
ಗಿರೀಶ್ ಗರಗ
ಬೆಂಗಳೂರು(ಜ.23): ಅರಣ್ಯ ಪ್ರದೇಶದಲ್ಲಿ ಯಾವೆಲ್ಲ ಪ್ರಭೇದದ ಪಕ್ಷಿಗಳಿವೆ ಎಂಬುದನ್ನು ಅರಿಯಲು ರಾಜ್ಯದಲ್ಲೇ ಮೊದಲ ಬಾರಿಗೆ ಪಕ್ಷಿಗಳ ಸಮೀಕ್ಷೆ ನಡೆಸಲು ಅರಣ್ಯ ಇಲಾಖೆ ನಿರ್ಧರಿಸಿದ್ದು, ಬರುವ ಫೆ.1 ಮತ್ತು 2ರಂದು ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಸಮೀಕ್ಷೆ ನಡೆಯಲಿದೆ.
ರಾಜ್ಯದ ಅರಣ್ಯ ಪ್ರದೇಶದಲ್ಲಿನ ಹುಲಿ-ಆನೆಯಂತಹ ವನ್ಯ ಜೀವಿಗಳನ್ನು ಕಾಲಕಾಲಕ್ಕೆ ಗಣತಿ ಮಾಡಲಾಗುತ್ತದೆ. ಆದರೆ, ಇದೀಗ ಮಲೆ ಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದಲ್ಲಿ ಪಕ್ಷಿಗಳ ಸಮೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ತಮಿಳುನಾಡು ಗಡಿಭಾಗಕ್ಕೆ ಹೊಂದಿ ಕೊಂಡಂತಿರುವ ಈ ವನ್ಯಜೀವಿಧಾಮ, 906 ಚದರ ಕಿ.ಮೀ. ವಿಸ್ತೀರ್ಣದ ಅರಣ್ಯ ಪ್ರದೇಶ ಹೊಂದಿದೆ.
ಭಾರತದಲ್ಲಿ ಈ ಪ್ರಾಣಿ-ಪಕ್ಷಿಗಳನ್ನು ಮನೆಯಲ್ಲಿ ಸಾಕುವಂತಿಲ್ಲ, ಇಲ್ಲಿದೆ ಪರಿಷ್ಕೃತ ಪಟ್ಟಿ!
50 ತಂಡಗಳ ಮೂಲಕ ಸರ್ವೇ:
ಪಕ್ಷಿಗಳ ಸಮೀಕ್ಷೆಗಾಗಿ ಸಾರ್ವಜನಿಕರು, ವನ್ಯಜೀವಿ ಪ್ರಿಯರು, ಸ್ವಯಂ ಸೇವಕರನ್ನೂ ಬಳಸಿಕೊಳ್ಳಲಾಗುತ್ತಿದೆ. ಈ ಸಂಬಂಧ ಈಗಾಗಲೇ ನೋಂದಣಿಯನ್ನೂ ಮಾಡಿಸಿಕೊಳ್ಳಲಾಗಿದೆ. 2 ದಿನ ನಡೆಯುವ ಸಮೀಕ್ಷೆಗಾಗಿ 50 ತಂಡ ಗಳನ್ನು ರಚಿಸಲಾಗುತ್ತಿದೆ. ಪ್ರತಿ ತಂಡದಲ್ಲೂ ಸ್ವಯಂ ಸೇವಕರು ಅರಣ್ಯ ಇಲಾಖೆ ಸಿಬ್ಬಂದಿ ಅಥವಾ ಅಧಿಕಾರಿ ಸೇರಿದಂತೆ 5-6 ಜನರ ತಂಡ ರಚಿಸಿ ಸಮೀಕ್ಷೆ ಮಾಡಲಾಗುತ್ತದೆ. ಈ ತಂಡಗಳು 2 ದಿನವೂ ಬೆಳಗಿನ ಜಾವ 3ರಿಂದ 4 ಗಂಟೆಯವರೆಗೆ ಹಾಗೂ ಸಂಜೆ ವೇಳೆ ಕಾಡಿನಲ್ಲಿ ಸಂಚರಿಸಿ ಪಕ್ಷಿಗಳ ಇರುವಿಕೆಯನ್ನು ದಾಖಲಿಸಲಿವೆ.
