
ಬೆಂಗಳೂರಿನ ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರದಲ್ಲಿ ನಡೆದ ಹಸುಗಳ ಕೆಚ್ಚಲು ಕೊಯ್ದು ಕ್ರೌರ್ಯ ಮೆರೆದ ಓರ್ವ ಆರೋಪಿಯನ್ನು ಕಾಟನ್‌ಪೇಟೆ ಪೊಲೀಸರು ಬಂಧಿಸಿದ್ದಾರೆ. ಈತ ಬಿಹಾರ ರಾಜ್ಯದ ಚಂಪಾರನ್ ಜಿಲ್ಲೆ ಮೂಲದವನಾಗಿದ್ದು, ಘಟನೆ ನಡೆದ ಸ್ಥಳದಿಂದ 50 ಮೀಟರ್ ದೂರದಲ್ಲಿರುವ ಪ್ಲಾಸ್ಟಿಕ್ ಹಾಗೂ ಬಟ್ಟೆ ಹೊಲೆಯುವ ಅಂಗಡಿಯಲ್ಲಿ ಸಹಾಯಕನಾಗಿ ಈತ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ
ಈ ಘಟನೆಗೆ ಸಂಬಂಧಿಸಿದಂತೆ ಈಗ ಬಿಗ್‌ಬಾಸ್ ಸ್ಪರ್ಧಿ ಚೈತ್ರಾ ಕುಂದಾಪುರ ಖಂಡಿಸಿದ್ದಾರೆ. ಇಂದು ಹಸುವಿನ ಮೇಲೆ ದಾಳಿ ಮಾಡಿರೋನು ನಾಳೆ ಮನುಷ್ಯರ ಮೇಲು ದಾಳಿ ಮಾಡಬಹುದು. ನಾಯಿ, ಬೆಕ್ಕುಗಳಿಗೆ ಏನಾದರೂ ಅದರೆ ಧ್ವನಿ ಎತ್ತುವ ಪ್ರಾಣಿದಯಾ ಸಂಘ ಈಗ ಎಲ್ಲಿದೆ? ನಿಮ್ಮ ಪ್ರಾಣಿಗಳ ವಿಭಾಗದಲ್ಲಿ ಹಸುಗಳು ಬರುವುದಿಲ್ವಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.
ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ಕಿಡಿಗೇಡಿಗಳು, ಬೆಂಗಳೂರಿನಲ್ಲಿ ಅಮಾನವೀಯ ಕೃತ್ಯ!
ಬಿಹಾರದ ವ್ಯಕ್ತಿ ಇಲ್ಲಿ ಬಂದು ಹಸುಗಳ ಮೇಲೆ ಕ್ರೌರ್ಯ ಮೆರೆದಿದ್ದಾನೆ. ಇಂತ ಘಟನೆ ಮರುಕಳಿಸದಂತೆ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಗೋವುವನ್ನು ನಾವು ಹಸು ಅಂತ ನೋಡಲ್ಲ ಮಾತೆ ಎಂದು ಪೂಜಿಸುತ್ತೇವೆ. ಕುಡಿದ ಮತ್ತಿನಲ್ಲಿ ಮಾಡಿರೋದು ಎಂದಿದ್ದಾರೆ. ಇದು ಬೇಕೆಂದೇ ಉದ್ದೇಶಪೂರ್ವಕವಾಗಿ ಮಾಡಿರುವಂತ ವಿಕೃತಿ ಕೆಲಸ. ಬಿಎನ್ ಎಸ್ ಆಕ್ಟ್ ಅಡಿಯಲ್ಲಿ ಕೇಸ್ ಹಾಕಿದ್ದಾರೆ. ಇದು ಬೇಸರದ ವಿಷ್ಯ. ಜೊತೆಗೆ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಪ್ರಕರಣವನ್ನು ದಾಖಲಿಸಬೇಕು ಇದು ಖಂಡಿತ ಚಿಕ್ಕ ಘಟನೆ ಅಲ್ಲ, ಏನೋ ಸಂದೇಶ ಕೊಡ್ತಿದ್ದಾರೆ ಅನ್ನಿಸುತ್ತದೆ ಎಂದಿದ್ದಾರೆ.
ಇನ್ನು ಈ ಕೃತ್ಯದಲ್ಲಿ ಬೇರೆ ಯಾರೂ ಭಾಗಿಯಾಗಿರುವುದು ಕಂಡುಬಂದಿಲ್ಲ. ಬಂಧಿತ ಆರೋಪಿಗೆ ಜನವರಿ 24ರವರೆಗೆ ನ್ಯಾಯಾಂಗ ಬಂಧನವಾಗಿದೆ. ಹಸುಗಳಿಗೆ ಚಾಮರಾಜಪೇಟೆ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಹಸುಗಳು ಕ್ಷೇಮವಾಗಿವೆ. ಆದರೆ, ಇನ್ನೂ ಎರಡು ವಾರ ಗಾಯ ಮಾಸಲು ಸಮಯಬೇಕಿದೆ. ಚಿಕಿತ್ಸೆ ಬಳಿಕ ಹಸುಗಳು ಅಪಾಯದಿಂದ ಪಾರಾಗಿವೆ ಎಂದು ಡಿಸಿಪಿ (ಪಶ್ಚಿಮ) ಎಸ್ ಗಿರೀಶ್ ಮಾಹಿತಿ ನೀಡಿದ್ದಾರೆ.
ಚಾಮರಾಜಪೇಟೆಯ ಓಲ್ಡ್ ಪೆನ್ಷನ್ ಮೊಹಲ್ಲಾದ ವಿನಾಯಕನಗರದಲ್ಲಿ ಈ ದುರ್ಘಟನೆ ನಡೆದಿತ್ತು. ಹಸುಗಳ ಮಾಲೀಕ ಕರ್ಣ ಅವರು ಕಾಟನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ದೂರು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು. ಚಿಕ್ಕಪೇಟೆ ಉಪ ವಿಭಾಗದ ಎಸಿಪಿ ರಮೇಶ್ ನೇತೃತ್ವದಲ್ಲಿ 20ಕ್ಕೂ ಹೆಚ್ಚು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ವಿಚಾರ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು, ವಿರೋಧ ಪಕ್ಷದ ಸದಸ್ಯರು ಸೇರಿದಂತೆ ಹಲವರು ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ವಿಪಕ್ಷ ನಾಯಕ ಆರ್. ಅಶೋಕ್ ವೈಯುಕ್ತಿಕವಾಗಿ ಒಂದು ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