Vaccine Politics: ಬಿಜೆಪಿ, ಕಾಂಗ್ರೆಸ್‌ ಕೊರೋನಾ ಲಸಿಕೆ ಜಟಾಪಟಿ

By Kannadaprabha News  |  First Published Feb 16, 2022, 6:47 AM IST

*  ಲಸಿಕೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದಿರಿ, ಯಾರು ಲಸಿಕೆ ಪಡೆದಿಲ್ಲ ಕೈ ಎತ್ತಿ: ರಾಜೀವ್‌
*  ಲಸಿಕೆ ಕಂಡುಹಿಡಿದವರು ದೇಶ ಬಿಟ್ಟು ಹೋಗುವಂತೆ ಮಾಡಿದ್ದು ನೀವು: ಖಾದರ್‌
*  ಪಾಕಿಸ್ತಾನಕ್ಕೆ ಲಸಿಕೆ ಏಕೆ ಕೊಟ್ರಿ?
 


ಬೆಂಗಳೂರು(ಫೆ.16):  ಜಂಟಿ ಅಧಿವೇಶನ(Joint Session) ಉದ್ದೇಶಿಸಿ ರಾಜ್ಯಪಾಲರು ಮಾಡಿದ ಭಾಷಣದ(Governor Speech) ಮೇಲಿನ ವಂದನಾ ನಿರ್ಣಯ ಮಂಡನೆ ವೇಳೆ ಮಂಗಳವಾರ ವಿಧಾನಸಭೆಯಲ್ಲಿ ಕೊರೋನಾ ಲಸಿಕೆ ವಿತರಣೆ ಹಾಗೂ ಕೊರೋನಾ ನಿರ್ವಹಣೆ ಕುರಿತು ಕಾಂಗ್ರೆಸ್‌(Congress) ಮತ್ತು ಬಿಜೆಪಿ(BJP) ಸದಸ್ಯರ ನಡುವೆ ತೀವ್ರ ವಾಗ್ವಾದ ನಡೆಯಿತು.

ಮೊದಲಿಗೆ ವಂದನಾ ನಿರ್ಣಯ ಮಂಡಿಸಿ ಮಾತನಾಡಿದ ಕುಡಚಿ ಬಿಜೆಪಿ ಶಾಸಕ ಪಿ. ರಾಜೀವ್‌, ವಿಶ್ವದಲ್ಲೇ ಅತ್ಯುತ್ತಮ ರೀತಿಯಲ್ಲಿ ದೇಶ ಹಾಗೂ ರಾಜ್ಯದಲ್ಲಿ ಕೊರೋನಾ(Coronavirus) ನಿಯಂತ್ರಿಸಲಾಗಿದೆ. ವಿಶ್ವವೇ ತಿರುಗಿ ನೋಡುವಂತೆ ಸ್ವದೇಶಿ ಕೊರೋನಾ ಲಸಿಕೆ(Vaccine) ಕಂಡು ಹಿಡಿದು ಜನರಿಗೆ ನೀಡಲಾಯಿತು. ಆದರೆ, ಕಾಂಗ್ರೆಸ್‌ ನಾಯಕರು ಲಸಿಕೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದೇ ಅಲ್ಲದೆ ಇದನ್ನು ಮೋದಿ ಲಸಿಕೆ, ಬಿಜೆಪಿ ಲಸಿಕೆ ಎಂದು ಅವಹೇಳನ ಮಾಡಿದರು. ಈಗ ಯಾರು ಲಸಿಕೆ ಪಡೆದಿಲ್ಲ ಎಂದು ಕೈ ಎತ್ತಿ ಎಂದು ಕಾಂಗ್ರೆಸ್‌ ಸದಸ್ಯರ ಕಾಲೆಳೆದರು.

Tap to resize

Latest Videos

undefined

Covid Vaccine: ಸರ್ಕಾರದ ಮಾನದಂಡ ಗೊಂದಲ: ಅನೇಕ ಮಕ್ಕಳಿಗೆ ಲಸಿಕೆಯೇ ಸಿಗ್ತಿಲ್ಲ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಸದಸ್ಯ ಯು.ಟಿ. ಖಾದರ್‌(UT Khader), ಕಾಂಗ್ರೆಸ್‌ ನಾಯಕರು ಬಿಜೆಪಿ ಲಸಿಕೆ, ಮೋದಿ ಲಸಿಕೆ ಎಂದು ಹೇಳಿಲ್ಲ. ಕಾಂಗ್ರೆಸ್‌ನವರು ಹಲವಾರು ಲಸಿಕೆಗಳನ್ನು ಉಚಿತವಾಗಿ ನೀಡಿದ್ದಾರೆ. ಆದರೆ ನಿಮ್ಮ ಸರ್ಕಾರ ದೇಶಕ್ಕೆ ಅಸ್ಟ್ರಾಜೆನೆಕಾ (ಕೋವಿಶೀಲ್ಡ್‌) ಲಸಿಕೆ ಕಂಡುಹಿಡಿದಂತಹ ಸೀರಂ ಇನ್‌ಸ್ಟಿಟ್ಯೂಟ್‌ನ ಸಿಇಒ ಅವರನ್ನು ದೇಶ ಬಿಟ್ಟು ಹೋಗುವಂತೆ ಮಾಡಿತು. ಒತ್ತಡ ಸಹಿಸಲಾಗದೆ ದೇಶ ಬಿಟ್ಟು ಹೋಗಿರುವುದಾಗಿ ಅವರೇ ಖುದ್ದು ಹೇಳಿದ್ದಾರೆ. ಅವರಿಗೆ ಎಷ್ಟುಕಿರುಕುಳ ನೀಡಿರಬಹುದು. ಅಂತಹವರನ್ನು ಆ ರೀತಿ ನಡೆಸಿಕೊಂಡ ಈ ದೇಶಕ್ಕೆ ನಾಚಿಕೆಯಾಗಬೇಕು ಎಂದು ಕಿಡಿಕಾರಿದರು.

ಅನುಮಾನ ವ್ಯಕ್ತಪಡಿಸಿದ್ದು ಸತ್ಯ- ಸುಧಾಕರ್‌:

ಮಧ್ಯಪ್ರವೇಶಿಸಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌(Dr K Sudhakar), ಕೊರೋನಾ ಲಸಿಕೆ ಬಗ್ಗೆ ಕಾಂಗ್ರೆಸ್‌ ನಾಯಕರು ಅನುಮಾನ ವ್ಯಕ್ತಪಡಿಸಿದ್ದು ಸತ್ಯ. ನಾವು ಈಗ ಶೇ.100 ರಷ್ಟುಮೊದಲ ಡೋಸ್‌, ಶೇ.90 ರಷ್ಟುಮಂದಿಗೆ ಎರಡನೇ ಡೋಸ್‌ ಲಸಿಕೆ ನೀಡಿದ್ದೇವೆ. ಮುಂದುವರೆದ ದೇಶಗಳಲ್ಲಿ ಇನ್ನೂ ಶೇ.50ರಷ್ಟುಲಸಿಕೆ ನೀಡಿಲ್ಲ. 37 ದೇಶಗಳಲ್ಲಿ ಶೇ.10 ರಷ್ಟುಲಸಿಕೆ ನೀಡಿಲ್ಲ. 130 ಕೋಟಿ ಜನರಿರುವ ದೇಶದಲ್ಲಿ ಲಸಿಕೆ ವಿಚಾರದಲ್ಲಿ ಹಿಂದೆ ಇಂತಹ ಪ್ರಗತಿಯಾಗಿರಲಿಲ್ಲ. ಹೆಪಟೈಟಿಸ್‌- ಬಿ ಲಸಿಕೆಯು ವಿಶ್ವದಾದ್ಯಂತ(World) 1983ರಲ್ಲೇ ಲಭ್ಯವಿದ್ದರೂ ಭಾರತಕ್ಕೆ(India) 17 ವರ್ಷದಷ್ಟು ತಡವಾಗಿ ಬಂತು. ಆದರೆ ಕೊರೋನಾ ಲಸಿಕೆ ದೇಶದಲ್ಲೇ ಉತ್ಪಾದನೆಯಾಗಿ ವಿದೇಶಗಳಿಗೆ ರಫ್ತಾಗುವಂತಾಯಿತು. ಇದನ್ನು ಪ್ರತಿಯೊಬ್ಬರೂ ಅಭಿನಂದಿಸಬೇಕು ಎಂದು ಹೇಳಿದರು.

Corbevax Vaccine: 12-18 ವರ್ಷದ ಮಕ್ಕಳಿಗೆ ಕೋರ್ಬೆವ್ಯಾಕ್ಸ್‌ ಲಸಿಕೆ: ಅನುಮತಿ ಕೋರಿಕೆ

ಪಾಕಿಸ್ತಾನಕ್ಕೆ ಲಸಿಕೆ ಏಕೆ ಕೊಟ್ರಿ?:

ಇದಕ್ಕೆ ಯು.ಟಿ. ಖಾದರ್‌, ವಿಶ್ವದ ಹಲವು ದೇಶಗಳಲ್ಲಿ ಈಗಾಗಲೇ ಮೂರನೇ ಡೋಸ್‌ ಲಸಿಕೆ ನೀಡಲಾಗುತ್ತಿದೆ. ಆದರೆ ನಮ್ಮಲ್ಲಿ ಮುಂಚೂಣಿ ಕಾರ್ಯಕರ್ತರಿಗೆ ಹೊರತುಪಡಿಸಿ ಬೇರೆಯವರಿಗೆ ನೀಡುತ್ತಿಲ್ಲ. ನಮ್ಮ ಜನರಿಗೆ ಲಸಿಕೆ ಇಲ್ಲದಿರುವಾಗ ಪಾಕಿಸ್ತಾನಕ್ಕೆ, ಬಾಂಗ್ಲಾದೇಶಕ್ಕೆ ಏಕೆ ಲಸಿಕೆ ಕೊಟ್ಟಿರಿ ಎಂದು ಪ್ರಶ್ನಿಸಿದರು. ಕೊರೋನಾ ನಿರ್ವಹಣೆ ವಿಚಾರದಲ್ಲಿ ನಮ್ಮ ದೇಶ ಕೀನ್ಯಾ ಮುಂದೆಯೂ ಕೈ ಚಾಚುವಂತಹ ದುಸ್ಥಿತಿಗೆ ತಂದಿದ್ದು ಬಿಜೆಪಿ ಎಂದು ಟೀಕಿಸಿದರು.
ಕಾಂಗ್ರೆಸ್‌ ಸದಸ್ಯ ಪ್ರಿಯಾಂಕ ಖರ್ಗೆ(Priyank Kharge), ಜನರಲ್ಲಿ ವೈಜ್ಞಾನಿಕ ಮನೋಭಾವ ಬೆಳೆಸುವ ಬದಲು ನರೇಂದ್ರ ಮೋದಿ ಜಾಗಟೆ ಬಾರಿಸಿ, ದೀಪ ಹಚ್ಚಿ ಕೊರೋನಾ ಓಡಿಸೋಣ ಎಂದಿದ್ದರು. ಇದೇನಾ ವೈಜ್ಞಾನಿಕತೆ ಎಂದರು.

ಇದಕ್ಕೆ ತಿರುಗೇಟು ನೀಡಿದ ಕೊಳ್ಳೇಗಾಲ ಶಾಸಕ ಎನ್‌. ಮಹೇಶ್‌ ಹಾಗೂ ಪಿ. ರಾಜೀವ್‌, ಚಪ್ಪಾಳೆ, ಜಾಗಟೆ ಬಾರಿಸಲು ಹೇಳಿದ್ದು ಇಡೀ ದೇಶ ಒಟ್ಟಾಗಿ ಸಂಕಷ್ಟವನ್ನು ಎದುರಿಸಲು ಸಜ್ಜಾಗಲಿ ಎಂಬ ಉತ್ಸಾಹ ತುಂಬಲೇ ಹೊರತು ಮೂಢನಂಬಿಕೆಗಲ್ಲ. ದೀಪ ಹಚ್ಚಿದ್ದು ಒಗ್ಗಟ್ಟಿನ ಸಂಕೇತ ಎಂದು ಸ್ಪಷ್ಟನೆ ನೀಡಿದರು. ಇದೇ ವೇಳೆ ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
 

click me!