
ಮಂಗಳೂರು (ಜೂ.4) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆರ್‌ಎಸ್‌ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಸೇರಿದಂತೆ ಹಿಂದು ಸಂಘಟನೆಗಳ 15 ಮಂದಿ ವಿರುದ್ಧ ಎಫ್ಐಆರ್ ದಾಖಲಿಸುವ ಮೂಲಕ ಮತ್ತೊಮ್ಮೆ ಕರಾವಳಿ ಭಾಗದ ಹಿಂದೂ ನಾಯಕರು ಮತ್ತು ಸಂಘಟನೆಗಳನ್ನು ಬೆದರಿಸಲು, ವಿಭಜಿಸಲು ಹಾಗೂ ಕಿರುಕುಳ ನೀಡಲು ಆಡಳಿತ ಯಂತ್ರವನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿರುವ ಕಾಂಗ್ರೆಸ್ ಸರ್ಕಾರ, ತನ್ನ ಹುಳುಕನ್ನು ಮರೆಮಾಚಲು ಹತಾಶೆಯಿಂದ ಹಿಂದೂಗಳ ಧ್ವನಿ ಹತ್ತಿಕ್ಕುತ್ತಿದೆ. ಕಲ್ಲಡ್ಕ ಪ್ರಭಾಕರ್ ಭಟ್ ವಿರುದ್ಧ ಪ್ರಕರಣ ದಾಖಲಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡ ಹಾಗೂ ಹಿಂದೂ ನಾಯಕ ಅರುಣ್ ಪುತ್ತಿಲ ಅವರನ್ನು ಕಲಬುರಗಿಗೆ ಗಡಿಪಾರು ಮಾಡಲು ನಿರ್ಧರಿಸಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಸರ್ಕಾರದ ಈ ಸಂವಿಧಾನ ವಿರೋಧಿ, ಅಧಿಕಾರಶಾಹಿ ಹಾಗೂ ಹಿಂದೂ ವಿರೋಧಿ ಕ್ರಮಗಳನ್ನು ಕೂಡಲೆ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.
ಹಿಂದೂ ನಾಯಕರ ದಮನಿಸಲು ಷಡ್ಯಂತ್ರ: ನಳಿನ್ ಕುಮಾರ್
ಮಂಗಳೂರು: ಸುಹಾಸ್ ಶೆಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ನುಡಿನಮನ ಸಲ್ಲಿಸಿದ ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ ಭಟ್ ವಿರುದ್ಧ ಎಫ್‌ಐಆರ್ ದಾಖಲಿಸಿರುವುದು ಖಂಡನೀಯ. ಕಾಂಗ್ರೆಸ್ ಸರ್ಕಾರ ಹಿಂದೂಗಳ ಧ್ವನಿ ಅಡಗಿಸಲು ಷಡ್ಯಂತ್ರ ನಡೆಸಿದ್ದು ಇದರ ವಿರುದ್ಧ ಹೋರಾಟ ಅನಿವಾರ್ಯವಾಗಲಿದೆ ಎಂದು ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.ಅರುಣ್ ಪುತ್ತಿಲ ಅವರಿಗೆ ವಿನಾ ಕಾರಣ ಗಡಿಪಾರು ನೊಟೀಸ್ ನೀಡಲಾಗಿದೆ. ಕಡಬದಲ್ಲಿ ಅಮಾಯಕ ಹಿಂದೂ ಹುಡುಗರ ಮನೆಗೆ ರಾತ್ರಿ ವೇಳೆ ಪೊಲೀಸರು ನುಗ್ಗಿ ಬೆದರಿಸುವ ತಂತ್ರ ನಡೆಸಿದ್ದಾರೆ. ಹಿಂದೂ ನಾಯಕರ ಮೇಲೆ ನಿರಂತರ ಸುಳ್ಳು ಕೇಸು ದಾಖಲಿಸುವ ಪ್ರಯತ್ನ ನಡೆದಿದೆ. ಇದೆಲ್ಲ ಅತಿರೇಕದ ಕ್ರಮವಾಗಿದ್ದು, ಹಿಂದೂ ಸಮಾಜ ಸಹಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಕರಾವಳಿಯಲ್ಲಿ ಹಿಂದೂಗಳೇ ಟಾರ್ಗೆಟ್: ವೇದವ್ಯಾಸ ಕಾಮತ್ಮಂಗಳೂರು: ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ್ ಭಟ್ ಮೇಲೆ ಪ್ರಕರಣ ದಾಖಲಿಸಿರುವುದು, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ ಗಡಿಪಾರಿಗೆ ನೊಟೀಸ್, ರಾತ್ರೋರಾತ್ರಿ ಸಂಘಟನೆಗಳ ಕಾರ್ಯಕರ್ತರ ಮನೆಗೆ ಪೊಲೀಸರನ್ನು ಕಳುಹಿಸುತ್ತಿರುವುದು, 15ಕ್ಕೂ ಹೆಚ್ಚು ಕಾರ್ಯಕರ್ತರ ಮೇಲೆ ಎಫ್ಐಆರ್ ದಾಖಲಿಸಿರುವುದು ಸೇರಿದಂತೆ ಜಿಲ್ಲೆಯಲ್ಲಿ ಹಿಂದೂಗಳ ಪಾಲಿಗೆ ಭಯಭೀತ ವಾತಾವರಣ ಸೃಷ್ಟಿಸಲಾಗುತ್ತಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಆಕ್ಷೇಪಿಸಿದ್ದಾರೆ.
ಜಿಲ್ಲೆಯಲ್ಲಿ ಹಿಂದೂಗಳನ್ನು 2ನೇ ದರ್ಜೆ ನಾಗರಿಕರನ್ನಾಗಿ ನೋಡುತ್ತಿರುವ ಕಾಂಗ್ರೆಸ್ ಸರ್ಕಾರ, ಹಿಂದೂಗಳ ವಿರುದ್ಧ ದಾಳಿ ಮಾಡುವ, ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಎಷ್ಟು ಮತಾಂಧರನ್ನು ಬಂಧಿಸಿದೆ ಎಂಬುದನ್ನು ಬಹಿರಂಗಪಡಿಸಲಿ. ಅದು ಬಿಟ್ಟು ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಎಂಬಂತೆ ತಾಲಿಬಾನ್ ಮಾದರಿ ಆಡಳಿತ ನೀಡುವುದು ಬೇಡ ಎಂದು ಎಚ್ಚರಿಸಿದರು. ಜನರ ತಾಳ್ಮೆಯ ಕಟ್ಟೆಯೊಡೆದರೆ ಮುಂದಾಗುವ ಎಲ್ಲಾ ಅನಾಹುತಗಳಿಗೆ ಪೊಲೀಸ್ ಇಲಾಖೆ ಹಾಗೂ ಸರ್ಕಾರವೇ ಹೊಣೆಯಾಗಬೇಕಾದೀತು. ಹಾಗಾಗಿ ಕೂಡಲೆ ಇಂತಹ ಹಿಂದೂ ವಿರೋಧಿ ನೀತಿಯನ್ನು ಕೈಬಿಡುವಂತೆ ಶಾಸಕರು ಆಗ್ರಹಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