
ಬೆಂಗಳೂರು : ಪಂಚ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವು ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ದೂರವಿಡಲು ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಮತ್ತಷ್ಟುಗಟ್ಟಿಗೊಳಿಸಿದ್ದು, ಒಗ್ಗೂಡಿ ಅಖಾಡಕ್ಕಿಳಿದರೆ ಕಮಲ ಕ್ಷೇತ್ರವನ್ನು ನಿಸ್ಸಂಶಯವಾಗಿ ಛಿದ್ರಗೊಳಿಸಬಹುದು ಎಂಬುದು ಮೈತ್ರಿಗಳಿಗೆ ಅರಿವಾಗಿದೆ.
ನಾಲ್ಕು ಕ್ಷೇತ್ರದಲ್ಲಿ ಮೈತ್ರಿ ಪಕ್ಷಗಳ ಅಭ್ಯರ್ಥಿಗಳು ಭಾರೀ ಅಂತರದಲ್ಲಿ ಗೆಲುವು ಸಾಧಿಸಿದ್ದಾರೆ. ಉಪಚುನಾವಣೆ ಫಲಿತಾಂಶದಿಂದ ರಾಜ್ಯದಲ್ಲಿ 20ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜಯಗಳಿಸಬೇಕು ಎಂಬ ಬಿಜೆಪಿಯ ಗುರಿ ದುಃಸ್ವಪ್ನವಾದರೆ, ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮುಂದುವರಿಸಲು ಮುನ್ನಡಿಯಾಗಿದೆ. ಉಭಯ ಪಕ್ಷಗಳ ಮುಖಂಡರ, ಕಾರ್ಯಕರ್ತರಲ್ಲಿ ಹೊಸ ಹುರುಪು ಮೂಡುವಂತೆ ಮಾಡಿದೆ.
ರಾಮನಗರ ಹಾಗೂ ಜಮಖಂಡಿ ವಿಧಾನಸಭಾ ಕ್ಷೇತ್ರ ಮತ್ತು ಬಳ್ಳಾರಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿಗಳ ಗೆಲುವು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್ ಅವರ ಗೆಲುವು ಸಹ ಆಗಿದೆ. ಅಷ್ಟೇ ಅಲ್ಲ ಅವರ ರಾಜಕೀಯ ತಂತ್ರಗಾರಿಕೆ ಫಲ ನೀಡಿದ್ದು, ತಮ್ಮ ವರ್ಚಸ್ಸನ್ನು ಮತ್ತಷ್ಟುಹೆಚ್ಚಿಸಿಕೊಂಡಿದ್ದಾರೆ.
ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮ ಪುತ್ರನನ್ನು ಗೆಲ್ಲಿಸಿಕೊಳ್ಳುವಲ್ಲಿ ಯಶಸ್ವಿಯೇನೋ ಆಗಿದ್ದಾರೆ. ಆದರೆ, ತಮ್ಮ ಪಕ್ಷವನ್ನು ಗೆಲ್ಲಿಸಿಕೊಳ್ಳುವಲ್ಲಿ ಉಳಿದೆಡೆ ವಿಫಲವಾಗಿದ್ದಾರೆ. ಬಳ್ಳಾರಿಯಲ್ಲಿ ಕಾಂಗ್ರೆಸ್ ನಾಯಕರ ವಿರುದ್ಧ ಸೆಡ್ಡು ಹೊಡೆದು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಶಾಸಕ ಬಿ.ಶ್ರೀರಾಮುಲು ತಮ್ಮ ರಾಜಕೀಯ ಅನುಭವನ್ನು ಪಣಕ್ಕಿಟ್ಟು ಕೆಲಸ ಮಾಡಿದರೂ ಯಾವುದೇ ಪ್ರಯೋಜವಾಗಿಲ್ಲ. ಯಡಿಯೂರಪ್ಪ ಮತ್ತು ಶ್ರೀರಾಮುಲು ನಾಯಕತ್ವದ ವರ್ಚಸ್ಸಿಗೆ ಹಿನ್ನಡೆಯನ್ನುಂಟು ಮಾಡಿದ್ದು, ರಾಜಕೀಯದಲ್ಲಿ ಹಲವು ರೀತಿಯಲ್ಲಿ ವಿಶ್ಲೇಷಿಸಲಾಗುತ್ತಿದೆ.
