
ವಿಧಾನಸಭೆ (ಜು.21) : ಸದನದಲ್ಲಿ ಪೀಠದ ಮುಂದೆ ನಡೆದುಕೊಂಡ ಬಿಜೆಪಿಗರ ವರ್ತನೆ ಒಂದು ರೀತಿಯಲ್ಲಿ ಅನಾಗರಿಕ ವರ್ತನೆಯಾಗಿದ್ದು, ಮಾರ್ಷಲ್‌ಗಳು ಇಲ್ಲದಿದ್ದರೆ ಉಪಸಭಾಧ್ಯಕ್ಷರ ಗತಿ ಏನಾಗುತ್ತಿತ್ತೋ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಹೇಳಿದ್ದಾರೆ.
ಗುರುವಾರ ಬಜೆಟ್ ಮೇಲಿನ ಚರ್ಚೆಗೆ ಉತ್ತರ ನೀಡಿದ ಅವರು, ಬಿಜೆಪಿಯವರು ಪ್ರಜಾಪ್ರಭುತ್ವ ವಿರೋಧಿಗಳು. ಸಂಸದೀಯ ವ್ಯವಸ್ಥೆ ಮತ್ತು ಪೀಠಕ್ಕೂ ಗೌರವ ಕೊಟ್ಟಿಲ್ಲ. ಈ ಹಿಂದೆ ನಮ್ಮ ಶಾಸಕರು ಇಷ್ಟೊಂದು ಅನಾಗರಿಕರಂತೆ ವರ್ತಿಸಿರಲಿಲ್ಲ. ಪೀಠಕ್ಕೆ ಅವಮಾನ ಮಾಡಿದ ಬಿಜೆಪಿ ಸದಸ್ಯರ ವರ್ತನೆ ಅನಾಗರಿಕವಾಗಿತ್ತು. ಒಬ್ಬ ದಲಿತ ಉಪಸಭಾಧ್ಯಕ್ಷರಿಗೆ ಬಿಜೆಪಿ ನಡೆಸಿಕೊಂಡ ರೀತಿ ಅತ್ಯಂತ ಕೆಟ್ಟದ್ದಾಗಿತ್ತು. ಮಾರ್ಷಲ್‌ಗಳು ಇಲ್ಲದಿದ್ದರೆ ಅವರ ಗತಿ ಏನಾಗುತ್ತಿತ್ತೋ ಗೊತ್ತಿಲ್ಲ. ಬಿಜೆಪಿಯವರು ಅವರ ಮೇಲೆ ದೈಹಿಕ ಹಲ್ಲೆಯನ್ನೂ ನಡೆಸುತ್ತಿದ್ದರೇನೋ ಗೊತ್ತಿಲ್ಲ ಎಂದು ಹೇಳಿದರು.
ಬಡವರು, ಶ್ರಮಿಕರ ಕಿಸೆಯಲ್ಲಿ ಹಣ ಉಳಿಸಲು ಕ್ರಮ: ಸಿಎಂ
ಬಿಜೆಪಿ ಸದಸ್ಯರ ಅಗೌರವ ಘಟನೆ ಬಳಿಕ ಉಪಸಭಾಧ್ಯಕ್ಷರ ಮುಖ ಸಪ್ಪೆಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು, ಹೆದರಬೇಡಿ ನಾವಿದ್ದೇವೆ ಎಂದು ಧೈರ್ಯ ತುಂಬಿದರು. ಕಾಂಗ್ರೆಸ್‌ನ ಗ್ಯಾರಂಟಿಗಳಿಂದ ಬಿಜೆಪಿಗೆ ಹೊಟ್ಟೆಉರಿ ಶುರುವಾಗಿದೆ. ಅವರ ರಾಜಕೀಯಕ್ಕೆ ನಾವು ಹೆದರಲ್ಲ. ಬಿಜೆಪಿಯವರಿಗೆ ಕರ್ತವ್ಯಕ್ಕಿಂತ ರಾಜಕೀಯವೇ ಹೆಚ್ಚಾಗಿದೆ. ರಾಜಕೀಯ ಮಾಡಬೇಕು. ಆದರೆ, ಅಗತ್ಯಕ್ಕಿಂತ ಹೆಚ್ಚು ಮಾಡುವುದು ಸರಿಯಲ್ಲ. ಕೇಶವಕೃಪಾ ಮೆಚ್ಚಿಕೊಳ್ಳಲಿ ಎಂದು ಬಿಜೆಪಿಗರು ರಾಜಕೀಯ ಮಾಡುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದಲ್ಲಿ 20 ಸ್ಥಾನಗಳನ್ನು ಜಯಿಸಲಿದೆ ಎಂದರು.
