ಜೆಡಿಎಸ್‌ಗೆ ಇದು ಮಹತ್ವದ ಫಲಿತಾಂಶ : ಕಾರಣವೇನು..?

By Web DeskFirst Published Nov 6, 2018, 10:09 AM IST
Highlights

ವಿಧಾನಸಭೆಯಲ್ಲಿ ಕಡಿಮೆ ಸ್ಥಾನ ಪಡೆದುಕೊಂಡರೂ ಮುಖ್ಯಮಂತ್ರಿ ಸ್ಥಾನ ಒಲಿದು ಬಂದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ತಮ್ಮ ಸ್ಥಾನವನ್ನು ಮತ್ತಷ್ಟುಭದ್ರಪಡಿಸಿಕೊಳ್ಳಲು ಮೈತ್ರಿ ಪಕ್ಷಗಳ ಗೆಲುವು ಅತ್ಯಗತ್ಯವಾಗಿದೆ. 

ಬೆಂಗಳೂರು :  ಕಾಂಗ್ರೆಸ್‌ನೊಂದಿಗಿನ ಮೈತ್ರಿಯನ್ನು ಮುಂದುವರಿಸಬೇಕಾದರೆ ಹಾಗೂ ಪ್ರತಿಪಕ್ಷ ಬಿಜೆಪಿ ವಿರೋಧಿ ಅಲೆ ಇದೆ ಎಂಬ ಸಂದೇಶವೊಂದನ್ನು ರವಾನಿಸಬೇಕಾದರೆ ಉಪಚುನಾವಣೆಯ ಫಲಿತಾಂಶವು ಜೆಡಿಎಸ್‌ಗೆ ಮಹತ್ವದ ಪಾತ್ರ ವಹಿಸಲಿದೆ.

ವಿಧಾನಸಭೆಯಲ್ಲಿ ಕಡಿಮೆ ಸ್ಥಾನ ಪಡೆದುಕೊಂಡರೂ ಮುಖ್ಯಮಂತ್ರಿ ಸ್ಥಾನ ಒಲಿದು ಬಂದು ಅಧಿಕಾರದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ತಮ್ಮ ಸ್ಥಾನವನ್ನು ಮತ್ತಷ್ಟುಭದ್ರಪಡಿಸಿಕೊಳ್ಳಲು ಮೈತ್ರಿ ಪಕ್ಷಗಳ ಗೆಲುವು ಅತ್ಯಗತ್ಯವಾಗಿದೆ. ಹಳೇ ಮೈಸೂರು ಭಾಗ ಜೆಡಿಎಸ್‌ನಲ್ಲಿ ಹಿಡಿತದಲ್ಲಿದ್ದು, ಶಿವಮೊಗ್ಗದಲ್ಲಿಯೂ ನೆಲೆ ಕಂಡುಕೊಳ್ಳಲು ಉಪಚುನಾವಣೆ ಸಹಕಾರಿಯಾಗಲು ಜಯಗಳಿಸಬೇಕಾಗಿದೆ.

ಜಮಖಂಡಿ, ಬಳ್ಳಾರಿಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದರಿಂದ ಮೈತ್ರಿ ಪಕ್ಷದ ಶಕ್ತಿ ಪ್ರದರ್ಶನ ಮಾಡುವುದರ ಜತೆಗೆ ಪ್ರತಿಪಕ್ಷ ಬಿಜೆಪಿಗೆ ನೇರವಾಗಿ ಸಂದೇಶ ರವಾನಿಸಿದಂತಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌ನ ಜತೆಗೆ ಮೈತ್ರಿ ಮುಂದುವರಿಸಲು ಮತ್ತಷ್ಟುಬಲ ಬಂದಂತಾಗಲಿದೆ. ಪ್ರತಿಬಾರಿ ಸರ್ಕಾರದ ಅಸ್ತಿತ್ವವನ್ನು ಪ್ರಶ್ನಿಸಿ ಟೀಕಾಸ್ತ್ರ ಮಾಡುವ ಬಿಜೆಪಿಗೆ ತಿರುಗೇಟು ನೀಡಲು ಗೆಲ್ಲುವುದು ಅನಿವಾರ್ಯ. ಹೀಗಾಗಿಯೇ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ಕೇವಲ ಜೆಡಿಎಸ್‌ ಅಭ್ಯರ್ಥಿಗಳ ಕ್ಷೇತ್ರದತ್ತ ಗಮನ ಹರಿಸದೆ ಕಾಂಗ್ರೆಸ್‌ ಅಭ್ಯರ್ಥಿಗಳ ಕ್ಷೇತ್ರದತ್ತ ಸಹ ನಿಗಾವಹಿಸಿ ಕೆಲಸ ಮಾಡಿದ್ದಾರೆ.

