ತರಾತುರಿ ವಿಜಯೋತ್ಸವ ಏಕೆ ಬೇಕಿತ್ತು? ಅಮಾನತು ಅವಶ್ಯ ಇರಲಿಲ್ಲ : ಭಾಸ್ಕರರಾವ್‌

Published : Jun 12, 2025, 05:46 AM IST
M Bhaskar Rao

ಸಾರಾಂಶ

ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಎಂ.ಭಾಸ್ಕರ್ ರಾವ್‌ ಅವರು ಕನ್ನಡಪ್ರಭದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...

 ಮೋಹನ ಹಂಡ್ರಂಗಿ

ಆರ್‌ಸಿಬಿ ಕ್ರಿಕೆಟ್ ತಂಡದ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಅಮಾಯಕರು ಪ್ರಾಣ ಕಳೆದುಕೊಂಡ ದುರಂತದ ಬಗ್ಗೆ ದೇಶಾದ್ಯಂತ ತೀವ್ರ ಚರ್ಚೆ ನಡೆಯುತ್ತಿದೆ. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇ ಈ ದುರಂತಕ್ಕೆ ಕಾರಣ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ಮತ್ತೊಂದೆಡೆ ಪೊಲೀಸ್‌ ಇಲಾಖೆಯ ಭದ್ರತಾ ವೈಫಲ್ಯವೇ ಕಾರಣ ಎನ್ನಲಾಗುತ್ತಿದೆ. ದುರಂತ ಸಂಬಂಧ ರಾಜ್ಯ ಸರ್ಕಾರ ಸಿಐಡಿ ತನಿಖೆ, ಮ್ಯಾಜಿಸ್ಟ್ರಿಯಲ್‌ ವಿಚಾರಣೆ ಮತ್ತು ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ನ್ಯಾಯಾಂಗ ವಿಚಾರಣೆಗೆ ಆದೇಶಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಮಾಜಿ ಪೊಲೀಸ್ ಆಯುಕ್ತ ಹಾಗೂ ಬಿಜೆಪಿ ಮುಖಂಡ ಎಂ.ಭಾಸ್ಕರ್ ರಾವ್‌ ಅವರು ಕನ್ನಡಪ್ರಭದೊಂದಿಗೆ ‘ಮುಖಾಮುಖಿ’ಯಾಗಿದ್ದು ಹೀಗೆ...

*ಚಿನ್ನಸ್ವಾಮಿ ಕ್ರಿಕೆಟ್‌ ಸ್ಟೇಡಿಯಂನ ಕಾಲ್ತುಳಿತ ದುರಂತಕ್ಕೆ ನಿಮ್ಮ ಪ್ರಕಾರ ಕಾರಣವೇನು?

-ಯಾವುದೇ ಮುಂಜಾಗೃತಾ ಕ್ರಮ ಕೈಗೊಳ್ಳದೆ ತರಾತುರಿಯಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ ಆಡಳಿತ ವ್ಯವಸ್ಥೆಯೇ ಈ ದುರಂತಕ್ಕೆ ಕಾರಣ. ಈ ಘಟನೆಯಿಂದ ಕಾನೂನು ಮತ್ತು ಸುವ್ಯವಸ್ಥೆ ಬಗ್ಗೆ ವಿಶ್ವಾಸವುಳ್ಳ ಅತ್ಯಂತ ಅಮಾಯಕ 11 ಮಂದಿ ಕ್ರಿಕೆಟ್‌ ಪ್ರೇಮಿಗಳು ಬಲಿಯಾದರು. ಇದು ಬಹುಕಾಲ ಕಾಡುವ ಘಟನೆಯಾಗಿದೆ.

*ಪೊಲೀಸರ ಭದ್ರತಾ ವೈಫಲ್ಯವೇ ದುರಂತಕ್ಕೆ ಕಾರಣ ಎಂಬ ಗಂಭೀರ ಆರೋಪವಿದೆ?

