ಬಿಸಿ ನೀರಲ್ಲಿ ತೊಳೆದು ಪ್ರಾಣಿಗಳಿಗೆ ಮಾಂಸ ವಿತರಣೆ| ಝೂ ಸಿಬ್ಬಂದಿಗೆ ನಿತ್ಯ ಉಷ್ಣಾಂಶ ತಪಾಸಣೆ| ಪ್ರಾಣಿಗಳಿಗೆ ಆಹಾರ ನೀಡುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಧರಿಸಿರಬೇಕು| ರಾಜ್ಯದ ಮೃಗಾಲಯಗಳಲ್ಲಿನ ಪ್ರಾಣಿಗಳಿಗೆ ಹೊರ ಭಾಗದಿಂದ ಆಹಾರ ಪೂರೈಕೆ|
ಬೆಂಗಳೂರು(ಮೇ.08): ಹೈದರಾಬಾದ್‌ನ ನೆಹರು ಮೃಗಾಲಯದಲ್ಲಿ ಎಂಟು ಸಿಂಹಗಳಿಗೆ ಕೊರೋನಾ ಸೋಂಕು ತಗುಲಿರುವುದು ಖಚಿತಪಡುತ್ತಿದ್ದಂತೆ ರಾಜ್ಯದ ಮೃಗಾಲಯಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.
ಈ ಕುರಿತಂತೆ ರಾಜ್ಯದ ಎಲ್ಲ ಮೃಗಾಲಯಗಳಿಗೂ ಸೂಚನೆ ನೀಡಿರುವ ಕರ್ನಾಟಕ ಮೃಗಾಲಯ ಪ್ರಾಧಿಕಾರ, ಮೃಗಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಿಬ್ಬಂದಿಗಳು ಹಾಗೂ ಪ್ರಾಣಿಗಳಿಗೆ ಕೊರೋನಾ ಸೋಂಕು ಹರಡದಂತೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಹಲವು ಸೂಚನೆ ನೀಡಿದೆ.
undefined
ಪ್ರಾಣಿಗಳಲ್ಲಿ ಕೊರೋನಾ ವೈರಸ್ ಸೋಂಕು ಕಂಡುಬಂದರೆ ತಕ್ಷಣ ಚಿಕಿತ್ಸೆ ನೀಡಲು ಅಗತ್ಯವಿರುವ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಚಿಕಿತ್ಸೆಗೆ ಅಗತ್ಯವಿರುವ ಔಷಧ, ಶ್ವಾಸಕೋಶದ ಸೋಂಕು ಅಥವಾ ಹೃದಯ ಸಂಬಂಧಿ ಸಮಸ್ಯೆಗಳಾದರೂ ಅದಕ್ಕಾಗಿ ಅಗತ್ಯವಿರುವ ಔಷಧಗಳು ಮತ್ತು ವೈದ್ಯಕೀಯ ಪರಿಕರಗಳನ್ನು ಸಿದ್ದಪಡಿಸಿಕೊಳ್ಳಲಾಗಿದೆ. ರಾಜ್ಯದ ಮೃಗಾಲಯಗಳಲ್ಲಿನ ಪ್ರಾಣಿಗಳಿಗೆ ಹೊರ ಭಾಗದಿಂದ ಆಹಾರ ಪೂರೈಕೆಯಾಗುತ್ತದೆ. ಈ ಮಾಂಸವನ್ನು ಪ್ರಾಣಿಗಳಿಗೆ ನೀಡುವುದಕ್ಕೂ ಮುನ್ನ ಬಿಸಿನೀರಿನಲ್ಲಿ ತೊಳೆದು ಬಳಿಕ ಪ್ರಾಣಿಗಳಿಗೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ರಾಜ್ಯ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಮಹಾದೇವ್ ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದರು.
