ಬಿಟ್ ಕಾಯಿನ್ ಪ್ರಕರಣದಲ್ಲಿ ಆಂತರಿಕ ಭದ್ರತಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ. ಪೂಜಾರ್ ಅವರನ್ನು ಜೂ.12ರವರೆಗೆ ಬಂಧಿಸದಂತೆ ಸಿಐಡಿ ಪೊಲೀಸರಿಗೆ ಹೈಕೋರ್ಟ್ ಗುರುವಾರ ಸೂಚಿಸಿದೆ.
ಬೆಂಗಳೂರು (ಜೂ.07): ಬಿಟ್ ಕಾಯಿನ್ ಪ್ರಕರಣದಲ್ಲಿ ಆಂತರಿಕ ಭದ್ರತಾ ವಿಭಾಗದ ಉಪ ಪೊಲೀಸ್ ವರಿಷ್ಠಾಧಿಕಾರಿ (ಡಿವೈಎಸ್‌ಪಿ) ಶ್ರೀಧರ್ ಕೆ. ಪೂಜಾರ್ ಅವರನ್ನು ಜೂ.12ರವರೆಗೆ ಬಂಧಿಸದಂತೆ ಸಿಐಡಿ ಪೊಲೀಸರಿಗೆ ಹೈಕೋರ್ಟ್ ಗುರುವಾರ ಸೂಚಿಸಿದೆ. ಪ್ರಕರಣ ಸಂಬಂಧ ಬಂಧನ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಶ್ರೀಧರ್ ಪೂಜಾರ್ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ಪೀಠ ಈ ಆದೇಶ ಮಾಡಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲ ಎಂ.ಅರುಣ್ ಶ್ಯಾಮ್ ಹಾಜರಾಗಿ, ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿಯು ತನ್ನ ಸ್ನೇಹಿತರನ್ನು ಸಂಧಿಸಲು ಅವಕಾಶ ಮಾಡಿಕೊಟ್ಟಿರುವುದು ಮತ್ತು ಶ್ರೀಕಿ ಹಾಗೂ ಇತರರನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡಿರುವ ಆರೋಪ ಪೂಜಾರ್ ಮೇಲಿದೆ. ಈ ಹಿಂದೆ ಹೈಕೋರ್ಟ್ ಸೂಚನೆಯಂತೆ ಮೂರು ಬಾರಿ ತನಿಖಾಧಿಕಾರಿಯ ಮುಂದೆ ಪೂಜಾರ್ ಹಾಜರಾಗಿದ್ದಾರೆ. ಈಗಲೂ ಪೂಜಾರ್ ತನಿಖಾಧಿಕಾರಿಯ ಮುಂದೆ ಹಾಜರಾಗಲು ಸಿದ್ಧರಿದ್ದಾರೆ. ಅರ್ಜಿದಾರರು ಡಿವೈಎಸ್‌ಪಿ ಶ್ರೇಣಿಯ ಅಧಿಕಾರಿಯಾಗಿದ್ದು, ಬಂಧನ ಮಾಡಿದರೆ ಅವರ ಇಡೀ ವೃತ್ತಿ ಬದುಕು ನಾಶವಾಗಲಿದೆ. ಅವರ ಹಿತಾಸಕ್ತಿ ಕಾಪಾಡಬೇಕಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಚನ್ನಪಟ್ಟಣಕ್ಕೆ ಡಿಕೆಸು ನಿಲ್ಲಿಸುವ ಚಿಂತನೆಯಿಲ್ಲ: ಡಿ.ಕೆ.ಶಿವಕುಮಾರ್
ಸರ್ಕಾರ ಪರ ಎಸ್‌ಪಿಪಿ ಬಿ.ಎನ್. ಜಗದೀಶ್ ಅವರು, ಶ್ರೀಕಿ ಭಾಗಿಯಾಗಿರುವ ಬಿಟ್ ಕಾಯಿನ್ ಹಗರಣ ಗಂಭೀರ ಪ್ರಕರಣವಾಗಿದೆ. ಸಾವಿರಾರು ಕೋಟಿ ರುಪಾಯಿಯ ಹಗರಣ ಇದಾಗಿದೆ. ಆತ ಕೆಲ ಲೈವ್ ಸರ್ವರ್‌ಗಳನ್ನು ಹ್ಯಾಕ್ ಮಾಡಿ, ಬಿಟ್‌ಕಾಯಿನ್‌ಗಳನ್ನು ಕದ್ದಿದ್ದಾನೆ. ಆತನನ್ನು ಅಕ್ರಮವಾಗಿ ಬಂಧನದಲ್ಲಿಟ್ಟುಕೊಂಡು, ಹ್ಯಾಕಿಂಗ್, ಬಿಟ್ ಕಾಯಿನ್‌ಗಳ ವರ್ಗಾವಣೆ ಮತ್ತು ಪಾಸ್‌ವರ್ಡ್ ಬದಲಾವಣೆ ಮಾಡಿದ ಆರೋಪ ಪೂಜಾರ್ ಮೇಲಿದೆ. ಅವರು ತನಿಖಾಧಿಕಾರಿಯ ಮುಂದೆ ಹಾಜರಾಗಿ, ಇಡೀ ತನಿಖೆಯನ್ನು ದಾರಿ ತಪ್ಪಿಸಿದ್ದಾರೆ. ಅಂತಹವರಿಗೆ ಮಧ್ಯಂತರ ರಕ್ಷಣೆ ನೀಡುವುದು ಸೂಕ್ತವಲ್ಲ ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ಪೀಠ, ವಿಚಾರಣೆಯನ್ನು ಜೂ.12ಕ್ಕೆ ಮುಂದೂಡಿ, ಅಲ್ಲಿಯವರೆಗೆ ಅರ್ಜಿದಾರರನ್ನು ಬಂಧಿಸಬಾರದು ಎಂದು ಸೂಚಿಸಿತು.