ಹುಲಿ-ಆನೆ ಗಣತಿ ಮಾದರಿ:
ಪಕ್ಷಿಗಳ ಸಮೀಕ್ಷೆಯನ್ನು ಹುಲಿ ಮತ್ತು ಆನೆ ಗಣತಿಯಂತೆಯೇ ಮಾಡಲಾಗುತ್ತಿದೆ. ಪ್ರತಿ ತಂಡಕ್ಕೂ ನಿಗದಿತ ಸ್ಥಳವನ್ನು ನೀಡಿ, ಅಲ್ಲಿ ಬರುವ ಪಕ್ಷಿಗಳ ಪ್ರಭೇದವನ್ನು ದಾಖಲಿಸಲಾಗುತ್ತದೆ. ಅವುಗಳು ಹಾರಾಡುವುದು, ಕುಳಿತಿರುವುದು ಸೇರಿದಂತೆ ಮತ್ತಿತರ ಭಾವಚಿತ್ರವನ್ನು ತೆಗೆಯಲಾಗುತ್ತದೆ. ಅದನ್ನು ಅರಣ್ಯ ಇಲಾಖೆಯಿಂದ ನೀಡಲಾಗುವ ಮಾದರಿ ಅರ್ಜಿಯಲ್ಲಿ ದಾಖಲಿಸಲಾಗುವುದು. ಎಲ್ಲ 50 ತಂಡಗಳಿಂದಲೂ ಪಡೆಯುವ ಸಮೀಕ್ಷಾ ವರದಿಗಳನ್ನು ಒಂದೆಡೆ ಸೇರಿಸಿ, ಅರಣ್ಯ ಸಿಬ್ಬಂದಿ, ಅಧಿಕಾರಿಗಳು ಹಾಗೂ ಪಕ್ಷಿ ತಜ್ಞರು ಪರಿಶೀಲಿಸಲಿದ್ದಾರೆ. ನಂತರ ವನ್ಯಜೀವಿಧಾಮದ ಅರಣ್ಯದಲ್ಲಿ ಎಷ್ಟು ಪ್ರಭೇದದ ಪಕ್ಷಿಗಳಿವೆ ಎಂಬ ವರದಿ ಸಿದ್ದಪಡಿಸಲಾಗುತ್ತದೆ.
ಸುರಕ್ಷತೆಗೂ ಕ್ರಮ:
ಮಲೆ ಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 300ಕ್ಕೂ ಹೆಚ್ಚಿನ ಆನೆಗಳು, 20ಕ್ಕೂ ಹೆಚ್ಚಿನಹುಲಿಗಳಿವೆ. ಅದರ ಜತೆಗೆ ಚಿರತೆ, ಕಾಡು ನಾಯಿ, ಕಾಡೆಮ್ಮೆ ಸೇರಿದಂತೆ ಹಲವು ಬಗೆಯ ವನ್ಯಜೀವಿಗಳಿವೆ. ಅವುಗಳಿಂದ ರಕ್ಷಣೆ ಪಡೆದು ಸಮೀಕ್ಷೆ ಮಾಡಲು ಮಲೆಮಹದೇಶ್ವರ ವನ್ಯಜೀವಿಧಾಮದ ವಿಭಾಗ ಪ್ರತಿ ಸಮೀಕ್ಷಾ ತಂಡಕ್ಕೂ ಸುರಕ್ಷಾ ಪರಿಕರಗಳನ್ನು ನೀಡಲಿದೆ.
ವಿಜಯನಗರ: ಮಂಗೋಲಿಯಾದಿಂದ ಬಂದ ಚಳಿಗಾಲದ ಅತಿಥಿಗಳು!
286 ಪ್ರಭೇದದ ಪಕ್ಷಿಗಳು?
ಮಲೆಮಹದೇಶ್ವರ ಬೆಟ್ಟ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ 2014ರಲ್ಲಿ ಪಕ್ಷಿಗಳ ಸಮೀಕ್ಷೆ ನಡೆಸಲಾಗಿದೆ ಎಂಬ ಮಾಹಿತಿ ಇದೆ. 286 ಪ್ರಭೇದದ ಪಕ್ಷಿಗಳನ್ನು ಪತ್ತೆ ಮಾಡಲಾಗಿತ್ತು. ಆದರೆ, ಆ ಕುರಿತ ಮಾಹಿತಿ ಸದ್ಯ ಅರಣ್ಯ ಇಲಾಖೆಯಲ್ಲಿ ಲಭ್ಯವಿಲ್ಲ. ಹೀಗಾಗಿ ಅಲ್ಲಿ ಮತ್ತೆ ಪಕ್ಷಿಗಳ ಸಮೀಕ್ಷೆ ನಡೆಸಲಾಗುತ್ತಿದೆ.
ಮಲೆಮಹದೇಶ್ವರ ಬೆಟ್ಟ ವನ್ಯ ಜೀವಿಧಾಮ ವ್ಯಾಪ್ತಿಯಲ್ಲಿನ ಪಕ್ಷಿಗಳ ಪ್ರಭೇದವನ್ನು ಅರಿಯಲು ಈ ಸಮೀಕ್ಷೆ ನಡೆಸಲಾಗುತ್ತಿದೆ. ಎರಡು ದಿನ ಸಮೀಕ್ಷೆ ನಡೆಸಲಾಗುತ್ತಿದ್ದು, ಅದಕ್ಕಾಗಿ 50 ತಂಡ ರಚಿಸಲಾಗುವುದು. ಹಿಂದೆ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆಯಾದರೂ, ಆ ಕುರಿತ ಮಾಹಿತಿ ಲಭ್ಯವಿಲ್ಲ ಎಂದು ಮಲೆಮಹದೇಶ್ವರ ಬೆಟ್ಟ ವನ್ಯ ಜೀವಿಧಾಮದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ| ಸಂತೋಷ್‌ಕುಮಾರ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