-ಅಂತಿಮವಾಗಿ ಪೊಲೀಸರನ್ನು ದೋಷಿಗಳು ಎನ್ನುವುದು ಬಹಳ ಸುಲಭ. ಈ ಹಂತಕ್ಕೆ ಬರುವ ಮುನ್ನ ಘಟನೆಗೆ ನಿಜವಾದ ಕಾರಣಗಳನ್ನು ವಿಶ್ಲೇಷಣೆ ಮಾಡಬೇಕು. ಸರ್ಕಾರ ಪೊಲೀಸರ ಮಾತು ಏಕೆ ಕೇಳಲಿಲ್ಲ? ಮುಂಬೈ, ಚೆನ್ನೈ, ಕೋಲ್ಕತಾ ಸೇರಿದಂತೆ ಇತರೆ ಐಪಿಎಲ್‌ ತಂಡಗಳು ಟ್ರೋಫಿ ಗೆದ್ದಾಗ ವಿಜಯೋತ್ಸವ ಮಾಡಿವೆ. ಅಲ್ಲಿ ಏಕೆ ಇಂತಹ ದುರಂತಗಳು ನಡೆಯಲಿಲ್ಲ. ಏಕೆಂದರೆ, ಆ ತಂಡಗಳು ಒಂದಕ್ಕಿಂತ ಹೆಚ್ಚು ಬಾರಿ ಟ್ರೋಫಿ ಗೆದ್ದಿದ್ದವು. ಅಲ್ಲಿನ ಜನರಲ್ಲಿ ಅಷ್ಟು ಉತ್ಸಾಹ ಇರಲಿಲ್ಲ. ಇಲ್ಲಿ ಆರ್‌ಸಿಬಿ 18 ವರ್ಷಗಳ ಐಪಿಎಲ್‌ ಇತಿಹಾಸದಲ್ಲಿ ಪ್ರಥಮ ಬಾರಿಗೆ ಟ್ರೋಫಿ ಗೆದ್ದಿದೆ. ಸಹಜವಾಗಿ ಕನ್ನಡಿಗರಲ್ಲಿ ಉತ್ಸಾಹ ಹೆಚ್ಚಾಗಿದೆ. ನಗರದಲ್ಲಿನ ಕನ್ನಡೇತರರು ಸಹ ಆರ್‌ಸಿಬಿ ಗೆಲುವನ್ನು ಸಂಭ್ರಮಿಸಿದ್ದಾರೆ. ವಾಸ್ತವ ಹೀಗಿರುವಾಗ ತರಾತುರಿಯಲ್ಲಿ ವಿಜಯೋತ್ಸವ ಆಚರಿಸುವ ಅಗತ್ಯವೇನಿತ್ತು? ಬಂದೋಬಸ್ತ್‌ ವ್ಯವಸ್ಥೆ ಮಾಡಿಕೊಳ್ಳಲು ಪೊಲೀಸರಿಗೆ ಸಮಯ ನೀಡದೆ ಕಾರ್ಯಕ್ರಮ ಮಾಡಿ ಈಗ ದುರಂತಕ್ಕೆ ಪೊಲೀಸರ ವೈಫಲ್ಯ ಕಾರಣ ಎನ್ನುವುದು ಸರಿಯಲ್ಲ.

*ಕಾಲ್ತುಳಿತ ದುರಂತ ಸಂಬಂಧ ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಪೊಲೀಸ್‌ ಆಯುಕ್ತ ಸೇರಿ ಮೂವರು ಐಪಿಎಸ್ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ?

