ಜೆಡಿಎಸ್‌ ಜತೆ ಸೇರಿ ಎಸ್‌ಐಆರ್‌ ಅಕ್ರಮ ವಿರುದ್ಧ ಇಂದು ಚುನಾವಣಾ ಆಯೋಗಕ್ಕೆ BJP ದೂರು

Published : Jul 06, 2026, 05:15 AM IST
SIR BTM Layout

ಸಾರಾಂಶ

ರಾಜ್ಯದಲ್ಲಿ ನಡೆಯುತ್ತಿರುವ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿರುವ ಬಿಜೆಪಿ, ಮಿತ್ರಪಕ್ಷ ಜೆಡಿಎಸ್ ಜೊತೆಗೂಡಿ ಚುನಾವಣಾ ಆಯೋಗಕ್ಕೆ ದೂರು ನೀಡಲು ನಿರ್ಧರಿಸಿದೆ. ಈ ಪ್ರಕ್ರಿಯೆಯು ಮನೆ-ಮನೆ ಬದಲು ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿದ್ದು, ಇದರ ಮೇಲೆ ನಿಗಾ ವಹಿಸಲು ಮತ್ತು ಪಕ್ಷದ ಕಾರ್ಯಕರ್ತರನ್ನು ಸಕ್ರಿಯವಾಗಿ ತೊಡಗಿಸಲು ಕೋರ್ ಕಮಿಟಿ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಬೆಂಗಳೂರು: ರಾಜ್ಯದಲ್ಲಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್‌) ಪ್ರಕ್ರಿಯೆಯು ಮನೆ-ಮನೆಗಳ ಬದಲು ಕೆಲವೆಡೆ ಮಸೀದಿ, ಮಂದಿರ ಸೇರಿದಂತೆ ಧಾರ್ಮಿಕ ಸ್ಥಳಗಳಲ್ಲಿ ನಡೆಯುತ್ತಿರುವ ಕಾರಣ ಗೊಂದಲಗಳು ಹಾಗೂ ಎಡವಟ್ಟುಗಳು ಸೃಷ್ಟಿಯಾಗಿವೆ. ಹೀಗಾಗಿ ಇದರ ವಿರುದ್ಧ ಹೋರಾಟಕ್ಕೆ ಧುಮುಕಲು ರಾಜ್ಯದ ಪ್ರಮುಖ ಪ್ರತಿಪಕ್ಷ ಬಿಜೆಪಿ ನಿರ್ಧರಿಸಿದೆ. ಇದರ ಮೊದಲ ಭಾಗವಾಗಿ ಸೋಮವಾರ ಮಿತ್ರಪಕ್ಷ ಜೆಡಿಎಸ್‌ ಜತೆ ಸೇರಿಕೊಂಡು ಚುನಾವಣಾ ಆಯೋಗಕ್ಕೆ ಎಸ್‌ಐಆರ್‌ ಅಕ್ರಮಗಳ ದೂರು ನೀಡಲು ತೀರ್ಮಾನಿಸಿದೆ.

ಎಸ್ಐಆರ್‌ ಪ್ರಕ್ರಿಯೆಯಲ್ಲಿ ಪ್ರಮಾದಗಳನ್ನು ಗಂಭೀರವಾಗಿ ಪರಿಗಣಿಸಿರುವ ಬಿಜೆಪಿ, ಭಾನುವಾರ ಪಕ್ಷದ ಕಚೇರಿಯಲ್ಲಿ ಬೆಳಗ್ಗೆ ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದರೆ ಮಧ್ಯಾಹ್ನ ಕೋರ್ ಕಮಿಟಿ ಸಭೆ ನಡೆಸಿತು. ಈ ವೇಳೆ, ‘ರಾಜ್ಯ ಪದಾಧಿಕಾರಿಗಳು ಹಾಗೂ ಹಿರಿಯ ನಾಯಕರನ್ನೊಳಗೊಂಡ ಕೋರ್ ಕಮಿಟಿ ಸದಸ್ಯರು ತಮಗೆ ವಹಿಸಿರುವ ಉಸ್ತುವಾರಿ ವಿಭಾಗ, ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಬೇಕು. ಇಡೀ ಪ್ರಕ್ರಿಯೆಯಲ್ಲಿ ಪಕ್ಷದ ಕಾರ್ಯಕರ್ತರು ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಬೇಕು’ ಎಂದು ಸೂಚನೆ ನೀಡಿದೆ.

