ಮದ್ದೂರಿನಲ್ಲಿ ಹಿಂದೂಗಳ ಬೃಹತ್‌ ಶಕ್ತಿ ಪ್ರದರ್ಶನ

Kannadaprabha News   | Kannada Prabha
Published : Sep 11, 2025, 06:17 AM IST
maddur ganeshotsav

ಸಾರಾಂಶ

ಭಾನುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆಸಿದ ಕಲ್ಲು ತೂರಾಟದಿಂದ ಪ್ರಕ್ಷುಬ್ಧಗೊಂಡಿದ್ದ ಮದ್ದೂರು, ಬುಧವಾರ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ವೇಳೆಗೆ ಸಂಪೂರ್ಣ ಕೇಸರಿಮಯಗೊಂಡಿತ್ತು.

ಮಂಡ್ಯ/ಮದ್ದೂರು : ಭಾನುವಾರ ರಾತ್ರಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ವೇಳೆ ನಡೆಸಿದ ಕಲ್ಲು ತೂರಾಟದಿಂದ ಪ್ರಕ್ಷುಬ್ಧಗೊಂಡಿದ್ದ ಮದ್ದೂರು, ಬುಧವಾರ ನಡೆದ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ವೇಳೆಗೆ ಸಂಪೂರ್ಣ ಕೇಸರಿಮಯಗೊಂಡಿತ್ತು. ಕ್ಷೇತ್ರ ವ್ಯಾಪ್ತಿಯ ಕೆ.ಎಂ.ದೊಡ್ಡಿ ಸೇರಿ ಸುತ್ತಮುತ್ತಲ ಗ್ರಾಮಗಳ 15ಕ್ಕೂ ಹೆಚ್ಚು ಗಣೇಶ ಮೂರ್ತಿಗಳನ್ನು ಪೊಲೀಸರ ಸರ್ಪಗಾವಲಿನಲ್ಲಿ ಶಿಂಷಾ ನದಿಯಲ್ಲಿ ಸಂಜೆ ವಿಸರ್ಜನೆ ಮಾಡಲಾಯಿತು. ಸುಮಾರು ಐದು ಗಂಟೆಗಳ ಕಾಲ, 3.5 ಕಿ.ಮೀ. ದೂರ ಸಾಗಿದ ಮೆರವಣಿಗೆಯಲ್ಲಿ ಬಿ.ವೈ.ವಿಜಯೇಂದ್ರ, ಆರ್‌.ಅಶೋಕ್‌ ಸೇರಿ ಬಿಜೆಪಿ ನಾಯಕರು, ಜೆಡಿಎಸ್‌ ಮುಖಂಡರು ಪಾಲ್ಗೊಂಡಿದ್ದರು. ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಈ ಐತಿಹಾಸಿಕ ಮೆರವಣಿಗೆಯಲ್ಲಿ ಪಾಲ್ಗೊಂಡು ಡಿಜೆ ಸದ್ದಿಗೆ ಕುಣಿದು ಕುಪ್ಪಳಿಸಿದರು.

ಬೆಳಗ್ಗೆ 10.30ರ ವೇಳೆಗೆ ಕೋಟೆಬೀದಿಯ ಹಳೇ ಬಸ್ ನಿಲ್ದಾಣ ಬಳಿ ಇರುವ ಶ್ರೀ ಕಾಶಿ ವಿಶ್ವನಾಥ ದೇಗುಲಕ್ಕೆ ಆಗಮಿಸಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಡಾ। ಸಿ.ಎನ್.ಅಶ್ವತ್ಥನಾರಾಯಣ, ಬಿಜೆಪಿ ಜಿಲ್ಲಾಧ್ಯಕ್ಷ ಇಂದ್ರೇಶ್‌ ಮತ್ತಿತರ ನಾಯಕರು, ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಪ್ರವಾಸಿಮಂದಿರ ವೃತ್ತಕ್ಕೆ ಆಗಮಿಸಿ, ಅಲ್ಲಿ ಸೇರಿದ್ದ ಗಣೇಶ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಿ, ಮೆರವಣಿಗೆಗೆ ಚಾಲನೆ ನೀಡಿದರು.