ಹಳೇ ಮೈಸೂರು ಪ್ರಾಂತ್ಯದ ಮೇಲೆ ಪ್ರಾಬಲ್ಯ ಹೊಂದಿರುವ ಜೆಡಿಎಸ್ ರಾಮನಗರ, ಮಂಡ್ಯ ಕ್ಷೇತ್ರದಲ್ಲಿನ ಜಯ ಅಚ್ಚರಿ ಏನೂ ಅಲ್ಲ. ಜೆಡಿಎಸ್ ಗೆಲುವನ್ನು ನಿರೀಕ್ಷಿಸಲಾಗಿತ್ತು. ಮಂಡ್ಯ ಕ್ಷೇತ್ರದಲ್ಲಿ ಜೆಡಿಎಸ್ ಗೆಲುವು ಸಾಧಿಸಿದ್ದರೂ ಬಿಜೆಪಿ ಹೆಚ್ಚಿನ ಮತಗಳನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಇದು ಜೆಡಿಎಸ್‌ಗೆ ಎಚ್ಚರಿಕೆಯ ಪಾಠವಾಗಿದೆ. ಜೆಡಿಎಸ್ ಭದ್ರಕೋಟೆ ಎನಿಸಿದರೂ ಭವಿಷ್ಯದಲ್ಲಿ ಬಿಜೆಪಿ ತನ್ನ ಖಾತೆ ತೆರೆಯಲು ದಾರಿ ಸಿಕ್ಕಿತಂತಾಗಿದೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಪಕ್ಷದ ಅಭ್ಯರ್ಥಿ ನೀಡಿರುವ ಪೈಪೋಟಿ ಬಿಜೆಪಿಗೆ ನುಂಗಲಾರದ ತುತ್ತಾಗಿದೆ. ಪ್ರಯಾಸವಾಗಿ ಬಿಜೆಪಿ ಗೆಲುವು ಸಾಧಿಸಿರುವುದು ಯಡಿಯೂರಪ್ಪಗೆ ಎಚ್ಚರಿಕೆ ನೀಡಿದಂತಾಗಿದೆ. ಮೈತ್ರಿ ಪಕ್ಷಗಳ ವಿರುದ್ಧ ಹೋರಾಟ ನಡೆಸಲು ತಂತ್ರಗಾರಿಕೆ ರೂಪಿಸಬೇಕಾದ ಅನಿವಾರ್ಯತೆ ಯಡಿಯೂರಪ್ಪಗೆ ಎದುರಾಗಿದೆ.
ಬಳ್ಳಾರಿ ಕ್ಷೇತ್ರವು ಕೈ ವಶವಾಗಿರುವುದು ಬಿಜೆಪಿಯ ಅಸ್ತಿತ್ವವನ್ನು ಅಲುಗಾಡಿಸುವಂತೆ ಮಾಡಲಾಗಿದೆ. ಗಣಿಧಣಿ ಪಾಳೆಯದ ನಾಯಕರಾಗಿರುವ ಬಿ.ಶ್ರೀರಾಮುಲುಗೆ ಫಲಿತಾಂಶವು ಹೀನಾಯ ತೀವ್ರ ಮುಜುಗರವನ್ನುಂಟು ಮಾಡಿದೆ. ಕಾಂಗ್ರೆಸ್‌ಗೆ ಸೆಡ್ಡುವೊಡೆದರೂ ವೈಯಕ್ತಿಕ ಪ್ರತಿಷ್ಠೆಗೆ ಧಕ್ಕೆಯಾಗಿದೆ. ತಮ್ಮ ಛಾಪು ಮೂಡಿಸುವಲ್ಲಿ ಟೊಂಕಕಟ್ಟಿನಿಂತ ಸಚಿವ ಡಿ.ಕೆ.ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