ಸಮರ್ಪಕವಾಗಿ ನಡೆಯಬೇಕು:

ಎಸ್‌ಐಆರ್‌ ಪ್ರಕ್ರಿಯೆ ಸಮರ್ಪಕವಾಗಿ ನಡೆಯಬೇಕು. ರಾಜ್ಯದ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರ ದುರ್ಬಳಕೆ ಮಾಡಿಕೊಂಡು ಇಡೀ ಪ್ರಕ್ರಿಯೆಯನ್ನು ಗೊಂದಲಮಯವಾಗಿಸುತ್ತಿದೆ. ಹೀಗಾಗಿ, ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಈ ಬಗ್ಗೆ ನಿಗಾ ವಹಿಸಬೇಕು ಎಂಬ ನಿಲುವಿಗೆ ಬರಲಾಗಿದೆ.

ಕೋರ್ ಕಮಿಟಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಕೋರ್ ಕಮಿಟಿ ಸಭೆಯಲ್ಲಿ ಎಸ್‌ಐಆರ್‌ ಬಗ್ಗೆ ಹೆಚ್ಚು ಚರ್ಚೆಯಾಗಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಂಡು ಇಡೀ ವ್ಯವಸ್ಥೆ ಹಾಳು ಮಾಡುವಂಥ ಕೆಲಸ ಮಾಡುತ್ತಿದೆ. ಇದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ಎಸ್‌ಐಆರ್‌ ರಾಜ್ಯದಲ್ಲಿ ವ್ಯವಸ್ಥಿತವಾಗಿ ನಡೆಯಬೇಕು. ನಮ್ಮ ಪಕ್ಷದ ಕಾರ್ಯಕರ್ತರು ಈ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂಬುದರ ಬಗ್ಗೆ ಚರ್ಚೆಯಾಗಿದೆ ಎಂದು ತಿಳಿಸಿದರು.

ಹೊಣೆಗಾರಿಕೆ:

ಕೋರ್ ಕಮಿಟಿಯ ಪ್ರತಿಯೊಬ್ಬ ಸದಸ್ಯರಿಗೆ ಒಂದೊಂದು ಪಕ್ಷದ ಸಂಘಟನಾತ್ಮಕ ವಿಭಾಗದ ಜವಾಬ್ದಾರಿ ವಹಿಸಲಾಗಿದೆ. ಒಂದೊಂದು ವಿಭಾಗದಲ್ಲಿ ಸುಮಾರು ಮೂರು ಜಿಲ್ಲೆಗಳು ಇರುತ್ತವೆ. ಆ ಜಿಲ್ಲೆಗಳಿಗೆ ಕೋರ್ ಕಮಿಟಿ ಸದಸ್ಯರು ಪ್ರವಾಸ ಕೈಗೊಂಡು ಪಕ್ಷದ ಹಾಲಿ ಶಾಸಕರು, ಸಂಸದರು, ಮಾಜಿ ಶಾಸಕರು, ಸಂಸದರು ಹಾಗೂ ಮುಖಂಡರನ್ನು ಭೇಟಿ ಮಾಡಿ ಎಸ್‌ಐಆರ್‌ ಪ್ರಕ್ರಿಯೆಯನ್ನು ಇನ್ನಷ್ಟು ಚುರುಕಾಗಿ ಕೈಗೆತ್ತಿಕೊಳ್ಳುವಂತೆ ನೋಡಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಕೋರ್‌ ಕಮಿಟಿ ಸಭೆಯಲ್ಲಿ ವಿಧಾನಮಂಡಲದ ಉಭಯ ಸದನಗಳ ಪ್ರತಿಪಕ್ಷಗಳ ನಾಯಕರಾದ ಆರ್.ಅಶೋಕ್‌, ಛಲವಾದಿ ನಾರಾಯಣಸ್ವಾಮಿ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್ ಜೋಶಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್‌.ಅಶ್ವತ್ಥನಾರಾಯಣ, ಗೋವಿಂದ ಕಾರಜೋಳ, ಮಾಜಿ ಸಚಿವ ಸಿ.ಟಿ.ರವಿ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಚು.ಆಯೋಗ ತಂಡ ಇಂದು ರಾಜ್ಯಕ್ಕೆ

ಬೆಂಗಳೂರು: ರಾಜ್ಯದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆಯಲ್ಲಿ ಗೊಂದಲಗಳ ಬಗ್ಗೆ ದೂರು ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ಕೇಂದ್ರ ಚುನಾವಣಾ ಆಯೋಗದ ಅಧಿಕಾರಿಗಳ ತಂಡವು ಸೋಮವಾರ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿದೆ.