ಇಂಡಿಯಾ ಒಕ್ಕೂಟದ ಸಭೆ ಬೆಂಗಳೂರಿನಲ್ಲಿ ನಡೆದಿದ್ದು ಬಿಜೆಪಿಗೆ ತಡೆದುಕೊಳ್ಳಲು ಆಗುತ್ತಿಲ್ಲ. ಅದಕ್ಕೆ ಸದನದಲ್ಲಿ ಕ್ಯಾತೆ ತೆಗೆದು ಗದ್ದಲವನ್ನುಂಟು ಮಾಡಿದರು. ಈ ಹಿಂದೆ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಗೆ ಬಿಜೆಪಿ ನಾಯಕರು ಬಂದಾಗ ಅವರಿಗೆ ರಾಜ್ಯದ ಆತಿಥ್ಯ ನೀಡಲು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಆ ಅವಕಾಶ ನೀಡಲಾಗಿತ್ತು. ಅವರೇನು ದೇಶದ ಸಮಸ್ಯೆ ಚರ್ಚೆ ಮಾಡಲು ಬಂದಿದ್ದರಾ? ಇನ್ನು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಐಎಎಸ್ ಅಧಿಕಾರಿಗಳನ್ನು ಬಳಕೆ ಮಾಡಿಕೊಂಡಿದ್ದರು. ಈಗ ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
ಕಾಂಗ್ರೆಸ್ ಮುಕ್ತ ದೇಶ ಮಾಡುವುದಾಗಿ ಬಿಜೆಪಿಗರು ಹೇಳಿದ್ದರು. ಆದರೆ, ನಾವು ಬಿಜೆಪಿ ಮುಕ್ತ ಎಂದು ಹೇಳುವುದಿಲ್ಲ. ಬಿಜೆಪಿಯವರು ಕೋಮುವಾದಿಗಳಾಗಿದ್ದು, ಸಮಾಜದಲ್ಲಿ ಸಾಮರಸ್ಯವನ್ನು ಹಾಳು ಮಾಡುತ್ತಾರೆ. ಹೀಗಾಗಿ ಅವರು ಅಧಿಕಾರಕ್ಕೆ ಬರಬಾರದು. ಬಿಜೆಪಿಯವರು ಶಾಶ್ವತವಾಗಿ ಪ್ರತಿಪಕ್ಷದ ಸ್ಥಾನದಲ್ಲಿರಬೇಕು. ಬಿಜೆಪಿ ಅವನತಿ ಕರ್ನಾಟಕದಿಂದಲೇ ಪ್ರಾರಂಭವಾಗಿದೆ. ರಾಜ್ಯ ಬಿಜೆಪಿಗರು ಪ್ರಧಾನಿ ನರೇಂದ್ರ ಮೋದಿದ ಅವರ ಮೇಲೆ ಅವಲಂಬಿತರಾಗಿದ್ದಾರೆ. ಆದರೆ, ಈಗ ನರೇಂದ್ರ ಮೋದಿ ಅವರ ವರ್ಚಸ್ಸು ಕಡಿಮೆಯಾಗಿದೆ ಎಂದರು.
ಬಿಜೆಪಿ ರಾಜಕೀಯವಾಗಿ ದಿವಾಳಿ
ರಾಜ್ಯದ ಇತಿಹಾಸದಲ್ಲಿಯೇ ಮೊದಲ ಬಾರಿಗೆ ಪ್ರತಿಪಕ್ಷ ನಾಯಕನಿಲ್ಲದೆ ರಾಜ್ಯಪಾಲರ ಭಾಷಣ, ಬಜೆಟ್ ಮೇಲಿನ ಚರ್ಚೆಯಾಗಿದೆ. ನನ್ನ ರಾಜಕೀಯ ಜೀವನದಲ್ಲಿಯೇ ಸದನದಲ್ಲಿ ಇಂತಹ ಘಟನೆ ನೋಡಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.
ಗ್ಯಾರಂಟಿ ಯೋಜನೆಗಳಿಗೆ ಬೆಚ್ಚಿ ವಿಪಕ್ಷಗಳ ಪಲಾಯನ: ಸಲೀಂ ಅಹ್ಮದ್ ವ್ಯಂಗ್ಯ
ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷ ಮತ್ತು ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ನಡೆಸಿರುವ ಪಕ್ಷ ಬಿಜೆಪಿ. ಆದರೂ ಪ್ರತಿಪಕ್ಷ ನಾಯಕನನ್ನು ಆಯ್ಕೆ ಮಾಡಲು ಸಾಧ್ಯವಾಗದಿರುವುದನ್ನು ಗಮನಿಸಿದರೆ ಬಿಜೆಪಿ ರಾಜಕೀಯವಾಗಿ ದಿವಾಳಿಯಾಗಿದೆ. ಇದು ಪ್ರಜಾಪ್ರಭುತ್ವಕ್ಕೆ ಮಾರಕ. ರಾಜ್ಯಪಾಲರ ವಂದನಾ ನಿರ್ಣಯದ ಮೇಲೆ ಮಾತನಾಡಿ ಬೆಳಕು ಚೆಲ್ಲಬೇಕಾಗಿತ್ತು. ಬಜೆಟ್‌ನಲ್ಲಿನ ತಪ್ಪುಗಳನ್ನು ಸರ್ಕಾರಕ್ಕೆ ಹೇಳಬೇಕಿತ್ತು. ನಾನು ಹೇಳುವ ಉತ್ತರ ಜನಪರವಾಗಿದೆಯೋ? ಇಲ್ಲವೋ ಎಂಬುದನ್ನು ಹೇಳಬೇಕಿತ್ತು. ಆದರೆ, ಗೊಂದಲ, ಗದ್ದಲ, ಪ್ರತಿಭಟನೆಯಲ್ಲಿಯೇ ಮುಳುಗಿದೆ ಎಂದು ಟೀಕಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