ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಆಪ್ತನ ಹೆಸರು ಕೇಳಿಬಂದಿದ್ದು, ಈ ಬಗ್ಗೆ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ ಅವರು, ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ.
ಬೀದರ್ (ಡಿ.29): ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದ ಅಹಂ, ಅಟ್ಟಹಾಸ ಹೆಚ್ಚಾಗಿದೆ. ಅದಕ್ಕಾಗಿ ಅವರು ಬಡ ಜನರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿದ್ದಾರೆ ಎಂದು ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತನ ಹೆಸರು ಬರೆದಿಟ್ಟು ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಸಂಬಂಧ ಇಂದು ಮೃತನ ನಿವಾಸಕ್ಕೆ ರಾಜ್ಯ ಬಿಜೆಪಿ ನಿಯೋಗ ಭೇಟಿ ನೀಡಿ ಸಾಂತ್ವನ ಹೇಳಿತು. ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಛಲವಾದಿ ನಾರಾಯಣ ಸ್ವಾಮಿ ಅವರು, ಮೃತ ಗುತ್ತಿಗೆದಾರ ತನ್ನ ಸಾವಿಗೆ ಸಚಿವ ಪ್ರಿಯಾಂಕ್ ಖರ್ಗೆ ಆಪ್ತನೆಂದು ಸ್ಪಷ್ಟವಾಗಿ ಡೆತ್ ನೋಟು ಬರೆದು ಆತ್ಮಹತ್ಮೆ ಮಾಡಿಕೊಂಡಿದ್ದಾರೆ. ಆರೋಪಿಯನ್ನ ಬಂಧಿಸುವ ಬದಲು ಈ ಪೊಲೀಸರು ಡೆತ್ ನೋಟ್ ನೋಡಿ ಓದುತ್ತಾ ಕುಳಿತರೆ ಹೊರತು ತನಿಖೆ ನಡೆಸಲು ಮುಂದಾಗಿಲ್ಲ, ಕುಟುಂಬಸ್ಥರಿಗೂ ಸ್ಪಂದಿಸಿಲ್ಲ. ಈ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಹೆಸರು ಬಂದಿದ್ದಕ್ಕೆ ಪೊಲೀಸರು ಕೇಸ್ ತೆಗೆದುಕೊಂಡಿಲ್ಲ. ಪೊಲೀಸರು ಮನಸು ಮಾಡಿದ್ದರೆ ಮೃತ ಗುತ್ತಿಗೆದಾರ ಸಚಿನ್ ಉಳಿಸಬಹುದಿತ್ತು. ಆದರೆ. ಪೊಲೀಸರು ಅದೆಷ್ಟು ನಿಷ್ಕ್ರಿಯರಾಗಿದ್ದಾರೆ. ಆಡಳಿತ ಪಕ್ಷದ ನಾಯಕರಿಗೆ ಹೆದರಿಕೊಂಡು ಕೆಲಸ ಮಾಡುತ್ತಿದ್ದಾರೆಂಬುದಕ್ಕೆ ಇದು ಒಂದು ನಿದರ್ಶನ. ಇಂಥ ಪ್ರಕರಣ ರಾಜ್ಯವ್ಯಾಪಿ ವ್ಯಾಪಿಸಬಾರದು ಎಂದರೆ ಸಿಬಿಐ ತನಿಖೆಗೆ ಆಗಲೇಬೇಕು. ಇಲ್ಲದಿದ್ರೆ ಇದು ರಾಜ್ಯಾದ್ಯಂತ ಬೆಂಕಿ ಹತ್ತುತ್ತದೆ ಎಚ್ಚರಿಕೆ ನೀಡಿದರು.
ಪ್ರಿಯಾಂಕ್ ಖರ್ಗೆ ಅಲ್ಲ, ಸುಪಾರಿ ಖರ್ಗೆ:
ಇದು ಬೆಳೆದರೆ ಬೆಳೆಯಲಿ ನಾನು ರಾಜೀನಾಮೆ ಕೊಡೋಲ್ಲ ಎಂದರೆ ನಾವು ಸುಮ್ಮನಿರಲ್ಲ. ಇವರಿಗೆ ಏನೇ ಆದರೂ ದುಡ್ಡು ಬೇಕು, ಜನ ಸಾಮಾನ್ಯರ ಪ್ರಾಣ ಮುಖ್ಯವಲ್ಲ. ಈ ಪ್ರಕರಣದ ಹಿಂದೆ ಇರುವ ಪ್ರಿಯಾಂಕ್ ಖರ್ಗೆ ತಕ್ಷಣ ರಾಜೀನಾಮೆ ಕೊಡಬೇಕು. ಸಚಿವನಾಗಿ ಅಭಿವೃದ್ಧಿ ಕೆಲಸ ಮಾಡು ಅಂದ್ರೆ ಸುಪಾರಿ ಕೊಡೋ ಕೆಲಸ ಮಾಡ್ತೀರಾ? ಇವತ್ತಿಂದ ನೀನು ಪ್ರಿಯಾಂಕ್ ಖರ್ಗೆ ಅಲ್ಲ, ಸುಪಾರಿ ಖರ್ಗೆ ಎಂದು ವಾಗ್ದಾಳಿ ನಡೆಸಿದರು.