SIR ಅಕ್ರಮ ತಡೆಯಲಾಗದ ರಾಜ್ಯ ಕತ್ತೆ ಕಾಯಲೂ ಲಾಯಕ್ಕಿಲ್ಲ: ಜೋಶಿ

ರಾಜ್ಯದಲ್ಲಿ ಎಸ್‌ಐಆರ್‌ ಅಕ್ರಮ ತಡೆಯಲಾಗದ ರಾಜ್ಯ ಸರ್ಕಾರವೇ ಕತ್ತೆ ಕಾಯಲೂ ಲಾಯಕ್ಕಿಲ್ಲ ಎಂದು ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪ್ರಹ್ಲಾದ್‌ ಜೋಶಿ ಅವರು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ತಿರುಗೇಟು ನೀಡಿದ್ದಾರೆ.

ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಎಸ್‌ಐಆರ್‌ ಅಕ್ರಮ ತಡೆಯದೆ ಚುನಾವಣಾ ಆಯೋಗ ಏನು ಕತ್ತೆ ಕಾಯುತ್ತಿದೆಯೇ ಎಂದು ರಾಜ್ಯ ಸರ್ಕಾರದ ಮಂತ್ರಿ ಆಗಿರುವ ಮಹಾನ್ ಪುರುಷರೊಬ್ಬರು ಪ್ರಶ್ನಿಸಿದ್ದಾರೆ. ಚುನಾವಣಾ ಆಯೋಗ ತನ್ನ ಕರ್ತವ್ಯ ಮಾಡುತ್ತಿದೆ. ಆದರೆ, ಇವರ ಸರ್ಕಾರವೇ ಕತ್ತೆ ಕಾಯಲೂ ಲಾಯಕ್ಕಿಲ್ಲ ಎಂದು ಹರಿಹಾಯ್ದರು.

ರಾಜ್ಯದಲ್ಲಿ ಡ್ರಗ್ಸ್ ಮಾಫಿಯಾ, ಡ್ರಗ್ಸ್ ಪೆಡ್ಲರ್, ತಯಾರಕರನ್ನು ಮತ್ತೊಂದು ರಾಜ್ಯದ ಪೊಲೀಸರು ಬಂದು ಬಂಧಿಸುತ್ತಾರೆ. ಕಾರ ಹುಣ್ಣಿಮೆ ಮೆರವಣಿಗೆಯಲ್ಲಿ ಪಟಾಕಿ ಸಿಡಿಸಿದ್ದಕ್ಕೆ ರೈತರ ಕೈ ಕತ್ತರಿಸುತ್ತಾರೆ. ಇದ್ಯಾವುದೂ ಇವರಿಗೆ ಗೊತ್ತೇ ಆಗುವುದಿಲ್ಲ. ಆದರೆ ಜಗತ್ತಿನ ಬೇರೆಲ್ಲಾ ವಿಷಯವನ್ನೂ ಇವರು ಮಾತನಾಡುತ್ತಾರೆ ಎಂದು ಟೀಕಿಸಿದರು.

ರಾಜ್ಯದಲ್ಲಿ ಎಲ್ಲಾ ಚಿರಂಜೀವಿಗಳೇ?

ಎಸ್ಐಆರ್‌ ಮೊದಲೂ ಆಗಿದೆ. ಹತ್ತು, ಹದಿನೈದು ವರ್ಷದ ಹಿಂದೆಯೇ ಆಗಿದೆ. ಆದರೆ, ಈಗ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಕೆಲವೆಡೆ ಶೇ.100ರಷ್ಟು, ಮತ್ತೆ ಕೆಲವೆಡೆ ಶೇ.80ರಷ್ಟು ಮ್ಯಾಚಿಂಗ್ ಆಗುತ್ತಿದೆ. ಹಾಗಾದರೆ ರಾಜ್ಯದಲ್ಲಿ ಯಾರೂ ಮರಣ ಹೊಂದಿಲ್ಲವೇ? ಅಶ್ವತ್ಥಾಮನಂತೆ ಎಲ್ಲರೂ ಚಿರಂಜೀವಿ ಆಗಿದ್ದಾರೆಯೇ ಎಂದು ಕೇಂದ್ರ ಸಚಿವ ಜೋಶಿ ರಾಜ್ಯ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Karnataka News Live: ಜೆಡಿಎಸ್‌ ಜತೆ ಸೇರಿ ಎಸ್‌ಐಆರ್‌ ಅಕ್ರಮ ವಿರುದ್ಧ ಇಂದು ಚುನಾವಣಾ ಆಯೋಗಕ್ಕೆ BJP ದೂರು
ಬೆಂಗಳೂರಲ್ಲಿ 31 ಕಿ.ಮೀ ಪ್ರಯಾಣಿಸಿದ ಬಳಿಕ ಇನ್ಫೋಸಿಸ್ ಸಹ ಸಂಸ್ಥಾಪಕನ ಪೋಸ್ಟ್‌, ಎಲ್ಲವೂ ಟ್ರಾಫಿಕ್ ಮಹಿಮೆ