ಕಾಂಗ್ರೆಸ್ ಸರ್ಕಾರದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಪಂಚ ಗ್ಯಾರಂಟಿ ಜೊತೆಗೆ ಆತ್ಮಹತ್ಯೆ ಗ್ಯಾರಂಟಿ ಕೊಟ್ಟಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಆರೋಪಿಸಿದ್ದಾರೆ. ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನ ಕಿರುಕುಳದಿಂದ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬೀದರ್ (ಡಿ.28): ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥಿ ಸಂಪೂರ್ಣವಾಗಿ ಹಾಳಾಗಿದೆ. ಈ ಸರ್ಕಾರ ಪಂಚ ಗ್ಯಾರಂಟಿ ಜೊತೆಗೆ ಆತ್ಮಹತ್ಯೆಗೆ ಗ್ಯಾರಂಟಿ ಕೊಟ್ಟಿದೆ ಎಂದು ಬೀದರ್ ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ್ ಪಾಟೀಲ್ ಕಿಡಿಕಾರಿದರು.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ಸಹಾಯಕನಿಂದ ಕೊಲೆ ಬೆದರಿಕೆ ಹಿನ್ನೆಲೆ ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣ ವಿಚಾರಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ಸರ್ಕಾರ ಬಂದ ಒಂದು ವರ್ಷದಲ್ಲಿ ವಾಲ್ಮೀಕಿ ಹಗರಣ ಆಯ್ತು, ಆ ಪ್ರಕರಣವನ್ನೇ ಮುಚ್ಚಿಹಾಕಿದರು. ದಾವಣಗೆರೆಯಲ್ಲಿ ಗುತ್ತಿಗೆದಾರನ ಆತ್ಮಹತ್ಯೆಯಾಯ್ತು, ಲಕ್ಷ್ಮಿ ಹೆಬ್ಬಾಳಕರ್ ಪಿಎ ಕಿರುಕುಳದಿಂದ ಆತ್ಮಹತ್ಯೆಯಾಯ್ತು. ಕಾಂಗ್ರೆಸ್ ಸಚಿವರು, ನಾಯಕರ ಆಪ್ತರಿಂದ ಗುತ್ತಿಗೆದಾರರ ಸಾಲು ಸಾಲು ಆತ್ಮಹತ್ಯೆಗಳು ನಡೆಯುತ್ತಿವೆ. ಆದರೂ ನಾಚಿಕೆಗೆಟ್ಟ ಸರ್ಕಾರ ಏನೂ ನಡೆದೇ ಇಲ್ಲ ಎನ್ನುವಂತೆ ವರ್ತಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
undefined
ಗುತ್ತಿಗೆದಾರ ಆತ್ಮಹತ್ಯೆ: ಪ್ರಿಯಾಂಕ್ ರಾಜೀನಾಮೆಗೆ ವಿಜಯೇಂದ್ರ ಆಗ್ರಹ
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ಭ್ರಷ್ಟಾಚಾರದಲ್ಲಿ ತೊಡಗಿದೆ. ಸರ್ಕಾರದಲ್ಲಿ ಮಂತ್ರಿಗಳಿಂದಿಡಿದು ಇಲಾಖೆ ಅಧಿಕಾರಿಗಳು ಲಂಚ, ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಗುತ್ತಿಗೆದಾರರಿಂದ ಹಣ ವಸೂಲಿ ಮಾಡಲಾಗುತ್ತಿದೆ. ಅದರ ಮುಂದುವರಿದ ಭಾಗವೇ ಇದೀಗ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್‌ನಲ್ಲಿ ಎಲ್ಲವೂ ಸ್ಪಷ್ಟವಾಗಿ ಬರೆದಿದ್ದಾನೆ. ತನ್ನ ಸಾವಿಗೆ ಯಾರು ಎಂಬ ಹೆಸರುಗಳು ಸಹ ಇವೆ. ಈ ಸರ್ಕಾರ ಆಪ್ತರ ಮೂಲಕ ಕಮಿಷನ್ ಪಡೆಯೋ ಕೆಲಸ ಮಾಡ್ತಿದೆ. ಭ್ರಷ್ಟಾಚಾರ ಮಾಡಿ ಕಳಪೆ ಕಾಮಗಾರಿ ಮಾಡಿಸುತ್ತಿದೆ ಎಂದು ಆರೋಪಿಸಿದರು.
