ಬಾಣಂತಿಯರ ಸಾವು: ಲೋಕಾಯುಕ್ತಕ್ಕೆ ಬಿಜೆಪಿ ದೂರು, ಸಚಿವ ಗುಂಡೂರಾವ್ ರಾಜೀನಾಮೆಗೆ ಆಗ್ರಹ

By Kannadaprabha News  |  First Published Dec 7, 2024, 8:30 AM IST

ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕೊಡಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯ ಸುಧಾರಣೆ ತರಬೇಕಾಗಿದೆ. ಭ್ರಷ್ಟಾಚಾರ, ಕಳಪೆ ಗುಣಮಟ್ಟದ ಔಷಧಿ ಮತ್ತು ಇತರ ಸಲಕರಣೆಗಳು ಅಕ್ರಮವಾಗಿ ಸರಬರಾಜಾಗದಂತೆ ಎಚ್ಚರಿಕೆ ವಹಿಸಬೇಕು. 


ಬೆಂಗಳೂರು(ಡಿ.07):  ಬಳ್ಳಾರಿ,ರಾಜ್ಯದ ವಿವಿಧ ಜಿಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು, ಶಿಶು ಮರಣಕ್ಕೆ ಸಂಬಂಧಿಸಿ ಲೋಕಾಯುಕ್ತ ಮಧ್ಯಪ್ರವೇಶಿಸಿ ತನಿಖೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಿಯೋಗ ಒತ್ತಾಯಿಸಿದೆ.  ಶುಕ್ರವಾರ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಅವರನ್ನು ವಿಧಾನಪರಿಷತ್‌ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ನಿಯೋಗ ಭೇಟಿಯಾಗಿ ಮನವಿ ಸಲ್ಲಿಸಿದೆ. 

ಘಟನೆ ಸಂಬಂಧ ಮಧ್ಯಪ್ರವೇಶ ಮಾಡಬೇಕು. ಅಲ್ಲದೆ, ಘಟನೆ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ಕೊಡಬೇಕು ಎಂದು ಬಿಜೆಪಿ ನಿಯೋಗವು ಮನವಿಯಲ್ಲಿ ತಿಳಿಸಿದೆ. ಸಾವಿನ ಹಿಂದಿರುವ ಕಾರಣ, ಕಳಪೆ ಔಷಧ ಖರೀದಿಯಲ್ಲಿರುವವರ ಕೈವಾಡದ ತನಿಖೆ ನಡೆಸಬೇಕಾಗಿದೆ. ಆಸ್ಪತ್ರೆಯ ಆಡಳಿತವರ್ಗ, ಸರ್ಕಾರಿ ಅಧಿಕಾರಿಗಳು ಮತ್ತು ರಾಜಕಾರಣಿಗಳ ಕೈವಾಡದ ಶಂಕೆ ಇದೆ.

Tap to resize

Latest Videos

ಸಿದ್ದರಾಮಯ್ಯ ದೊಡ್ಡ ಸಮಾವೇಶ ಮಾಡ್ತಾರೆ; ಬಳ್ಳಾರೀಲಿ ಬಾಣಂತಿಯರ ಸರಣಿ ಸಾವಾದ್ರೂ ಬರೋಕೆ ಪುರುಸೊತ್ತಿಲ್ಲ: ಶ್ರೀರಾಮುಲು ಕಿಡಿ

ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂದು ಎಂದು ಆಗ್ರಹಿಸಿದರು. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ಕೊಡಬೇಕು. ವೈದ್ಯಕೀಯ ಕ್ಷೇತ್ರಕ್ಕೆ ಅಗತ್ಯ ಸುಧಾರಣೆ ತರಬೇಕಾಗಿದೆ. ಭ್ರಷ್ಟಾಚಾರ, ಕಳಪೆ ಗುಣಮಟ್ಟದ ಔಷಧಿ ಮತ್ತು ಇತರ ಸಲಕರಣೆಗಳು ಅಕ್ರಮವಾಗಿ ಸರಬರಾಜಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದೆ.

ನಿಯೋಗದಲ್ಲಿ ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್, ರಾಜ್ಯ ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ, ಶಾಸಕ ಸಿ.ಕೆ.ರಾಮಮೂರ್ತಿ, ವೈದ್ಯಕೀಯ ಪ್ರಕೋಷ್ಟದ ರಾಜ್ಯ ಸಂಚಾಲಕ ಡಾ.ನಾರಾಯಣ್, ಸಹ ಸಂಚಾಲಕ ಡಾ.ಎಂ.ಎಸ್.ಸದಾನಂದ ಇತರರು ಉಪಸ್ಥಿತರಿದ್ದರು.

ಶಾಪ ತಟ್ಟದ ಇರಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಬಾಣಂತಿಯರು ಹಾಗೂ ಮಕ್ಕಳು ಮರಣ ಹೊಂದುತ್ತಿರುವ ವೇಳೆ ಕಾಂಗ್ರೆಸ್ ಸರ್ಕಾರ 20 ಕೋಟಿ ರು. ವೆಚ್ಚ ಮಾಡಿ ಸಮಾವೇಶ ಮಾಡಿದೆ. ಮಕ್ಕಳನ್ನು ಉಳಿಸದೆ ನೂರು ಸಮಾವೇಶ ಮಾಡಿದರೂ ಸರ್ಕಾರಕ್ಕೆ ಜನರ ಶಾಪ ತಟ್ಟದೆ ಇರುವುದಿಲ್ಲ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದ್ದಾರೆ. 