-ಬೆಂಗಳೂರು ನಗರ ಪೊಲೀಸ್‌ ಆಯುಕ್ತರ ಹುದ್ದೆ ಅತ್ಯಂತ ಸೂಕ್ಷ್ಮ ಹುದ್ದೆ. ಬಹಳ ಯೋಚನೆ ಮಾಡಿ ಆಯಾ ಸರ್ಕಾರಗಳು ಸಮರ್ಥ ಅಧಿಕಾರಿಯನ್ನು ಈ ಹುದ್ದೆಗೆ ನೇಮಿಸುತ್ತವೆ. ಏಕೆಂದರೆ, ಸರ್ಕಾರಕ್ಕೆ ನಗರ ಪೊಲೀಸ್‌ ಆಯುಕ್ತರ ಬಗ್ಗೆ ಸಾಕಷ್ಟು ನಿರೀಕ್ಷೆಗಳು ಇರುತ್ತವೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವುದರೊಂದಿಗೆ ಪಕ್ಷದ ನೀತಿಗಳು, ಸರ್ಕಾರದ ನೀತಿಗಳನ್ನು ಅನುಷ್ಠಾನಕ್ಕೆ ತರಬೇಕು. ಬೆಂಗಳೂರು ಒಂದು ಹಳ್ಳಿ ಅಥವಾ ಪಟ್ಟಣ ಅಲ್ಲ. ಅಂತಾರಾಷ್ಟ್ರೀಯ ಮಹಾನಗರ. ಇಲ್ಲಿ ಸುಮಾರು 1.40 ಕೋಟಿ ಜನಸಂಖ್ಯೆ ಇದೆ. ನಗರ ಪೊಲೀಸ್‌ ಆಯುಕ್ತರು ಹಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕು. ಪೊಲೀಸ್‌ ಆಯುಕ್ತರ ಕಾರ್ಯ ವೈಖರಿ ಬಗ್ಗೆ ಅಸಮಾಧಾನ ಇದ್ದಲ್ಲಿ ವರ್ಗಾವಣೆ ಮಾಡಬೇಕು ಅಥವಾ ರಜೆ ಮೇಲೆ ಕಳುಹಿಸಬೇಕು. ಏಕಾಏಕಿ ಹೀಗೆ ಅಮಾನತು ಮಾಡಿದರೆ ಪೊಲೀಸ್‌ ವ್ಯವಸ್ಥೆಯ ಮನೋಬಲ ಕುಸಿಯುತ್ತದೆ.

*ಅಂದರೆ, ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಲಾಯಿತೆ?

-ಯಾವುದೇ ಸರ್ಕಾರ ಇದ್ದಾಗ ಭದ್ರತೆ ನೀಡುವುದು ಪೊಲೀಸ್‌ ಇಲಾಖೆಯ ಕರ್ತವ್ಯ. ಅಂದರೆ, ಸರ್ಕಾರದ ಪರವೇ ಕೆಲಸ ಮಾಡಬೇಕು. ಹಲವು ಸಂದರ್ಭಗಳಲ್ಲಿ ದಾಖಲೆ ಇಲ್ಲದೆ ಕೆಲಸಗಳನ್ನು ಮಾಡಬೇಕು. ಕೆಲ ವೇಳೆ ಸುಳ್ಳು ಎನ್‌ಕೌಂಟರ್‌ ಮಾಡಬೇಕಾಗುತ್ತದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ಹಿಂದೆಯೂ ಈ ರೀತಿ ನಡೆದಿವೆ. ಈಗಲೂ ನಡೆಯುತ್ತಿವೆ. ಮುಂದೆಯೂ ನಡೆಯುತ್ತವೆ. ಸಮಾಜದ ಸ್ವಾಸ್ಥ್ಯ ಹಾಗೂ ಭದ್ರತೆ ದೃಷ್ಟಿಯಿಂದ ಪೊಲೀಸ್‌ ಇಲಾಖೆ ಕೆಲಸ ಮಾಡುತ್ತದೆ. ಯಾವುದೇ ಪಕ್ಷದ ಸರ್ಕಾರ ಇದ್ದರೂ ನಮ್ಮ ಸರ್ಕಾರ, ನಮ್ಮ ಸಿಎಂ ಎಂಬ ಭಾವನೆಯಲ್ಲಿ ಪೊಲೀಸ್‌ ಅಧಿಕಾರಿಗಳು ಕೆಲಸ ಮಾಡುತ್ತಾರೆ. ಹೀಗಿರುವಾಗ ಪೊಲೀಸರನ್ನೇ ಹೊಣೆಗಾರರನ್ನಾಗಿ ಮಾಡುವುದು ಸರಿ ಕಾಣುವುದಿಲ್ಲ. ನಗರ ಪೊಲೀಸ್‌ ಆಯುಕ್ತರನ್ನೇ ಅಮಾನತು ಮಾಡಿದರೆ, ಪೊಲೀಸರನ್ನು ಯಾರು ನಂಬುತ್ತಾರೆ. ಸೂಕ್ಷ್ಮ ಕೆಲಸಗಳನ್ನು ಮಾಡುವುದು ಹೇಗೆ?