8 ಸಿಂಹಗಳಿಗೆ ಕೊರೋನಾ ಪಾಸಿಟಿವ್: ದೇಶದಲ್ಲೇ ಮೊದಲು
ಪ್ರಾಣಿಗಳ ಮೇಲೆ ನಿಗಾ
ಮೃಗಾಲಯಗಳಲ್ಲಿ ಪ್ರಾಣಿಗಳಿಗೆ ನೀಡುವ ಆಹಾರವನ್ನು ಪರೀಕ್ಷಿಸಿ ಕೊಡಬೇಕು. ಜೊತೆಗೆ, ಅವುಗಳ ಚಟುವಟಿಕೆಗಳ ಮೇಲೆ ಪ್ರತಿ ಸಂದರ್ಭದಲ್ಲಿ ನಿಗಾ ಇರಿಸಬೇಕು. ಹುಲಿ, ಸಿಂಹ, ಚಿರತೆ, ಜಿರಾಫೆ, ಜೀಬ್ರಾ, ನೀರಾನೆ ಸೇರಿದಂತೆ ಇತರೆ ಪ್ರಾಣಿಗಳ ಆರೈಕೆ ಮಾಡುವ ಸಿಬ್ಬಂದಿಯನ್ನು ನಿತ್ಯ ತಪಾಸಣೆಗೆ ಒಳಪಡಿಸಬೇಕು ಎಂದು ನಿರ್ದೇಶಿಸಲಾಗಿದೆ ಎಂದು ಅವರು ವಿವರಿಸಿದರು.
ಸಿಬ್ಬಂದಿಗಳಿಗೂ ಹಲವು ಸೂಚನೆ:
ಪ್ರಾಣಿಗಳಿಗೆ ಆಹಾರ ನೀಡುವ ಸಿಬ್ಬಂದಿ ಕಡ್ಡಾಯವಾಗಿ ಮಾಸ್ಕ್ ಮತ್ತು ಕೈಗವಸು ಧರಿಸಿರಬೇಕು. ಸೇವೆಗೆ ಹಾಜರಾಗುವುದಕ್ಕೂ ಮುನ್ನ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಒಳ ಪ್ರವೇಶಕ್ಕೆ ಅವಕಾಶ ನೀಡಬೇಕು. ಹೆಚ್ಚು ಜ್ವರ, ತಲೆನೋವು ಕಾಣಿಸಿಕೊಂಡಲ್ಲಿ ಮೃಗಾಲಯ ಪ್ರವೇಶಕ್ಕೆ ಅವಕಾಶ ನೀಡದೆ ಚಿಕಿತ್ಸೆ ಪಡೆದುಕೊಳ್ಳಲು ಸೂಚನೆ ನೀಡಬೇಕು ಎಂದು ಸೂಚಿಸಲಾಗಿದೆ ಎಂದು ಮಹಾದೇವ್ ತಿಳಿಸಿದರು.
ಮೃಗಾಲಯಗಳಲ್ಲಿ ಸೇವೆ ಸಲ್ಲಿಸುತ್ತಿರುವ ಎಲ್ಲ ಸಿಬ್ಬಂದಿಗೂ ಕೊರೋನಾ ಲಸಿಕೆ ಹಾಕಿಸಲಾಗಿದೆ. ಸಿಬ್ಬಂದಿಗೆ ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಅಗತ್ಯ ಸಲಹೆಗಳನ್ನು ನೀಡಲಾಗುತ್ತಿದೆ. ಜೊತೆಗೆ, ಸಿಬ್ಬಂದಿಯನ್ನು ಮೂರು ಭಾಗಗಳಾಗಿ ವಿಂಗಡಿಸಿದ್ದು, ಮೂರು ಪಾಳಿಯಲ್ಲಿ ಕರ್ತವ್ಯಕ್ಕೆ ಹಾಜರಾಗಲು ಸೂಚನೆ ನೀಡಲಾಗಿದೆ.
ಜನತಾ ಕರ್ಫ್ಯೂನಿಂದ ಜನರಿಗೆ ನೆರವು:
ರಾಜ್ಯದಲ್ಲಿ ಜನತಾ ಕರ್ಫ್ಯೂ ಜಾರಿ ಮಾಡಿರುವುದರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶವಿಲ್ಲ. ರಾಜ್ಯದ ಯಾವುದೇ ಮೃಗಾಲಯಕ್ಕೂ ಜನ ಭೇಟಿ ನೀಡುತ್ತಿಲ್ಲ. ಇದರಿಂದ ಮೃಗಾಲಯಗಳಿಗೆ ಆರ್ಥಿಕವಾಗಿ ನಷ್ಟವಾಗುತ್ತಿದ್ದರೂ, ಪ್ರಾಣಿಗಳು ಮತ್ತು ಅವುಗಳನ್ನು ಆರೈಕೆ ಮಾಡುವ ಸಿಬ್ಬಂದಿಗೆ ಕೊರೋನಾದಿಂದ ರಕ್ಷಣೆ ಸಿಕ್ಕಂತಾಗಿದೆ ಎಂದು ಅವರು ತಿಳಿಸಿದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ನ್ಯೂಸ್‌ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona