ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ತಮಗೆ ಚುನಾವಣೆಗೆ ಕೆಲವೇ ದಿನ ಇರುವಾಗ ನೀಡಲಾಗಿದ್ದ ರಾಜ್ಯ ಉಪಾಧ್ಯಕ್ಷ ಸ್ಥಾನ ನಿರಾಕರಿಸುವ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದ್ದಾರೆ.
ಶಿವಮೊಗ್ಗ : ಉಪ ಚುನಾವಣೆ ಮುಗಿಯುತ್ತಿದ್ದಂತೆ ಬಿಜೆಪಿಯಲ್ಲಿನ ಒಳಬೇಗುದಿ ಮತ್ತೊಮ್ಮೆ ಭುಗಿಲೇಳುವ ಲಕ್ಷಣ ಗೋಚರಿಸತೊಡಗಿದೆ. ಪಕ್ಷದ ಹಿರಿಯ ಮುಖಂಡ, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಬಿ.ಭಾನುಪ್ರಕಾಶ್ ತಮಗೆ ಚುನಾವಣೆಗೆ ಕೆಲವೇ ದಿನ ಇರುವಾಗ ನೀಡಲಾಗಿದ್ದ ರಾಜ್ಯ ಉಪಾಧ್ಯಕ್ಷ ಸ್ಥಾನ ನಿರಾಕರಿಸುವ ಜೊತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ ಅಸಮಾಧಾನವನ್ನೂ ಹೊರಹಾಕಿದ್ದಾರೆ.
ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿಯವರ ಅಪೇಕ್ಷೆಯಂತೆ ‘ಸಬ್ ಕಾ ಸಾತ್ ಸಬ್ ಕಾ ವಿಕಾಸ್’ ಮೊದಲು ಪಕ್ಷದಿಂದಲೇ ಆರಂಭವಾಗಬೇಕಿದೆ ಎಂದು ಹೇಳಿದರು.
ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಮ್ಮನ್ನು ರಾಜ್ಯ ಉಪಾಧ್ಯಕ್ಷ ಎಂದು ಘೋಷಣೆ ಮಾಡಿದ್ದಾರೆ. ಆದರೆ ತಾವು ಅದನ್ನು ಒಪ್ಪಿಕೊಂಡಿಲ್ಲ. ಸೈದ್ಧಾಂತಿಕವಾಗಿ ಮತ್ತು ಆತ್ಮಸಾಕ್ಷಿಯಾಗಿ ಉಪಾಧ್ಯಕ್ಷ ಎಂದು ಸದ್ಯದ ಪರಿಸ್ಥಿತಿಯಲ್ಲಿ ಆ ಹುದ್ದೆಯನ್ನು ತಾತ್ವಿಕವಾಗಿ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ. ನಾನು ಸಾಮಾನ್ಯ ಕಾರ್ಯಕರ್ತನಾಗಿಯೇ ಮುಂದುವರಿಯುತ್ತೇನೆ ಎಂದು ತಿಳಿಸಿದರು.
ದೇಶದ ಹಿತ ಮೊದಲು ಎನ್ನುವುದನ್ನು ಪಕ್ಷ ಕಲಿಸಿಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಚುನಾವಣಾ ಸಂದರ್ಭದಲ್ಲಿ ಗೊಂದಲ ಹುಟ್ಟುಹಾಕಬಾರದು ಎಂಬ ಕಾರಣಕ್ಕೆ ಯಾವುದೇ ಹೇಳಿಕೆ ನೀಡದೆ ಸುಮ್ಮನಿದ್ದು, ಈಗ ನನ್ನ ಅಭಿಪ್ರಾಯ ಪ್ರಕಟಿಸುತ್ತಿದ್ದೇನೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರರ ಗೆಲುವಿಗೆ ಪ್ರಾಮಾಣಿಕ ರೀತಿಯಲ್ಲಿ ಕೈಜೋಡಿಸಿದ್ದೇನೆ ಎಂದರು.