*ತರಾತುರಿಯಲ್ಲಿ ಕಾರ್ಯಕ್ರಮ ಬೇಡ ಎಂಬ ಪೊಲೀಸರ ಅಭಿಪ್ರಾಯ ಬಳಿಕವೂ ಕಾರ್ಯಕ್ರಮ ಆಯೋಜಿಸಲಾಯಿತು ಎನ್ನಲಾಗುತ್ತಿದೆ?

-ವಿಧಾನಸೌಧದ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ಮಾಡುವುದು ಅಷ್ಟು ಸುಲಭವಲ್ಲ. ಮೊದಲಿಗೆ ಸಂಬಂಧಿತ ಇಲಾಖೆಗಳಿಂದ ಅನುಮತಿ ಪಡೆಯಬೇಕು. ಆ ಕಾರ್ಯಕ್ರಮಕ್ಕೆ ಯಾರು ಬರುತ್ತಾರೆ? ಎಷ್ಟು ಮಂದಿ ಬರುತ್ತಾರೆ? ಅತಿಥಿಗಳು ಯಾರು? ಇತ್ಯಾದಿ ನೂರೆಂಟು ಮಾಹಿತಿ ಸಂಗ್ರಹಿಸಬೇಕು. ಬಳಿಕ ಸೂಕ್ತ ಬಂದೋಬಸ್ತ್‌ ಮಾಡಬೇಕು. ಇಲ್ಲಿ ಆರ್‌ಸಿಬಿ ತಂಡ ಜೂ.3ರ ರಾತ್ರಿ ಗೆದ್ದಿದೆ. ಮಾರನೇ ದಿನವೇ ವಿಧಾನಸೌಧದ ಮೆಟ್ಟಿಲುಗಳ ಸನ್ಮಾನ ಕಾರ್ಯಕ್ರಮ ಮಾಡಲಾಗಿದೆ. ಸರ್ಕಾರ ವಿಧಾನಸೌಧದ ಬಳಿ ಯಾವುದೇ ಅಹಿತರ ಘಟನೆಗಳು ನಡೆದಿಲ್ಲ ಎಂದು ಹೇಳಿದರೂ ಘೋರ ಲೋಪಗಳಾಗಿವೆ. ಇನ್ನು ಎಂ.ಚಿನ್ನಸ್ವಾಮಿ ಸ್ಟೇಡಿಯಂ ತಮಿಳುನಾಡಿನಲ್ಲಿ ಇದೆಯಾ? ಅಲ್ಲಿ ನಡೆದ ಘಟನೆಗೆ ರಾಜ್ಯ ಸರ್ಕಾರವೂ ಹೊಣೆ.

*ಹಾಗಾದರೆ, ಈ ದುರಂತದಲ್ಲಿ ಆರ್‌ಸಿಬಿ ಫ್ರಾಂಚೈಸಿ ಹಾಗೂ ಕೆಎಸ್‌ಸಿಎ ಪಾತ್ರ ಇಲ್ಲವೇ?

