
ಬೆಂಗಳೂರು : ಪೋಷಕರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಮತ್ತು ನಿರ್ವಹಣಾ ಕಾಯ್ದೆ-2007ರ ಅಡಿಯಲ್ಲಿ ಹಾಲಿಯಿರುವ 10 ಸಾವಿರ ರು. ನಿರ್ವಹಣಾ ಶುಲ್ಕದ ಮಿತಿಯನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್ ಶಿಫಾರಸು ಮಾಡಿದೆ.
ಆಸ್ತಿ ವ್ಯಾಜ್ಯ ಕುರಿತಂತೆ ಕಿರುಕುಳ ನೀಡಿದ ಆರೋಪದ ಮೇಲೆ ತಂದೆ ಹೀರಾಲಾಲ್ ಬೋಹ್ರಾ ಮತ್ತು ಮಲತಾಯಿ ನಿರ್ಮಲಾ ಬೋಹ್ರಾಗೆ ಪರಿಹಾರದ ರೂಪದಲ್ಲಿ ಐದು ಲಕ್ಷ ರು. ಪಾವತಿಸುವಂತೆ ಸೂಚಿಸಿ ಬೆಂಗಳೂರಿನ ಉಪವಿಭಾಗಾಧಿಕಾರಿ ಹೊರಡಿಸಿದ ಆದೇಶ ಪ್ರಶ್ನಿಸಿ ಸುನಿಲ್ ಎಚ್.ಬೋಹ್ರಾ ಹಾಗೂ ಸಹೋದರರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠ ಈ ಆದೇಶ ಮಾಡಿದೆ.
ಕೇಂದ್ರ ಸರ್ಕಾರ ಸೆಕ್ಷನ್ -9 ಅನ್ನು ಮರುಪರಿಶೀಲಿಸಿ ಜೀವನ ನಿರ್ವಹಣಾ ವೆಚ್ಚ ಪರಿಗಣಿಸಿ ಹಣದುಬ್ಬರ ಸೂಚ್ಯಂಕಕ್ಕೆ ಅನುಗುಣವಾಗಿ ಮಿತಿ ಪರಿಷ್ಕರಿಸುವಂತೆ ಶಿಫಾರಸು ಮಾಡುವುದು ಸೂಕ್ತ. ನಿರ್ವಹಣಾ ಶುಲ್ಕ ವಾಸ್ತವ ಜೀವನಕ್ಕೆ ಹೊಂದಿಕೆಯಾಗಬೇಕು. ನಿರ್ವಹಣಾ ಮೊತ್ತದ ಮೇಲಿನ ಮಿತಿ ಪರಿಷ್ಕರಿಸಲು ಇದು ಸೂಕ್ತ ಸಮಯ. ವೃದ್ಧಾಪ್ಯದಲ್ಲಿ ಘನತೆಯ ಜೀವನ ಖಾತರಿಯಾಗಿ ಉಳಿಯಬೇಕು. ಜೀವನದ ಸಂಧ್ಯಾಕಾಲ ಕೊರತೆಯಿಂದ ನೆರಳಾಗಬಾರದು. ರಾಷ್ಟ್ರದ ಸಂಪತ್ತನ್ನು ಅದರ ಭೌತಿಕ ಪ್ರಗತಿಯಿಂದ ಅಳೆಯಲಾಗುವುದಿಲ್ಲ. ಬದಲಿಗೆ ಮಕ್ಕಳ ಕಲ್ಯಾಣ ಮತ್ತು ವೃದ್ಧರ ಆರೈಕೆಯಿಂದ ಅಳೆಯಲಾಗುತ್ತದೆ ಎಂದು ಪೀಠ ಹೇಳಿದೆ.
ಅರ್ಜಿದಾರರು ರಾಜರಾಮ್ ಮೋಹನ್ ರಾಯ್ ಎಕ್ಸ್‌ಟೆನ್ಷನ್ ನಿವಾಸಿಗಳಾದ ಹೇಮಂತ್ ಎಚ್.ಬೋಹ್ರಾ ಅವರ ಮಕ್ಕಳಾಗಿದ್ದಾರೆ. ನಿರ್ಮಲಾ ಅವರು ಅರ್ಜಿದಾರರ ಮಲತಾಯಿ ಆಗಿದ್ದಾರೆ. ಹೇಮಂತ್ ಬೋಹ್ರಾ ಅವರು ತಮ್ಮ ಪಿತ್ರಾರ್ಜಿತ ಆಸ್ತಿ ಹೊಂದಿದ್ದಾರೆ. ಇನ್ನೂ ಅರ್ಜಿದಾರರು ಮತ್ತು ಹೇಮಂತ್ ಮತ್ತು ನಿರ್ಮಿಲಾ ಅವರು ಕೆಲ ಆಸ್ತಿ ಜಂಟಿಯಾಗಿ ಹೊಂದಿದ್ದಾರೆ. ಅರ್ಜಿದಾರರು ಮತ್ತು ನಿರ್ಮಲಾ ನಡುವೆ ಆಸ್ತಿ ವ್ಯಾಜ್ಯ ಉಂಟಾಗಿದ್ದು, ಈ ವಿಚಾರವಾಗಿ ತಮಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ನಿರ್ಮಿಲಾ, ಬೆಂಗಳೂರು ಉಪ ವಿಭಾಗಾಧಿಕಾರಿಗೆ ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