ಅಲ್ಲಿಂದ ಆರಂಭವಾದ ಬೃಹತ್ ಮೆರವಣಿಗೆ ಹಿಂದೂಗಳ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಪೂಜಾ ಕುಣಿತ, ಪಟ ಕುಣಿತ, ಗಾರುಡಿಗೊಂಬೆ ಸೇರಿದಂತೆ ಹಲವು ಜಾನಪದ ಕಲಾತಂಡಗಳು ಮೆರವಣಿಗೆಯಲ್ಲಿ ಸಾಗಿ ಬಂದವು. ಡಿಜೆ ಸದ್ದಿನೊಂದಿಗೆ ಸಾಗಿದ ಮೆರವಣಿಗೆಯಲ್ಲಿ ಆರ್‌. ಅಶೋಕ್, ವಿಜಯೇಂದ್ರ, ಡಾ। ಸಿ.ಎನ್.ಅಶ್ವತ್ಥನಾರಾಯಣ, ಸಿ.ಟಿ.ರವಿ ಅವರು ಕೇಸರಿ ಧ್ವಜ ಹಿಡಿದು ಸಾಗಿ ಹಿಂದೂಪರ ಸಂಘಟನೆ ಕಾರ್ಯಕರ್ತರನ್ನು ಹುರಿದುಂಬಿಸಿದರು. ಕಾರ್ಯಕರ್ತರೂ ಸಹ ತಮ್ಮ ನಾಯಕರನ್ನು ಎತ್ತಿಕೊಂಡು ಕುಣಿದು ಕುಪ್ಪಳಿಸಿದರು. ನಾಯಕರು ಕೂಡ ಡಿಜೆ, ತಮಟೆ ಸದ್ದಿನೊಂದಿಗೆ ಹೆಜ್ಜೆ ಹಾಕಿದರು. ಮೆರವಣಿಗೆಯುದ್ದಕ್ಕೂ ಜೈಶ್ರೀರಾಮ್ ಘೋಷಣೆಗಳು, ಸಿಡಿಮದ್ದುಗಳ ಅಬ್ಬರ ತುಂಬಿತ್ತು. ಮೆರವಣಿಗೆಯಲ್ಲಿ ಗಣೇಶ ಮೂರ್ತಿಯನ್ನು ಹಿಡಿದು ನಿಂತಿರುವ ಅಂಬರೀಶ್ ಸ್ತಬ್ಧ ಚಿತ್ರ ಎಲ್ಲರ ಗಮನ ಸೆಳೆಯಿತು.

ಮೆರವಣಿಗೆ ಕೆಮ್ಮಣ್ಣುನಾಲಾ ವೃತ್ತದ ಸಮೀಪವಿರುವ ಮುಖ್ಯ ಮಸೀದಿ ಬಳಿ ಬಂದಾಗ ಒಂದು ಮೂಟೆ ಕರ್ಪೂರ ಸುರಿದ ಹಿಂದೂ ಕಾರ್ಯಕರ್ತರು, ಬೆಂಕಿ ಹಚ್ಚಿ, ಮುಸ್ಲಿಮರ ವಿರುದ್ಧ ಘೋಷಣೆಗಳನ್ನು ಕೂಗಿದರು. ಈ ಸಮಯದಲ್ಲಿ ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಪೊಲೀಸರು ಹಿಂದೂ ಕಾರ್ಯಕರ್ತರನ್ನು ಸಮಾಧಾನಪಡಿಸಿ, ಅಲ್ಲಿಂದ ತೆರಳುವಂತೆ ಮಾಡಿದರು.

ಬಳಿಕ, ಪೇಟೆ ಬೀದಿ ಮೂಲಕ ಕೊಲ್ಲಿ ಸರ್ಕಲ್‌ನಿಂದ ಶಿಂಷಾ ನದಿ ದಡಕ್ಕೆ ಮೆರವಣಿಗೆ ಆಗಮಿಸಿತು. ಶಿಂಷಾ ನದಿಯ ದಡದಲ್ಲಿ ಗಣೇಶಮೂರ್ತಿಗಳಿಗೆ ಪೂಜೆ ಸಲ್ಲಿಸಿ, ವಿಸರ್ಜನೆಗೆ ಅನುವು ಮಾಡಿಕೊಡಲಾಯಿತು. ಬಳಿಕ, ಅಗ್ನಿಶಾಮಕ ದಳದ ಸಿಬ್ಬಂದಿ ಬೋಟ್ ಮೂಲಕ‌ ತೆರಳಿ ನದಿಯಲ್ಲಿ ಗಣಪತಿ ವಿಸರ್ಜನೆ ಮಾಡಿದರು. ಸುಮಾರು ಐದು ಗಂಟೆಗಳ ಕಾಲ, 3.5 ಕಿ.ಮೀ. ದೂರ ಸಾಗಿದ ಮೆರವಣಿಗೆಯಲ್ಲಿ ಸುಮಾರು 15 ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.