-ಆರ್‌ಸಿಬಿ ತಂಡ ರಾಜ್ಯದ ತಂಡವೇ? ಈ ತಂಡದಲ್ಲಿ ಸರ್ಕಾರದ ಬಂಡವಾಳ ಏನಾದರೂ ಇದೆಯಾ? ಆರ್‌ಸಿಬಿ ಖಾಸಗಿ ಕಂಪನಿಗೆ ಸೇರಿದ ಕ್ರಿಕೆಟ್‌ ತಂಡ. ಈ ಕ್ರಿಕೆಟ್‌ ತಂಡಕ್ಕೂ ರಾಜ್ಯ ಸರ್ಕಾರಕ್ಕೂ ಸಂಬಂಧವೇನು? ಐಪಿಎಲ್‌ ಎಂಬುದು ಹಣದ ಹೊಳೆ ಹರಿಯುವ ಕ್ರಿಕೆಟ್‌ ಟೂರ್ನಿ. ಇದರಲ್ಲಿ ಆರ್‌ಸಿಬಿ ಫ್ರಾಂಚೈಸಿ, ಬಿಸಿಸಿಐ, ಕೆಎಸ್‌ಸಿಎಗೆ ಲಾಭ ಇದೆಯೇ ಹೊರತು ರಾಜ್ಯ ಸರ್ಕಾರಕ್ಕೆ ಯಾವುದೇ ಲಾಭವಿಲ್ಲ. ಈ ದುರಂತದಲ್ಲಿ ಆರ್‌ಸಿಬಿ ಫ್ರಾಂಚೈಸಿ ಹಾಗೂ ಕೆಎಸ್‌ಸಿಎ ನಿರ್ಲಕ್ಷ್ಯವೂ ಇದೆ. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಅಗತ್ಯ ವ್ಯವಸ್ಥೆ ಮಾಡಬೇಕಿತ್ತು. ಪಂದ್ಯ ನಡೆದಾಗ ಇವರೇನು ಉಚಿತವಾಗಿ ಕ್ರಿಕೆಟ್‌ ನೋಡಲು ಬಿಡುವುದಿಲ್ಲ. ಹಣ ಪಡೆದು ಟಿಕೆಟ್‌ ನೀಡುತ್ತಾರೆ. ಕೊಟ್ಯಂತರ ರು. ಆದಾಯ ಮಾಡಿಕೊಳ್ಳುತ್ತಾರೆ. ಹೀಗಿರುವಾಗ ಸ್ಟೇಡಿಯಂ ಬಳಿ ಅಗತ್ಯ ಸೌಲಭ್ಯ ಕಲ್ಪಿಸಬೇಕು. ಅಂದು ಬೆಳಗ್ಗೆಯೇ ಆರ್‌ಸಿಬಿ ಸ್ಟೇಡಿಯಂನಲ್ಲಿ ವಿಜಯೋತ್ಸವ ಆಚರಿಸುವ ಬಗ್ಗೆ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿತು. ಇದಕ್ಕೆ ಅನುಮತಿ ಕೊಟ್ಟವರು ಯಾರು? ಹೀಗಾಗಿ ಪಟ್ಟಿ ಮಾಡುತ್ತಾ ಹೋದರೆ, ಘಟನೆಗೆ ನೂರೆಂಟು ಕಾರಣಗಳು ಸಿಗುತ್ತವೆ.

*ಈ ಕಾಲ್ತುಳಿತ ಘಟನೆಯಿಂದ ಬೆಂಗಳೂರು ಖ್ಯಾತಿಗೆ ಜಾಗತಿಕ ಮಟ್ಟದಲ್ಲಿ ಕಪ್ಪು ಚುಕ್ಕೆ ಬಿದ್ದಿತೆ?

