ಕಮಲ ಪಾಳಯದಿಂದ ಅಚ್ಚರಿಯ ನಡೆ: ರಾಜ್ಯಸಭೆ, ವಿಧಾನ ಪರಿಷತ್ತಿನ ಚುನಾವಣೆಗೆ ಹೊಸ ಮುಖಗಳು

Published : Jun 08, 2026, 08:41 AM ISTUpdated : Jun 08, 2026, 08:43 AM IST
BJP Flag pic

ಸಾರಾಂಶ

ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಚುನಾವಣೆಗೆ ಬಿಜೆಪಿ ಕೊನೆಯ ಕ್ಷಣದಲ್ಲಿ ಅಚ್ಚರಿಯ ಅಭ್ಯರ್ಥಿಗಳನ್ನು ಪ್ರಕಟಿಸಿದೆ. ರಾಜ್ಯಸಭೆಗೆ ಪ್ರೊ.ಎಂ.ನಾಗರಾಜ್ ಹಾಗೂ ಪರಿಷತ್ತಿಗೆ ಲಿಂಗರಾಜು ಪಾಟೀಲ್ ಮತ್ತು ರಘು ಕೌಟಿಲ್ಯ ಅವರನ್ನು ಆಯ್ಕೆ ಮಾಡಲಾಗಿದ್ದು, ಇದರಿಂದ ಮಾಜಿ ಪ್ರಧಾನಿ ದೇವೇಗೌಡರ ಮರು ಆಯ್ಕೆಯ ಸಾಧ್ಯತೆಗೆ ತೆರೆ ಬಿದ್ದಿದೆ.

ಬೆಂಗಳೂರು: ರಾಜ್ಯಸಭೆ ಮತ್ತು ವಿಧಾನ ಪರಿಷತ್ತಿನ ಚುನಾವಣೆಗೆ ಬಿಜೆಪಿ ಕೊನೆಯ ಕ್ಷಣದಲ್ಲಿ ತನ್ನ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ.ದೇವೇಗೌಡ ಅವರನ್ನು ಮತ್ತೊಂದು ಅವಧಿಗೆ ರಾಜ್ಯಸಭಾ ಸದಸ್ಯರನ್ನಾಗಿ ಮುಂದುವರೆಸುವ ಪ್ರಸ್ತಾಪಕ್ಕೆ ಬ್ರೇಕ್ ಬಿದ್ದಿದೆ.

ರಾಜ್ಯಸಭೆಯ ಒಂದು ಸ್ಥಾನಕ್ಕೆ ಅಚ್ಚರಿ ಎಂಬಂತೆ ಬಿಜೆಪಿಯ ಮಾಜಿ ರಾಜ್ಯ ಉಪಾಧ್ಯಕ್ಷ ಪ್ರೊ.ಎಂ.ನಾಗರಾಜ್ ಅವರನ್ನು ಮತ್ತು ವಿಧಾನ ಪರಿಷತ್ತಿನ ಎರಡು ಸ್ಥಾನಗಳಿಗೆ ಪಕ್ಷದ ಶಿಸ್ತು ಸಮಿತಿಯ ಮಾಜಿ ಉಪಾಧ್ಯಕ್ಷ ಲಿಂಗರಾಜು ಪಾಟೀಲ್, ರಾಜ್ಯ ಒಬಿಸಿ ಮೋರ್ಚಾ ಅಧ್ಯಕ್ಷ ರಘು ಕೌಟಿಲ್ಯ ಅವರನ್ನು ಅಭ್ಯರ್ಥಿಗಳನ್ನಾಗಿ ಭಾನುವಾರ ತಡರಾತ್ರಿ ಘೋಷಿಸಲಾಗಿದೆ.

ಪಕ್ಷದ ರಾಜ್ಯ ಘಟಕದಿಂದ ರಾಜ್ಯಸಭಾ ಚುನಾವಣೆಗೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನ ಹಾಗೂ ನಂತರ ಮಾಜಿ ಸಂಸದೆ ಸುಮಲತಾ ಅಂಬರೀಷ್‌ ಅವರ ಹೆಸರುಗಳನ್ನು ಶಿಫಾರಸ್ಸು ಮಾಡಲಾಗಿತ್ತು. ಪರಿಷತ್ ಚುನಾವಣೆಗೆ ರಘು ಕೌಟಿಲ್ಯ, ಪ್ರಮೋದ್ ಮಧ್ವರಾಜ್, ನಳಿನ್ ಕುಮಾರ್ ಕಟೀಲ್, ಲಿಂಗರಾಜ ಪಾಟೀಲ್, ಮಂಜುಳಾ ಹಾಗೂ ಶರಣು ತಳ್ಳಿಕೇರಿ ಅವರ ಹೆಸರುಗಳನ್ನು ರವಾನಿಸಲಾಗಿತ್ತು.