ವೇದಿಕೆ ಸಭೆ:

ಬಳಿಕ, ಪಟ್ಟಣದ ಪುರಸಭೆ ಉದ್ಯಾನದ ಎದುರು ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ವೇದಿಕೆ ಕಾರ್ಯಕ್ರಮ ನಡೆಯಿತು. ಸಭೆಯಲ್ಲಿ ಬಿಜೆಪಿ, ಜೆಡಿಎಸ್‌ ನಾಯಕರು ಪಾಲ್ಗೊಂಡಿದ್ದರು. ಸಭೆ ಮುಗಿದ ಬಳಿಕ ಬಿಜೆಪಿ ನಾಯಕರು ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ ಚನ್ನೇಗೌಡ ಬಡಾವಣೆಯ ನಿಂಗಮ್ಮ ಮತ್ತು ಅಜಯ್ ಅವರ ನಿವಾಸಕ್ಕೆ ತೆರಳಿ, ಅವರ ಯೋಗಕ್ಷೇಮ ವಿಚಾರಿಸಿ, ಸಾಂತ್ವನ ಹೇಳಿದರು. ಚಿಕಿತ್ಸೆಗಾಗಿ ವೈಯಕ್ತಿಕವಾಗಿ ತಲಾ ₹10 ಸಾವಿರ ಆರ್ಥಿಕ ನೆರವು ನೀಡಿದರು.

ಮುಸ್ಲಿಂ ಓಲೈಕೆಗಾಗಿ ಕೈ ಕುಮ್ಮಕ್ಕು: ಬಿವೈವಿ ಟೀಕೆಅಲ್ಪಸಂಖ್ಯಾತರ ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸಕ್ಕೆ ಕುಮ್ಮಕ್ಕು ನೀಡುತ್ತಿದೆ. ಅಯೋಗ್ಯ ಕಾಂಗ್ರೆಸ್ಸಿಗರ ಮಾತು ಕಟ್ಟಿಕೊಂಡು ಮುಸ್ಲಿಂ ಯುವಕರು ಕಲ್ಲು ಎಸೆಯುವ ಕೆಲಸ ಮಾಡುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತಿಳಿಸಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್‌ ಮುಸ್ಲಿಂ ಯುವಕರ ಭವಿಷ್ಯವನ್ನು ಕಾಂಗ್ರೆಸ್ ಹಾಳು ಮಾಡುತ್ತಿದೆ. ಈ ಬಗ್ಗೆ ಮುಸ್ಲಿಂ ಧರ್ಮ ಗುರುಗಳು ಎಚ್ಚೆತ್ತುಕೊಳ್ಳಬೇಕು. ಸಿಎಂ ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಗಮನಿಸಿದರೆ ಹಿಂದೂಗಳ ಮತ ಪಡೆಯದೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರಿಗೆ ಕೇಸರಿ ಕಂಡರೆ ಆಗೋಲ್ಲ. ಕಿತ್ತು ಬಿಸಾಕುತ್ತಾರೆ. ಎಲ್ಲೋ ಒಂದು ಕಡೆ ಅವರೇ ಗಲಾಟೆಗಳಿಗೆ ಕುಮ್ಮಕ್ಕು ನೀಡುತ್ತಿರುವಂತೆ ಕಂಡುಬರುತ್ತಿದೆ. ರಾಜ್ಯ ಸರ್ಕಾರವೇ ಇದರ ಹೊಣೆ ಹೊರಬೇಕು ಎಂದು ಒತ್ತಾಯಿಸಿದರು.