-ನೂರಕ್ಕೆ ನೂರು ಕಪ್ಪು ಚುಕ್ಕೆಯೇ. ಕಾಲ್ತುಳಿತ ಘಟನೆ ದಿನ ಅಸ್ವಸ್ಥರಾಗಿ ಬಿದ್ದವರು ಹಾಗೂ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್‌ಗಳೇ ಇರಲಿಲ್ಲ. ಸ್ಟ್ರೆಚರ್‌ಗಳು ಇರಲಿಲ್ಲ. ಹೆಗಲ ಮೇಲೆ ಹೊತ್ತುಕೊಂಡು ಖಾಸಗಿ ವಾಹನಗಳಲ್ಲಿ ಮಲಗಿಸಿ ಆಸ್ಪತ್ರೆಗೆ ಸಾಗಿಸಲಾಗಿದೆ. ಅವ್ಯವಸ್ಥೆಯನ್ನು ನೋಡಿದಾಗ ಅಂತಾರಾಷ್ಟ್ರೀಯ ನಗರ ಬೆಂಗಳೂರಿನ ಮರ್ಯಾದೆ ಜಾಗತಿಕವಾಗಿ ಹೋಯಿತು. ಮಹಾನಗರದಲ್ಲಿ ಕನಿಷ್ಠ ಸೌಲಭ್ಯಗಳು ಇಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ.

*ನಿಮ್ಮ ಅನುಭವದಲ್ಲಿ ಹೇಳುವುದಾದರೆ ಇಂತಹ ಕಾರ್ಯಕ್ರಮಗಳ ವೇಳೆ ಪೊಲೀಸರ ಭದ್ರತೆ ಹೇಗಿರಬೇಕು?

-ಮೊದಲಿಗೆ ಪೊಲೀಸರಿಗೆ ಬಂದೋಬಸ್ತ್‌ ಏರ್ಪಡಿಸಲು ಸಮಯ ನೀಡಬೇಕು. ಗುಪ್ತಚರ ಮಾಹಿತಿ ಪಡೆಯಬೇಕು. ಹೆಚ್ಚು ಜನ ಸೇರುವ ಸಭೆ-ಸಮಾರಂಭಗಳ ನಿರ್ವಹಣೆ ಬಗ್ಗೆ ಪೊಲೀಸ್‌ ತರಬೇತಿ ವೇಳೆ ಹೇಳಿಕೊಡಲಾಗುತ್ತದೆ. ಹೆಚ್ಚು ಜನ ಸೇರುವ ಕಡೆ ಹಗ್ಗಗಳು ಇರಬೇಕು. ಜನರ ಸಾಲುಗಳನ್ನು ಪ್ರತ್ಯೇಕವಾಗಿ ಒಳ ಬಿಡಬೇಕು. ಅತಿಥಿಗಳ ಪ್ರವೇಶ ಹಾಗೂ ನಿರ್ಗಮನ ಪ್ರತ್ಯೇಕವಾಗಿರಬೇಕು. ಹೊರಗೆ ಹೋಗಲು ಪ್ರತ್ಯೇಕ ದ್ವಾರಗಳು ಇರಬೇಕು. ಆ್ಯಂಬುಲೆನ್ಸ್‌ಗಳು, ಸ್ಟ್ರೆಚರ್‌ಗಳು, ಅಗ್ನಿಶಾಮಕ ವಾಹನಗಳು, ತುರ್ತು ವಾಹನಗಳು ಇರಬೇಕು. ಹೆಚ್ಚುವರಿ ಖಾಸಗಿ ವಾಹನಗಳು ಸಿದ್ಧವಿರಬೇಕು. ಹೈ ಮಾಸ್ಕ್‌ ಲೈಟ್‌ಗಳು, ಜನರೇಟರ್‌ಗಳು ಇರಬೇಕು. ಸಿವಿಲ್‌ ಡಿಫೆನ್ಸ್‌ ಸಿಬ್ಬಂದಿ, ಮಹಿಳಾ ಪೊಲೀಸ್‌ ಸಿಬ್ಬಂದಿ ಇರಬೇಕು. ಆಂತರಿಕ ಭದ್ರತಾ ವಿಭಾಗದ ಕಮಾಂಡೋಗಳನ್ನು ಭದ್ರತೆಗೆ ಬಳಸಿಕೊಳ್ಳಬೇಕು. ಒಂದು ವೇಳೆ ಜನರನ್ನು ನಿಯಂತ್ರಿಸುವಾಗ ಪೊಲೀಸರೇ ಗಾಯಗೊಂಡರೇ ಮೀಸಲು ಪೊಲೀಸರು ಸಿದ್ಧರಿರಬೇಕು. ಇವು ಎಲ್ಲಾ ಪೊಲೀಸರಿಗೂ ಗೊತ್ತಿರುವ ವಿಷಯವೇ. ಆದರೆ, ಸಿದ್ಧತೆ ನಡೆಸಲು ಸಮಯ ಬೇಕು. ತರಾತುರಿಯಲ್ಲಿ ಮಾಡಿದರೆ, ಇಂತಹ ಅವಘಡಗಳು ಆಗುತ್ತವೆ.

