆ: ಆನಂದ ಸಿಂಗ್
ಜಿಂದಾಲ್‌ಗೆ ಭೂಮಿ ನೀಡಿದ ವಿಚಾರ ಇದೀಗ ಹೈಕಮಾಂಡ್ ಅಂಗಳಕ್ಕೆ
ಜಿಂದಾಲ್‌ಗೆ ಭೂಮಿ ನೀಡಿದ ವಿಚಾರ ಇದೀಗ ಹೈಕಮಾಂಡ್ ಅಂಗಳಕ್ಕೆ ತಲುಪಿದೆ. ಸಿಎಂ ಬಿ.ಎಸ್. ಯಡಿಯೂರಪ್ಪ ಅವರ ನಡೆಯನ್ನ ಪ್ರಶ್ನಿಸಿ ಬಿಎಸ್‌ವೈಗೆ ಕೆಲವು ಶಾಸಕರು ಪತ್ರ ಬರೆದಿದ್ದಾರೆ. ವಿರೋಧ ಪಕ್ಷದಲ್ಲಿದ್ದಾಗ ನಾವೇ ಭೂಮಿ ನೀಡುವ ವಿಚಾರದ ಬಗ್ಗೆ ವಿರೋಧ ಮಾಡಿದ್ದೆವು. ಆದರೆ, ಈಗ ಏಕಾ ಏಕಿ ಭೂಮಿ ನೀಡಿರುವ ಹಿಂದಿನ ಮರ್ಮ ಏನು? ಎಂದು ಏಳು ಪುಟಗಳ ಪತ್ರ, ಆಡಿಯೋ, ಇತರೆ ದಾಖಲೆಗಳನ್ನ ಬಿಜೆಪಿಯ ಕೆಲ ಶಾಸಕರು ಹೈಕಮಾಂಡ್‌ಗೆ ತಲುಪಿಸಿದ್ದಾರೆ. ರಾಜ್ಯದಲ್ಲಿ ಕೋವಿಡ್ ತಾಂಡವಾಡುತ್ತಿರುವಾಗ ಜಿಂದಾಲ್‌ಗೆ ಇಷ್ಟು ಕಡಿಮೆ ದರದಲ್ಲಿ ಭೂಮಿ ಮಾರಾಟ ಮಾಡಲು ಕಾರಣ ಏನು?. ಒಟ್ಟು 3667 ಎಕರೆ ಭೂಮಿಯನ್ನ ಎಕರೆಗೆ 1.28 ಲಕ್ಷಕ್ಕೆ ಮಾರಲು ಕಾರಣ ಏನು ಎಂದು ಸಿಎಂ ಬಿಎಸ್‌ವೈ ಅವರನ್ನ ಪ್ರಶ್ನಿಸಿದ್ದಾರೆ.
ಹೀಗಾಗಿ ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿರುವ ಹೈಕಮಾಂಡ್ ನಿನ್ನೆ(ಶುಕ್ರವಾರ) ತಡರಾತ್ರಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ದೆಹಲಿಗೆ ಕರೆಯಿಸಿಕೊಂಡು ಮಾಹಿತಿಯನ್ನ ಪಡೆದುಕೊಂಡಿದೆ. ಹೀಗಾಗಿ ಈ ಲೆಟರ್‌ನಿಂದ ಸಿಎಂ ಬಿ.ಎಸ್. ಯಡಿಯೂರಪ್ಪ ಅವರಲ್ಲಿ ತಳಮಳ ಶುರುವಾಗಿದೆ ಎಂದು ಹೇಳಲಾಗುತ್ತಿದೆ.