ಬಿಜೆಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಪ್ರತಾಪ್ ಸಿಂಹ, ಸದಾನಂದಗೌಡ, ಕಟೀಲ್, ಸಿಟಿ ರವಿಗೂ ಸ್ಟಾರ್ ಲಕ್

By Sathish Kumar KHFirst Published Mar 30, 2024, 4:22 PM IST
Highlights

ಬಿಜೆಪಿಯ 40 ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಟಿಕೆಟ್‌ ವಂಚಿತರಾದ ಪ್ರತಾಪ್‌ ಸಿಂಹ, ಸದಾನಂದ ಗೌಡ, ನಳೀನ್‌ ಕುಮಾರ್ ಕಟೀಲ್ ಹಾಗೂ ಸಿ.ಟಿ. ರವಿಗೆ ಅವಕಾಶ ನೀಡಲಾಗಿದೆ.

ಬೆಂಗಳೂರು (ಮಾ.30): ರಾಜ್ಯದಲ್ಲಿ ನಡೆಯುವ ಎರಡು ಹಂತಗಳ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ 25 ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವ 40 ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಅವರ ಸಾಲಿನಲ್ಲಿ ಲೋಕಸಭಾ ಟಿಕೆಟ್ ವಂಚಿತರೂ ಆಗಿರುವ ಹಾಲಿ ಸಂಸದರಾದ ಪ್ರತಾಪ್‌ ಸಿಂಹ, ಸದಾನಂದ ಗೌಡ, ನಳೀನ್‌ ಕುಮಾರ್ ಕಟೀಲ್ ಹಾಗೂ ಮಾಜಿ ಶಾಸಕ ಸಿ.ಟಿ. ರವಿ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಹೌದು, ಬಿಜೆಪಿಯ ರಾಜಕೀಯ ಚತುರತೆ ಸಾಮಾನ್ಯರಿಗೆ ಅರ್ಥವಾಗೊಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗುತ್ತಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ 2 ಹಂತಗಳ (ಏ.26 ಮತ್ತು ಮೇ 7 ಮತದಾನ) ಚುನಾವಣೆಯಲ್ಲಿ 25 ಬಿಜೆಪಿ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ. ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡುವುದಕ್ಕೆ ಬರೋಬ್ಬರಿ 40 ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಈ ಪೈಕಿ ಲೋಕಸಭಾ ಕ್ಷೇತ್ರಗಳಿಗೆ ಟಿಕೆಟ್‌ ಸಿಗದೇ ರೆಬೆಲ್ ಆಗಿರುವ ಹಾಲಿ ಸಂಸದರು, ಮಾಜಿ ಸಚಿವರು ಹಾಗೂ ಬಿಜೆಪಿ ಮುಖಂಡರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಸೇರ್ಪಡೆ ಮಾಡಿ ಎಲ್ಲರನ್ನೂ ಶಮನ ಮಾಡುವ ಚಾಣಕ್ಯತೆ ಮೆರೆದಿದೆ.

ದೇಶಕ್ಕಿಂತ ಮೋದಿ ಮಾಂತ್ರಿಕ ಶಕ್ತಿ ದೊಡ್ಡದು, ಅನ್ನೋ ಭ್ರಮೆಯಲ್ಲಿ ಬಿಜೆಪಿ ತೇಲ್ತಾ ಇದೆ; ಮಾಜಿ ಶಾಸಕಿ ತೇಜಸ್ವಿನಿ ಗೌಡ

ಈ ಕುರಿತು ಮಾಧ್ಯಮ ಪ್ರಕಟಣೆ ಹೊರಡಿಸಿರುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಚುನಾವಣಾ ನಿರ್ವಹಣಾ ಸಮಿತಿ ರಾಜ್ಯ ಸಂಚಾಲಕ ವಿ.ಸುನೀಲ್ ಕುಮಾರ್ ಅವರು ಬಿಜೆಪಿ ಕೇಂದ್ರ ಸಮಿತಿಯು ರಾಜ್ಯಕ್ಕೆ ನೀಡಿದ 40 ಜನ ಸ್ಟಾರ್ ಪ್ರಚಾರಕರ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಕುರಿತು ಬಿಜೆಪಿ ಚುನಾವಣಾ ಮಾಧ್ಯಮ ಕೇಂದ್ರ ಹೋಟೆಲ್ ಜಿ.ಎಂ.ರಿಜಾಯ್ಸ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪಟ್ಟಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ, ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಕೇಂದ್ರ ಸಚಿವರಾದ ನಿತಿನ್ ಗಡ್ಕರಿ, ರಾಜನಾಥ್ ಸಿಂಗ್, ಎಸ್.ಜೈಶಂಕರ್, ನಿರ್ಮಲಾ ಸೀತಾರಾಮನ್, ಸ್ಮೃತಿ ಇರಾನಿ, ಶೋಭಾ ಕರಂದ್ಲಾಜೆ, ಎ.ನಾರಾಯಣಸ್ವಾಮಿ ಇದ್ದಾರೆ ಎಂದು ತಿಳಿಸಿದರು.