ಒಂದು ಬೀದಿ ನಾಯಿಗೆ ಏನಾದ್ರೂ ಹೇಳಿದ್ರೂ ತಕ್ಷಣ ಪ್ರತಿಕ್ರಿಯಿಸುವ ಪ್ರಿಯಾಂಕ್ ಖರ್ಗೆ ಗುತ್ತಿಗೆದಾರನ ಆತ್ಮಹತ್ಯೆ ಪ್ರಕರಣದಲ್ಲಿ ಸೈಲೆಂಟ್ ಆಗಿದ್ದಾರೆ. ಈ ಕ್ಷೇತ್ರದ ಶಾಸಕ, ಸಚಿವ ಖಂಡ್ರೆ ಒಂದು ಹೇಳಿಕೆ ಸಹ ಕೊಟ್ಟಿಲ್ಲ. ಈ ಪ್ರಕರಣದಲ್ಲಿ ನಿಯಮದ ಪ್ರಕಾರ ಝೀರೋ ಎಫ್‌ಐಆರ್ ಸಹ ಮಾಡಿಲ್ಲ. ನಾಮ್ಕೆ ವಾಸ್ತೆ ಇಬ್ಬರು ಪೊಲೀಸರನ್ನ ಸಸ್ಪೆಂಡ್ ಮಾಡಿದ್ದಾರೆ. ಆದರೆ ಪ್ರಮುಖ ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿಲ್ಲ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಗುತ್ತಿಗೆದಾರನ ಆತ್ಮಹತ್ಯೆಯಾದಾಗ ಕಾನೂನು ಪಾಠ ಮಾಡಿದ್ದ ಪ್ರಿಯಾಂಕ್ ಖರ್ಗೆ ಇದೀಗ ಆತ್ಮಹತ್ಯೆ ಮಾಡಿಕೊಂಡ ಗುತ್ತಿಗೆದಾರ ಪ್ರಿಯಾಂಕ್ ಖರ್ಗೆ ಆಪ್ತನಿಂದಲೇ ಎಂದು ಸ್ಪಷ್ಟವಾಗಿ ಹೇಳಿದ್ದಾನಲ್ಲವೇ? ಎಲ್ಲಿ ಹೋಯ್ತು ಪ್ರಿಯಾಂಕ್ ಖರ್ಗೆ ಕಾನೂನು ಪಾಠ? ಈಗ ಏಕೆ ಸೈಲೆಂಟ್ ಎಂದು ಕಿಡಿಕಾರಿದರು.
Breaking News: ಸಚಿವ ಪ್ರಿಯಾಂಕ್ ಖರ್ಗೆ ಆಪ್ತನಿಂದ ಕೊಲೆ ಬೆದರಿಕೆ, ರೈಲಿಗೆ ತಲೆಕೊಟ್ಟು ಜೀವ ಬಿಟ್ಟ ಗುತ್ತಿಗೆದಾರ!
ನಿಮಗೆ ನೈತಿಕತೆ, ಮಾನ ಮಾರ್ಯಾದೆ, ಕಾನೂನು ಸಂವಿಧಾನದ ಮೇಲೆ ಗೌರವ ಇದ್ದರೆ ಈ ಪ್ರಕರಣದಲ್ಲಿ ರಾಜೀನಾಮೆ ನೀಡಬೇಕು ಎಂದರು. ಇದೇ ವೇಳೆ ರಾಜ್ಯ ಪೊಲೀಸ್ ಇಲಾಖೆ ವರ್ತನೆ ವಿರುದ್ಧ ಬೇಸರ ವ್ಯಕ್ತಪಡಿಸಿದ ಅವರು, ಖಾಕಿ ಇಂದು ಸರ್ಕಾರದ ಕೈಗೊಂಬೆಯಾಗಿದೆ. ಕಾನೂನು, ನ್ಯಾಯ ಮುಖ್ಯವಾಗುತ್ತಿಲ್ಲ. ಸರ್ಕಾರ ಯಾರನ್ನ ಬಂಧಿಸಬೇಕು ಅಂತಾ ಅಪ್ಪಣೆ ಕೊಡುತ್ತದೆ ಅವರನ್ನು ಬಂಧಿಸುವುದು. ಪ್ರಭಾವಿಗಳ ಒತ್ತಡಕ್ಕೆ ಮಣಿದು ದೇಶದ್ರೋಹಿಗಳನ್ನ, ಕ್ರಿಮಿನಲ್‌ಗಳನ್ನ ಬಂಧಿಸದಿರುವ ಕೆಲಸ ಮಾಡುತ್ತಿರುವುದು ಈಗಾಗಲೇ ಕೆಲವು ಪ್ರಕರಣಗಳಲ್ಲಿ ರಾಜ್ಯದ ಜನತೆ ನೋಡಿದ್ದಾರೆ. ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳಿಂದಾಗಿ ಪೊಲೀಸರ ಮೇಲೆ ಜನಸಾಮಾನ್ಯರು ವಿಶ್ವಾಸ ಕಳೆದುಕೊಳ್ಳುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.