*ಆರ್‌ಸಿಬಿ ತಂಡದ ಗೆಲುವಿನ ಮುಖಾಂತರ ಪ್ರಚಾರ ತೆಗೆದುಕೊಳ್ಳುವ ಧಾವಂತದಲ್ಲಿ ತರಾತುರಿಯಲ್ಲಿ ಈ ಕಾರ್ಯಕ್ರಮ ಮಾಡಲಾಯಿತು ಎಂಬ ಆರೋಪದ ಬಗ್ಗೆ ನೀವು ಏನು ಹೇಳುವಿರಿ?

-ವಾಸ್ತವದಲ್ಲಿ ಐಪಿಎಲ್‌ ಕ್ರಿಕೆಟ್‌ಗೂ ರಾಜ್ಯ ಸರ್ಕಾರಕ್ಕೂ ಸಂಬಂಧವೇ ಇಲ್ಲ. ಮೊದಲೇ ಹೇಳಿದ ಹಾಗೆ ಇದೊಂದು ಖಾಸಗಿ ಕ್ರಿಕೆಟ್‌ ಟೂರ್ನಿ. ಆರ್‌ಸಿಬಿ ತಂಡ ಪ್ರಥಮ ಬಾರಿಗೆ ಟ್ರೋಫಿ ಗೆದ್ದಿರುವುದು ಸಂತೋಷ. ಆದರೆ, ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ತಂಡಕ್ಕೆ ಸನ್ಮಾನ ಮಾಡುವ ಅಗತ್ಯವೇನಿತ್ತು? ಅಷ್ಟು ಅಭಿಮಾನ ಇದ್ದರೆ, ತಂಡದ ವಿಜಯೋತ್ಸವದಲ್ಲೇ ಭಾಗಿಯಾಗಿ ಶುಭಾಶಯ ತಿಳಿಸಬಹುದಿತ್ತು. ಅಂದು ವಿಧಾನಸೌಧದ ಬಳಿ ನಡೆದ ಘಟನೆಗಳನ್ನು ನೋಡಿದರೆ ಬೇಸರವಾಗುತ್ತದೆ. ಇವರ ಮೋಜು-ಮಸ್ತಿಗೆ ವಿಧಾನಸೌಧದ ಪಾವಿತ್ರ್ಯತೆ ಹಾಳು ಮಾಡಿದರು.

*ಈ ಕಾರ್ಯಕ್ರಮ ಆಯೋಜನೆ ಹಿಂದೆ ಸಮನ್ವಯತೆ ಕೊರತೆ ಎದ್ದು ಕಾಣುತ್ತಿಲ್ಲವೇ?