ನಾಗರಾಜ್ ಮತ್ತು ರಘು ಕೌಟಿಲ್ಯ ಅವರು ಇತರ ಹಿಂದುಳಿದ ವರ್ಗಗಳಿಗೆ ಸೇರಿದರೆ, ಲಿಂಗರಾಜ ಪಾಟೀಲ್ ಅವರು ಲಿಂಗಾಯತ ಸಮುದಾಯಕ್ಕೆ ಸೇರಿದ್ದಾರೆ. ಕೊನೆಯ ದಿನವಾದ ಸೋಮವಾರ ನಾಮಪತ್ರ ಸಲ್ಲಿಸಲಿದ್ದಾರೆ.

ಯಾರು ಈ ನಾಗರಾಜ್‌?

ನಾಗರಾಜ್ ಅವರು ಶಿಕ್ಷಣ ಮತ್ತು ರಾಜಕೀಯ ಕ್ಷೇತ್ರದಲ್ಲಿ ಸುದೀರ್ಘ ಅನುಭವ ಹೊಂದಿದ್ದು, ಬಿಜೆಪಿಯ ಹಿರಿಯ ಮುಖಂಡರಾಗಿದ್ದಾರೆ. ಮೂಲತಃ ಹುಬ್ಬಳ್ಳಿ-ಧಾರವಾಡದವರಾದ ನಾಗರಾಜ್, ಶೈಕ್ಷಣಿಕ ವಲಯದಿಂದ ಬಂದವರಾಗಿದ್ದು, ದೀರ್ಘಕಾಲ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಎಬಿವಿಪಿ ಮತ್ತು ಆರ್‌ಎಸ್‌ಎಸ್ ಸಂಘಟನೆಗಳ ಸಕ್ರಿಯ ಕಾರ್ಯಕರ್ತರಾಗಿ ಗುರುತಿಸಿಕೊಂಡಿದ್ದ ಅವರು, ನಂತರ ಭಾರತೀಯ ಜನತಾ ಪಕ್ಷದ ಮೂಲಕ ಸಕ್ರಿಯ ರಾಜಕೀಯಕ್ಕೆ ಪ್ರವೇಶಿಸಿದರು. ಕರ್ನಾಟಕ ರಾಜ್ಯ ಬಿಜೆಪಿ ಘಟಕದ ಉಪಾಧ್ಯಕ್ಷರಾಗಿ ಪಕ್ಷದ ಸಂಘಟನೆಯಲ್ಲಿ ಪ್ರಮುಖ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಕರ್ನಾಟಕ ಲೋಕಸೇವಾ ಆಯೋಗದ ಸದಸ್ಯರಾಗಿಯೂ ಸೇವೆ ಸಲ್ಲಿಸಿದ ಆಡಳಿತಾತ್ಮಕ ಅನುಭವ ಇವರಿಗಿದೆ. ಜನಸಂಘದ ಸ್ಥಾಪಕ‌ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ಜನ್ಮಶತಮಾನೋತ್ಸವ ವರ್ಷದ ನಿಮಿತ್ತ ಪ್ರತಿ ಜಿಲ್ಲೆಯಲ್ಲೂ ಬಿಜೆಪಿಯ ಸ್ವಂತ ಕಾರ್ಯಾಲಯ ನಿರ್ಮಿಸುವ ಅಮಿತ್ ಶಾ ಅವರ ಕನಸಿನ ಯೋಜನೆಯಲ್ಲಿ ಭವನ ನಿರ್ಮಾಣ ಸಮಿತಿಗೆ ಕರ್ನಾಟಕದ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ.

 

 

ನಾಗರಾಜು ಅವರು ಆರ್‌ಎಸ್‌ಎಸ್‌ ಕಡೆಯಿಂದ ಸೂಚಿತವಾಗಿದ್ದ ಅಭ್ಯರ್ಥಿಯಾಗಿದ್ದರೆ, ಲಿಂಗರಾಜು ಪಾಟೀಲ್‌ ಅವರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ರಘು ಕೌಟಿಲ್ಯ ಅವರು ಯಡಿಯೂರಪ್ಪ ಅವರ ನೀಡಿದ್ದ ಹೆಸರುಗಳಾಗಿವೆ ಎಂದು ಮೂಲಗಳು ತಿಳಿಸಿವೆ.

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾಂಗ್ರೆಸ್ ನಾಯಕ, ದೇವರಾಜ ಅರಸು ಮೊಮ್ಮಗ ಸೂರಜ್ ಹೆಗ್ಡೆ ನಿಧನ: ಸಿಎಂ ಡಿಕೆಶಿ ಸಂತಾಪ
ಮುಂಗಾರು ಚುರುಕು: 16ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಆರಂಭ, ಕೊಚ್ಚಿ ಹೋಯ್ತು ಹೆದ್ದಾರಿ