ಅವರೇನೇ ಮಾಡಿದರೂ ನಾವು ಪ್ರಶ್ನೆ ಮಾಡಬಾರದಂತೆ. ಕಲಬುರಗಿಯಲ್ಲಿ ಜನ ರೋಸಿ ಹೋಗಿದ್ದಾರೆ. ಪ್ರಿಯಾಂಕ್ ಆಪ್ತನಾಗಿರುವ ಆ ಆರೋಪಿ ರಾಜು ಕುಪನೂರು ದಲಿತ ಅಂಬೇಡ್ಕರ್ ಹೆಸರಲ್ಲಿ ಹೇಗೆ ಲೂಟಿ ಮಾಡಿದ್ದಾನೆ. ಅಕ್ರಮ ಎಸಗಿದ್ದಾನೆ ಅಂತಾ ಕಲಬುರಗಿ ಜನ ಅವನ ಜಾತಕ ಹೇಳ್ತಾರೆ. ಅಂಥವನನ್ನ ಆಪ್ತನಾಗಿ ಇಟ್ಟುಕೊಂಡ ಪ್ರಿಯಾಂಕ್ ಖರ್ಗೆ ಪರೋಕ್ಷವಾಗಿ ಈ ಎಲ್ಲದರ ಹಿಂದೆ ಇದ್ದಾರೆ. ಈ ಪ್ರಕರಣ ಇಷ್ಟಕ್ಕೆ ಬಿಡುವುದಿಲ್ಲ. ನಾವೆಲ್ಲ ಅಧ್ಯಕ್ಷರ ನೇತೃತ್ವದಲ್ಲಿ ಕಲಬುರಗಿಗೂ ಬರ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಪೊಲೀಸರು ಎಷ್ಟು ಕ್ರೂರಿಗಳು ಸಾರ್…!; ಬಿಜೆಪಿ ನಿಯೋಗದ ಮುಂದೆ ಸಚಿನ್ ಕುಟುಂಬಸ್ಥರು ಶಾಕಿಂಗ್ ಹೇಳಿಕೆ!
ಪೊಲೀಸರೇ ರಾಜೀನಾಮೆ ಕೊಟ್ಟು ಕಾಂಗ್ರೆಸ್ ಗುಲಾಮರಾಗಿ:
ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆಗೆ ಮುನ್ನ ಸ್ಪಷ್ಟವಾಗಿ ಬರೆದಿದ್ದಾನೆ. ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕುಪನೂರು ಕೊಲೆ ಬೆದರಿಕೆ, ಹಣಕ್ಕೆ ಬೇಡಿಕೆ, ವಂಚನೆ ಬಗ್ಗೆ ವಿವರವಾಗಿ ಡೆತ್ ನೋಟ್ ಬರೆದಿಟ್ಟಿದ್ದಾನೆ. ಆರೋಪಿಯನ್ನ ತಕ್ಷಣ ಬಂಧಿಸುವ ಬದಲು ದೂರು ಕೊಡಲು ಬಂದ ಕುಟುಂಬಸ್ಥರನ್ನೇ ಪೊಲೀಸ್ ಠಾಣೆ ಯಾಕೆ ಬಂದ್ರಿ ಎಂದು ಪಿಎಸ್‌ಐ ಉಡಾಫೆಯಾಗಿ ಪ್ರಶ್ನಿಸುತ್ತಾರೆಂದರೆ ಇವರು ಪೊಲೀಸ್ ಇಲಾಖೆ ಇಲಾಖೆಯಲ್ಲಿರಲು ಸೂಕ್ತರಲ್ಲ. ನಾನು ಪೊಲೀಸರಿಗೆ ಹೇಳುತ್ತೇನೆ ನೀವು ಗುಲಾಮಗಿರಿ ಮಾಡಿಕೊಂಡು ಇರಲು ಬಯಸಿದರೆ ರಾಜೀನಾಮೆ ಕೊಟ್ಟು ಕಾಂಗ್ರೆಸ್‌ನ ಗುಲಾಮರಾಗಿ. ನಿಮ್ಮ ಮೇಲೆ ನಮಗಷ್ಟೇ ಅಲ್ಲ, ರಾಜ್ಯದ ಜನರಿಗೆ ನಂಬಿಕೆ ಹೋಗಿಬಿಟ್ಟಿದೆ. ಇಲ್ಲವೇ ದಕ್ಷತೆಯಿಂದ ಕೆಲಸ ಮಾಡಿ ಹರಿಹಾಯ್ದರು.