ನ್ಯಾಯಾಂಗ ತನಿಖೆ ಆಗಲಿ ಬಳ್ಳಾರಿಯಲ್ಲಿ ಬಾಣಂತಿಯರ ಸಾವು ಮತ್ತು ಶಿಶು ಮರಣ ಕುರಿತ ಘಟನೆ ಬಗ್ಗೆ ಸೂಕ್ತ ನ್ಯಾಯಾಂಗ ತನಿಖೆ ನಡೆಸಬೇಕು. ರಾಜ್ಯ ಸರ್ಕಾರದ ಅಮಾನವೀಯ ನಡೆಯನ್ನು ಜನ ಪ್ರಶ್ನಿಸುವಂತಾಗಿದೆ. ಮೃತ ಗರ್ಭಿಣಿಯರ ಕುಟುಂಬಕ್ಕೆ ಪರಿಹಾರ ನೀಡಬೇಕು. ಕಪ್ಪುಪಟ್ಟಿಗೆ ಸೇರಿದ ಕಂಪನಿಯಿಂದ ಐವಿ ಗ್ಲುಕೋಸ್ ಖರೀದಿಸಿದ್ದರು. ಹೀಗಾಗಿ, ರಾಜ್ಯ ಸರ್ಕಾರವೇ ಈ ದುರ್ಘಟನೆಗೆ ಹೊಣೆ ಹೊರಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವಿ.ವಿಜಯೇಂದ್ರ ಹೇಳಿದ್ದಾರೆ. 

ಕಳಪೆ ಔಷಧ ಯಾಕೆ ಕೊಟ್ರಿ, ಬಾಣಂತಿಯರ ಸಾವು ಸಾಮಾನ್ಯ ಸಂಗತಿ ಏನು?: ಸಿದ್ದರಾಮಯ್ಯ ಕಿಡಿ

ಬೆಂಗಳೂರು:  ಬಳ್ಳಾರಿಯ ಸರ್ಕಾರಿ ಆಸ್ಪತ್ರೆಯಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಬಗ್ಗೆ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದ್ದು, ಘಟನೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು ಎಂದು ತಿಳಿದುಬಂದಿದೆ. ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಮುಖ್ಯಮಂತ್ರಿಗಳು ಘಟನೆ ಬಗ್ಗೆ ಸಚಿವರು ಹಾಗೂ ಅಧಿಕಾರಿಗಳಿಂದ ವಿವರಣೆ ಕೋರಿದರು.

ಬಳ್ಳಾರಿ ಜಿಲ್ಲಾಸ್ಪತ್ರೆಯಲ್ಲಿ ಮತ್ತೊಬ್ಬ ಬಾಣಂತಿ ಸಾವು: ಸಾವಿನ ಸಂಖ್ಯೆ 5ಕ್ಕೇರಿಕೆ

ಈ ವೇಳೆ ಸಚಿವ ದಿನೇಶ್ ಗುಂಡೂರಾವ್, ಬಳ್ಳಾರಿ ಜಿಲ್ಲಾ ಆಸ್ಪತ್ರೆ ಮತ್ತು ವಿಮ್ಸ್ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಮಕ್ಕಳಿಗೆ ಜನ್ಮ ನೀಡಿದ ನಾಲ್ಕು ಮಂದಿ ಬಾಣಂತಿಯರು ನ.9 ರಿಂದ 11ರ ನಡುವೆ ಮೃತಪಟ್ಟಿದ್ದಾರೆ. ಇವರಿಗೆ ರಿಂಗರ್‌ ಲ್ಯಾಕ್ಟೇಟ್ ಐಪಿ ದ್ರಾವಣ ನೀಡಲಾಗಿತ್ತು. ಈ ಮೊದಲು ಪಾವಗಡ ತಾಲೂಕಿನಲ್ಲೂ ದ್ರಾವಣದಿಂದಾಗಿ ಸಮಸ್ಯೆ ಕಂಡು ಬಂದ ಕಾರಣಕ್ಕೆ ರಾಜ್ಯ ಸರ್ಕಾರ ದ್ರಾವಣ ಪೂರೈಕೆ ಸಂಸ್ಥೆ ನಿಷೇಧಿಸಿದ ಬಳಿಕ ಕೇಂದ್ರದ ಲ್ಯಾಬ್ ನಿಂದ ಅನುಮತಿ ಪಡೆದು ನ್ಯಾಯಾಲಯದ ಆದೇಶದ ಮೂಲಕ ಮತ್ತೆ ಔಷಧ ವಿತರಣೆಗೆ ಅನುಮತಿ ಪಡೆದಿದ್ದಾರೆ ಎಂದು ಹೇಳಿದರು. 

ಆದರೂ ಅವರು ಪೂರೈಸಿದ್ದ 22 ಬ್ಯಾಚ್ ಗಳನ್ನು ನಾವು ತಿರಸ್ಕರಿಸಿದೆವು. ಜತೆಗೆ ಜಿಲ್ಲೆಗಳಿಗೆ ಪೂರೈಕೆಯಾಗಿದ್ದ ಔಷಧವನ್ನೂ ವಾಪಸು ಪಡೆದಿದ್ದೆವು. ಹೊಸದಾಗಿ ರಿಂಗರ್ ಲ್ಯಾಕ್ಟೇಟ್ ಪೂರೈಸಲಾಗಿತ್ತು. ಆದರೂ ಸಮಸ್ಯೆಯಾಗಿದ್ದು ಪರೀಕ್ಷೆಗೆ ಕಳುಹಿಸಲಾಗಿದೆ. ಕಂಪೆನಿ ವಿರುದ್ಧ ಕ್ರಮಕ್ಕೂ ಪ್ರಕರಣ ದಾಖಲಿಸಲು ಸೂಚಿಸಲಾಗಿದೆ ಎಂದು ವಿವರಣೆ ನೀಡಿದರು ಎಂದು ತಿಳಿದುಬಂದಿದೆ. 

click me!