ಹಳೆ ಮೈಸೂರು ಭಾಗದಲ್ಲಿ ಉಭಯ ಪಕ್ಷದಲ್ಲಿನ ಒಳಬೇಗುದಿಗೆ ತಾರಕಕ್ಕೇರಿದೆ. ಇದಕ್ಕೆ ಕಡಿವಾಣ ಹಾಕಬೇಕಾದರೆ ಮೈತ್ರಿ ಪಕ್ಷಗಳ ಅಭ್ಯರ್ಥಿಗಳ ಜಯ ಅಗತ್ಯ ಇದೆ. ಉಪಚುನಾವಣೆಯಲ್ಲಿ ಬಿಜೆಪಿಗೆ ಪಾಠ ಕಲಿಸಲು ಕಾಂಗ್ರೆಸ್‌-ಜೆಡಿಎಸ್‌ ಕಾರ್ಯಕರ್ತರ ನಡುವೆ ಎಷ್ಟೇ ವೈಮನಸ್ಸುಗಳಿದ್ದರೂ ಕೈ ಜೋಡಿಸಲಾಗಿದೆ. ಮಂಡ್ಯ ಮತ್ತು ರಾಮನಗರದಲ್ಲಿ ಉಭಯ ಪಕ್ಷಗಳ ನಾಯಕರಲ್ಲಿ ಹೊಡೆದಾಡುವಷ್ಟುದ್ವೇಷ ಇದೆ. ಆದರೂ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕೈ ಜೋಡಿಸಿವೆ. ಇದು ಎಷ್ಟರ ಮಟ್ಟಿಗೆ ಫಲಕಾರಿಯಾಗಲಿದೆ ಎಂಬುದು ಮಂಗಳವಾರದ ಫಲಿತಾಂಶದಲ್ಲಿ ತಿಳಿದುಬರಲಿದೆ.

ಕುಮಾರಸ್ವಾಮಿಗೆ ರಾಜಕೀಯದಲ್ಲಿ ತಮ್ಮ ವರ್ಚಸ್ಸನ್ನು ಹೆಚ್ಚಿಸಿಕೊಳ್ಳಲು ಜೆಡಿಎಸ್‌-ಕಾಂಗ್ರೆಸ್‌ ಪಕ್ಷಗಳ ಅಭ್ಯರ್ಥಿಗಳ ಗೆಲುವು ಮಹತ್ವದ್ದಾಗಿದೆ. ಜೆಡಿಎಸ್‌ ಪಕ್ಷವನ್ನು ರಾಜ್ಯದ ಇತರೆ ಭಾಗದಲ್ಲಿಯೂ ವಿಸ್ತರಣೆ ಮಾಡಲು ಸಹಕಾರಿಯಾಗಲಿದೆ. ಲೋಕಸಭೆ ಮಾತ್ರವಲ್ಲದೇ, ಮುಂದಿನ ಐದು ವರ್ಷ ಸರ್ಕಾರ ಸುಭದ್ರ ಎಂಬುದನ್ನು ಪ್ರತಿಪಕ್ಷ ಬಿಜೆಪಿಗೆ ರಾಜಕೀಯವಾಗಿ ತಿರುಗೇಟು ನೀಡಲು ಉಪಚುನಾವಣೆಗೆ ಮಹತ್ವದ ಪಾತ್ರವಹಿಸಲಿದೆ ಎಂಬ ಮಾತುಗಳು ಕೇಳಿಬಂದಿವೆ.

click me!