ಹಿಂದೂ ಮಹಿಳೆಯರು ಯಾವತ್ತು ರಸ್ತೆಗಿಳಿದು ಆಕ್ರೋಶ ವ್ಯಕ್ತಪಡಿಸಿರಲಿಲ್ಲ. ಮದ್ದೂರಿನಲ್ಲಿ ಗಾಂಜಾ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ರಸ್ತೆಯಲ್ಲಿ ಹೆಣ್ಣು ಮಕ್ಕಳು ನಡೆದುಕೊಂಡು ಹೋಗುವುದಕ್ಕೆ ಆಗುತ್ತಿಲ್ಲ. ಹಾಗಾಗಿ ಮಹಿಳೆಯರು ಹೋರಾಟಕ್ಕೆ ಇಳಿದಿದ್ದಾರೆ. ಹಿಂದೂ ಸಂಘಟನೆಗಳಿಗೆ ಧೈರ್ಯ ತುಂಬುವ ಕರ್ತವ್ಯ ನಮ್ಮದು. ಇದನ್ನು ರಾಜಕಾರಣ ಎಂದಾದರೂ ಭಾವಿಸಲಿ, ಏನಂತಾದರೂ ತಿಳಿಯಲಿ. ನಮ್ಮ ಕರ್ತವ್ಯ ನಾವು ಮಾಡುತ್ತೇವೆ ಎಂದರು.ಸಿದ್ದುರನ್ನು ಪಾಕಿಸ್ತಾನಕ್ಕೆ ಕಳಿಸಬೇಕು: ಅಶೋಕ್ಸಿಎಂ ಸಿದ್ದರಾಮಯ್ಯ ಬೆಂಬಲ ಮುಸಲ್ಮಾನರ ಕಡೆಗೆ ಹೆಚ್ಚಾಗಿರುವುದರಿಂದ ಅವರನ್ನು ಪಾಕಿಸ್ತಾನಕ್ಕೆ ಕಳುಹಿಸಬೇಕು. ಕರ್ನಾಟಕವನ್ನು ಇಟಲಿ ಸರ್ಕಾರ, ತಾಲಿಬಾನ್, ಮುಲ್ಲಾ ಸರ್ಕಾರ ಆಗಲು ಬಿಡುವುದಿಲ್ಲ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪಟ್ಟಣದಲ್ಲಿ ಸಾಮೂಹಿಕ ಗಣೇಶ ವಿಸರ್ಜನಾ ಮೆರವಣಿಗೆ ಅಂಗವಾಗಿ ಬುಧವಾರ ಏರ್ಪಡಿಸಿದ್ದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿ, ಕಲ್ಲು ತೂರಾಟ ಘಟನೆ ಮರೆತರೇ ನಮಗೆ ಉಳಿಗಾಲವಿಲ್ಲ. ನಾವು ಜೆಡಿಎಸ್‌ನವರು ಹಾಲು-ಜೇನು ರೀತಿ ಇದ್ದೇವೆ. ಮುಂದೆ ಕಾಂಗ್ರೆಸ್ ಸರ್ಕಾರವನ್ನು ಕಿತ್ತೆಸೆಯಬೇಕು. ಕಾಂಗ್ರೆಸ್‌ನವರನ್ನು ಹೀಗೆಯೇ ಬಿಟ್ಟರೆ ಮುಂದೆ ಗಣಪತಿ ಹಬ್ಬವನ್ನೇ ನಿಷೇಧಿಸುತ್ತಾರೆ. ಹಿಂದೂ ಸಂಘಟನೆಗಳ ಹೋರಾಟ ರಾಷ್ಟ್ರಮಟ್ಟದಲ್ಲಿ ಗಮನಸೆಳೆಯುತ್ತಿದೆ. ಇದಕ್ಕೇ ಮಂಡ್ಯ ಅಂದ್ರೆ ಇಂಡಿಯಾ ಅನ್ನೋದು ಎಂದು ಹೇಳಿದರು.

ಡಿಕೆಶಿ ಮಂಡ್ಯದವರನ್ನು ಛತ್ರಿಗಳು ಎಂದಿದ್ದರು. ಈಗ ತಮ್ಮ ಛತ್ರಿ ಕೆಲಸ ತೋರಿಸಿದ್ದಾರೆ. ಸಿದ್ದರಾಮಯ್ಯ ಮುಲ್ಲಾಗಳ ಟೋಪಿ ಹಾಕಿಕೊಂಡು ಹಿಂದೂಗಳಿಗೆ ಟೋಪಿ ಹಾಕುತ್ತಾರೆ. ಮೊದಲು ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡಿ ಬುರುಡೆ ಬಿಟ್ಟರು. ಈಗ ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿಯಲ್ಲ ಎನ್ನುತ್ತಿದ್ದಾರೆ. ಹಿಂದೂ ವಿರೋಧಿ ಭಾವನೆ ಹೊಂದಿರುವ ನಿಮಗೆ ಸರಿಯಾದ ಪಾಠ ಕಲಿಸುತ್ತೇವೆ. ಇನ್ನೂ ಎರಡೇ ವರ್ಷ ನಿಮ್ಮ ಅಧಿಕಾರ, ಮುಂದೆ ಬಿಜೆಪಿ ಸರ್ಕಾರ ಬರುತ್ತೆ. ಇನ್ಮುಂದೆ ರಾಜ್ಯದಲ್ಲಿ ಬಿಜೆಪಿ ಹವಾ ಶುರುವಾಗಲಿದೆ ಎಂದು ಭವಿಷ್ಯ ನುಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸ್ತ್ರಿರೋಗ ತಜ್ಞೆ, ಪುತ್ರನ ದುರಂತ ಅಂತ್ಯ, ರಾತ್ರಿ ಜಗಳವಾಡಿದ ಇಬ್ಬರು ಬೆಳಗ್ಗೆ ಶವವಾಗಿ ಪತ್ತೆ
ಶ್ರೀರಂಗಪಟ್ಟಣ ಮಸೀದಿ ಕೆಡವುತ್ತೇವೆಂದರೆ? ನಾವು ಕೈಗೆ ಬಳೆ ತೊಟ್ಟು ಕೂತಿಲ್ಲ-ಅಬ್ದುಲ್ ರಜಾಕ್!