ಇತರೆ ಸ್ಟಾರ್ ಪ್ರಚಾರಕರ ಪಟ್ಟಿ:

  1. ಬಿ.ಎಸ್.ಯಡಿಯೂರಪ್ಪ
  2. ಎ.ನಾರಾಯಣಸ್ವಾಮಿ
  3. ಆರ್.ಅಶೋಕ್
  4. ಅಣ್ಣಾಮಲೈ
  5. ಡಾ.ರಾಧಾಮೋಹನ್‍ದಾಸ್ ಅಗರವಾಲ್
  6. ಯೋಗಿ ಆದಿತ್ಯನಾಥ್
  7. ಹಿಮಂತ್ ಬಿಸ್ವಾ ಶರ್ಮ
  8. ಡಾ. ಪ್ರಮೋದ್ ಸಾವಂತ್
  9. ದೇವೇಂದ್ರ ಪಡ್ನವೀಸ್
  10. ಬಸವರಾಜ ಬೊಮ್ಮಾಯಿ
  11. ಸುಧಾಕರ ರೆಡ್ಡಿ
  12. ಸದಾನಂದ ಗೌಡ
  13. ಜಗದೀಶ ಶೆಟ್ಟರ್
  14. ಸಿ.ಟಿ.ರವಿ
  15. ನಳಿನ್‍ಕುಮಾರ್ ಕಟೀಲ್
  16. ಗೋವಿಂದ ಕಾರಜೋಳ
  17. ಡಾ.ಸಿ.ಎನ್.ಅಶ್ವತ್ಥನಾರಾಯಣ
  18. ಬಿ.ಶ್ರೀರಾಮುಲು
  19. ಅರವಿಂದ ಲಿಂಬಾವಳಿ
  20. ಸುನೀಲ್ ಕುಮಾರ್
  21. ರಾಜೇಶ್ ಜಿವಿ
  22. ಪಿ.ರಾಜೀವ್
  23. ಪ್ರೀತಂ ಗೌಡ
  24. ಬಸನಗೌಡ ಪಾಟೀಲ್ ಯತ್ನಾಳ್
  25. ಬೈರತಿ ಬಸವರಾಜು
  26. ಪ್ರಮೋದ್ ಮಧ್ವರಾಜ್
  27. ಛಲವಾದಿ ನಾರಾಯಣಸ್ವಾಮಿ
  28. ಪ್ರತಾಪಸಿಂಹ
  29. ಎನ್. ಮಹೇಶ್

ಮಕ್ಕಳು, ಮೊಮ್ಮಕ್ಕಳಿಗೆ ಟಿಕೆಟ್ ಕೊಟ್ಟ ಕಾಂಗ್ರೆಸ್, ಲೋಕಸಭೆ ಚುನಾವಣೆ ಬಳಿಕ ಇಬ್ಬಾಗವಾಗಲಿದೆ: ಬಸವರಾಜ ಬೊಮ್ಮಾಯಿ

ಏ.2ರಂದು ಚನ್ನಪಟ್ಟಣದಿಂದಲೇ ಅಮಿತ್ ಶಾ ಚುನಾವಣಾ ಪ್ರಚಾರ ಆರಂಭ:
ಕೇಂದ್ರ ಗೃಹ ಸಚಿವ ಅಮಿತ್ ಶಾ ಏಪ್ರಿಲ್ 2ರಂದು ಕರ್ನಾಟಕದಲ್ಲಿ ಚುನಾವಣಾ ಪ್ರಚಾರ ಆರಂಭಿಸಲಿದ್ದಾರೆ. ಅಮಿತ್ ಶಾ ಅವರು ಚನ್ನಪಟ್ಟಣದಿಂದ ಚುನಾವಣಾ ಪ್ರಚಾರ ಆರಂಭಿಸುತ್ತಾರೆ. ಬೆಳಗ್ಗೆ 9 ಗಂಟೆಗೆ ಮೈತ್ರಿ ಪಕ್ಷಗಳ ಪ್ರಮುಖ ನಾಯಕರ ಜೊತೆ ಉಪಾಹಾರ ಮಾಡುತ್ತಾರೆ. ಬೆಳಿಗ್ಗೆ 11ಗಂಟೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಬೆಂಗಳೂರು ಉತ್ತರ, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಕ್ಷೇತ್ರಗಳ ಶಕ್ತಿಕೇಂದ್ರಗಳ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸುತ್ತಾರೆ. ಮಧ್ಯಾಹ್ನ 2 ಗಂಟೆಯಿಂದ 5ರವರೆಗೆ ಬೆಂಗಳೂರಿನಲ್ಲಿ ಚಿಕ್ಕಬಳ್ಳಾಪುರ, ತುಮಕೂರು, ದಾವಣಗೆರೆ, ಚಿತ್ರದುರ್ಗ ಕ್ಷೇತ್ರಗಳ ಪ್ರಮುಖರ ಜೊತೆ ಪ್ರತ್ಯೇಕವಾದ ಸಭೆ ನಡೆಯಲಿದೆ. ಸಂಜೆ 6ಕ್ಕೆ ಚನ್ನಪಟ್ಟಣದಲ್ಲಿ ರೋಡ್ ಷೋ ಇರುತ್ತದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿ. ಸುನೀಲ್ ಕುಮಾರ್ ಹೇಳಿದರು.

ಈ ವೇಳೆ ರಾಜ್ಯ ಮುಖ್ಯ ವಕ್ತಾರ ಅಶ್ವತ್ಥನಾರಾಯಣ, ಸಾಮಾಜಿಕ ಜಾಲತಾಣ ರಾಜ್ಯ ಸಂಚಾಲಕ ಪ್ರಶಾಂತ್ ಮಾಕನೂರು, ರಾಜ್ಯ ವಕ್ತಾರರಾದ ಮೋಹನ್ ವಿಶ್ವ, ಸುರಭಿ ಹೊದಿಗೆರೆ ಅವರು ಭಾಗವಹಿಸಿದ್ದರು.

click me!