-ಹೌದು. ಇಲ್ಲಿ ಪೊಲೀಸ್‌ ಇಲಾಖೆ, ರಾಜ್ಯ ಸರ್ಕಾರ, ಕೆಎಸ್‌ಸಿಎ, ಆರ್‌ಸಿಬಿ ಫ್ರಾಂಚೈಸಿ ನಡುವೆ ಸಮನ್ವಯ ಕೊರತೆ ಎದ್ದು ಕಾಣುತ್ತಿದೆ. ತರಾತುರಿಯಲ್ಲಿ ಕಾರ್ಯಕ್ರಮ ಆಯೋಜಿಸಿ 11 ಮಂದಿ ಅಮಾಯಕರನ್ನು ಬಲಿ ಪಡೆಯಲಾಗಿದೆ. ಆರ್‌ಸಿಬಿ ಕಪ್‌ ಕೇವಲ ಕಪ್‌ ಅಲ್ಲ. ಅದು ರಕ್ತದಲ್ಲಿ ತೊಳೆದ ಕಪ್‌. ಯಾರದ್ದೋ ಪ್ರಚಾರದ ಹುಚ್ಚಿಗೆ ಅಮಾಯಕ ಅಭಿಮಾನಿಗಳು ತಮ್ಮ ಪ್ರಾಣವನ್ನೇ ಕಳೆದುಕೊಂಡರು. ಈ ದುರಂತ ನಿಜಕ್ಕೂ ದೀರ್ಘಕಾಲ ಕಾಡುತ್ತದೆ.

*ಕಾಲ್ತುಳಿತ ದುರಂತ ಸಂಬಂಧ ಏಕಕಾಲಕ್ಕೆ ಮ್ಯಾಜಿಸ್ಟ್ರಿಯಲ್‌ ವಿಚಾರಣೆ, ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ವಿಚಾರಣೆ ಮತ್ತು ಸಿಐಡಿ ತನಿಖೆ ನಡೆಯುತ್ತಿದೆಯಲ್ಲ?

-ಮ್ಯಾಜಿಸ್ಟ್ರಿಯಲ್‌ ವಿಚಾರಣೆ ಮತ್ತು ನಿವೃತ್ತ ನ್ಯಾಯಮೂರ್ತಿ ನೇತೃತ್ವದ ನ್ಯಾಯಾಂಗ ವಿಚಾರಣೆ ಅಷ್ಟು ಸಮಂಜಸವಲ್ಲ. ಸರ್ಕಾರದ ಅಧೀನದ ಅಧಿಕಾರಿ ಸರ್ಕಾರದ ಉನ್ನತ ಹುದ್ದೆಗಳಲ್ಲಿರುವವರ ವಿಚಾರಣೆ ಮಾಡುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಮಾಡಿದರೂ ಹೆಚ್ಚಿನ ಭಾಗ ಸರ್ಕಾರದ ಪರವೇ ಇರುತ್ತದೆ. ಜನಾಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರ ತರಾತುರಿಯಲ್ಲಿ ವಿಚಾರಣೆಗೆ ಆದೇಶಿಸಿದೆ. ನನ್ನ ಪ್ರಕಾರ ಹೈಕೋರ್ಟ್‌ನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ವಿಚಾರಣೆ ನಡೆಯಬೇಕು. ಆಗ ಮಾತ್ರ ಘಟನೆಗೆ ಸತ್ಯಾಸತ್ಯತೆ ತಿಳಿಯಲಿದೆ. ಇಲ್ಲಿ ತಪ್ಪಿತಸ್ಥರು ಯಾರು ಎಂಬುದು ಗೊತ್ತಾಗುತ್ತದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

'ಅಫಿಡವಿಟ್‌ನಲ್ಲಿ ಡಿಕ್ಲೇರ್ ಮಾಡಿದ್ದರೂ ಟೀಕೆ 'ಚಿಲ್ಲರ್ ಕೆಲಸ': ಸಿಎಂ ಡಿಸಿಎಂ ದುಬಾರಿ ವಾಚ್ ಬಗ್ಗೆ ಬಿಜೆಪಿ ಹೇಳಿಕೆಗೆ ಕಾಶೆಪ್ಪನವರು ಕಿಡಿ
ಲೀಚೆಟ್ ಸಂಸ್ಕರಣಾ ಘಟಕ:ಬೆಂಗಳೂರಲ್ಲಿ ಜಟಿಲವಾಗಿರುವ ಕಸದ ಸಮಸ್ಯೆಗೆ ಕೊನೆಗೂ ಮುಕ್ತಿ !